ಪ್ರೇಮಾ ಶ್ರೀಕೃಷ್ಣ ಅವರಕವಿತೆ-‘ತರುಲತೆಯ ಸಲಹೋಣ’

ಹಿತವಾದ ತಂಗಾಳಿ ಪಕ್ಷಿಗಳ ಸವಿಗಾನ
ವನಸಿರಿಯು ತರುತಿಹುದು ಭಾಗ್ಯವನ್ನು
ಫಲಗಳನು ತೂಗುತ್ತ ನೆಲವನ್ನು ತಣಿಸುತ್ತ
ಪೊರೆಯುವುದು ಜೀವರಾರೋಗ್ಯವನ್ನು

ಹಕ್ಕಿಗಳಿಗಾಶ್ರಯವ ನೀಡುತ್ತ ತರುವೊಂದು
ಮೆರೆದಿತ್ತು ಕಾನನದ ನಡುವಿನಲ್ಲಿ
ಅತ್ತಿತ್ತ ಹಾರುತ್ತ ಫಲವನ್ನು ತಿನ್ನುತ್ತ
ಖಗವೃಂದ ನಲಿದಿತ್ತು ವೃಕ್ಷದಲ್ಲಿ

ಪೀಠೋಪಕರಣಗಳ ಕನಸನ್ನು ಕಾಣುತ್ತ
ಮನುಜ ಕಡಿದುರುಳಿಸಿದ ಪಾದಪವನು
ಬೊಡ್ಡೆ ಮೇಲ್ಗಡೆ ಕುಳಿತು ಹಣ್ಣನ್ನು ಸವಿದಿತ್ತು
ವಿಹಗವದು ತಣಿಸಿತ್ತು ಹಸಿವೆಯನ್ನು

ಉಳಿದಿರಲು ಬೀಜವದು ಮಳೆಹನಿಯ ಹೀರುತ್ತ
ಮೊಳಕೆಯೊಡೆದಿರಲು ಚಿಗುರಿತ್ತು ಹಸುರು
ಸ್ವಾರ್ಥವನು ತ್ಯಜಿಸುತ್ತ ತರುಲತೆಯ ಸಲಹೋಣ
ನೀಡುವುದು ನಮಗೆಲ್ಲ ಶುದ್ಧಉಸಿರು

Leave a Reply

Back To Top