ಕಾವ್ಯ ಸಂಗಾತಿ
ಅರುಣಾ ನರೇಂದ್ರ
ಗಜಲ್

ನಾನು ಅತ್ತರೆ ನೀನೂ ಅಳುತ್ತಿದ್ದೆಯಲ್ಲ ಎಲ್ಲಿ ಹೋಯಿತು ಆ ಪ್ರೀತಿ
ನನಗೆ ನೋವಾದರೆ ನೀನೂ ನೋಯುತ್ತಿದ್ದೆಯಲ್ಲ ಎಲ್ಲಿ ಹೋಯಿತು ಆ ಪ್ರೀತಿ
ನಿನ್ನ ಕಣ್ಣಲ್ಲಿ ಯಾವತ್ತೂ ನೀರು ಬರಬಾರದೆಂದು ನನಗೆ ಹೇಳುತ್ತಿದ್ದಿ
ನಿತ್ಯ ನನ್ನ ಕಣ್ಣೀರಿಗೆ ನೀನೇ ಕಾರಣವಾದೆಯಲ್ಲ ಎಲ್ಲಿ ಹೋಯಿತು ಆ ಪ್ರೀತಿ
ನೀ ನನ್ನ ಉಸಿರಿನ ಉಸಿರೆಂದು ಅದೆಷ್ಟು ಬಾರಿ ನುಡಿದಿದ್ದಿ ಗೆಳೆಯ
ಸದಾ ನಿಟ್ಟುಸಿರು ಹಾಕುವಂತೆ ಮಾಡಿದೆಯಲ್ಲ ಎಲ್ಲಿ ಹೋಯಿತು ಆ ಪ್ರೀತಿ
ನೀ ಬಾಳ ಬನದಿ ಮಂದಾರ ಪುಷ್ಪವೆಂದು ಬೀಗಿದ್ದು ನಿಜವಲ್ಲವೆ
ಧಗಧಗ ಹೊತ್ತುರಿದು ಬೂದಿ ಮಾಡಿದೆಯಲ್ಲ ಎಲ್ಲಿ ಹೋಯಿತು ಆ ಪ್ರೀತಿ
ಬಾ ಎನದೆ ಬಂದು ಬೇಡವೆಂದು ಹೋದರೆ ಬದುಕೆಲ್ಲಿದೆ ಅರುಣಾಗೆ
ಬೆನ್ನ ಬೆಳಕೆಂದು ತಿಳಿದೆ ಕತ್ತಲಲಿ ನೂಕಿದೆಯಲ್ಲ ಎಲ್ಲಿ ಹೋಯಿತು ಆ ಪ್ರೀತಿ
ಅರುಣಾ ನರೇಂದ್ರ
