ಮಧು ವಸ್ತ್ರದ್ ಅವರ ಕವಿತೆ-ಮೊದಲ ಮಳೆ

ಕರಿ ಮೋಡಗಳಿಂದಿಳಿದ ಮೊದಲ ಮಳೆ
ಇಳೆಯ ಸ್ಪರ್ಷಿಸಿದೆ
ಉರಿ ಬಿಸಿಲ ತಾಪದಲಿ ಬಳಲಿದ್ದ ಭುವಿ ತೋಯುತ ಹರ್ಷಿಸಿದೆ

ಸುತ್ತ ಆವರಿಸಿದ ಮಣ್ಣ ಘಮಲು ಮನಕೆ
ನವ‌ ಚೈತನ್ಯವ ನೀಡಿದೆ
ಮುತ್ತ ಹನಿಗಳ ಹೊತ್ತ‌ ಹಸಿರೆಲೆ ಮತ್ತಷ್ಟು ಮಳೆನೀರನು ಬೇಡಿದೆ

ಬಿರಿಯುತ ವನಸುಮವದು ತನ್ನೊಡಲಿನ ಪರಿಮಳವ ಪಸರಿಸಿದೆ
ಸುರಿಸುತ ಹೂವ ಕೆಂಪುತುರಾಯಿ ಮರವು
ಮಳೆಯ ಸ್ವಾಗತಿಸಿದೆ

ನೆಟ್ಟ ಗಿಡ ಮರಗಳು ಮೈಧೂಳ ತೊಳೆದು ಉಲ್ಲಾಸದಿ ಓಲಾಡಿವೆ
ಪುಟ್ಟ ಹಕ್ಕಿ ಪಕ್ಷಿಗಳು ಚಿಲಿಪಿಲಿಗುಟ್ಟುತಲಿ
ಆಗಸದಿ ತೇಲಾಡಿವೆ

ಓಡುವ ಮೇಘಗಳನು ನೋಡಿ ನಲಿಯುತ ನವಿಲು ನರ್ತನ ಮಾಡುತಿದೆ
ನಡುರಾತ್ರಿ ಕತ್ತಲಲಿ ಮಿಂಚುಹುಳ ಬೆಳಕ ಚೆಲ್ಲುತ ಆಟ ಆಡುತಿದೆ

ಗುಡುಗು ಸಿಡಿಲ ಆರ್ಭಟದೊಡನೆ ಮಿಂಚುತ ಮೃಗಶಿರ ಮಳೆ ಧರೆಗಿಳಿದಿದೆ
ಇಡುಗು-ತೊಡಗುಗಳಿಂದ ರೈತನ ಹೊರತರಲು ಧೃಢ ನಿರ್ಧಾರ ತಳೆದಿದೆ

ತುಂತುರು ಹನಿಗಳಾಡಿಹ ಒಲವ ನುಡಿಗಳ ಕೇಳಿ ಕವಿಮನ ಹುಚ್ಚಾಗಿದೆ
ನಿಂತ ನೀರಲಿ ಕುಣಿದು ಕುಪ್ಪಳಿಸಿಹ ಮಕ್ಕಳ ಕಂಡು ಉತ್ಸಾಹ ಹೆಚ್ಚಾಗಿದೆ..


Leave a Reply

Back To Top