ಕಾವ್ಯ ಸಂಗಾತಿ
ಕುಸುಮಾ. ಜಿ ಭಟ್
ಶಶಿಯೊಲಿದವಳು!
ಅಮಾವಾಸ್ಯೆಯ ನೀರವತೆ
ತನ್ನೊಳಗಿನ ಕೂಗು ಮಾರ್ದನಿಸಿದಂತೆ
ಗಗನಮುಖಿಯ ಕಾದ ನಯನಕೆ
ಕಾಣದಿರುವನೇ ಚಂದ್ರ?
ಭೂಮಿಯ ಲಾಂದ್ರ!
ಇಣುಕಿದ ಕೆಣಕಿದ
ಬೆದರಿದ ಹೊಂಬಣ್ಣ
ಸಂಗಾತಿಗೆ ಎಳೆ ಎಳೆಯಾಗಿ
ಪ್ರತ್ಯಕ್ಷ ಯಕ್ಷಕಿನ್ನರ
ಆಕೆ ಕಂಡದ್ದೇನು ಹೊಳಪೇ ಬೆಳಕೇ
ಹಿನ್ನೆಲೆಯ ಸಂಗೀತಾಲಾಪದಿ
ಸಾವಿರ ಸಖಿಯರ
ಮಿರುಗು ಚಿತ್ತಾರ ನೃತ್ಯ
ಗುಣಗಾನದ ದೇದೀಪ್ಯ ಮಾನ
ನಭದೊಡೆಯನ
ಒಮ್ಮಿಗೇ ನಂಬಲೆಂತು
ದ್ವಂದ್ವದಲೇ ಶುರು
ಅಂತರಂಗದಿ ಚಿಂತನೆ
ಶರಣಾದ ಮನದಿ ನವ ವಸಂತ ಗಾನ
ಎಂತು ಬಿತ್ತಿದನೋ ಶಶಿ
ಅನುರಾಗದ ಬೀಜ ತನ್ನೊಳಗೆ
ಅದೆಂಥ ಅಸಧಳ ಪ್ರಭೆ
ನೂರು ಮಂಡಲ ದಾಟಿ ಜಿಗಿದ
ಮೊಗ್ಗಿoದ ಹೂವಾಗಿ ಅರಳಿದಂತೆ
ಇವಳಿಗಾಗೆ!
ಕರಿ ಮುಗಿಲಿಂದಾಚೆಗೆಂದೂ
ಇಣುಕದಾಕೆಗೆ ನಿಲ್ಲದ ಬಿಕ್ಕಳಿಕೆ
ಕೊನೆಗೂ ಹುಣಿವೆ ಚಂದಿರ ವದನ
ಕಂಡಾಕೆ
ನಲುಮೆಯಿಂದ ತನ್ನನ್ನು ತಾನೇ ಅಪ್ಪಿ
ಅನುರಾಗಿಯಾದಳಾಕೆ
————————-
ಕುಸುಮಾ. ಜಿ ಭಟ್