ಪ್ರಮೋದ ಜೋಶಿ ಧಾರವಾಡ ಅವರ ಕವಿತೆಕಾಸು

ಕಾಸಿದ್ರೆ ಕೈಲಾಸ ಅಂತಾರಲ್ಲಾ
ಇಲ್ಲದಿದ್ರೆ ಪರಲೋಕ ತೋರಸ್ತಾರಲ್ಲಾ
ಬದುಕಿ ಬಾಳುವ ಜೀವಕೆ
ಕವಡೆ ಬೆಲೆನೂ ಇಲ್ವಲ್ಲಾ

ಕಾಸಿದ್ರೆ ಶಿವಾ ಇಲ್ದಿದ್ರೆ ಶವಾ
ಇದ್ದವರ ಬಲಿ ಬಂದು ನಿಲ್ಲಲು
ಹೆದರ್ತಾನೆ ಜವಾ

ಕಾಸಿಗಾಗಿ ಹೋರಾಟ ಕಾಸಿಗಾಗಿ ಕೂಗಾಟ
ಇದರ ಮುಂದೆ ನಡೆಯುವುದೇ
ಮಾನವರ ಆಟ

ಕಾಸಿನ ಬೆನ್ಹತ್ತಿ ನಡೆದರೆ
ನಾವದರ ಆಳು
ನಮ್ಮ ಹಿಂದೆ ಕಾಸು ಬಂದ್ರೆ
ಅದು ನಮ್ಮ ಶ್ರಮದ ಕಾಳು

ಕಾಸಿದ್ರೆ ಸಿರಿತನ ಇಲ್ದಿದ್ರೆ ಬಡತನ
ಏನು ಇಲ್ಲದವರು ಮಾಡುವರು
ತತ್ವಜ್ಞಾನದ ಕಥನ

ಕೊಡಲಿ ಕಾವು ಕುಲಕ್ಕೆ ಮೂಲ
ಈ ಸಿದ್ಧಾಂತ ಧೃಡವಾಯಿತಲ್ಲಾ
ಹುಟ್ಟು ಹಾಕಿದ ಮನುಷ್ಯನನ್ನೆ
ಅಣು ಅಣುವಾಗಿ ಕೊಲ್ಲುತಿದೆಯಲ್ಲ

ಕಾಸಿನಿಂದ ಮನುಜನಲ್ಲಾ
ಮನುಜನಿಂದ ಕಾಸು
ಈ ನಿಜ ಅರಿತು ನಡೆದರೆ
ಕಾಸಾಗುವುದು ನಮ್ಮ ಕೂಸು

ಶ್ರಮ ಗೌರವದಿ ಗಳಿಸಿದ ಕಾಸು
ಅದು ನಮ್ಮ ಮಾನದ ದಿರಿಸು
ಜಗದಿ ಜನ ಅರಿತು ನಡೆದರೆ
ಈ ಜಗವೇ ಎಷ್ಟೊಂದು ಸೊಗಸು

3 thoughts on “ಪ್ರಮೋದ ಜೋಶಿ ಧಾರವಾಡ ಅವರ ಕವಿತೆಕಾಸು

  1. ಗೌರವದಿಂದ ಗಳಿಸಿದ *ಕಸುವಿನ ಕಾಸು* ನಮ್ಮ ಆತ್ಮ ಗೌರವವನ್ನ ಸದಾ ಕಾಪಾಡುತ್ತದೆ ಸರ್ ಒಳ್ಳೆಯ ಕವನ ಸರ್

    ಶುಭೋದಯ ಸರ್

  2. ಕವಿತೆಕಾಸು….ಸುಂದರ ಶೀರ್ಷಿಕೆ
    ಹದವಾಗಿ ಕವಿತೆಯನ್ನು ಕಾಸಿದ್ದೀರಿ…ಪದಗಳನ್ನು ಬೇಯಿಸಿದ್ದೀರಿ….ಮಾನವ ಕಾಸಿನ ಕೂಸಾಗಬಾರದು…ಎಂಬ ಸಂದೇಶ ನೀಡಿದ್ದೀರಿ…ಅಭಿನಂದನೆಗಳು ಸರ್

Leave a Reply

Back To Top