ಕಾವ್ಯಸಂಗಾತಿ
ಶಾಲಿನಿ ಕೆಮ್ಮಣ್ಣು
ನೀ ಕೊಂಚ ಸರಿಯಬಾರದೇಕೆ?
ಬದುಕೆ
ನೀನ್ಯಾಕೆ ಬಹು ಬಣ್ಣಗಳ ತೋರಿದೆ
ನಾನಾ ನಾಟಕಗಳ ಆಡಿಸಿದೆ
ಪರಿಪರಿಯ ಪಾತ್ರಗಳ ನೀಡಿದೆ
ತರತರದ ಸುಖ ದುಃಖಗಳ ಕೊಟ್ಟೆ
ಸಿಹಿ ಕಹಿಯ ಸಂವೇದನೆಗಳ ಇಟ್ಟೆ
ವಿಧವಿಧ ವ್ಯೂಹಗಳ ರಚಿಸಿದೆ
ಸಾಮರ್ಥ್ಯ ದೌರ್ಬಲ್ಯಗಳ ಪರೀಕ್ಷಿಸಿದೆ
ಅನ್ಯಾಯ ಆಕ್ರೋಶಗಳ ಬಲೆಯ ಹೆಣೆದೆ
ಪ್ರೀತಿ ವಿಶ್ವಾಸ ಮಮತೆಗಳನ್ನು ಸುರಿಸಿದೆ
ಆಸೆ ಅಸೂಯೆಗಳ ಅಂಧಕಾರದಲ್ಲಿ ಮುಳುಗಿದೆ
ಕೋಪ ವೈಮನಸ್ಸುಗಳ ಬೆಂಕಿಯಲ್ಲಿ ಬಳಲಿದೆ
ಪರಿಚಿತ ಆಗಂತುಕ ಮಿತ್ರ ವಿರೋಧಿಗಳ ಸೇರಿಸಿದೆ
ಎಷ್ಟೋ ಫಲಿಸಿದೆ ಇನ್ನೆಷ್ಟೋ ಒಲಿದಿದೆ
ಅಷ್ಟಿಷ್ಟು ಕೈತಪ್ಪಿದೆ ಮತ್ತಷ್ಟು ದೊರಕಿದೆ
ಏಳು ಬೀಳಿದೆ ಸುಸ್ತು ಸಮಾಧಾನವಿದೆ
ಅನುಭವಗಳ ಕೋಟೆ ಇದೆ
ವೈಶಿಷ್ಟ್ಯಗಳ ಸಾಲಿದೆ
ನನ್ನದೇ ನೆರಳಿದೆ
ಬದುಕೆ ನೀ ಕೊಂಚ ಸರಿಯಬಾರದೇಕೆ
ಶಾಲಿನಿ ಕೆಮ್ಮಣ್ಣು