ಕಾವ್ಯ ಸಂಗಾತಿ
ಎ. ಹೇಮಗಂಗಾ
ತನಗಗಳು
ನೀನಿರದೆ ಜೊತೆಗೆ
ನಲ್ಲ , ಇಲ್ಲ ತ್ರಾಣವು
ಹೋದಂತೆಯೇ ಆಗಿದೆ
ಒಳಗಿನ ಪ್ರಾಣವು
ನಿನ್ನೆ ಮರೆಯಾಗಿದೆ
ಇಂದು ನಮ್ಮದಾಗಿದೆ
ನಾಳೆ ಎದುರಿಗಿದೆ
ಕಾಲ ಮುಂದೆ ಸಾಗಿದೆ
ಹರ್ಷವ ತಂದಿತ್ತಿದೆ
ಮುಂಗಾರಿನಾಗಮನ
ಬಿತ್ತನೆಯತ್ತ ಇದೆ
ಕೃಷಿಕನ ಗಮನ
ನೀನಿರದ ಕ್ಷಣದಿ
ನಿದಿರೆ ಮರೀಚಿಕೆ
ಕಾಡುವ ಪ್ರಶ್ನೆ ಒಂದೇ
ಹೀಗೇಕೆ ಏಕೆ ಏಕೆ
ಮುಂಗಾರು ಮಳೆ ಬಂದು
ಬರವ ನೀಗಿಸಿತು
ಬೆಳೆಯ ಬೆಳೆಯಲು
ತತಿ ವರವಾಯಿತು
ಎಲ್ಲವ ತೊರೆಯಲು
ನಾನೇನೂ ಬುದ್ಧನಲ್ಲ
ಆಸೆಯಿಲ್ಲದ ಬಾಳು
ನಿಜದಿ ಬಾಳೇ ಅಲ್ಲ
ಈ ನಿಸರ್ಗವೆಂಬುದು
ದೈವದ ಕೊಡುಗೆಯು
ಹಾಳುಗೆಡವಿದರೆ
ಅಪಾಯ ಖಚಿತವು
ಅತಿ ಆಸೆಯು ಬೇಡ
ದುಃಖಕ್ಕದು ಮೂಲವು
ಆಸೆಗಿದ್ದರೆ ಮಿತಿ
ಬಾಳಲ್ಲಿ ನೆಮ್ಮದಿಯು
ಸಾಧಕರಲ್ಲಿ ಇವೆ
ಎರಡು ವಿಧಗಳು
ನಿಜದಿ ಸಾಧಕರು
ಸಮಯ ಸಾಧಕರು
ಕತ್ತಲ ರಾತ್ರಿಯಲ್ಲಿ
ಬೀದಿ ದೀಪ ಹೊತ್ತಿದೆ
ನೆರಳು ಬೆಳಕಿನ
ಆಟ ನಡೆಯುತ್ತಿದೆ
————————–
ಎ. ಹೇಮಗಂಗಾ
ಬರೆದಿರುವುದೆಲ್ಲವು ತುಂಬಾ ಚೆನ್ನಾಗಿದೆ ಮೇಡಂ
ಅಂಬುಜ ಬೆಳವಾಡಿ