ಗೀತಾ ಅಂಚಿ ಅವರ ಕವಿತೆ-ಚಿರ ಯೌವ್ವನ”

ಮೌನದ ಮುಸುಕನ್ನೊತ್ತ
ಮಹಾಧಾರಿಣಿ,
ಒದ್ದರೂ,ಬಿದ್ದರೂ,ಮತ್ತೆ
ನಿನ್ನೋಡಲ ಮೇಲೆ ಕಾಲಿರಿಸಿ
ಎದ್ದರೂ,
ನಿನ್ನೋಡಲ ಪರಿ ಪರಿಯಾಗಿ
ಸುಲಿದರೂ, ನೀನು ಸರಿದು
ನಿಲ್ಲು ಎನ್ನಲಾರೆ.
ನಿನ್ನಮೇಲೆ ಸಾವಿರ ಜನರ
ಸಾವಿರ ಮನಗಳ ಸಡಗರ,
ಸಂಭ್ರಮ,ಸಮಾಧಿಗೂ
ಹೊರಟವರ ಕಾಣುತ್ತಲೇ
ಇರುವೆಯಲ್ಲಾ.
ಒಮ್ಮೆಯಾದರೂ ನೀನು
ನಗಲಿಲ್ಲ,ಅಳಲಿಲ್ಲ, ಆದರೆ
ನಗು,ಅಳುವವರನ್ನ
ನೋಡುತಲಿದ್ದೆ…
ಹಕ್ಕಿಗಳ ಹಾರಾಟ,ಪ್ರಾಣಿಗಳ
ಕೂಗಾಟ,ನರರಾಕ್ಷಸರ ಆರ್ಭಟ,ಆ ಹಿಂಸೆಯಲಿ
ಮನುಜರ ಚೀರಾಟ, ಇದ ನಿತ್ಯ
ನೀನು ಕಾಣುವದೆಲ್ಲವೂ ದಿಟ…

.
ಒಳಗೆ ಜ್ವಾಲಾಮುಖಿ,
ಹೊರಗೆ ಮೈದುಂಬಿ
ಹರಿಯುವ ಮನಮೋಹಕ
ಸಖಿ,ನಿನ್ನೆದೆಯ ಮೇಲೆ
ತಲೆ ತಲೆಮಾರುಗಳು
ಉರುಳಿ ಹೋದವು,
ಆ ನೆನಪುಗಳು ನಿನ್ನ
ಎದೆಯಾಳದಲ್ಲೀ,
ಅವುಗಳ ಅವಶೇಷಗಳು
ಮತ್ತೇ ನಿನ್ನ ಉದರದಲ್ಲಿ…
ಕತ್ತಲೆಗೂ ನೀ ಕಿವಿಗೊಡುವೆ,
ಮಾತೆಂಬ ಮುತ್ತುಗಳು ನಿನ್ನ ಸುತ್ತುತ್ತಿರುವಾಗ ಮೆತ್ತಗೆ
ಮನವರಳಿಸಿ ಮಮತೆ
ತೋರುವೆ…
ಮಾಸದಲಿ ಮರೆಯದೆ
ಬರುವ ನಗುಮೊಗವನ್ನ
ಹೊದ್ದ ಮಧುಮಗನಿಗೆ
ಸ್ವಾಗತದ ಸಿಧ್ಧತೆ ಸದ್ದಿಲ್ಲದೇ
ಮಾಡುವೇ…
ತಾರತಮ್ಯದ ತಿರಸ್ಕಾರವಿಲ್ಲದೇ
ಸ್ನೇಹ ಸತ್ಕಾರದಲಿ ಉಳಿದಿದೆ,
ನೀ ತೋರುವದು ಪ್ರೀತಿಯ ಸಿಂಚನವೇ,
ಕಾಲ ಕಾಲಕ್ಕೂ ಕಳೆಗುಂದದೇ ಉಳಿದಿದೆ,ಅದಕ್ಕಾಗಿ ನಿನ್ನದು
ಚಿರಯೌವ್ವನವೇ…


Leave a Reply

Back To Top