ಕಾವ್ಯ ಸಂಗಾತಿ
ಸುಧಾ ಹಡಿನಬಾಳ
ಸಹಸ್ರ ಗರ್ಭೆ
ಇವಳ ಗರ್ಭದಲ್ಲಿ ಜನಿಸಿದ
ಜೀವ ಸಂಕುಲಕ್ಕೆ ಲೆಕ್ಕವಿಲ್ಲ !
ಮೇಲ್ನೋಟಕ್ಕೆ ಕಾಣಸಿಗುವವೊಂದಿಷ್ಟು
ಮೇಲ್ಪಂಕ್ತಿಯಲಿ ಮೆರವವೊಂದಿಷ್ಟು
ಅಗೋಚರ ಜೀವಿಗಳಾಗಿ ಅವಿತು
ಕೊಂಡವುಗಳ ಸಂಖ್ಯೆ ಅಸಂಖ್ಯ
ಋತುಮಾನಕ್ಕೆ ತಕ್ಕಂತೆ ಜನಿಸಿ
ಮರಣಿಸಿ ಅದೃಶ್ಯವಾಗುವವು ಅಗಣಿತ
ಇದ್ದೂ ಇಲ್ಲದಂತೆ ಎಲೆ ಮರೆಯ
ಕಾಯಂತೆ ಪರೋಪಕಾರಿ ಜೀವ
ಜಗತ್ತೊಂದು ಹಿನ್ನೆಲೆಯಲ್ಲಿ ಅದೃಶ್ಯ !
ಹೀಗೆ ಉದಿಸಿ ಕಾಲದಲ್ಲಿ ಲೀನವಾಗಿ
ಕಾಲನ ಲೀಲೆಗೆ ಬಲಿಯಾಗಿ ಶರಣಾಗಿ
ಹೀಗೆ ಬಂದು ಹೋಗುವವು ಅನಂತ!
ಇಂಥ ಸಹಸ್ರ ಗರ್ಭೆಯ ಒಡಲಲ್ಲಿ
ಅವಿತಿರುವ ಉದಿಸಿರುವ ಮಕ್ಕಳೆಷ್ಟೊ,!
ತಾಯಿ ಮಡಿಲ ಋಣ ತೀರಿಸಿದವೆಷ್ಟೋ
ಹೆತ್ತೊಡಲ ರಕ್ತ ಹೀರುವ ಜಿಗಣೆಗಳೆಷ್ಟೊ
ಸಾರ್ಥಕ ಬದುಕು ಬಾಳಿ ಅಳಿದೂ
ಉಳಿಯುವ ಕಾಡ ಮಲ್ಲಿಗೆಯಷ್ಟೊ
ಏನಾದರಾಗಲಿ ಈ ಧರಣಿ ಧನ್ಯ
ಲಿಂಗ ಪತಿ ಶರಣ ಸತಿ ಅಕ್ಕನಂತೆ
ನೇಸರನ ಸುತ್ತುತ್ತಾ ಒಡಲ ಮಕ್ಕಳ
ಪೊರೆವ ಈ ಭೂಮಿ ಮಾನ್ಯ
————