ಶಂಕರಾನಂದ ಹೆಬ್ಬಾಳ-ದೇವ ನಿನಗೊಂದು ಕವಿತೆ ಬರೆಯುತ್ತಿದ್ದೇನೆ

ದೇವ ನಿನಗೊಂದು ಕವಿತೆ
ಬರೆಯುತ್ತಿದ್ದೇನೆ,
ದಮನಿತರಿಗೆ ದನಿಯಾಗಿ
ನೊಂದವರಿಗೆ ಆಸರೆಯಾಗಿ
ಕಂಬನಿಯ ಒರೆಸುವ ಕೈಯಾಗಿ
ಅಂತರಂಗದ ನೋವುಗಳ
ಹಾಡಾಗಿಸಿ ಇಟ್ಟಿದ್ದೇನೆ,
ನೋಡಿಬಿಡು ಒಮ್ಮೆ…!

ದೇವ ನಿನಗೊಂದು ಕವಿತೆ
ಬರೆಯುತ್ತಿದ್ದೇನೆ,
ಅಜ್ಞಾನಿಗಳಿಗೆ ಸುಜ್ಞಾನಿಯಾಗಿ
ಕುರುಡರಿಗೆ ಊರುಗೋಲಾಗಿ
ಹಸಿದವರಿಗೆ ಮುಷ್ಟಿ ಅನ್ನವಾಗಿ
ಅನುಭವಿಸಿದ ಕ್ಷಣಗಳ
ಕಾವ್ಯದಲ್ಲಿ ಕಟ್ಟಿದ್ದೇನೆ
ನೋಡಿಬಿಡು ಒಮ್ಮೆ..!

ದೇವ ನಿನಗೊಂದು ಕವಿತೆ
ಬರೆಯುತ್ತಿದ್ದೇನೆ,
ಒಡಲಗಾಯದ ಮುಲಾಮಾಗಿ
ದಾಹತಣಿಸುವ ನೀರಾಗಿ
ನರಳುವವರ ಅಳುವಾಗಿ
ಕಾಣದ ಲೋಕದ ಸತ್ಯಗಳನು
ನಿನ್ನೆದುರು ಬಿಚ್ಚಿಟ್ಟಿದ್ದೇನೆ,
ನೋಡಿಬಿಡು ಒಮ್ಮೆ…!

ದೇವ ನಿನಗೊಂದು ಕವಿತೆ
ಬರೆಯುತ್ತಿದ್ದೇನೆ,
ಇನ್ನಾದರೂ ಓದಿಬಿಡು
ಉತ್ತರವನು ನೀಡಿಬಿಡು
ಹೇಳುವುದನು ಹೇಳಿದ್ದೇನೆ
ಮರುತ್ತರಕಾಗಿ ಕಾದಿದ್ದೇನೆ
ಉತ್ತರಿಸಿಬಿಡು ಒಮ್ಮೆ…!


Leave a Reply

Back To Top