‘ಮತ್ತೆ ಸಿಗೋಣ ಕಮು’ಲಹರಿ-ಶಾರದಜೈರಾಂ.ಬಿ.ಚಿತ್ರದುರ್ಗ.

“ಸ್ನೇಹ “ಈ ಎರಡಕ್ಷರದ ಪದ ಸಂಬಂಧಗಳಿಗೂ, ಬಳಗಕ್ಕೂ ಮೀರಿದ ಅನನ್ಯ ಬಂಧ.ಬದುಕಿನ ಆಗುಹೋಗುಗಳಿಗೆ ಸ್ಪಂದಿಸುವ,ಆಗಾಗ ನೆನಪಾಗಿ ಕಣ್ಣ ಹೊಳಪಾಗಿಸುವ,ಸೋತಾಗ ಹೆಗಲಾಗುತ ಭರವಸೆ ತುಂಬುವ,ಖುಷಿಯ ಹಂಚಿಕೊಂಡಾಗ ನನಗಿಂತಲೂ ಹೆಚ್ಚಾಗಿ ಸಡಗರದಿ ಸಂಭ್ರಮಿಸುವ, ದುಃಖಕ್ಕೆ ಸಾಂತ್ವನ ಹೇಳುತಾ,ಬದುಕಿನ ಪ್ರತಿ ಮಜಲುಗಳಲ್ಲಿ ನಿನ್ನೊಂದಿಗೆ ಇದ್ದೇನೆ ಎಂದು ಸಾಗಿ ಬರುವ ನಿಸ್ವಾರ್ಥದ ಅನುಬಂಧ ಈ ಸ್ನೇಹ.ಇದಕ್ಕೆ ಅನ್ವರ್ಥ ಎಂಬಂತೆ ನನ್ನ ಗೆಳತಿ ಕಮೂ (ಕಮಲ).ಅವಳೊಂದಿಗಿನ ಬಾಂಧವ್ಯ ಬೆಳೆದುದು ತರಬೇತಿ ಅವಧಿಯಲ್ಲಿ ಅಂದಿನಿಂದ ಇಂದಿನವರೆಗೂ ಬಿಡಿಸಲಾಗದ ನಂಟಾಗಿದೆ.ಅವಳ ಪ್ರೀತಿ ಬತ್ತಲಾರದ ಝರಿಯಂತೆ ನೆನೆದೊಡೆ ಸದಾ ಮನದಿ ನಿನಾದ ಹೊಮ್ಮುವ ಸುಮಧುರ ಸಂಗೀತದಂತೆ.ಕಮಲದ ದಳ ಹೋಲುವ ಕಂಗಳ ಚೆಲುವೆ ಭಾವ ಹೊರಹಾಕಲು ಕಣ್ಣುಗಳೇ ಸಾಕು.ತರಬೇತಿ ಅವಧಿಯಲ್ಲಿ ಪರೀಕ್ಷೆ ಶುಲ್ಕ ಭರಿಸಲು ಕೊನೆಯ ದಿನಾಂಕವಾದರೂ ಬೇರೆ ಗೆಳತಿಯರಲ್ಲಿ ಹೇಗೆ ಕೇಳಲಿ ಎಂದು ಸಂಕೋಚದಿ ಮುದುಡಿ ಕುಳಿತಾಗ,ಕಮೂ ಕೇಳಿ ತಂದು ನೀಡಿ, ಶಾರೂ ನನ್ನ ಬಳಿ ಹೇಳಲು ಹಿಂಜರಿಕೆ ಏಕೆ ಎಂದು ಮಮತಾಮಯಿ ಬೈಗುಳ ಕೇಳಬೇಕಿತ್ತು.ಈ ಅಕ್ಷರಗಳು ನಮ್ಮನ್ನು ಮತ್ತಷ್ಟು ಬೆಸೆಯಿತು ಪಠ್ಯೇತರ ಪುಸ್ತಕಗಳ ಚರ್ಚೆಯೇ ಜಾಸ್ತಿ ಓದಿ ಆ ಕೃತಿಯ ಸಾಧಕ ಭಾದಕಗಳ ಬಗ್ಗೆ ಚರ್ಚಿಸುವುದು.ನಮ್ಮ ಸಂವಹನ ನೋಡಿ ಉಳಿದ ಗೆಳತಿಯರ ಕಣ್ಣಲ್ಲಿ ಸೋಜಿಗ ಪ್ರೇಮಿಗಳಂತೆ ಮಾತನಾಡುವ ಪರಿಗೆ.ತರಬೇತಿ ಮುಗಿದ ನಂತರವು ನಮ್ಮಿಬ್ಬರ ಬಂಧ ಮುಂದುವರಿಯಿತು.ಇಬ್ಬರದೂ ಒಂದೆಡೆ ಕೆಲಸ ಬಿಡುವಾದಾಕ್ಷಣ ಅಂದಿನ ವಿದ್ಯಮಾನಗಳ ಮಾತಿನಲಹರಿ ಓತಪ್ರೋತವಾಗಿ ಸಾಗೋದು ಇಹದ ಅರಿವೆಯಾದಾಗ ಕಮೂ ತಡವಾಯಿತು ಮತ್ತೆ ಸಿಗೋಣವೆಂದು ವಿದಾಯ ಹೇಳುತ್ತಿದ್ದೇವು.ನಮ್ಮಿಬ್ಬರ ಒಡನಾಟದ ಆ ದಿನಗಳು ಮಧುರಾನುಭೂತಿ ಉಂಟುಮಾಡುತ್ತವೆ.ಪ್ರೇಮಿಗಳು ಧೀರ್ಘ ಅಗಲಿಕೆಯಿಂದ ಮತ್ತೆ ಸಂಧಿಸುವಾಗ ಇರುವ ಆತುರತೆ ಕಾತರತೆ,ಕಾಳಜಿಯಿರುತ್ತಿತ್ತು.ಆ ಬೆಂಗಳೂರಿನ ರಸ್ತೆಗಳಲ್ಲಿ ನಡೆವಾಗ ಕೆಲವೊಮ್ಮೆ ಬಸ್ಸು ಏಕೆ ಸೇರಬೇಕಾದ ಗಮ್ಯ ಬೇಗ ತಲುಪುತ್ತೇವೆ ಬಾ ಮಾತನಾಡುತ್ತಾ ಸಾಗೋಣ ಎಂದು ನನ್ನ ಪುಸಲಾಯಿಸಿ ನಡೆಸುತ್ತಿದ್ದಳು ನಿಜ ಮಾತಿನ ಜಾಡು ಹಿಡಿದು ಹೊರಟ ನಮಗೆ ಹಾದಿಯ ಜಾಡು ಕಿರಿದೆ ತಲುಪಿರುತ್ತಿದ್ದೇವು.ಆದರೂ ನಾನು ಹುಸಿಕೋಪದ ಪ್ರದರ್ಶನ ಆಗ ಬಾ ಇಲ್ಲಿಯೇ ಕಾಫಿ ಕುಡಿಯೋಣ ಎಂದು ಹೋಟೆಲ್ನಲ್ಲಿ ಕುಳಿತಾಗ ನೀನು ತಿಂಡಿ ತಿನ್ನ ನಂಗೆ ಬೇಡ ಎಂದೇಳಿ,ನಾನು ತಿನ್ನುವುದನ್ನೇ ಸಂತಸದಿ ತಾನೇ ಸವಿದಂತೆ ನೋಡುವ ಪರಿ ಭಾವಕ್ಕೂ ನಿಲುಕದ್ದು ಆ ಹೃದಯಶ್ರಿಮಂತಿಕೆ.ನನಗೆ ತಿಳಿಯದ್ದೇನಲ್ಲಾ ಹಣ ಕಡಿಮೆಯಿರುತ್ತಿದ್ದ ಕಾರಣ ನನಗೆ ಅಷ್ಟೇ ತಿಂಡಿ ಕೊಡಿಸಿ ನಿನಗೆ ಕಂಪನಿ ಕೊಡುವೆ ಎಂದು ಕಾಫಿ ತರಿಸಿಕೊಳ್ಳುತ್ತಿದ್ದಳು.ನನ್ನಿಷ್ಟ ಅರಿತ ಜೀವವದು ಟೀ ಬಿಸಿಯಾಗಿರಲಿ ಎಂದು ಹೇಳಿ ತರಿಸಿಕೊಡುತ್ತಿದ್ದಳು.ಆ ದಿನಗಳಲ್ಲಿ ನಮ್ಮಲ್ಲಿ ಹಣಕ್ಕೆ ಬರವಿತ್ತು ಸ್ನೇಹಕ್ಕೆ ಕೊರತೆಯಿರಲಿಲ್ಲ.ನನ್ನ ಭಾವೀ ಬದುಕಿನ ಬಗ್ಗೆ ತುಂಬಾ ಆತಂಕ ಎಲ್ಲರನ್ನೂ ಒಂದೇ ತೆರನಾಗಿ ಯೋಚಿಸದೆ ಮುಗ್ಧತೆಯಿಂದ ಒಳ್ಳೆಯವರೆಂದು ಭ್ರಮಿಸುವ ಗುಣ ಬಿಡು ಎಂದು ತಿಳಿ ಹೇಳುತ್ತಿದ್ದಳು.ಯಾರದ್ದೇ ಕಷ್ಟವಾಗಿರಲಿ ಬೇಗನೆ ಸ್ಪಂದಿಸುವ ಗುಣ ಅವಳದು.ನಾನು ಶಸ್ತ್ರಚಿಕಿತ್ಸಗೆ ಒಳಪಟ್ಟಾಗ ಧಾವಿಸಿ ಬಂದು ತಾಯಿಯಂತೆ ಆರೈಕೆ ಮಾಡಿದಳು.ಇಂದಿಗೂ ನನ್ನ ಕರೆ ಕೇಳಿದರೆ ಸಾಕು ಆ ಕರೆಯ ಇಂಗಿತ ಹೇಳದೆ ಭಾವೋದ್ವೇಗ,ಉಸಿರ ಬಡಿತ ಅರಿಯುವ ಅಂತರಂಗದ ಗೆಳತಿಯಿವಳು.ಎಲ್ಲರಿಗೂ ಪ್ರೀತಿ ನೀಡುವುದಷ್ಟೇ ಮತ್ತೇನೂ ಬಯಸದ ನಿಸ್ವಾರ್ಥ ಹೃದಯದ ತಾಯಿ ಎನ್ನಲೇ, ಗೆಳತಿ,ಒಡನಾಡಿ ಅಕ್ಕನಂತೆ ಅಕ್ಕರೆಯಿಂದ ಮಾತನ್ನು, ದುಃಖ ದುಮ್ಮಾನ ಆಲಿಸುವ,ಸಮಾಧಾನಿಸಿ ಭರವಸೆಯ ಬೆಳಕು ಮೂಡಿಸುವ ಹೊಸಬೆಳಕು ಎನ್ನಲೇ ನಿನ್ನ, ಮೊಗೆದಷ್ಟೂ ಬರಿದಾಗದ ಆ ಸ್ನೇಹ ಅಕ್ಷಯ ಪಾತ್ರೆಯಂತೆ ಸದಾ ಬೊಗಸೆ ಬೊಗಸೆ ಮಮತೆ ನೀಡುವ ನೀ ಕಾಮಧೇನುವಿನ ಪ್ರತಿರೂಪ ಎಂದು ಧ್ಯಾನಿಸಿ ಮೌನಿಯಾಗಿ ಆ ಸ್ನೇಹ ಸೋನೆ ಮಳೆಯಲಿ ಮಿಂದೇಳಲು ತವಕಿಸುವ ನಿನ್ನ ಸ್ನೇಹಿತೆ ಶಾರೂ ಕಮೂ ಸಿನಿಮಾ ನೋಡೋಣ ಬಾ ಎಂದು ಹೋಗಿ ಕುಳಿತೆವು.ಮುಂಗಾರು ಮಳೆ ಸಿನಿಮಾ ನಾನು ತದೇಕಚಿತ್ತದಿಂದ ನೋಡುತ್ತಿದ್ದೆ ಅವಳು ಆಗಾಗ ಶಾರೂ ಹಾಗೇ ಹೀಗೆ ಎಂದು ಮಾತನಾಡುತ್ತಿದ್ದಳು ಕಮೂ ಸಿನಿಮಾ ನೋಡಲು ಬಿಡು ಎಂದು ಹುಸಿಕೋಪ ತೋರಿದೆ,ಆದರೂ ಶಾರು ಮತ್ತೆ ಸಿನಿಮಾ ನೋಡಬಹುದು ನಾವು ಮತ್ತೆ ಮಾತನಾಡಲು ಸಮಯ ಸಿಗೋಲ್ಲ ಎಂದು ಹೇಳಿದಾಗ ಅವಳ ಭಾವತೀವ್ರತೆಗೆ ಸುಮ್ಮನಾದೆ, ಸಿನಿಮಾ ಮುಗಿದಾಗ ಹೊರ ಬಂದಾಗಲೂ ಅಷ್ಟೇ ನಿನಗೆ ಚೆನ್ನಾಗಿರುವೆಡೆ ತಿಂಡಿ ಕೊಡಿಸಬೇಕು ಬಾ ಹುಡುಕೋಣ ಹೋಟೆಲ್ ಎಂದು ಮತ್ತೆ ನಮ್ಮ ಓಡಾಟ ಮುಂದುವರಿಯುತ್ತಿತ್ತು.ನನ್ನ ಆದ್ಯತೆ ಏನೆಂದು ಹೇಳದೆ ಅರಿತ (ಅಮ್ಮ ಮೊದಲು)ಎರಡನೇ ಜೀವ ಅವಳು.ಕಾಲಾನಂತರ ಜೀವನೋಪಾಯಕ್ಕೆ ಆಶ್ರಯಿಸಿದ ಕೆಲಸ,ಕೌಟುಂಬಿಕ ನಿರ್ವಹಣೆಯಲ್ಲಿ ಇಬ್ಬರೂ ಬ್ಯುಸಿ,ಏನಾದರೂ ವಿಚಾರಿಸಬೇಕಿತ್ತು ಎಂದಾಗ ಕರೆ ಮಾಡಿ ಲಘು ಮಾತು,ಮತ್ತದೇ ಬದುಕ ಪಯಣದ ಹಾದಿಯಲ್ಲಿ ಮುನ್ನೆಡೆಯುವುದು.ಕಮೂ ಬಿಡುವಾಗು ಮತ್ತೋಮ್ಮೆ ಆ ದಿನಗಳ ಮರಳಿಸೋಣ ನಿನ್ನ ವೇಗದ ನಡಿಗೆ ಯೊಂದಿಗೆ ನನ್ನ ಮೆಲು ನಡಿಗೆ ಸರಿದೂಗಿಸುತಾ, ಸುತ್ತಲ ಪರಿಸರ ನಮ್ಮ ನೋಡಿ ಮೂಕವಾಗುವಂತೆ ನನ್ನೇಲ್ಲಾ ಮಾತಿಗೆ ಕಿವಿಯಾಗು,ನಿನ್ನೇಲ್ಲಾ ಮಾತಿಗೆ ನಾನು ಕಿವಿಯಾಗುವೆ,ಮಾತೆಲ್ಲಾ ಮುಗಿದು ಮೌನ ಮಾತಾಡಬೇಕು,ಮೌನದ ಕೊನೆ ಮಾತಾಗಬೇಕು ಅಳುವ ನೆನೆದು ನಗೋಣ,ನಗುವ ನೆನೆದು ಅಳೋಣ ತುಸು ಚೂರು ನಮ್ಮಂತೆ ನಲಿಯೋಣ,ಮನಸಿನ ಗೋಡೆಯ ಹೊಡೆದು ಬರಲಿ ಮಾತೆಲ್ಲಾ,ಹೊರಡಲಿ ತಾ ಮುಂದು ನಾ ಮುಂದೆಂದೂ ಮೆರವಣಿಗೆಯಂತೆ ಬೀಗ ತೆರೆದ ಹೃದಯವೂ ಹಗುರಾಗಲಿ ಹನಿಗಣ್ಣಾಗಲಿ ಮನವು ಅರಳಿ ಸ್ನೇಹದ ಸಾರ್ಥಕ ಭಾವದಿ ಮೀಯಲಿ ಖಂಡಿತಾ ಮತ್ತೋಮ್ಮೆ ಸಿಗೋಣ ಈ ಹೃದಯದ ಬಡಿತ ನಿಲ್ಲುವ ಮುಂಚೆ ಒಮ್ಮೆ.. ಮತ್ತೋಮ್ಮೆ…ಸಿಗೋಣ ಕಮೂ!!

————————–

One thought on “‘ಮತ್ತೆ ಸಿಗೋಣ ಕಮು’ಲಹರಿ-ಶಾರದಜೈರಾಂ.ಬಿ.ಚಿತ್ರದುರ್ಗ.

Leave a Reply

Back To Top