ಅಂಕಣ ಸಂಗಾತಿ
ಅನುಭಾವ
ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ
ಅಕ್ಕ ಮಹಾದೇವಿಯ
ವಚನ ವಿಶ್ಲೇಷಣೆ -9
ಅಕ್ಕಮಹಾದೇವಿಯ ವಚನ ವಿಶ್ಲೇಷಣೆ
ಮರವಿದ್ದು ಫಲವೇನು
ನೆಳಲಿಲ್ಲದ ನಕ್ಕ ?
ಧನವಿದ್ದು ಫಲವೇನು? ದಯವಿಲ್ಲದನ್ನಕ್ಕ?
ಹಸುವಿದ್ದು ಫಲವೇನು ಹಯನಿಲ್ಲದನ್ನಕ್ಕ
ರೂಪಿದ್ದು ಫಲವೇನು ಗುಣವಿಲ್ಲದನ್ನಕ್ಕ?
ಅಗಲಿದ್ದು ಫಲವೇನು? ಬಾನವಿಲ್ಲದನ್ನಕ್ಕ?
ನಾನಿದ್ದು ಫಲವೇನು ನಿಮ್ಮ ಜ್ಞಾನವಿಲ್ಲದನ್ನಕ್ಕ ಚೆನ್ನಮಲ್ಲಿಕಾರ್ಜುನಾ ?
______
ಈ ಸಮಾಜದಲ್ಲಿರುವ ಪ್ರತಿಯೊಂದು ಚಿಕ್ಕ ಚಿಕ್ಕ ವಸ್ತುವಿನಿಂದ ದೊಡ್ಡ ದೊಡ್ಡ ಸಹಾಯ, ಸಹಕಾರ ಆಗುತ್ತದೆ ಎನ್ನುವ ಅರಿವಿನ ಪಥವನ್ನು ತುಳಿದವರು ನಮ್ಮ 12 ನೇ ಶತಮಾನದ ಶರಣ ಶರಣೆಯರು .
ಯಾರನ್ನೂ ,ಯಾವುದನ್ನೂ ಅಲ್ಲಗಳೆಯದೇ ಈ ಸೃಷ್ಟಿಯ ಲ್ಲಿರುವ ಪ್ರತಿಯೊಂದಕ್ಕೂ ಜೀವ ಇದೆ ಎಂದು ನಂಬಿ ನಡೆದವರು .ಲೌಕಿಕ ಬಂಧನ ತೊರೆದು ,ಸಂಸಾರದಲ್ಲಿ ಇದ್ದರೂ ಕೂಡಾ ಮುಕ್ತ ಭಾವದಿಂದ ಕಾಯದಲ್ಲಿ ಕಾಯಕದ ಅರಿವಿನ ಬೆಳಗಿನ ಬಟ್ಟೆಯನ್ನು ತುಳಿದವರು .ಯಾವ ಒಂದು ವಸ್ತುವನ್ನು ಅಲ್ಲಗಳೆಯದೇ ಅದರ ಮಹತಿ ಏನು ? ಎಂದು ಅರಿತು ನಡೆದು ತೋರಿದ ಶರಣರು .ಅದರಲ್ಲಿ 12 ನೇ ಶತಮಾನದ ಅಕ್ಕಮಹಾದೇವಿಯವರು ಸೃಷ್ಟಿಯ ಈ ಚೈತನ್ಯದಲ್ಲಿ ನೆರಳನ್ನು ಬಯಸಿ ನಡೆದವರು .
ಮರವಿದ್ದು ಫಲವೇನು ನೆಳಲಿಲ್ಲದನ್ನಕ್ಕ ?
ಮರದ ನೆರಳು ಮನಕ್ಕೆ ಹಿತವಾದದ್ದು .ಹಾಗೇ ಬದುಕಿನ ಹಸಿವನ್ನು ಹೋಗಲಾಡಿಸುವುದು ಈ ಮರ. ಓ ಚೆನ್ನಮಲ್ಲಿಕಾರ್ಜುನಾ .ನೊಂದು ಬೆಂದು ಬಿಸಿಲಲ್ಲಿ ನಿನಗಾಗಿ ಸುತ್ತುವ ಈ ಕಾಯಕ್ಕೆ ನೆರಳಾಗು .ಪರಮಾತ್ಮ .ಈ ಕಾಯ ನಿನ್ನದು .ತಡವಡಿಸುವ ಈ ಕಾಯಕ್ಕೆ ನೆರಳಾಗು ಭಗವಂತ.
ಮರದ ನೆರಳಂತೆ ನೀನು .ತಂಪು ತಂಗದಿರನಂತೆ ನೀನು ಚೆನ್ನಮಲ್ಲಿಕಾರ್ಜುನಾ .
ಹಸಿರಾಗು, ಉಸಿರಾಗು, ನೆಲಕ್ಕೆ ತಂಪು ಚೆಲ್ಲಿ ನಡೆ ಚೆನ್ನಮಲ್ಲಿಕಾರ್ಜುನಾ .ಎನ್ನುವ ಅಕ್ಕನ ಕರೆವ ಕೊರಳ ಧ್ವನಿಗೆ ಮೂಕನಾದ ಚೆನ್ನಮಲ್ಲಿಕಾರ್ಜುನ ಎನ್ನುವ ಅರಿವಿನ ಗಂಡ ಇಲ್ಲಿ ಅಕ್ಕಮಹಾದೇವಿಗೆ ನೆರಳು ನೀಡುವ ಮರದಂತೆ ಕಂಡು ಬರುತ್ತಿದ್ದಾರೆ .ಚೆನ್ನಮಲ್ಲಿಕಾರ್ಜುನನೇ ಮರ ಎನ್ನುವ ಭಾವ ತಲ್ಲೀನತೆಯು ಎದ್ದು ಕಾಣುವುದು .
ಅಕ್ಕನ ಈ ಒಂದು ವಚನದ ಸಾಲುಗಳಲ್ಲಿ ಮರದಂತೆ ನೆರಳು ನೀಡುವ ನೀನು ಮರವಿದ್ದು, ಮರದ ನೆರಳು ಇಲ್ಲದಂತಾಗಿದೆ .ಎನ್ನುವ ಅಕ್ಕನವರ ಮನ ಭಾವದ ಮಾತುಗಳು ಈ ಒಂದು ವಚನದ ಸಾಲುಗಳಲ್ಲಿ ಅಭಿವ್ಯಕ್ತಗೊಂಡಿವೆ.
ಧನವಿದ್ದು ಫಲವೇನು ದಯವಿಲ್ಲದನ್ನಕ್ಕ?
ನಾನು ಬಡವಿ ಪರಮಾತ್ಮ. ಅಡವಿಯ ಬಣದಲ್ಲಿ ಮನೆಯಿಲ್ಲದೇ ತಿರುಗುವಳು ನಾನು ಚೆನ್ನಮಲ್ಲಿಕಾರ್ಜುನಾ .
ಧನ ಎನ್ನುವುದು, ಶ್ರೀಮಂತರಲ್ಲಿ ತುಂಬಿ ತುಳುಕುತ್ತಿದೆ .ಈ ತುಂಬಿ ತುಳುಕುವ ಈ ಧನ ಮದ ಅಹಂಕಾರದಲ್ಲಿ ಬಡವರನ್ನು ಮರೆಯದಿರುವುದೇ ದೊಡ್ಡ ಗುಣ. ಈ ಜಗದ ಭವ ಬಂಧನದಲ್ಲಿ ಬಿದ್ದು ವದ್ದಾಡಲಾರೆ ಭಗವಂತ .
ಇದೇ ಧನ ಎನ್ನುವ ಶ್ರೀಮಂತ ಕೆಯಲಿ ಈ ಜಗ ದಯೆಯನ್ನೇ ಮರೆತಿದೆ. ಸಕಲರನ್ನು ಸಾಕುವ ದಯಾಪರನೇ ನನ್ನ ಮೇಲೆ .ದಯೆ ತೋರು ಪರಮಾತ್ಮ.ಕರುಣೆ ತೋರಿ ಕೈ ಹಿಡಿದು ನಡೆಸು ಪರಮಾತ್ಮ. ಹೇ ಚೆನ್ನಮಲ್ಲಿಕಾರ್ಜುನಾ .
ಸಕಲ ಜೀವಾತ್ಮರಲ್ಲೂ ದಯೆ ಇರಬೇಕು ಎಂದು ಬಸವಣ್ಣನವರು ಹೇಳಿದ್ದು ಮರೆತು ನಡೆಯುವ ಶರಣ ಧರ್ಮ .
ಶರಣರಿಗೆ ಎಷ್ಟೇ ಹಣ ಇದ್ದರೂ ಕೂಡಾ, ಈ ಜಗತ್ತಿನಲ್ಲಿರುವ ಸಕಲ ಜೀವ ಜಂತುಗಳಲ್ಲಿ ದಯೆಯನ್ನು ಹೊಂದಿರಬೇಕು .ಅದರಂತೆ ನಡೆದುಕೊಳ್ಳುವ ಸನ್ಮಾರ್ಗವನ್ನು ಪ್ರತಿಯೊಬ್ಬ ಶರಣರು ಹೊಂದಿ ನಡೆಯಬೇಕು .
ಬಳಲಿದವರಿಗೆ ,ನೊಂದವರಿಗೆ ಧ್ವನಿಯಾಗಿ ನಿಲ್ಲುವ ಕೆಲಸವನ್ನು ಮಾಡಬೇಕು .
ಬಡವರಿಗಾಗಿಯೇ, ಅಬಲೆಯರಿಗಾಗಿಯೇ ನೊಂದ ಜೀವಿಗಳಿಗಾಗಿಯೇ ಧ್ವನಿ ಎತ್ತಿ ನಡೆದ ದಯಾ ಪರರು ಶರಣರು .
ಸಕಲ ಪಡಿ ಪದಾರ್ಥ ತುಂಬಿ ತುಳುಕುವ ಧನವಂತರು .ನಿತ್ಯ ದಾಸೋಹಿಗಳಾಗಿ ದಯೆ ತೋರಿ, ಸಹಾಯಕ್ಕಾಗಿ ಮೀಸಲಿಟ್ಟು ಸಾಗುವ ಭಕ್ತಿ ಮಾರ್ಗ, ದಯಾಮಾರ್ಗದ ಪಥದತ್ತ ಸಾಗುವ ಬದುಕಿನ ಮೌಲ್ಯಗಳ ಸುಂದರ ಹಂದರ ವನ್ನು ಹಾಕಿ ಹೋದರು ನಮ್ಮ ಶರಣರು. ಅಂಥಹ ಅನುಭಾವದ ಅಮೃತದ ಸವಿ ಮಾತುಗಳಿಗೆ ಜೀವ ತುಂಬಿದ ಅಕ್ಕನವರ ಅನುಭಾವದ ಮಾತುಗಳನ್ನು ಎಷ್ಟು ಸವಿದರೂ ಸವೆಯದ ನಡಿ ಮುತ್ತುಗಳು .
ಹಸುವಿದ್ದು ಫಲವೇನು ಹಯನಿಲ್ಲದನ್ನಕ್ಕ?
ಮನೆಯಲ್ಲಿ ಹಸುವನ್ನು ಕಟ್ಟುವುದೇ ಹಯನಕ್ಕಾಗಿ. ಆ ಹಯನವೇ ಇಲ್ಲದ ಹಸುವಿನ ಮಹತ್ವ ಕಡಿಮೆ .ಆ ಹಸುವಿನ ಮೇಲೆ ದಯೆಯಿಂದ ಸಾಕುವರು ಒಬ್ಬರು .ಮತ್ತೊಬ್ಬರು ಹಸುವಿನ ಹಯನಕ್ಕಾಗಿ ಸಾಕುವರು .
ಹಸುವಿನ ಹಯನವು ಎಷ್ಟು ಮುಖ್ಯವೋ ,ಹಾಗೇ ನನ್ನ ಚೆನ್ನಮಲ್ಲಿಕಾರ್ಜುನನು ಹಯನವನ್ನು ನೀಡುವ ಹಸು ಕರುವಿಗೆ, ಜನರಿಗೆ ಹಸುವಿದ್ದಂತೆ.
ಈ ಹಸುವಿನ ಹಯನದಿಂದ ಎಷ್ಟೋ ಜನರ ಬದುಕು ಸಾಗುತ್ತಿದೆ .ಹಾಗೇ ನನ್ನ ಬದುಕೂ ಕೂಡಾ ನಡೆಯುತ್ತದೆ .
ಹಸುವಿನ ಹಯನ ಎಷ್ಟು ಮುಖ್ಯವೋ!ಹಾಗೇ ನನಗೆ ನನ್ನ ಚೆನ್ನಮಲ್ಲಿಕಾರ್ಜುನನು ಮುಖ್ಯ! ಎನ್ನುವ ಅರ್ಥವನ್ನು ಅಕ್ಕಮಹಾದೇವಿಯ ಈ ಒಂದು ವಚನದಲ್ಲಿ ನಾನು ತಿಳಿದುಕೊಂಡ ಅನುಭಾವದ ನುಡಿಯಾಗಿದೆ.
ರೂಪವಿದ್ದು ಫಲವೇನು ಗುಣವಿಲ್ಲದನ್ನಕ್ಕ?
ಶರಣರಿಗೆ ಒಳ್ಳೇಯ ನಡೆ ನುಡಿಗಳೇ ಅಲಂಕಾರ. ಗುಣವೇ ರೂಪ. ಆ ಅಲಂಕಾರದ ನುಡಿ ಮಾತುಗಳಿಂದ ಅವರ ವ್ಯಕ್ತಿತ್ವಕ್ಕೆ ಘನತೆ ಗೌರವ ತಂದು ಕೊಡುತ್ತದೆ .
ನನ್ನ ಚನ್ನಮಲ್ಲಿಕಾರ್ಜುನ ರೂಪಿಲ್ಲದ ಚೆಲುವ. ಕಾಲಿಲ್ಲದ ಹೆಂಡತಿಗೆ ತಲೆಯಿಲ್ಲದ ಗಂಡ ಬಂದು ಮದುವೆಯಾದ.
ಚೆನ್ನಮಲ್ಲಿಕಾರ್ಜುನನ ಗುಣ ಹದಿನಾಲ್ಕು ಲೋಕಕ್ಕೆ ಒಡೆಯನಾದ ನಿಸ್ಸೀಮ ನನ್ನ ಗಂಡ .ಎಲ್ಲರ ಗಂಡನ ಶೃಂಗಾರ ಅಲ್ಲ ನನ್ನ ಗಂಡನದು.
ಎನ್ನುವ ಅಕ್ಕಳ ಭಾವದ ಗಂಡನ ರೂಪವನ್ನು ನೆನೆದಾಗ ಅರಿವಿನ ಭಾವ ನಮಗಿಲ್ಲಿ ಕಂಡು ಬರುತ್ತದೆ .
ಮೊಗಕ್ಕೆ ಬಣ್ಣ ಬಳಿದು ಮೈ ತುಂಬ ವಿಷ ತುಂಬಿ ನಡೆಯುವವರು, ಶರಣರ ಕುಲವನ್ನೇ ಕೆಡಿಸುವ ತಿಳಿಗೇಡಿಗಳು .
ಬಾಹ್ಯ ಸೌಂದರ್ಯಕ್ಕೆ ಮಾರು ಹೋಗಿ ,ಅವರ ಹಿಂದೆ ಹಿಂದೆಯೇ ತಿರುಗುವ ನಾಯಿ ಜಾತಿಯವರು .
ಮನದಲ್ಲಿ ಮಲೀನ ಭಾವ ತುಂಬಿಕೊಂಡು ಶಿವ ಭಕ್ತಿ, ಶಿವ ಜ್ಞಾನವನ್ನು ಮರೆತು ಸಾಗುವ ಚಂಚಲ ಮನಸ್ಸಿನವರು ,ಮರಳು ಮೋಹವ ಮಾಡಿ, ಮೋಡಿಯಲ್ಲೇ ಮೈ ಮರೆತು ತಿರುಗುವ ಜಾರನೀಯರಂತೆ.
ತುಟಿಗೆ ಬಣ್ಣ ಬಳಿದು, ಮೊಗಕ್ಕೆ ಬಣ್ಣ ಬಳಿದು ನಡೆಯಿರಿ ಎನ್ನಲಿಲ್ಲ ನಮ್ಮ ಶರಣರು .
ಅರಿವಿನ ಶುದ್ಧ ಮನದಿಂದ ನಿತ್ಯ ಕಾಯಕ ಜೀವಿಗಳಾಗಿ ದುಡಿದು, ಸವಿದು ಸವೆಸಿದ ದೇಹಕ್ಕೆ ಅದಾವ ಸೌಂದರ್ಯ ಪರಮಾತ್ಮ.
ಸೋತಿರುವೆ! ಈ ಸೌಂದರ್ಯ ಎನ್ನುವ ಸೆಳೆತದಲ್ಲಿ .ನನ್ನನ್ನು ಸೋಲಿಸಿ ಬಿಟ್ಟಿತು ಪರಮಾತ್ಮ.
ನನ್ನನ್ನು ಕಟ್ಟಿ ಹಾಕಿದ ಈ ಸೌಂದರ್ಯವನ್ನೇ ಬಿಸುಟು ನಿಂತೆ. ಎನ್ನುವ ಅಕ್ಕನ ಧೋರಣೆಯ ನಡೆಯನ್ನು ಅದೇಷ್ಟು ಅರಿತು ನಡೆಯುತ್ತಿದ್ದೇವೆ !ಎಂದು ನಮ್ಮನ್ನು ನಾವೇ !ಪ್ರಶ್ನಿಸಿಕೊಂಡು ಮುಂದೆ ಸಾಗುವ ಪಥವನ್ನು ನಮಗೆ ಹಾಕಿ ಹೋದವರು 12 ನೇ ಶತಮಾನದ ಶಿವಶರಣರು .
ಅಗಲಿದ್ದು ಫಲವೇನು ಬಾನವಿಲ್ಲದನ್ನಕ್ಕ
ಇಲ್ಲಿ ಅಕ್ಕನ ಈ ಒಂದು ವಚನದ ಅರ್ಥವು ಅನೇಕ ರೀತಿಯಾಗಿ ಅನುಭಾವದ ನುಡಿಗಳನ್ನು ನಾವು ಇಲ್ಲಿ ಅರ್ಥೈಹಿಸಿ ಸಾಗಬಹುದಾಗಿದೆ.
ಬಾನಿಗಿರುವ ಅಗಲು ಮನದಲ್ಲಿ ಇಲ್ಲದಿದ್ದರೇ ? ವಿಶಾಲವಾದ ಬಾನಿನಂತೆ ನಮ್ಮ ಮನದ ಭಾವ ಗಳು ವಿಶಾಲ ವಾಗಿರಬೇಕು. ಸಂಕುಚಿತ ಮನೋಭಾವ ತೊರೆಯಬೇಕು ,ಎನ್ನುವ ಆಕ್ಕನವರ ಭಾವದ ಮಾತುಗಳನ್ನು ನಾನಿಲ್ಲಿ ಕಂಡು ಕೊಂಡಿರುವೆ .
_______——————————————————————
ಡಾ ಸಾವಿತ್ರಿ ಮ ಕಮಲಾಪೂರ
ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ
ಸರ್ಕಾರಿ ಪದವಿಪೂರ್ವ ಕಾಲೇಜು ಖನಗಾಂವ
ಪ್ರಾಚಾರ್ಯರು
ಹೊರ ಬಂದ ಕೃತಿಗಳು
1ನೆನಪಿನ ಅಂಗಳದಲ್ಲಿ
2 ಮೌನಗಳೇ ಮಾತನಾಡಿ
3 ಬದುಕು ಒಂದು ಹೊತ್ತಿಗೆ
4 ಸಂತೆಯೊಳಗಿನ ಅಜ್ಜಿ
5 ಕನಸುಗಳ ಜಾತ್ರೆ
6 ಬದುಕು ಭಾರವಲ್ಲ ಲೇಖನ ಕೃತಿ
ಪ್ರಕಟಣೆಗೆ ಸಿದ್ಧವಾಗಿರುವ ಕೃತಿಗಳು ಇರುವ ಕೃತಿಗಳು
1ನನಗೆ ಇಂದು ಒಂದು ಕನಸಿದೆ
2 ಕೆಸರೊಳಗಿನ ಕಮಲ
3ಕಾವಲುಗಾರ
5 ಸವಿ ಮನ
6 ಅಭಿಮಾನಿ
7 ಗಾಯತ್ರಿ ಸಣ್ಣ ಕಥೆ
8 ಸಂಗ್ರಹ ಗ್ರಂಥ ರವಿಶಂಕರ ಗುರೂಜಿ ಯವರ ನುಡಿಗಳು ಅಮೃತ ಬಿಂದು
9 ಬದುಕು ಭಾರವಲ್ಲ ಲೇಖನ ಕೃತಿ
10 ಶರಣರ ವಚನಗಳ ವಿಶ್ಲೇಷಣೆ ಕೃತಿಪ್ರಶಸ್ತಿಗಳು
1ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ
2ಗೌರವ ಡಾ.ಲಿಟ್ ಪ್ರಶಸ್ತಿ
3ಕಾವ್ಯಚೇತನ ಪ್ರಶಸ್ತಿ
ಹಸುವಿದ್ದು ಫಲವೇನು ಹಯನಿಲ್ಲದಕ್ಕ ?
ಹಸುವನ್ನು ಸಾಕುವುದೇ ಹಯನಕ್ಕಾಗಿ. ಹಯನವನ್ನು ಕೊಡದ ಹಸುವಿದ್ದು ಏನು ಪ್ರಯೋಜನ ಚೆನ್ನಮಲ್ಲಿಕಾರ್ಜುನ ಎನ್ನುವರು ಅಕ್ಕ .
( ಈ ಒಂದು ಸಾಲನ್ನು ಮರೆತಿದ್ದೆ )
ಡಾ ಸಾವಿತ್ರಿ ಕಮಲಾಪೂರ