ಕಾವ್ಯ ಸಂಗಾತಿಇ
ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ಬಾಳಯುದ್ಧ..
ಮದ್ದು ಗುಂಡುಗಳು
ರೈಫಲ್, ವೈರಸ್ ಪರಮಾಣುಗಳು ಉಗುಳಬೇಕಿಂದಿಲ್ಲ..
ಗಡಿಗಳ ತಂಟೆ ತಕರಾರಿನ
ವಿಷಯವೂ ಅಲ್ಲದಿದ್ದರೂ
ಈಗೀಗ ಯುದ್ದ ಸಾರುತಲೇ ಇದೆ..!!
ಅವಳು ತನ್ನ ಒಳಿತಿಗಾಗಿಯೂ ಅಲ್ಲ
ಇವನು ತನ್ನ ಒಳಿತಿಗಾಗಿಯೂ ಅಲ್ಲ
ಇಬ್ಬರದೂ ದಿನಾ ಇದದ್ದೇ ಯುದ್ಧ.
ಕೆಲವು ಸಲ ಯುದ್ಧ
ಮೌನವಾಗಿ ಮುದುಡಿಹೋದ ತಾವರೆಯಂತೆ
ಒಣಗಿ ನಿಂತ ಕಳಲೆಯಂತೆ
ಸದಾ ಮುಂದುವರಿಯುತ್ತದೆ
ಕೆಲವು ಸಲ ಶೀತಲ ಸಮರ..!!
ಹಲವು ಸಲ ಆರ್ಭಟಿಸುವ ಸಿಡಿಲು ಗುಡುಗಿನಂತೆ
ಬೈಗುಳ ಹಿಡಿಶಾಪ ಸಮಾಧಾನವಾಗುವವರೆಗೂ
ನಿಲ್ಲುವುದಿಲ್ಲ ಕೋಪ ತಾಪ..!!
ಕಿರುಚುತ್ತಾನೆ, ಅರಚುತ್ತಾನೆ,
ಹಣೆ ಹಣೆ ಜಜ್ಜಿಕೊಂಡು
ಬಿರುಗಾಳಿಗೆ ಸಿಕ್ಕ ತರಗಲೆಯಂತೆ ಬಿದ್ದು ಹೋಗುತ್ತಾನೆ..!!
ಕೊರಗುತ್ತಾಳೆ, ನರಳುತ್ತಾಳೆ,
ತಲೆಹಿಡಿದು ಕಣ್ಣೀರಾಗುತ್ತಾಳೆ,
ಬಿರುಗಾಳಿಗೆ ಸಿಕ್ಕ
ಸೂತ್ರ ಹರಿದ ಗಾಳಿಪಟವಾಗುತ್ತಾಳೆ..!!
ಅವನು ತಾಳಿ ಕಟ್ಟಿದ ತಪ್ಪಿಗಾಗಿಯೋ..? ಪರಿತಪಿಸುತ್ತಾನೆ.
ಇವಳು ತಾಳಿ ಕಟ್ಟಿಸಿಕೊಂಡ
ತಪ್ಪಿಗಾಗಿಯೋ..?
ಕಸಿವಿಸಿಯಾಗುತ್ತಾಳೆ.
ಮಕ್ಕಳ ಸಲುವಾಗಿಯಾದರೂ… ಹಾಂ..ಹೌದು.
ದಿನಾಲು ಬಾಳ ಯುದ್ಧ ಮಾಡಲೇಬೇಕು…!!
ಸಂಸಾರ ರಣರಂಗವಾದರೇ
ಗೆಲುವು, ಪ್ರೀತಿ, ಪ್ರೇಮ,
ನಗು… ನಗಣ್ಯವಿಲ್ಲಿ.
ರಮೇಶ ಸಿ ಬನ್ನಿಕೊಪ್ಪ ಹಲಗೇರಿ