CA ರಾಜಶ್ರೀ ಜಿ.ಶೆಟ್ಟಿ ಅವರ ಕವಿತೆ-‘ಬದುಕಿನಲ್ಲಿ ಬವಣೆಗಳು….’

ಬಾಲ್ಯದಿ ಶಿಕ್ಷಣ ಯೌವನದಿ ಉದ್ಯೋಗ
ನಡು ಪ್ರಾಯದಲ್ಲಿ ಸರಿದೂಗಿಸುವ ಸಂಸಾರ
ಎಲ್ಲಿ ಕೈ ತಪ್ಪಿ ಹೋಯಿತೋ ತಿಳಿಯದೆ
ಅಂದಿನ ದಿನವನ್ನು ಅಂದೆ ಬದುಕುವ ಸಾರ

ಗೃಹಿಣಿಯಾಗಲೇ ಗೃಹಲಕ್ಷ್ಮಿಯಾಗಲೇ
ಅಥವಾ ನಾನಾಗಲೇ ಸ್ವತ: ಲಕ್ಷ್ಮಿಯ ಮೂಲ
ಒಬ್ಬೊಬ್ಬರು ಬರೆದರು ನನ್ನ ಕಥೆಯನ್ನು
ನೋಡಿ ಬಯಸಿ ಅವರವರ ಅನುಕೂಲ

ಬದುಕು ಅನಿವಾರ್ಯವೋ ಅನಿವಾರ್ಯವೇ ಬದುಕೋ
ಅರಿಯದೆ ಕಂಗಾಲದೆ ಕೆಲವು ಸಲ
ಧನಕನಕ ಭಾರವೋ, ಮನದ ದುಗುಡ ಭಾರವೊ
ಎತ್ತಿ ನಡೆಯಲಾಗದೆ ಬಿದ್ದೆ ಹತ್ತು ಹಲವು ಸಲ

ಮನೆಯ ಮೂಲೆಯಲ್ಲಿ ಅವಿತಿದ್ದ ಕೊಳೆ ಮೂದಲಿಸುತ್ತಿತ್ತು
ಗೃಹಿಣಿಯಾಗಿ ಆಕೆಯ ಕರ್ತವ್ಯವನ್ನು ಪ್ರಶ್ನಿಸುತ್ತಿತ್ತು!!
ಮನೆಯ ಕೊಳೆಯೋ ಮನದ ಕೊಳೆಯೋ ಎನ್ನುವ ಪ್ರಶ್ನೆ
ಮನದೊಳಗೆ ಕಾಡಿ ಆಕೆಯನ್ನು ಪೀಡಿಸುತ್ತಿತ್ತು!!!


Leave a Reply

Back To Top