ವಾಣಿ ಯಡಹಳ್ಳಿಮಠ ಅವರ ಗಜಲ್

ಮತ್ತೊಮ್ಮೆ ಭೇಟಿಯಾಗಲಾರೆನೆಂದು  ಹೇಳಲಾದರೂ  ಭೇಟಿಯಾಗು
ಇದೇ ಕೊನೆಯ ಸಾರಿಯೆಂದು ನೋಡಲಾದರೂ  ಭೇಟಿಯಾಗು

ನೀ ನೀಡಿದ ಅಷ್ಟೂ ಗಾಯಗಳನು ಮರೆಮಾಚಿಕೊಳ್ಳುವೆ
 ಈ ಕಂಗಳಲ್ಲಿರುವ  ಕಾತುರವನಷ್ಟೇ  ನಿಟ್ಟಿಸಲಾದರೂ ಭೇಟಿಯಾಗು

ನಿನ್ನನೇ ಕನಸಾಗಿಸಿಕೊಂಡು ಪ್ರತಿ ಇರುಳೂ ನಲಿಯುತಿದ್ದೆ
ಆ ಕಣ್ಣಲ್ಲೀಗ ಜಿನುಗುತಿರುವ  ಕಂಬನಿಯನು  ಒರೆಸಲಾದರೂ ಭೇಟಿಯಾಗು

ಜಗಕೆ ತೋರಿಸದ ಮಗುಮನಸೊಂದು ನಿನ್ನೆದುರಿಗಿಟ್ಟಿದ್ದೆ
ಮುರಿದ  ಮನದ ಮನೆಯನೊಮ್ಮೆ ಕಣ್ತುಂಬಿಕೊಳ್ಳಲಾದರೂ ಭೇಟಿಯಾಗು

ವಾಣಿ ಉಸಿರಾಡುವ  ಪ್ರತಿ ಉಸಿರಿಗೂ ನಿನ್ನದೇ ಧ್ಯಾನ
ಆ ಉಸಿರೂ ದೂರಾಗಬಹುದೆಂದು  ತೋರಿಸಲಾದರೂ ಭೇಟಿಯಾಗು

4 thoughts on “ವಾಣಿ ಯಡಹಳ್ಳಿಮಠ ಅವರ ಗಜಲ್

Leave a Reply

Back To Top