ಹಾಸ್ಯ ಸಂಗಾತಿ
ಗೊರೂರು ಅನಂತರಾಜು
‘ಇದ್ಯಾಕ್ಲಾ ಹಿಟ್ಲಾಕಾ
ಇಷ್ಟು ಕಡಿಮೆ ಅಂಕ
ತಗೊಂಡಿದ್ದಿಯಾ..?’
ಆದಿ : ಅಪ್ಪ ಇಲ್ಲಿ ಬಾ.
ಆನಂದ: ಈ ತರಹ ಅಪ್ಪನನ್ನು ಕರೆಯಬಾರದು. ಮರ್ಯಾದೆಯಿಂದ ಕರೆಯಬೇಕು
ಆದಿ: ಅಪ್ಪ ಮರ್ಯಾದೆಯಿಂದ ಇಲ್ಲಿ ಬಾ..
ಆನಂದ: ಲೋ, ಆದಿಮೂರ್ತಿ, ಯಾಕೋ ದೇವರ ಮೇಲೆ ಕಲ್ಲು ಇಟ್ಟಿದ್ದಿ..?
ಆದಿ: ಅಮ್ಮ ಹೇಳಿದ್ಲು, ದೇವರ ಮೇಲೆ ಭಾರ ಹಾಕಿ ಪರೀಕ್ಷೆಗೆ ಹೋಗು ಅಂತ. ಅಪ್ಪ ರಾತ್ರಿ ಊಟ ಆದ್ಮೇಲೆ ಏನ್ಮಾಡ್ತಿಯಾ..?
ಆನಂದ: ಮಲಗ್ತಿನಿ.
ಆದಿ: ಆದ್ರೇ ನಾನು ಹಾಗೆ ಮಾಡೊಲ್ಲ..
ಆನಂದ: ಮತ್ತೆ ಇನ್ನೇನು ಮಾಡ್ತಿಯಾ..?
ಆದಿ: ಕೈ ತೊಳ್ಕೋತಿನಿ.
ಆನಂದ: ಆದಿ, ರೇಡಿಯೋ ಸ್ಟೇಷನ್ಗಳಲ್ಲಿ ಎತ್ತರದ ಟವರ್ ಯಾಕೆ ನಿರ್ಮಿಸಿರುತ್ತಾರೆ..?
ಆದಿ: ಪ್ರೋಗ್ರಾಂ ಚೆನ್ನಾಗಿಲ್ಲ ಅಂತ ಯಾರಾದ್ರೂ ಕಲ್ಲು ಹೊಡೆದ್ರೂ ತಾಗದೆ ಇರಲಿ ಅಂತ. ಅಪ್ಪ ಸ್ಕೂಲ್ ಪ್ರಾರಂಭ ಆಗಿ ಒಂದು ವಾರ ಆಯ್ತು. ಆದ್ರೂ ನೀನು ಬೂಟ್ಸ್ ತೆಗೆದುಕೊಟ್ಟಿಲ್ಲ. ಇವತ್ತು ನೀನು ತೆಕ್ಕೊಡ್ಲೇಬೇಕು.
ಆನಂದ: ಬೂಟ್ಸ್ ತೆಕ್ಕೊಡ್ಲಿಲ್ಲಾಂದ್ರೇ ಏನ್ಮಾಡ್ತಿಯಾ..?
ಆದಿ: ಚಪ್ಪಲಿ ಹಾಕ್ಕೊಂಡು ಹೋಗ್ತಿನಿ.
ಆದಿ: ತಾತಾ ದಿನಾಲೂ ನೀನು ಭಗವದ್ಗೀತೆ ಯಾಕೆ ಓದುತ್ತಿಯಾ? ಯಾವುದಾದರೂ ಪರೀಕ್ಷೆ ಬರೆಯುತ್ತಿದ್ದಿಯಾ..?
ಪರಮಾನಂದ: ನಾಳೆ ಸ್ವರ್ಗಕ್ಕೆ ಹೋಗಬೇಕಲ್ಲ ಮೊಮ್ಮಗನೇ. ಅದಕ್ಕೆ ಎಂಟ್ರೆನ್ಸ್ ಟೆಸ್ಟ್ಗೆ ಪ್ರಿಪೇರ್ ಆಗ್ತಿದ್ದೀನಿ.
ಆದಿ: ಅಜ್ಜ ಆಕಾಶದಲ್ಲಿ ವಿಮಾನ ಹಾರಿ ಹೋಗ್ತಿದೆ ಕಾಣಿಸ್ತಿದೆಯಾ..?
ಪರಮಾನಂದ: ನನ್ನ ಕಣ್ಣು ಇನ್ನೂ ಮಂಜಾಗಿಲ್ಲ. ವಿಮಾನ ಕಾಣಿಸ್ತಿದೆ.
ಅದಿ: ವಿಮಾನ ಹೀಗೆ ಹಾರುತ್ತಾ ಮೇಲೆ ಹೋಗ್ತಾ ಇದ್ರೆ ಎಷ್ಟೊತ್ತಿಗೆ ಸ್ವರ್ಗ ಸೇರುತ್ತದೆ..?
ಪರಮಾನಂದ: ಇಂಧನ ಮುಗಿದ ಕೂಡಲೇ..!
ಆನಂದ: ಮಗನೇ, ಗುರುಗಳು ದೇವರಿದ್ದ ಹಾಗೆ..
ಆದಿ: ಅದಕ್ಕೆ ಅಪ್ಪ, ಇವತ್ತು ಗುರುಗಳ ಕಾಲಿಗೆ ತೆಂಗಿನಕಾಯಿ ಒಡೆದುಬಂದೆ..!
ಆನಂದ: ಏನೋ ಆದಿ ಕೈಯಲ್ಲಿ..?
ಆದಿ: ಎಸ್ಎಸ್ಎಲ್ಸಿ ಮಾರ್ಕ್ಸ್ಕಾರ್ಡ್
ಆನಂದ: ಎಂಟು, ಆರು, ಒಂಬತ್ತು ನಾಲ್ಕು, ಐದು, ಏಳು..ನಾಚಿಕೆ ಆಗಲ್ವೇನೊ:. ಆರು ಸಬ್ಜೆಕ್ಟ್ನ ಒಟ್ಟು ಅಂಕ ೩೫ಕ್ಕಿಂತ ಕಡಿಮೆ ಇದೆ
ಆದಿ: ಆ ಮಾರ್ಕ್ಸ್ಕಾರ್ಡ್ ನನ್ನದಲ್ಲ ನಿನ್ದು. ನಿನ್ನ ಪೆಟ್ಟಿಗೆಯಲ್ಲಿ ಸಿಕ್ತು.
ಆನಂದ: ಲೋ ಆದಿ ಏನೋ ಇದು..?
ಆದಿ: ಅಂಕಪಟ್ಟಿ ಅಪ್ಪ.
ಆನಂದ: ಅದು ನನಗೂ ಗೊತ್ತು ಮಂಕೆ. ಅಂಕ ಯಾಕೆ ಇಷ್ಟು ಕಡಿಮೆ.?
ಆದಿ: ಅದಕ್ಕೆ ನಮ್ಮ ಮೇಷ್ಟ್ರು ಕಾರಣ.
ಆನಂದ: ಏನೋ ಹಾಗಂದ್ರೆ.?
ಆದಿ: ಪ್ರತಿ ಪರೀಕ್ಷೆಯಲ್ಲೂ ನನ್ನ ಮುಂದೆ ರ್ಯಾಂಕ್ ಸ್ಟೂಡೆಂಟ್ ಸುಖೇಶನನ್ನು ಕೂರಿಸುತ್ತಿದ್ದರು. ಆದರೆ ಈ ಸಲ ನನಗಿಂತಲೂ ದಡ್ಡನಾಗಿರುವ ಗಿಡ್ಡಣ್ಣನನ್ನು ಕೂರಿಸಿದ್ರು.
ಆನಂದ: ಆದಿ ರಿಸಲ್ಟ್ ಬಂತಲ್ಲ ಏನಾಯ್ತು..?
ಆದಿ: ಒಂದ್ರಲ್ಲಿ ಸ್ವಲ್ಪ ಹೋಗಿದೆಯಪ್ಪ..
ಆನಂದ: ಹಾಗಿದ್ರೆ ಉಳಿದಿದ್ದು..?
ಆದಿ: ಉಳಿದಿದ್ದೆಲ್ಲಾ ಕಂಪ್ಲೀಟ್ ಹೋಗ್ಬಿಟ್ಟಿದೆ.
ಆನಂದ: ಯಾಕೋ ಶಾಲೆಯಿಂದ ಬೇಗ ಬಂದೆ..?
ಆದಿ: ನೊಣ ಇತ್ತು ಹೊಡೆದೆ. ಅದಕ್ಕೆ ಓಡ್ಸಿದ್ರು.
ಆನಂದ: ಎಲ್ಲಿತ್ತೊ ನಿನ್ನ ತಲೆ..
ಆದಿ: ನನ್ನ ತಲೆ ಮೇಲೆ ಅಲ್ಲಪ್ಪ. ಮೇಷ್ಟ್ರು ಬೋಳು ತಲೆ ಮೇಲೆ..!
ಅನಂದ: ಮಗು ಆದಿ, ಈ ತಿಂಗಳ ಪ್ರೋಗ್ರೆಸ್ ಕಾರ್ಡ್ ತಗೊಂಡು ಬಾಪ್ಪ
ಆದಿ: ತಗೋ ಡ್ಯಾಡ್.
ಆನಂದ: ಇದ್ಯಾಕ್ಲಾ ಹಿಟ್ಲಾಕಾ ಇಷ್ಟು ಕಡಿಮೆ ಮಾರ್ಕ್ಸ್ ತಗೊಂಡಿದ್ದಿಯಾ..?
ಆದಿ: ನೀನೇ ಅಮ್ಮನಿಗೆ ಹೇಳ್ತಿದ್ದಿಯಲ್ಲಪ್ಪ. ಯಾವಾಗ್ಲೂ ಸ್ವಲ್ಪದರಲ್ಲೇ ಖುಷಿ ಪಡಬೇಕು ಅಂತ.
ಆನಂದ: ಯಾಕೋ ಆದಿ. ಸುನಾದಿ ಅಳ್ತಿದ್ದಾಳೆ..
ಆದಿ: ನೀನು ನನಗೆ ಕೊಟ್ಟಿದ್ದ ಕೇಕನ್ನು ನಾನು ಕತ್ತರಿಸಿಕೊಂಡು ತಿನ್ನುತ್ತಿದ್ದೇನೆ. ಅದರಲ್ಲಿ ನನಗೂ ಪಾಲು ಕೊಡು ಎಂದು ಅಳುತ್ತಿದ್ದಾಳೆ.
ಆನಂದ: ಸುನಾದಿಗೂ ಒಂದು ಕೇಕ್ ಕೊಟ್ಟಿದ್ದೆನಲ್ಲಾ. ಅದನ್ನು ಏನು ಮಾಡಿದಳು.
ಆದಿ: ಅವಳ ಕೇಕನ್ನು ಕತ್ತರಿಸಿ ನಾನು ಅರ್ಧ ತಿಂದೆ. ಈಗ ನನ್ನ ಕೇಕ್ನಲ್ಲಿ ಅರ್ಧಪಾಲು ಕೊಡು ಎಂದು ಅಳುತ್ತಿದ್ದಾಳೆ.
ಆನಂದ: ಯಾಕೋ ಆದಿ ಪಾದಕ್ಕೆ ನೀರು ಸುರಿದುಕೊಂಡು ವ್ಯರ್ಥ ಮಾಡುತ್ತಿದ್ದಿಯಾ.? ನೀರು ಅಮೂಲ್ಯವಾದ ವಸ್ತು. ಅದನ್ನು ಹಿತಮಿತವಾಗಿ ಬಳಸಬೇಕು ತಿಳಿಯಿತೆ.?
ಆದಿ: ಅಪ್ಪ ನೀನೇ ಹೇಳಿದ್ದಿಯಲ್ಲಾ. ಶಾಲೆಯ ರಜಾ ದಿನ ಹೊರಗೆ ಆಟ ಆಡಿ ಸಮಯ ಕಳೆಯದೇ ಮನೆಯ ಅಂಗಳದ ಗಿಡಗಳ ಬುಡಕ್ಕೆ ನೀರು ಹಾಕ್ತಾ ಇದ್ರೇ ಅವು ಎತ್ತರವಾಗಿ ಬೆಳೆಯುತ್ತೇ ಅಂತ.
ಆನಂದ: ಹೌದು. ನೀನು ಜಾಣನಾಗಿ ಎತ್ತರಕ್ಕೆ ಬೆಳೆಯಲೆಂದು ಬುದ್ದಿ ಮಾತು ಹೇಳಿದ್ದೆ.
ಆದಿ: ಅದಕ್ಕೆ ಅಪ್ಪ, ನಾನು ಎತ್ತರವಾಗಿ ಬೆಳೆಯಬೇಕೆಂದು ಪಾದಕ್ಕೆ ನೀರು ಹಾಕುತ್ತಿರುವೆ..!
—————————
ಗೊರೂರು ಅನಂತರಾಜು