ಒಂದು ನಾಲ್ಕ ದಿನದ ಹಿಂದ ಬಾಜು ಮನಿ ಅಕ್ಕೋರು ನೆಳ್ಳಾಡಕೋತ ನಮ್ಮ ಮನಿಗಿ ಬಂದ್ರು , ಎನ್ಮಾಡಲತೀರ್ರಿ ಅಂದು ಬಂದು ಕೂತ್ರು. ನಾನು ಕೆಲಸ ಬೊಗಸಿ ಎಲ್ಲಾ ಅಷ್ಟಕ್ಕೆ ಬಿಟ್ಟು ಎರಡು ಕಪ್ಪು ಚಾ ಮಾಡಿ ಅವರಿಗೊಂದು ಕೊಟ್ಟು ನಾ ಒಂದು ತಗೊಂಡು ಕುಂತ.
ಅಕ್ಕೋರು ಯಾಕೋ ಸಪ್ಪಗಿದ್ರು. ಯಾಕ್ರೀ ಅಕ್ಕೋರೇ ಆರಾಮಿಲ್ಲೇನು , ಯಾಕೋ ಮೆತ್ತಗ ಕಾಣಲತೀರಿ ಅಂದ . ಐ ಎನಿಲ್ಲರ್ರಿ , ಶಿವರಾತ್ರಿ ಹಬ್ಬ ಬರತಲದ ಮನಿ ಸ್ವಚ್ಛ ಮಾಡ್ದ , ಹಾಸಿಗಿ ಎಲ್ಲಾ ಒಗದು ಆಯ್ತು. ಇದೆಲ್ಲ ಹ್ಯಂಗಾರ ಆಯ್ತದ , ಶೀವಯೋಗಿ ದಿನ ಉಪಾಸೆ ಇರದೇ ಒಂದು ದೊಡ್ಡ ಚಿಂತಿ ಆಗ್ಯಾದ ನೋಡ್ರೀ . ಮೊದಲೆ ಎಸಿಡಿಟಿ ಅದು ಇದು ಅಂತ ನೂರೆಂಟು ಬ್ಯಾನಿಗೋಳು , ಈ ಉಪಾಸ ವ್ರತ ಎಲ್ಲಾ ಒಜ್ಜಿ ಆಗ್ಯಾವ ಅಂದ್ರು . ಬ್ಯಾಸರದಿಂದ.

ಅಲ್ರೀ ಅಕ್ಕೋರೇ , ದೇಹಕ್ಕ ಆಗಲ್ಲ ಅಂದ್ರ ಉಪವಾಸ ಯಾಕ ಮಾಡ್ತರಿ ,.! ನಿಮಗೇನು ಯಾರರ ಉಪವಾಸ ಮಾಡಿಲ್ಲಂತ ದಂಡ ಹಾಕಲತಾರೇನು . ಅದಲ್ದ ಈಗೀನ ಉಪವಾಸಗಳೇನು ಪೂರಾ ನೀರಾಹಾರ ಆಗಿದ್ದು ಯಾರು ,,ಮಾಡಲ್ಲ. ಊಟದಷ್ಟೆ ಉಪಹಾರ ತಿಂದು ಉಪಾವಾಸ ಮಾಡ್ತಾರ. ನೀವೊಂದು ಸುಮ್ನ ಚಿಂತಿ ಮಾಡಲತೀರಿ . ಅಂದ.

ಅದೇರಿ ಚಿಂತಿ. ಸುಮ್ನ ರೊಟ್ಟಿ ಪಲ್ಯ ಮಾಡಿಟ್ಟರ ಚಿಂತಿ ಇರಲ್ಲ , ಈ ಉಪವಾಸ ಅಂದ್ರ ಹತ್ತ ನಮೂನಿ ತಿಂಡಿ ಮಾಡಬೇಕಾಗಲತದ. ಸಾಬುದಾನಿ , ಶ್ಯಾವಿಅಕ್ಕಿ ಅನ್ನ , ಶಾಬದಾನಿ ಪಾಯಸ , ರತ್ನಾಲ ( ಗೆಣಸು ) ಕುದಸಿ ಇಡಬೇಕು. ನಮ್ಮನಿಯವ್ರೀಗಿ ಸೇದಲವಣಿ ಉಪ್ಪು ಹಾಕಿ ಉಪ್ಪಿಟ್ಟ ಮಾಡಿಕೋಡಬೇಕು. ಮತ್ತ ಜ್ಯೂಸ್ , ತೆಂಗಿನ ನೀರು , ಮಜ್ಜಗಿ , ಶರಬತ್ ರಾತ್ರಿ ಪೂಜೆ ಆದ ಮ್ಯಾಲ ತಿನ್ನಲಕ ಚುಡಾ , ಸೇವು , ಜಾಮೂನ ಮಾಡಬೇಕು. ಅಡಗಿ ಮಾಡಿ ಉಣ್ಣದ ಬೇಕು ಈ ಉಪವಾಸದ ತಿಂಡಿ ಮಾಡದಂದ್ರ ಸಾಕಾಗ್ತಾದ ಅಂದ್ರು.ಮನ್ಯಾಗ ಎಲ್ಲರೂ ಉಪವಾಸ ಅಂತೇಳಿ ನನಗ ಜೀವಾ ತಿಂತಾರ , ಒಬ್ಬೊಬ್ಬರಿಗಿ ಒಂದೊದು ನಮೂನಿ ತಿಂಡಿ ಬೇಕು. ಮತ್ತ ಪೋನ್ ಮಾಡಿ ಎಲ್ಲರಿಗೂ ಹೇಳತಾರ ಇವತ್ತ ನಾವು ಮನಿ ಮಂದಿ ಎಲ್ಲಾ ಶಿವರಾತ್ರಿ ಉಪವಾಸ ಮಾಡಲತಿವಿ ನೋಡ್ರೀ ಅಂತ.

ಇಷ್ಟೆಲ್ಲಾ ತಿಂದ ಮ್ಯಾಲ ಉಪವಾಸ ಮಾಡಿದಂಗ ಎನಾಯ್ತುರಿ ಅಕ್ಕೋರೇ ಅಂದೆ.
ಸುಮ್ನ ಅಡುಗಿ ಮಾಡಿ ಉಣ್ಣೋದೆ ವಾಜವಿ ನೋಡ್ರೀ , ಈಗ ಊಟ ಬಿಟ್ಟು ಬ್ಯಾರೆ ಬ್ಯಾರೆ ತಿಂಡಿ ತಿನ್ನಲಕ್ಕ ಉಪವಾಸ ಮಾಡ್ತಾರ ನೋಡ್ರೀ ಅಂದ ನಕ್ಕೋತ.

ಇಷ್ಟೇ ಇಲ್ಲ , ಇದರ ಜೋಡಿ ಅಂಗುರ , ಕಲ್ಲಂಗಡಿ , ಕರ್ಬುಜ ಇನ್ನೂ ಎನೇನೋ ತರತಾರ , ನಮ್ಮನ್ಯಾಗ ಉಪವಾಸ ಇದ್ದ ದಿನ ಇದೇ ಗೋಜು , ನನಗೂ ಒಂದೊಂದು ಸಲ ಯಾಕಾರ ಇಂತ ಉಪವಾಸ ಮಾಡಬೇಕು ಅನಸ್ತದರಿ. ಆದ್ರ ಎನ್ಮಾಡೋದು ಹಿಂದಿನವ್ರು ಹಚ್ಚಿ ಇಟ್ಟಾರ ನಾವೂ ಮಾಡಬೇಕು ಅಷ್ಟೆ. ಇಲ್ಲಂದ್ರ ನೋಡಿದವ್ರು ಎನಂತಾರ..! ಅಂದ್ರು.

ಮತ್ತದೆ ಅನುಕರಣೆ. ಇಡೀ ದೇಶಾನೆ ಶಿವ ಶಿವ ಅಂತ ಉಪವಾಸ ಮಾಡ್ತಿರಬೇಕಾದ್ರ ನಾವು ಒಬ್ಬರು ಸುಮ್ನ ಇದ್ರ ಮೂರ್ಖ ಅನ್ನಿಸಿಕೊಬೇಕು. ಈ ಪ್ರತ್ಯಕತೆ ಅನುಭವ ಬ್ಯಾಡಾಗಿ ಮನಸ್ಸಿರಲಿ ಬಿಡ್ಲಿ ಗುಂಪಿನಾಗ ಗೊವಿಂದಾ ಆಗ್ಲೆ ಬೇಕು.

ಶರಣರಿಗಿ ದಿನಾ ಶಿವರಾತ್ರಿ. ದೇವ್ರಿಗಿ ಅಲ್ಲಿ ಇಲ್ಲಿ ಹುಡಕ್ಕೊಂತ ಹೋಗಿ ಹೈರಾಣ ಆಗಬ್ಯಾಡ್ರಿ ಅಂತ ನಮ್ಮ ಬಸವಣ್ಣ ಇಷ್ಟ ಲಿಂಗ ಕೈಯಾಗ ಕೊಟ್ಟು , ಅಗಮ್ಯ ಅಪ್ರತಿಮ ಲಿಂಗಕ್ಕ ದಿನಾ ದ್ಯಾನಸ್ರಿ ಅಂತ ಹೇಳ್ದ. ಉಪವಾಸ , ವ್ರತ ಆಚರಣಿಗಳಿಗಿ ಕಟ್ಟು ಬೀಳದೆ ಕಾಯಕ ಮಾಡ್ರಿ ಅಂತ ಕಿವಿ ಮಾತು ಹೇಳ್ದ . ಆದ್ರ ನಾವು ಮಾತ್ರ ಉಪವಾಸ ಮಾಡಿ ದೇವ್ರಿಗಿ ಒಲಿಸಿಕೊಳ್ಳಲಕ ಪ್ರಯತ್ನ ಮಾಡತೀವಿ , ಮತ್ತ ಉಪವಾಸ ಮಾಡಿ ದೇವರ ಮ್ಯಾಲ ಒತ್ತಡ ಹೇರಿ ನಮ್ಮ ಹರಕಿ ಇಡೇರಿಸಿಕೊಳ್ಳಕ್ಕ ಮತ್ತ ಯಾವದ್ಯಾವದೋ ಕಾರಣಕ್ಕದೇವರ ಹೆಸರಿನ ಮ್ಯಾಲ ಉಪವಾಸ ಅಂತ ಮಾಡ್ತಿವಿ.

ಈ ಉಪವಾಸ ವ್ರತಗಳು ನಮ್ಮ ಹೆಣ್ಣಮಕ್ಕಳು ಹೆಚ್ಚು ಆಚರಣೆ ಮಾಡತಾರ.ದಸರಾ ಹಬ್ಬದಾಗ ಒಂಬತ್ತು ದಿನ , ಐದು ದಿನ ಉಪವಾಸ ಇದ್ದು ನಂತರ ಒಮ್ಮೆಲೆ ತಿಂದು ಆರೋಗ್ಯ ಕೆಟ್ಟು ದಾವಖಾನಿಯೊಳಗ ಅಡ್ಮಿಟ್ ಆಗಿದ ಎಷ್ಟೋ ಉದಾ , ಗಳು ಅವಾ.
ಅದಲ್ಲದೆ ಈ ಉಪವಾಸದ ಸಮಯದಾಗ ತಿನ್ನೊ ಸಾಬುದಾನಿ ಪದಾರ್ಥಗಳು ಆರೋಗ್ಯ ಕ್ಕ ಎಳ್ಳಷ್ಟು ಉಪಯೋಗ ಇಲ್ಲ ನೋಡ್ರೀ. ಸಬ್ಬಕ್ಕಿ ಬೆಳ್ಳಗ ಮಾಡಲಾಕ ಅದಕ್ಕ ಅದೇಷ್ಟು ಬ್ಲೀಚಿಂಗ್ ಪೌಡರ ಹೊಡಿತಾರ ಒಂದಿಷ್ಟು ವಿಡಿಯೋ ನೋಡ್ರಿ. ಉಪವಾಸ ಮಾಡಿ ಖಾಲಿ ಹೊಟ್ಟಿದಾಗ ಸಾಬುದಾನಿ ತಿಂದು ಹೊಟ್ಟೆ ಹಾಳು ಮಾಡಕೊಳ್ಳದರಿಂದ ಏನು ಸಾಧಿಸಿದಂಗ ಆದತದೋ ಏನೋ..!

ನಮ್ಮ ಕಡಿ ಹೆಣ್ಣುಮಕ್ಕಳು ತಮ್ಮ ಗಂಡಮಗನ ಮದುವಿದಾಗ ಎರಡು ದಿನದ ಉಪವಾಸ ಮಾಡತಾರ. ಯಾಕಂತ ಕೇಳಿದ್ರ ಕಾರಣ ಯಾರಿಗೂ ಗೊತ್ತಿಲ್ಲ. ಮಗನ ಮದಿವಿದಾಗ ಎಷ್ಟೊಂದು ಅಡಗಿ ಮಾಡ್ಸಿ ಎಷ್ಟೊಂದು ಮಂದಿಗಿ ಉಣಸ್ತಾರ. ಆದ್ರ ತಾಯಿ ಆದವಳು ಮದುವಿ ದಿನ , ಮದವಿ ಹಿಂದಿನ ದಿನ ಉಪವಾಸ ಮಾಡಬೇಕಂತ.ಊಟ ಇಲ್ದೆ ಅದು ಇದು ತಿಂದು ಓಡಾಡಿ ಓಡಾಡಿ ದಣದು ಮಗನ ಮದುವಿ ದಿನ ತಾಯಿಯ ಮುಖ ಒಣಗಿದ ಸಂಡಿಗಿ ಆಗಿರತದ. ಮಗನ ಮದುವಿಗಿ ಇಷ್ಟೆಲ್ಲಾ ಅಡಗಿ ಮಾಡ್ಸಿ ನೀವು ಉಪವಾಸ ಇರದು ಚಂದ ಅನ್ನಸಲ್ಲ.ಈಗ ಉಣ್ರೀ , ಮತ್ಯಾವಗಾರ ಉಪವಾಸ ಮಾಡ್ರೀ ಅಂತ ನಾ ಹೇಳೊದು ಇಲ್ಲಿವರೆಗೂ ಯಾವ ಮದುಮಗನ ತಾಯಿಯು ಕೇಳಿಲ್ಲ. ನಾನು ಹೇಳೊದು ಬಿಟ್ಟಿಲ್ಲ.

ನನಗ ಎಷ್ಟೋ ಜನ ಕೇಳತಾರ , ನೀವು ಹಬ್ಬ ಹುಣ್ಣಿಗಿ ಉಪವಾಸ ಅಂತ ಮಾಡಲ್ಲೆನ್ರಿ ಅಂತ. ನಾ ಹೇಳತಿನಿ , ನನಗ ಅಡಗಿ ಮಾಡಲಕ್ಕ ಆಗಿಲ್ಲಂದ್ರ ಉಪವಾಸ ಇರತೀನಿ ಅಂತ. ಅಡುಗಿ ಮಾಡ್ಲಕ್ಕ ಸೋಮಾರಿ ಆದ ನಾನು ಎಲ್ಲಿ ಮಾಡ್ಕೊಂಡು ತಿನ್ನದು ಅಂತ ಒಮ್ಮೊಮ್ಮೆ ಉಪವಾಸ ಇರತೀನಿ ಅಷ್ಟೆ.

ಒಬ್ಬೊಬ್ರ ದೇಹ ಸ್ಥಿತಿ ಒಂದೊಂದು ರೀತಿ ಇರತದ. ಒಬ್ಬರಿಗಿ ಉಪವಾಸ ಇದ್ರೂ ದೇಹದ ಮ್ಯಾಲ ಯಾವ ಪರಿಣಮ ಬೀರಲ್ಲ. ಕೆಲವ್ರಿಗಿ ಒಂದು ಹೊತ್ತು ಊಟ ಇರದಿದ್ರೂ ಸಹಿಸಲಕ್ಕ ಆಗಲ್ಲ. ಈಗ ಎಲ್ಲರೂ ಮಾತ್ರೆಗಳ ಮ್ಯಾಲ ಅವಲಂಬಿತ್ರು , ಊಟ ಮಾಡ್ಲೇ ಬೇಕು. ಉಪವಾಸ ಇದ್ದು ಮಾತ್ರೆ ತಗೊಂಡ್ರ ಅಡ್ಡ ಪರಿಣಾಮ ಎದುರಿಸ ಬೆಕಾಗತದ.

ಹಂಗ ನೋಡಿದ್ರ ಕಮ್ಮಿ ತಿನ್ನೋದರಿಂದ ಆರೋಗ್ಯಕ್ಕ ಬಾಳ ಲಾಭಗಳು ಇದ್ದಾವ.
ಹೆಚ್ಚು ಆಹಾರ ತಿನ್ನುವುದರಿಂದ ಹೆಚ್ಚು ಹೆಚ್ಚು ಆರೋಗ್ಯ ಸಮಸ್ಯೆ ಗಳು ಬರಲತಾವ.
ಅಕ್ಕಮಹಾದೇವಿ ಆವಾಗಲೆ ಹೇಳಿದ್ದಳು.

ಆಹಾರವ ಕಿರಿದು ಮಾಡಿರಣ್ಣ
ಆಹಾರವ ಕಿರಿದು ಮಾಡಿ.
ಆಹಾರದಿಂದ ವ್ಯಾಧಿ ಹಬ್ಬಿ ಬಲಿಯುವದಯ್ಯ.
ಆಹಾರದಿಂ ನಿದ್ರೆ
ನಿದ್ರೆಯಿಂ ತಾಮಸ, ಅಜ್ಞಾನ , ಮೈಮರೆವು
ಅಜ್ಞಾನದಿಂ ಕಾಮವೀಕಾರ ಹೆಚ್ಚಿ
ಕಾಯವಿಕಾರ,ಮನೋವಿಕಾರ
ಇಂದ್ರಿಯ ವಿಕಾರ, ಭಾವವಿಕಾರ
ವಾಯುಕಾರವನ್ನುಂಟುಮಾಡಿ
ಸೃಷ್ಟಿಗೆ ತಹುದಾದ ಕಾರಣ
ಕಾಯದ ಅತಿಪೋಷಣ ಬೇಡ.
ಅತಿ ಪೋಷಣೆ ಮೃತ್ಯು…

ಎಂದು ಹೇಳಿದ ಅಕ್ಕನ ಮಾತುಗಳಲ್ಲಿ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ಅದ. ತರಕಾರಿ , ಹಣ್ಣು , ಕಾಳು ಎಲ್ಲಾ ಆರೋಗ್ಯಕ್ಕ ಬಾಳ ಚಲೋ ಅಂತ ಹೆಚ್ಚ ಹೆಚ್ಚು ತಿನ್ನೊದರಿಂದ ಉಪಯೋಗಕ್ಕಿಂತ ತೊಂದರೆನೆ ಹೆಚ್ಚು. ಯಾಕಂದ್ರ ಈಗಿನ ಕಾಲದಾಗ ಯಾವ ಆಹಾರನೂ ಗೊಬ್ಬರ ಕ್ರೀಮಿನಾಶಕ ಇಲ್ದ ಬೆಳಯೋದೆ ಇಲ್ಲ. ಅವೆಲ್ಲ ಆಹಾರದಾಗ ಸೇರಿ ನಮ್ಮ ದೇಹ ಸೇರಲತಾವ ಅದಕ್ಕ ಬೊಜ್ಜು , ಹೃದಯ ರೋಗಗಳು , ಹೆಣ್ಣಮಕ್ಕಳಲ್ಲಿ ಮುಟ್ಟಿನ ಸಮಸ್ಯೆ ಗಳು ಇನ್ನೂ ಎನೇನೋ ರೋಗಳು ಹೆಚ್ಚಾಗಲತಾವ. ಅದಕ್ಕ ಹಿಂದಿನವ್ರು ಉಪವಾಸ ಮಾಡಿ ದೇಹದಾಗ ಇರೋ ಟಾಕ್ಸಿಕ್ ಅಂಶ ಹೋರ ಹಾಕಲಾಕ ಈ ಉಪವಾಸ , ನಿರಾಹಾರದಂತ ಆಚರಣೆಗಳು ಮಾಡ್ತಿದ್ರು. ಆದ್ರ ಈಗ ನಾವು ಮಾಡೋ ಉಪವಾಸಗಳು ಊಟ ಬಿಟ್ಟು ವೈರೈಟಿ ತಿಂಡಿ ತಿನ್ನಲಕ್ಕ ಮಾಡ್ತಿವಿ. ಎಷ್ಟೋ ಜನ ಉಪವಾಸ ಮಾಡೊವ್ರು ಮನ್ಯಾಗ ಅಡುಗಿ ಇದ್ರು ಅದು ಬಿಟ್ಟು ಬ್ಯಾರೆ ತಿಂಡಿ ಮಾಡಕ್ಕೊಂಡು ತಿನ್ನತಾರ. ಅನ್ನ ತಿಂದ್ರ ಉಪವಾಸ ಆಗಲ್ಲಂತ. ಮನ್ಯಾಗ ನಾಲ್ಕ ಜನ ಇದ್ರ ಎಲ್ಲರೂ ಒಮ್ಮೆ ಉಪವಾಸ ಮಾಡ್ರಿ. ಆಗ ಎಲ್ಲರೂ ಒಂದೇ ನಮೂನಿ ತಿಂಡಿ ತಿನ್ನಬಹುದು. ಅದ್ರಾಗ ಒಂದಿಬ್ಬರು ಊಟ ಮಾಡೋರು ಮತ್ತೊಬ್ರು ಉಪವಾಸ ಮಾಡೋರು ಇದ್ರ ಅವ್ರೀಗಿ ಅಡಿಗಿ ಮಾಡ್ಬೇಕು. ಉಪವಾಸ ಇದ್ದೊರಿಗಿ ತಿಂಡಿ ಮಾಡ್ಬೇಕು. ಹೆಚ್ಚಾದ ಆಹಾರ ಚಲ್ಲಬೇಕು. ಇದು ನಮ್ಮ ಉಪವಾಸದ ಆಚರಣೆ.ಉಪವಾಸ ಮಾಡ್ಲೇಬೇಕು ಅಂತ ನಿರ್ಧಾರ ಇದ್ದಾಗ ಬರೀ ನೀರು ಕುಡದು ಇರಬೇಕು.ಅದು ನಿಮ್ಮ ಆರೋಗ್ಯ ಕ್ಕ ಆದ್ರ ಮಾತ್ರ. ಯಾರೋ ಮಾಡ್ತಾರಂತಲೋ , ಹಿಂದಿನ ಆಚರಣೆಗಳಿಗೆ ಕಟ್ಟು ಬಿದ್ದೊ ಉಪವಾಸ ಮಾಡೋದು ವ್ಯರ್ಥ.

ಪ್ರತಿಯೊಂದು ಆಚರಣೆ ಪದ್ದತಿಗಳಿಗೆ ಒಂದೊಂದು ವೈಜ್ಞಾನಿಕ ಕಾರಣ ಕೊಟ್ಟು ಅದನ್ನು ಹಾಗೆ ಮುಂದುವರೆಸಿಕೊಂಡು ಬರೋದರಿಂದ ನಮಗ ಅಥವಾ ಸಮಾಜಕ್ಕ ಏನಾದರು ಉಪಯೋಗ ಆದ್ರ ಆಚರಿಸಲಿ. ಅದು ಅವರವರ ಮನೋಭಾವಕ್ಕ ಬಿಟ್ಟದ್ದು. ಅದರಿಂದ ನಮ್ಮ ಮನಸ್ಸಿನ ಗೆ ಮತ್ತು ದೇಹಕ್ಕೆ ಆಗೋ ಪರಿಣಾಮಗಳ ಬಗ್ಗೆಯು ಪ್ರತಿಯೊಬ್ಬರು ವಿಚಾರ ಮಾಡಬೇಕು. ಮನಸ್ಸಿನ ನೆಮ್ಮದಿಗಾಗಿ ಮಾಡೋ ಪೂಜೆಗಳು ವ್ರತಗಳು ಉಪವಾಸ ಗಳು ಇವೆಲ್ಲವೂ ದೇಹ ದಂಡಿಸತಾವ. ಆಯಾಸ ಮಾಡತವ. ಇದರಿಂದಾಗಿ ನಮಗ ನೆಮ್ಮದಿ ಅನ್ನೊರು ಮಾಡ್ಲಿ. ಟೀಕಿಸೊ ಪ್ರಯತ್ನ ಮಾಡಬಾರದು. ಆದ್ರ ಈ ಉಪವಾಸ , ಆಚರಣೆಗಳಿಂದ ಹೆಣ್ಣು ಮಕ್ಕಳು ಹೆಚ್ಚು ಹೈರಾಣ ಆಗತಾರ.ತಮ್ಮ ಮಕ್ಕಳು ಗಂಡ ಮನಿ ಅಂತ ಸದಾ ಒದ್ದಾಡತಾ ಯಾವದಿಂದಲಾದ್ರೂ ನೆಮ್ಮದಿ ಇರಲಿ ಅಂತ ಪೂಜೆ ವ್ರತಗಳ ಮೊರೆ ಹೋಗತಾರ.

ಒಟ್ಟಿನಲ್ಲಿ ಹಬ್ಬಗಳು ಮನಸ್ಸಿಗಿ ನೆಮ್ಮದಿ ಕೊಡುವಂತಾಗಲಿ.ಉಪವಾಸದ ಹೆಸರಲ್ಲಿ ಬೇರೆಬೇರೆ ವೈರೆಟಿ ತಿಂಡಿ ತಿಂದು ಉಪವಾಸ ಮಾಡಿ ಒಟ್ಟಿನಾಗ ಹೊಟ್ಟಿಗಿ ಖುಷಿಯಾಗಿ ಇಟ್ಟರ ಆಯ್ತು.
——————————————————————–

Leave a Reply

Back To Top