ಕೊನೆಗೂ ವೈದ್ಯರುಗಳ ನಿರಂತರ ಪ್ರಯತ್ನ ಫಲ ಕೊಟ್ಟಿತು.

ವೇಲಾಯುಧನ್ ರವರಿಗೆ ಬೆಳಗಿನ ಜಾವದ ಹೊತ್ತಿಗೆ ಪ್ರಜ್ಞೆ ಬಂದಿತು. ಕೂಡಲೇ ಸುಮತಿಯನ್ನು ದಾಖಲಿಸಿದ್ದ ಕೊಠಡಿಗೆ ಹೋಗಿ ವೇಲಾಯುಧನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನುವ ಸಿಹಿ ಸುದ್ದಿಯನ್ನು ಒಬ್ಬ ದಾದಿಯು ತಲುಪಿಸಿದರು. ಸುಮತಿಯ ಕಣ್ಣುಗಳಲ್ಲಿ ಆನಂದಭಾಷ್ಪ   ತುಂಬಿತು. ಪತಿಯನ್ನು ಕಳೆದುಕೊಂಡು ಬಾಳುವುದನ್ನು ನೆನೆದೇ ಅವಳು ದಿಗ್ಭ್ರಾಂತಳಾಗಿದ್ದಳು. ಮನಸಾರೆ ಶ್ರೀ ಕೃಷ್ಣನಿಗೆ ವಂದನೆಗಳನ್ನು ಅರ್ಪಿಸಿದಳು. ಕೂಡಲೇ ಪತಿಯನ್ನು ದಾಖಲಿಸಿದ್ದ ಕೊಠಡಿಯ ಕಡೆಗೆ ಓಡಿದಳು. ಅಲ್ಲಿ ಪತಿಯು ವೈದ್ಯರೊಂದಿಗೆ ಮಾತನಾಡುತ್ತಾ ಇರುವುದನ್ನು ಕಂಡಳು. ಅಲ್ಲಿಂದ ಮೂವರು ಮಕ್ಕಳನ್ನು ದಾಖಲಿಸಿದ್ದ ಕೊಠಡಿಗೆ ಹೋದಳು. ಮಕ್ಕಳನ್ನು ಬಿಗಿದಪ್ಪಿ 

” ಅಪ್ಪನಿಗೆ ಏನೂ ಆಗಿಲ್ಲ ಮಕ್ಕಳೇ….ಬನ್ನಿ ಅಪ್ಪನನ್ನು ದಾಖಲಿಸಿದ ಕೊಠಡಿಗೆ ಹೋಗೋಣ”…ಎಂದು ಹೇಳುತ್ತಾ ಮೂವರು ಹೆಣ್ಣು ಮಕ್ಕಳನ್ನು ಕರೆದುಕೊಂಡು ಪತಿಯಿದ್ದ ಕೊಠಡಿಯ ಕಡೆಗೆ ನಡೆದಳು. ಆಗ ವೈದ್ಯರು ಕೊಠಡಿಯ ಒಳಗಿನಿಂದ ದಾದಿಗೆ ಏನೇನೋ ಸೂಚನೆಗಳನ್ನು ಕೊಡುತ್ತಾ ಹೊರಗೆ ಬಂದರು. ಕೊಠಡಿಯ ಹೊರಗೆ ನಿಂತಿದ್ದ ಸುಮತಿ ಹಾಗೂ ಮಕ್ಕಳನ್ನು ಕಂಡರು. ತನ್ನತ್ತ ನೋಡುತ್ತಾ ನಿಂತಿದ್ದ ಮುಗ್ಧ ಬಾಲಕಿಯ ತಲೆಯನ್ನು ನೇವರಿಸುತ್ತಾ ಸುಮತಿಯ ಕಡೆಗೆ ನೋಡುತ್ತಾ….”ನಿಮ್ಮ ಪತಿಯು ಈಗ ಪ್ರಾಣಾಪಾಯದಿಂದ ಪಾರಾಗಿದ್ದಾರೆ…. ಇನ್ನೂ ಎರಡು ದಿನ ಇಲ್ಲಿಯೇ ಇದ್ದು ನೀವೆಲ್ಲರೂ ಚಿಕಿತ್ಸೆ ಪಡೆದು ಮನೆಗೆ ತೆರಳಬಹುದು “…. ಎಂದರು. ವೈದ್ಯರು ಹೋದದ್ದೇ ತಡ ಮಕ್ಕಳೊಂದಿಗೆ ಪತಿಯ ಬಳಿಗೆ ಬಂದಳು. ಪತಿಯನ್ನು ಕಂಡ ಕೂಡಲೇ ಭಾವುಕಳಾದ ಸುಮತಿಯ ಬಾಯಿಂದ ಪದಗಳೇ ಹೊರಡಲಿಲ್ಲ. ಸಂತೋಷದ ಕಣ್ಣೀರು ತುಂಬಿದ ಕಣ್ಣುಗಳಿಂದ ಪತಿಯನ್ನೇ ತದೇಕ ಚಿತ್ತವಾಗಿ ನೋಡಿದಳು. 

ಅದನ್ನು ಕಂಡ ವೇಲಾಯುಧನ್…ಇದೇನು ಸುಮತಿ ಹೀಗೇಕೆ ನೋಡುತ್ತಿರುವೆ?…. ನನಗೇನೂ ಆಗಿಲ್ಲ…. ಎಂದು ಹೇಳಿ ನಗುತ್ತಾ ಮಕ್ಕಳನ್ನು ಹತ್ತಿರ ಕರೆದರು. 

ಅಪ್ಪ ಕರೆದಾಗ ಅಳುಕುತ್ತಳೇ ಹಿರಿಯ ಮಗಳು ಅಮ್ಮನ ಮುಖ ನೋಡಿದಳು. ಹೋಗು ಎನ್ನುವಂತೆ ಸುಮತಿ ಸನ್ನೆ ಮಾಡಿದಳು. ಎರಡನೇ ಮಗಳು ಮಾತ್ರ ಅಪ್ಪನ ಬಳಿ ಹೋಗದೇ ಅಮ್ಮನ ಸೆರಗನ್ನು ಹಿಡಿದು ತನ್ನ ಮುಖವನ್ನು ಮರೆಮಾಚುತ್ತಾ ಓರೆಗಣ್ಣಿನಿಂದ ಅಪ್ಪನನ್ನು ನೋಡಿದಳು.

ಕಂಕುಳಲ್ಲಿದ್ದ ಪುಟ್ಟ ಮಗಳು ಪಿಳಿ ಪಿಳಿ ಕಣ್ಣು ಬಿಡುತ್ತಾ ಅಪ್ಪನನ್ನು ನೋಡಿದಳು. ಮಕ್ಕಳನ್ನು ನೋಡುತ್ತಾ ವೇಲಾಯುಧನ್ ನಸು ನಕ್ಕು ಸುಮತಿಯ ಕಡೆಗೆ ನೋಡುತ್ತಾ ….”ಮಕ್ಕಳನ್ನು ಕರೆದುಕೊಂಡು ಅವರ  ಕೊಠಡಿಗೆ ಬಿಟ್ಟು ನೀನು ಕೂಡಾ ಹೋಗಿ ಮಲಗು ಇಲ್ಲದಿದ್ದರೆ ದಾದಿಯರು ಬೈಯುತ್ತಾರೆ”…. ಎಂದು ಹೇಳಿ ಮಂಚದ ಮೇಲೆ ವೇಲಾಯುಧನ್ ಮಲಗಿದರು. 

ಮೂರು ದಿನ ಕಳೆದ ನಂತರ ಸುಮತಿಯ ಕುಟುಂಬವು ಆರೋಗ್ಯಪೂರ್ಣವಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಕೊಂಡು ತಮ್ಮ ಮನೆಗೆ ಬಂದಿತು. ಅವರ ಜೀವನವು ಏಳುಬೀಳುಗಳ ನಡುವೆ ಸಾವರಿಸಿಕೊಂಡು ಸಾಗುತ್ತಿತ್ತು. ವೇಲಾಯುಧನ್ ಗೆ ಕೆಲಸ ಸರಿಯಾದ ಕಾರಣ ಅವರ ಕುಟುಂಬವು ಈಗ ಬೇರೊಂದು ಊರಿಗೆ ಪಯಣ ಬೆಳೆಸಿತು. ಅಲ್ಲಿ ಹೋದ ನಂತರ ಅವರ ಕಷ್ಟದ ದಿನಗಳು ಮತ್ತಷ್ಟೂ ಹೆಚ್ಚಾದವು. ವೇಲಾಯುಧನ್ ಕೆಲಸಕ್ಕೆ ಹೋಗಿ ಬರುತ್ತಿದ್ದರೂ ನಾಲ್ಕು ಹೊಟ್ಟೆ ಹೊರೆಯುವುದು ಕಷ್ಟವಾಯಿತು. ಮೊದಲಿದ್ದ ಊರನ್ನು ಬಿಟ್ಟ ನಂತರ ಹಿರಿಯ ಮಗಳ ವಿಧ್ಯಾಭ್ಯಾಸ ಹೊಸ ಊರಿನಲ್ಲಿ, ಹೊಸ ಶಾಲೆಯಲ್ಲಿ ಮುಂದುವರೆಯಿತು. ಅವರು ವಾಸವಿದ್ದ ಮನೆಯ ಪಕ್ಕದಲ್ಲಿ ಒಬ್ಬರು ಪ್ರಾಥಮಿಕ ಶಾಲೆಯ ಮಾಸ್ತರರು ಇದ್ದರು. ಕೆಲವೊಮ್ಮೆ ಅವರು ಪಾಠ ಹೇಳಿಕೊಡುತ್ತಿದ್ದರು. ಎರಡನೇ ಮಗಳಿಗಾಗಲೇ ಮೂರು ವರ್ಷ. ಪಕ್ಕದ ಮನೆಯ ಮಾಸ್ತರರು ಶಾಲೆಗೆ ಹೋಗುವಾಗ ತಾನೂ ಶಾಲೆಗೆ ಹೋಗುತ್ತೇನೆ ಎಂದು ಹಟ ಹಿಡಿಯುತ್ತಿದ್ದಳು. ಕೊನೆಗೆ ವಿಧಿಯಿಲ್ಲದೇ ಅವಳನ್ನು ಅಲ್ಲಿನ ಪ್ರಾಥಮಿಕ ಶಾಲೆಗೆ ಸೇರಿಸಲಾಯಿತು. 

ಖುಷಿಯಿಂದ ದಿನವೂ ಶಾಲೆಗೆ ಹೋಗಲು ಪ್ರಾರಂಭಿಸಿದಳು. ಅಷ್ಟು ದೂರದವರೆಗೆ ಸುಮತಿ ಅವಳನ್ನು ಬಿಟ್ಟು ಬರುತ್ತಿದ್ದಳು. ಆದರೆ ಆ ಪುಟ್ಟ ಹುಡುಗಿಗೆ ದನ ಕರುಗಳೆಂದರೆ ಬಹಳ ಹೆದರಿಕೆ. ಸ್ವಲ್ಪ ದೂರ ಹೋಗುವಾಗ ದಾರಿಯಲ್ಲಿ ದನಕರುಗಳು ಕಂಡರೆ ಓಡಿ ಮನೆಗೆ ಬಂದು “ಅಮ್ಮಾ ಶಾಲೆಗೆ ಬಿಡಮ್ಮಾ ನನಗೆ ಹೆದರಿಕೆ ಆಗುತ್ತೆ”… ಎನ್ನುತ್ತಿದ್ದಳು. ಹಿರಿಯ ಮಗಳು ಅದಾಗಲೇ ಶಾಲೆಗೆ ಹೋಗಿರುತ್ತಿದ್ದ ಕಾರಣ ವಿಧಿಯಿಲ್ಲದೇ ಸುಮತಿ ಮತ್ತೆ ಮೂರನೇ ಮಗಳನ್ನು ಎತ್ತಿಕೊಂಡು ಅಷ್ಟು ದೂರ ಬಿಟ್ಟು ಬರುವಳು. ಒಂದು ದಿನ ಶಾಲೆಯಲ್ಲಿ ಮೂರು ವರ್ಷದ ಮಕ್ಕಳಿಗೆಲ್ಲಾ ಬಿ ಸಿ ಜಿ ಚುಚ್ಚುಮದ್ದನ್ನು ಹಾಕಿದರು. ಆಗ ಸುಮತಿಯ ಎರಡನೆಯ ಮಗಳಿಗೂ ಚುಚ್ಚುಮದ್ದನ್ನು ಹಾಕಿದ್ದರು. ಕೆಲವು ದಿನಗಳ ನಂತರ ಮಗುವಿನ ಎಡ ತೋಳು ಬಾತುಕೊಂಡು ಜ್ವರ ಪ್ರಾರಂಭವಾಯಿತು. ಅಮ್ಮನಿಗೆ ಮನೆಯ ಕೆಲಸದಲ್ಲಿ ಹಿರಿಯ ಮಗಳು ಸಹಾಯ ಮಾಡುತ್ತಿದ್ದಳು. ಅಮ್ಮ ಮನೆಯ ನೆಲವನ್ನು ಸಗಣಿಯಿಂದ ಸಾರಿಸುತ್ತಿದ್ದಾಗ ಹಿರಿಯ ಮಗಳು ನೀರು ಹಾಗೂ ಕಾಫಿ,ಟೀ ಕುಡಿಯಲು ಬಳಸುತ್ತಿದ್ದ ಲೋಟಗಳನ್ನು ಒಂದು ದೊಡ್ಡ ಮಣ್ಣಿನ ಮಾಡಿಕೆಯಲ್ಲಿ ಹಾಕಿ ಇಟ್ಟಿದ್ದಳು. ಅಮ್ಮ ಮನೆ ಸಾರಿಸುತ್ತಾ ಇರುವುದನ್ನು ಕಂಡು ಅವಳು ಹೊರಗೆ ಗೆಳೆಯರ ಸಂಗಡ ಆಡಲು ಹೋದಳು. ಅದೇ ವೇಳೆಗೆ ವೇಲಾಯುಧನ್ ಮನೆಗೆ ಬಂದರು. ಸುಮತಿ ಮನೆ ಸಾರಿಸುವಾಗ ಕೈಯಲ್ಲಿ ಮೆತ್ತಿಕೊಂಡ ಸಗಣಿಯನ್ನು ತೊಳೆಯಲು ಹೊರಗೆ ಹೋಗಿದ್ದಳು. ಒಳಗೆ ಬಂದ ವೇಲಾಯುಧನ್ “ಸುಮತಿ” ಎಂದು ಕೂಗಿದರು. ಸುಮತಿಯಿಂದ ಯಾವುದೇ ಪ್ರತಿಕ್ರಿಯೆ ಬಾರದೇ ಇದ್ದಾಗ, ಅಲ್ಲಿಯೇ ಮಲಗಿದ್ದ ಎರಡನೇ ಮಗಳನ್ನು ಕೇಳುದರು….”ನೀರು ಕುಡಿಯುವ ಲೋಟ ಎಲ್ಲಿ”? ….ಆಗ ಜ್ವರ ನೋವಿನಿಂದ ಬಳಲುತ್ತಿದ್ದ ಆ ಪುಟ್ಟ ಹುಡುಗಿ…”ನನಗೆ ಗೊತ್ತಿಲ್ಲ ಅಪ್ಪಾ”….ಎಂದು ಹೆದರುತ್ತಲೇ ಹೇಳಿದಳು.

ದಣಿದಿದ್ದ ಅವರು ಅಲ್ಲೆಲ್ಲಾ ಹುಡುಕಿದರೂ ಲೋಟ ಸಿಗಲಿಲ್ಲ. ಕೋಪಗೊಂಡು ಮಲಗಿದ್ದ ಆ ಪುಟ್ಟ ಹುಡುಗಿಯನ್ನು ಮತ್ತೊಮ್ಮೆ ಕೇಳಿದರು. ಆಗಲೂ ತಿಳಿಯದು ಎಂದಳು ಆ ಪುಟ್ಟ ಹುಡುಗಿ. ಮೊದಲೇ ವೇಲಾಯುಧನ್ ಕೋಪಿಷ್ಠ, ಕೋಪವನ್ನು ತಾಳಲಾರದೇ…”ನೀನು ಆಟವಾಡುವಾಗ ಎಲ್ಲಾದರೂ ಬಚ್ಚಿ ಇಟ್ಟಿರುತ್ತಿ…ಎದ್ದು ಹುಡುಕಿ ತೆಗೆದುಕೊಡು ಅನಿಷ್ಟ”….ಎನ್ನುತ್ತಾ ಕೋಪದಿಂದ ಮಗಳ ಎಡ ತೋಳಿಗೆ ಒದ್ದು ಬಿಟ್ಟರು. ಮೊದಲೇ ಆ ಪುಟ್ಟ ಹುಡುಗಿಯ ತೋಳು

ಚುಚ್ಚುಮದ್ದಿನ ನೋವಿನಿಂದಾಗಿ ಬಾತುಕೊಂಡಿತ್ತು. ವೇಲಾಯುಧನ್ ಕಾಲಿನಿಂದ ಒದ್ದ ಕೂಡಲೇ ಬಾತುಕೊಂಡ ಭಾಗದಿಂದ ರಕ್ತ ಹಾಗೂ ಕೀವು ಗೋಡೆಯ ಮೇಲೆ ಸಿಡಿಯಿತು. ನೋವಿನಿಂದ ಕಿಟಾರನೆ ಕಿರುಚಿದ ಆ ಪುಟ್ಟ ಹುಡುಗಿ ಅಮ್ಮಾ ಎನ್ನುತ್ತಾ ಜೋರಾಗಿ ಕೂಗಿ ಅತ್ತಳು. ಅಕ್ಕ ಅಳುತ್ತಿದ್ದುದನ್ನು ನೋಡಿ ಅಲ್ಲಿಯೇ ಕುಳಿತು ಆಡುತ್ತಿದ್ದ ಎಂಟು ತಿಂಗಳ ಮಗುವೂ ಅಳಲು ಪ್ರಾರಂಭಿಸಿತು. ಮಕ್ಕಳ ಅಳುವಿನ ಧ್ವನಿ ಕೇಳಿ ಓಡುತ್ತಾ ಮನೆಯೊಳಗೆ ಬಂದಳು. ನೋಡುವಾಗ ಮಲಗಿದ್ದ ಮಗಳನ್ನು ಒದೆಯಲು ಕಾಲೆತ್ತಿ ನಿಂತಿರುವ ಪತಿ ಹಾಗೂ ಹೆದರಿ ಮುದುರಿಕೊಂಡು ಕುಳಿತು ನೋವಿನಿಂದ ಅಳುತ್ತಿದ್ದ ಮಗಳನ್ನು ಕಂಡಳು. ಹೃದಯವೇ ಬಾಯಿಗೆ ಬಂದಂತಾಯಿತು ಆ ದೃಶ್ಯವನ್ನು ನೋಡಿ ಸುಮತಿಗೆ. ಕೂಡಲೇ ಬಂದು ಅವರ ಕಾಲನ್ನು ಹಿಡಿದು ತಡೆದು…”ಅಯ್ಯೋ!! ಏನು ಮಾಡುತ್ತಿರುವಿರಿ?…. ಬಿಸಿಜಿ ಚುಚ್ಚುಮದ್ದು ಚುಚ್ಚಿದ ಭಾಗದಲ್ಲಿ ಊತ ಕಾಣಿಸಿಕೊಂಡು ಮಗುವಿಗೆ ಜ್ವರ ಬಂದಿದೆ… ಆ ಮಗುವನ್ನು ಈ ರೀತಿ ಕಾಲಿನಿಂದ ಒದೆಯುತ್ತಾ ಇದ್ದೀರಾ…ಈ ಮೊದಲೇ ಜ್ವರದಿಂದ ಬಳಲುತ್ತಿದ್ದ ಮಗನನ್ನು ಹೊಡೆದು ಕೊಂದಿರಿ…ಈಗ ಈ ಮಗಳನ್ನು ಕೂಡಾ ಒದ್ದು ಕೊಂದುಬಿಡುವಿರಾ”…ಎನ್ನುತ್ತಾ ಮಗುವಿಗೆ ಅಡ್ಡಲಾಗಿ ಬಂದು ಕುಳಿತುಕೊಂಡಳು.


Leave a Reply

Back To Top