ಡಾ. ಶ್ರುತಿ ಮಧುಸೂದನ್ ಅವರ ಕವಿತೆ-ಪೂರ್ಣವಿರಾಮ

ಬದುಕಿನ
ಆದ್ರತೆಗಳಿಗೊಮ್ಮೆ
ಕಿವಿಕೊಟ್ಟು
ಆಹ್ಲಾದ
ಎನಿಸುವಂತಹ
ಆಸೆಗಳನ್ನು
ಕೊಡವಿಕೊಂಡು
ಕನಸಿಗೊಂದು
ಕವಿತೆಯ ಮುನ್ನುಡಿ
ಬರೆದವಳು ನಾರಿ…

ಕೌಮುದಿಯ
ಕುಂಕುಮದ
ಕಾವ್ಯದೊಳು
ಕರಗದ ಅದೆಷ್ಟೋ
ನೋವಿನ ನೂಕು
ನುಗ್ಗಲುಗಳ
ನುರಿತ ನುಡಿಗಳು
ಹರಿತವಾಗಿ ಚುಚ್ಚಿದಾಗಲೂ
ಬಚ್ಚಿಟ್ಟಿದ್ದು ನಾರಿ…

ಭಾವ ಗಮ್ಯದ
ಗಳಿಕೆಗೆ
ಪದಗಳ ಗುಣಾಕಾರ
ಮಾಡಿ
ಪವಿತ್ರತೆಗೆ
ಪುಣ್ಯ ಪಡೆದದ್ದು
ಮುಡಿದ ಮಲ್ಲಿಗೆಯೆ..?
ಮುಟ್ಟಿಗೂ
ಮೆತ್ತಿದ ಮೈಲಿಗೆಗೆ
ಮೊರೆ ಹೋದ
ಮನುಷ್ಯತ್ವದ
ಮಾರಣ ಹೋಮದೊಳು
ಬಲಿ ಕುರಿ ನಾರಿ…

ಕರ್ತೃ
ಕೃತಿ
ಕರ್ಮ
ಇವೆಲ್ಲಾ
ಅಂಕೆಗಿಟ್ಟು
ಶಂಕೆ ಬಿಟ್ಟು
ಬರೆದ
ಸಾಲುಗಳಿಗೆ
ಅರ್ಥಗಳ ಸಂಖ್ಯೆ
ಸಿಗದಷ್ಟು…
ಒಂದಷ್ಟು ಉಳಿದಿದ್ದರೆ,
ಅರಿತು ಬೆರೆತು
ಅಂತರಂಗದ ತೃಪ್ತಿಗೆ
ತರ್ಜುಮೆಯ ಪೂರ್ಣ ವಿರಾಮ
ಬೊಟ್ಟಿಟ್ಟು ಸಿಂಗರಿಸುವವಳು

ರುದ್ರಾಗ್ನಿ ನಾರಿ


Leave a Reply

Back To Top