ಕಾವ್ಯ ಸಂಗಾತಿ
ಮಧುಮಾಲತಿರುದ್ರೇಶ್
ಎಲ್ಲಿ ಕವಲು ಎಲ್ಲಿ ಬಯಲು
ಆದಿ ಅಂತ್ಯವಿರದ ಹಾದಿ ಬಾಳ ತುಂಬ ತುಂಬಿದೆ
ಯಾರು ಇರಲಿ ಇಲ್ಲದಿರಲಿ ಮುಂದೆ ಸಾಗಲೇಬೇಕಿದೆ
ಬಾಳಿನಲ್ಪ ಸಮಯದಲ್ಲಿ ದೂರ ಗಮ್ಯ ಸೇರಲು
ಕ್ರಮಿಸಬೇಕು ಶ್ರಮಿಸಬೇಕು ಗುರಿಯ ಶಿಖರ ಮುಟ್ಟಲು
ಆಯ್ಕೆ ಎಂಬ ಕವಲುದಾರಿ ಕಣ್ಣ ಮುಂದೆ ನೂರಿದೆ
ಆಸೆಯೆಂಬ ಸುಳಿಗೆ ಸಿಲುಕಿ ಮನವು ತಾನು ಸೋತಿದೆ
ನಡೆದ ದಾರಿ ಲೆಕ್ಕವಿಲ್ಲ ಜೊತೆಗೆ ಬಂದ ಜೀವವಿಲ್ಲ
ಕಡೆಗೆ ಒಂಟಿ ಪಯಣ ಇದುವೆ ಸತ್ಯ ಬಾಳಿಗೆಲ್ಲ
ತಿಳಿದವರಿಲ್ಲ ಇಲ್ಲಿ ಎಲ್ಲಿ ಕವಲು ಎಲ್ಲಿ ಬಯಲು
ಹುಡುಕಿ ಸೋತೆ ನಿನ್ನೆ ನಡೆದ ಹೆಜ್ಜೆ ಗುರುತ ಕಾಣಲು
ಮತ್ತದೇ ದಾರಿಯಲಿ ಹೆಜ್ಜೆ ಇಡುವೆನೆಂಬ ಖಾತರಿ ಇಲ್ಲ
ಯಾರ ಪಯಣ ಎಲ್ಲಿವರೆಗೆ ಬರೆದವನೇ ಬಲ್ಲ
ಬಾಳ ದಾರಿಯ ಬದಿಗಳಿಗೆ ಪ್ರೀತಿ ಬೀಜ ಚೆಲ್ಲೋಣ
ಎದುರಾದವರ ನಸುನಗುತ ಸ್ವಾಗತಿಸೋಣ
ಮಧುಮಾಲತಿರುದ್ರೇಶ್
ತುಂಬು ಧನ್ಯವಾದಗಳು ತಮಗೆ