ಕಾವ್ಯ ಸಂಗಾತಿ
ಕಿರಣ ಕ ಗಣಾಚಾರಿ.
‘ಅವಳೇ… ಕಥೆ ಕವನ’
ಕವನವಾಗುತ್ತೇನ್ ಅಂದುಕೊಂಡವಳ
ಕಟ್ಟಿಹಾಕಿ ಕೂಡಿಸಿ ಕಥೆಯನ್ನಾಗಿಸಿದೆ
ಛಂದ ಅಲಂಕಾರ ಮಾಡಿಕೊಳ್ಳುತ್ತೇನ್ ಅಂದವಳ
ಪ್ರತಿಮೆ ರೂಪಕವಾಗಿ ಒಂಟಿಕಾಲಲಿ ನಿಲ್ಲಿಸಿದೆ
ಮೂಗುತಿ ಕಿವಿಯೋಲೆ ತೊಟ್ಟು
ಮುತ್ತಿನ ಕೊರಳ ಹಾರ ಇಳಿಬಿಟ್ಟು
ಕೇಶದುದ್ದಕೂ ಮೊಳ ಮಲ್ಲಿಗೆಯ ಮುಡಿದು
ಹಣೆಯ ಸೂರ್ಯನಿಗೆ ಹೋಲುವ
ತುಟಿಯ ರಂಗನು ಬಳಿದುಕೊಳ್ಳಬೇಕೆಂದವಳ
ಕನ್ನಡಿಯಿಂದ ಅಪಹರಿಸಿ
ಲಂಗ ದಾವಣಿ ಸೀರೆ ಕುಪ್ಪಸ ಹೊದಿಸಿ
ದಿಗ್ಗನೆ ಕಥೆಯೊಳಗೆ ಎಳೆದುಬಿಟ್ಟೆ
ಎಸಳ ದಳಗಳ ತುಳಿದು
ಪಾದ ನೋವೆನ್ನುವ ಸುಕೋಮಲೆಯ
ಕಾದ ಕಲ್ಲ ಮೇಲೆ ದಿನವಿಡೀ ನಿಲ್ಲಿಸಿ
ಮುಳ್ಳು ಮೊನೆಗಳ ಮೇಲೆ ಅಲೆದಾಡಿಸಿ
ಬೆಳದಿಂಗಳ ಹಾಲ ಮೈಬಣ್ಣಕೆ
ಕಾದ ಕೊಳ್ಳಿ ಸೋಕಿಸಿದೆ
ಕನ್ನೆ ಹೆಣ್ಣೆ ಲಾವಣ್ಯೆ ಕಾವ್ಯಕನ್ನಿಕೆಯೆಂದು
ಮುದದಿಂದ ಬಳಿ ಕರೆದು ಕಥೆಯೊಳಗೆ ದಬ್ಬಿಬಿಟ್ಟೆ
ಕಣ್ಣರೆಪ್ಪೆಯ ಜೊತೆ ಮಾತಿಗಿಳಿದು ಗದ್ದಲೆಬ್ಬಿಸುವ
ಮುಂಗುರುಳುಗಳ ಸರಿಸಿ ಸರಿಸಿ ಸಾಕಾಯ್ತು
ಹೊರಳಿ ಹೊರಳಿ ನೋಡುವಂತೆ ಮಾಡುವ
ಕಾಲ್ಗೆಜ್ಜೆಯ ಸದ್ದಿಗೆ ಬುದ್ದಿ ಹೇಳಿ ಹೇಳಿ ತಿದ್ದದಾಗ್ಹಾಯ್ತು
ಕವನದೊಳಗೆ ಮೈಚಲ್ಲಿ ನರ್ತಿಸುವವಳ
ಕಥೆಯೊಳಗೆ ಪದಾವಳಿಗಳಿಂದ ಕಾಲ್ಕಟ್ಟಿದೆ
ಕವನದೊಳಗೆ ಮಧುರತೆಯಲಿ ಹಾಡುವವಳ
ಕಥೆಯೊಕವನದೊಳಗಿದ್ದ ಅವಳು ಕನಸಾಗಿ ಬಂದಂತಿದೆ
ಕಥೆಯೊಳಗೆ ಪದಗಳುಟ್ಟ ಅವಳೇ
ನನಸಾಗಿ ಜೊತೆಯಲ್ಲಿದ್ದಂತಿದೆ
ಕಿರಣ ಗಣಾಚಾರಿ.ಮುತ್ತಿನ ಪೆಟಗಿ
ತುಂಬಾ ಚೆನ್ನಾಗಿದೆ ಸರ್…… ಅಭಿನಂದನೆಗಳು