ಕಾರಿನೊಳಿಗಿನ ಪಯಣವೂ ; ಕಾಲಿನ ಪಯಣದೊಳಗಿನ ತಲ್ಲಣಗಳು…ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಬದುಕೊಂದು ಪಯಣದ ಯಾತ್ರೆ. ಬಾಲ್ಯದಿಂದ ಕೊನೆಯವರೆಗೂ ಯಾತ್ರೆ ಸದಾ ನಡೆಯುತ್ತಲೇ ಇರುತ್ತದೆ. ಈ ಪಯಣದಲ್ಲಿ “ನಾನೊಬ್ಬನೇ ಪಯಣಿಸಲು ಸಾಧ್ಯ” ಎನ್ನುವ ಮಾತಂತೂ ಸುಳ್ಳು..! ನಮ್ಮ ಪಯಣಕ್ಕೆ ಹತ್ತು ಹಲವು ವ್ಯಕ್ತಿಗಳು ಜೊತೆಯಾಗುತ್ತಾರೆ. ನಗಿಸುತ್ತಾರೆ, ಕೈ ಹಿಡಿದು ಮುನ್ನೆಡೆಸುತ್ತಾರೆ, ಅಳುವ ಕಣ್ಣೀರನ್ನು ಒರೆಸಲು ಪ್ರಯತ್ನಿಸುತ್ತಾರೆ, ಒಡೆದ ಮನಸ್ಸನ್ನು ಕೂಡಿಸಲು ಪ್ರಯತ್ನಿಸುತ್ತಾರೆ… ಹೀಗೆ ಒಬ್ಬರಿಗೊಬ್ಬರು ಹೆಗಲು ಕೊಡುವ ಈ ಬಾಳ ದಾರಿಯಲ್ಲಿ ಅವರು ನಮಗೆ ಮಾಧ್ಯಮವಾಗಿ ಇರುತ್ತಾರೆ.

ಇಂತಹ ‘ಮಾಧ್ಯಮ’ದೊಡನೆ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣಿಸುವಾಗ ನಾವು ವಾಹನಗಳನ್ನು ಬಳಸುತ್ತೇವೆ. ಕೆಲವು ಸಲ ಒಂಟಿಯಾಗಿ ನೆಡೆಯುತ್ತೇವೆ. ಕೆಲವು ಸಲ ಜೊತೆ ಜೊತೆಯಾಗಿ ನೆಡೆಯುತ್ತೇವೆ. ಬದುಕಿನ ಪಯಣಕ್ಕೆ ಕಾರು, ಬಸ್ಸು, ಮೋಟಾರ್ ಸೈಕಲ್, ಸೈಕಲ್, ನಡಿಗೆ, ಟ್ರೇನು, ಹಡಗು, ವಿಮಾನು….ಹೀಗೇ ಹತ್ತು ಹಲವಾರು ವೈವಿಧ್ಯಮಯವಾದ ಪಯಣದ ಮಾಧ್ಯಮಗಳನ್ನು ಬಳಸುತ್ತೇವೆ. ನಾವು ಪಯಣಕ್ಕಾಗಿ ಬಳಸುವ ವಾಹನಗಳು ಕೆಲವು ಸಲ ನಮ್ಮ ಅಗತ್ಯಗಳಿಗಾಗಿ ಕಡ್ಡಾಯವಾಗಿ ಬೇಕಾಗುತ್ತವೆ. ಇನ್ನೂ ಕೆಲವು ಸಲ ಕೆಲವು ವಾಹನಗಳು ದೌಲತ್ತಿಗಾಗಿ, ಶ್ರೀಮಂತಿಕೆಯ ಶೋಕಿಗಾಗಿ ನಮ್ಮ ಬದುಕಿನ ಆಡಂಬರವನ್ನು ಇನ್ನೊಬ್ಬರಿಗೆ ಪ್ರದರ್ಶನಕ್ಕಾಗಿ ಬಳಸುತ್ತೇವೆ. ಹೀಗೆ ನಾವು ಬಳಸುವಾಗ ಪಯಣ ನಮಗೆ ಗೊತ್ತಿಲ್ಲದಂತೆ ಅನೇಕ ತಿರುವುಗಳನ್ನು, ತುಮಲುಗಳನ್ನು, ಆತಂಕಗಳನ್ನು, ಸಂತೋಷಗಳನ್ನು, ಅಘಾತಗಳನ್ನು, ಆಶ್ಚರ್ಯಗಳನ್ನು.. ಕೊಡುತ್ತದೆ. ನಮ್ಮ ಬದುಕಿನಲ್ಲಿ ಯಾವುದೋ ಒಂದು ಪ್ರಶಾಂತವಾದ ಸ್ಥಳವನ್ನು ಮುಟ್ಟಲಿಕ್ಕೆ ಇಲ್ಲವೇ ನಾವು ವೃತ್ತಿ ಮಾಡುವ ಸ್ಥಳವನ್ನು ತಲುಪಲಿಕ್ಕೆ, ನಾವು ಇಟ್ಟುಕೊಂಡಿರುವ ಗುರಿಯನ್ನು ಮುಟ್ಟಲಿಕ್ಕೆ ಪಯಣ ಸಾಗಿಸುವುದು ಅನಿವಾರ್ಯವೂ ಹೌದು..!

ಕಾಲ್ನಡಿಗೆಯ ಪಯಣ ಮತ್ತು ಕಾರಿನ ಪಯಣ ಎಂದರೆ ಎರಡು ವಿಭಿನ್ನ ದೃಷ್ಟಿಯ ನೋಟಗಳು ಎಂದೇ ಅರ್ಥ. ಕಾಲ್ನಡಿಗೆಯ ಪಯಣ ಶ್ರೀಸಾಮಾನ್ಯನ ಬದುಕನ್ನು ಬಿಂಬಿಸಿದರೆ, ಕಾರಿನ ಪಯಣ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುತ್ತದೆ. ಈ ಮಾತು ಕೆಲವು ಸಲ ಸತ್ಯಕ್ಕೆ ಹತ್ತಿರವಾದರೂ, ಇನ್ನೂ ಕೆಲವು ಸಲ ಅಗತ್ಯಕ್ಕಾಗಿ ಕೆಲವು ಬಡವರು ಕಾರಿನ ಪಯಣವನ್ನು ಆಶ್ರಯಿಸುತ್ತಾರೆ. ಇದರಲ್ಲಿ ಬಹುತೇಕ ಮಧ್ಯಮ ವರ್ಗದ ಜನರು ಸೇರಿರುತ್ತಾರೆ. ಇದು ಅವರಿಗೆ ಅನ್ವಯಿಸದ ಮಾತು. ಒಟ್ಟಿನಲ್ಲಿ ಬದುಕಿನ ಅನುಭವಗಳ ಮೂಟೆಯನ್ನು ಕಟ್ಟಿಕೊಡುವ ಕಾಲ್ನಡಿಗೆಯ ಪಯಣ, ಬದುಕಿನ ಅನುಭವಗಳ ಮೂಟೆಯಿಂದ ದೂರಸರಿಸುವ ಕಾರಿನ ಪಯಣ ಎರಡು ತುಂಬಾ ಅಜಗಜಾಂತರ…! ನಾವು ಬದುಕನ್ನು ಮೊಗೆ ಮೊಗೆದು ಅನುಭವಿಸಬೇಕೆಂದರೆ ಕಾಲ್ನಡಿಗೆಯ ಪಯಣವನ್ನು ಪ್ರೀತಿಸಬೇಕು. ಅಗತ್ಯಕ್ಕಾಗಿ ಕಾರಿನ ಪಯಣವನ್ನು ಅನುಭವಿಸಬೇಕು.

ಬಾಳ ಪಯಣದಲ್ಲಿ ಸ್ಪೀಡ್ ಅಂದರೆ ವೇಗ ಮುಖ್ಯ. ಆ ವೇಗ ನಮ್ಮನ್ನು ನಮ್ಮ ಗುರಿಯನ್ನು ತಲುಪುವಂತೆ ಇರಬೇಕು. ನಮ್ಮ ಬಾಳ ಪಯಣದಲ್ಲಿಯೂ ಎಚ್ಚರಿಕೆ ಅಗತ್ಯ. ಎಚ್ಚರಿಕೆಯಿಲ್ಲದ ಪಯಣ ಅಪಘಾತಕ್ಕಿಡಾಗಲು ಕಾರಣವಾಗಬಲ್ಲದು. ಹಾಗಾಗಿ ನಮ್ಮ ಬದುಕಿನ ಪಯಣ ಎಚ್ಚರಿಕೆಯಿಂದ ಕೂಡಿರಬೇಕು.

ನಮ್ಮ ವೈಯಕ್ತಿಕ ವೃತ್ತಿಯನ್ನು ಮಾಡುವಾಗ ಸಾರ್ವಜನಿಕ ವಾಹನಗಳನ್ನು ಉಪಯೋಗಿಸಿಕೊಂಡು ನಿತ್ಯ ಪಯಣ ಮಾಡುವಾಗ ಈ ನೋಟದಲ್ಲಿ ನೂರಾರು ಅನುಭವಗಳ ಮೂಟೆಗೆ ಸಾಕ್ಷಿಯಾಗುತ್ತೇವೆ. ಒಬ್ಬೊಬ್ಬ ಪಯಣಿಗರದು ಒಂದೊಂದು ಕಥೆ.. ಆ ಕಥೆಗಳು ವಿಭಿನ್ನ ರೀತಿಯಲ್ಲಿ ಇರುತ್ತವೆ. ಸಾರ್ವಜನಿಕ ಬಸ್ಸಿನ, ಸಾರ್ವಜನಿಕ ಟ್ರೇನಿನ ಜನಸಾಮಾನ್ಯರ ಭೋಗಿಗಳಲ್ಲಿ ಇರುವ ಕೃಷಿಕರು, ಕೂಲಿ – ಕಾರ್ಮಿಕರು, ಬಡವರು, ಅಂಗವಿಕಲರು, ಸಹ ಪಯಣಿಗರು…ಎಲ್ಲರದು ಒಂದೊಂದು ವಿಭಿನ್ನ ಕತೆಗಳಿರುತ್ತದೆ. ಅವು ನಮಗೆ ಕೆಲವು ಸಲ ಪಾಠವನ್ನು ಕಲಿಸುತ್ತವೆ. ಅವರನ್ನು ನೋಡಿದಾಗ ನಮಗೆ ನೂರಾರು ಅನುಭವಗಳು ನಮಗೆ ದಕ್ಕಬಲ್ಲವು.

ಅಪ್ಪನನ್ನು ಆಸ್ಪತ್ರೆಗೆ ಸೇರಿಸಲು ಪ್ರಯಾಣಿಸುವ ಅಪ್ಪ ಮಗನ ಪಯಣ, ಉದ್ಯೋಗವನ್ನು ಹುಡುಕಿಕೊಂಡು ಪಟ್ಟಣ ಸೇರುವ ಯುವಕರು, ಅದೇ ತಾನೇ ಮದುವೆಯಾಗಿ ಸಾಮಾನು ಸರಂಜಾಮುಗಳೊಂದಿಗೆ ನಗರಕ್ಕೆ ಸಂಸಾರ ಸಮೇತ ಉದ್ಯೋಗಕ್ಕೆ ಹೋಗುವ ದಂಪತಿಗಳು, ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಸ್ವಲ್ಪವೂ ಯೋಚಿಸದೆ ಬದುಕನ್ನು ಕಟ್ಟಿಕೊಳ್ಳುವುದಕ್ಕಾಗಿ ತಲೆಯ ಮೇಲೆ ವಸ್ತುಗಳ ಮೂಟೆಯನ್ನು ಹೊತ್ತು, ಬಗಲಲ್ಲಿ ಮಗುವನ್ನು ಎತ್ತಿಕೊಂಡು, ತನ್ನ ಗಂಡನ ಹೆಗಲ ಮೇಲೆ ಇನ್ನೊಂದು ಕೂಸನ್ನು ಕೊಟ್ಟು, ಮತ್ತೆ ನಗರದ ಕಡೆ ಮುಖ ಮಾಡುವ ಕುಟುಂಬಗಳಿಗೆ ಕೊರತೆಯೇ ಇಲ್ಲ…!! ಎನ್ನಬಹುದು. ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವಲಸೆ ಹೋಗುವ ಹಕ್ಕಿಗಳಂತೆ ನಮ್ಮ ಬದುಕು ಕೂಡ ಆಗಾಗ ವಲಸೆ ಹೋಗುತ್ತದೆ. ಕೆಲವರು ಕೂಲಿ ಮಾಡಲು, ಕೆಲವರು ನೌಕರಿ ಮಾಡಲು ಬದುಕು ಸದಾ ಅಲೆಮಾರಿಯಾಗಿ ನಮ್ಮನ್ನು ಕಾಡುತ್ತಾ ಹೋಗುತ್ತದೆ.

ನಾವೇನಾದರೂ ಇಡೀ ಭಾರತದ ಬದುಕನ್ನು ನೋಡಬೇಕೆಂದರೆ ರೈಲ್ವೆಯ ಹಿಂದಿನ ಎರಡು ಭೋಗಿಗಳನ್ನು, ರೈಲ್ವೆಯ ಮುಂದಿನ ಎರಡು ಭೋಗಿಗಳನ್ನು ಅಥವಾ ಸರ್ಕಾರಿ ಸಾಮಾನ್ಯ ವರ್ಗದ ಬಸ್ಸುಗಳಲ್ಲಿ ಪಯಣಿಸಿದಾಗ ನೈಜಬದುಕು ಪ್ರದರ್ಶನವಾಗಬಲ್ಲದು. ಇದೇ ಕಾಲ್ನಡಿಗೆಯ ಬದುಕು…! ಕಾಲ್ನಡಿಗೆಯ ಬದುಕೆಂದರೇ ಬರಿ ದಾರಿಯಲ್ಲಿ ನೆಡೆದು ಹೋಗುವುದಲ್ಲ.

ಇನ್ನೂ…

ದೌಲತಿಗಾಗಿ, ಶ್ರೀಮಂತಿಕೆಯ ಆಡಂಬರಕ್ಕಾಗಿ, ತೆಗೆದುಕೊಂಡ ಕಾರು ಅದು ಅಂತಿಂಥ ಕಾರಲ್ಲ ವೈಭವೋಪೂರಿತ ಸೌಲಭ್ಯಗಳನ್ನು ಒಳಗೊಂಡಿರುವ ಲಕ್ಷಾಂತರ ಇಲ್ಲವೇ ಕೋಟಿ ಕೋಟಿ ರೂಪಾಯಿಗಳ ಬೆಲೆಬಾಳುವ ಕಾರಿನ ಪಯಣ ಕೊಡುವ ಅನುಭವವೇ ಬೇರೆ..!! ಇಂತಹ ವೈಭವದ ಕಾರಿನ ಪಯಣ ಒಂಟಿಯಾಗಿರುತ್ತದೆ.
ಕಾಲಿನ ಪಯಣಿಗರನ್ನು ಕೆಲವು ಸಲ ಅಣಕಿಸುತ್ತದೆ. ಕೆಲವು ಸಲ ಕುಹಕವಾಗಿ ನಗುತ್ತದೆ. ಮತ್ತೆ ಕೆಲವು ಸಲ ಕುರುಡು ಕಾಂಚಣದಂತೆ ಕಾಲ್ನಡಿಗೆಯ ಪಯಣಿಗರ ಮೇಲೆ ಸವಾರಿ ಮಾಡಿಬಿಡುತ್ತದೆ. ಇಂತಹ ಕಾರಿನಲ್ಲಿ ಪಯಣಿಸುವಾಗ ವೇಗಕ್ಕೆ ಕೊನೆ ಇರುವುದಿಲ್ಲ..!! ತನ್ನದೇ ದಾರಿ, ತನ್ನದೇ ಗುರಿ, ಆ ಗುರಿಯನ್ನು ಮುಟ್ಟಬೇಕೆನ್ನುವ ಧಾವಂತದಲ್ಲಿ ದಾರಿಯಲ್ಲಿರುವ ಸಾಮಾನ್ಯಪಯಣಿಗರನ್ನು ನಿಕೃಷ್ಟವಾಗಿ ನೋಡುತ್ತದೆ. ತಮ್ಮದೇ ಗುಂಗಿನಲ್ಲಿ.. ಹಾಡು, ಮೋಜು, ಮಸ್ತಿ, ಕುಣಿತ – ಕುಡಿತ…ಇಂತಹ ಕಾರಿನ ಪಯಣದೊಳಗಿನ ಕೆಲವು ಮನಸ್ಸುಗಳು ಕೆಲವು ಸಲ ಬಡವರ ಸಾವಿಗೂ ಕಾರಣವಾಗಿ ಬಿಡುತ್ತವೆ..!! ಇನ್ನು ದೌಲತ್ಕಾರಿನ ಪಯಣದಲ್ಲಿ ಅವರಿಗೆ ಯಾವ ಅನುಭವಗಳು ದಕ್ಕುವುದಿಲ್ಲ. ಅಲ್ಲಿ ಅವರದೆ ಒಂಟಿ ಪಯಣ. ಆ ಪಯಣ ಸುಖಕರವಾಗಿರಲೆಂದು ಕೆಲವು ಸಲ ಹಾಡಿನ ಮೊರೆ ಹೋಗುತ್ತಾರೆ. ಹಾಡು ಬೇಸರವಾದರೆ ನಿಸರ್ಗವನ್ನು ನೋಡುತ್ತಾರೆ. ನಿಸರ್ಗ ಬೇಸರವಾಯಿತೆಂದರೆ ಮತ್ತೆ ಅದೇ ಬೇಜಾರು…ಮತ್ತೆ ಅದೇ ಬೇಜಾರು…!! ಯಾರೊಂದಿಗೂ ಮಾತನಾಡುವಂತಿರುವುದಿಲ್ಲ. ಮಾತನಾಡಿದರೆ ಎಲ್ಲಿ ತನ್ನ ಉನ್ನತ ಹುದ್ದೆಯ ಇಲ್ಲವೇ ಸಾಹುಕಾರಿಕೆಯ ಗತ್ತು ಗೈರತ್ತು ಕಡಿಮೆಯಾಗಿ ಬಿಡುತ್ತದೆಯೋ ಎನ್ನುವ ಅಹಂಕಾರದ ಮನೋಭಾವ. ಅಷ್ಟಕ್ಕೂ ಅಂತಹ ಕಾರಿನಲ್ಲಿ ಸಹಪಯಣಿಗರೇ ಇರುವುದಿಲ್ಲ. ಇದ್ದರೂ ಕುಟುಂಬದ ಒಬ್ಬರಿಬ್ಬರೂ ಸದಸ್ಯರು ಮಾತ್ರ..! ಒಬ್ಬರೇ ಪಯಣಿಸುವಾಗ ಕನಿಷ್ಟ ತನಗೆ ಸಹಾಯ ಮಾಡುವ ಡ್ರೈವರ್ ಜೊತೆ ಮಾತನಾಡಿದರೇ, ಸ್ನೇಹದಿಂದ ನಗುನಗುತ ವರ್ತಿಸಿದರೆ ನನ್ನ ಘನತೆಗೆಲ್ಲಿ ಕುಂದು ಬರುತ್ತದೆನ್ನುವ ಮನೋಭಾವ. ಇವು ದೌಲತ್ತಿನ ಕಾರಿನ ಪಯಣದೊಳಗಿನ ಅಹಂಕಾರದ ಮನೋ ಭೂಮಿಕೆಗಳು…!!

ಇನ್ನು ಮಧ್ಯಮ ವರ್ಗದವರು ಬದುಕನ್ನು ಕಟ್ಟಿಕೊಳ್ಳುವುದಕ್ಕಾಗಿ ಕಾರನ್ನು ಬಳಸುತ್ತೇವೆ. ಅದು ಬದುಕಿನ ತುತ್ತು ಅನ್ನಕ್ಕಾಗಿಯೂ ಇರಬಹುದು. ಹಾಗಾಗಿ ಕಾಲ್ನಡಿಗೆ ಪಯಣದಲ್ಲಿ ಮಧ್ಯಮ ವರ್ಗದವರು ನಮ್ಮ ಸಹಪಯಣಿಗರೇ.. ಅನುಭವಿಸುವ ಯಾತನೆಗಳೂ ಒಂದೇ.. ಅದೇನೇ ಇರಲಿ, ಬದುಕೊಂದು ಮುಗಿಯದ ಪಯಣ. ಈ ಪಯಣದಲ್ಲಿ ಕಾಲ್ನಡಿಗೆಯ ಪಯಣವಿರಲಿ, ಕಾರಿನ ಪಯಣವಿರಲಿ ಎಲ್ಲಾ ಪಯಣಕ್ಕೂ ನೋವುಗಳಿವೆ, ತಲ್ಲಣಗಳಿವೆ, ಸಂತಸಗಳಿವೆ ಸಂಭ್ರಮಗಳಿವೆ, ಸಂಕಟಗಳಿವೆ, ಇವೆಲ್ಲವನ್ನೂ ನಿಭಾಯಿಸಿಕೊಂಡು, ಕಾರಿನ ಪಯಣದೊಳಗೆ ಕಾಲ್ನಡಿಗೆಯ ಪಯಣವನ್ನು ಮರೆಯದಂತೆ ಸಮಭಾವದಿಂದ ಪಯಣಿಸೋಣವೆಂದು ಬಯಸುತ್ತೇನೆ.

One thought on “ಕಾರಿನೊಳಿಗಿನ ಪಯಣವೂ ; ಕಾಲಿನ ಪಯಣದೊಳಗಿನ ತಲ್ಲಣಗಳು…ರಮೇಶ ಸಿ ಬನ್ನಿಕೊಪ್ಪ ಹಲಗೇರಿ

  1. ಜೀವನ ಪಯಣದ ವಾಸ್ತವದ ಬಗ್ಗೆ ಸೊಗಸಾದ ಅನುಭವಗಳ ಕಥಾನಕ. ಎಲ್ಲಾ ಪಯಣಗಳಲ್ಲೂ ನೋವುಗಳಿವೆ, ತಲ್ಲಣಗಳಿವೆ, ಸಂತಸಗಳಿವೆ. ಸಂಭ್ರಮಗಳಿವೆ, ಸಂಕಟಗಳಿವೆ ಎಂಬ ಮಾತುಗಳು ಮನಸ್ಸನ್ನು ಹಿಡಿದಿಡುತ್ತವೆ. ಸೊಗಸಾದ ನಿರೂಪಣೆ.
    ಅಭಿನಂದನೆಗಳು.

Leave a Reply

Back To Top