ಕಾವ್ಯ ಸಂಗಾತಿ
ಡಾ ಅನ್ನಪೂರ್ಣ ಹಿರೇಮಠ
ಗಜಲ್
ಉಸಿರೊಂದಿಗೆ ಬೆರೆತುಹೋದ ನೆನಪುಗಳ ಕಿತ್ತೆಸೆ ಎಂದರೆ ಹೇಗಾದೀತು?
ಜೀವದೊಂದಿಗೆ ಜತನವಾಗಿಹ ನೆನಪುಗಳ ಕಿತ್ತೆಸೆ ಎಂದರೆ ಹೇಗಾದೀತು?
ಬೇಡ ಬೇಡವೆಂದರೂ ಸುಳಿ ಸುಳಿದು ಬಳಿ ಬಂದು ಮರಳು ಮಾಡಿದೆ
ಪ್ರೀತಿಯೊಂದಿಗೆ ಪವಡಿಸಿದ ಕನಸುಗಳ ಕಿತ್ತೆಸೆ ಎಂದರೆ ಹೇಗಾದೀತು?
ದೂರವಿರೆಂದರೂ ಓಡೋಡಿ ಹತ್ತಿರ ಹತ್ತಿರ ಬಂದು ಮೋಡಿ ಮಾಡಿದೆ
ತನುವಿನೊಂದಿಗಿನ ತುಡಿತದ ಹನಿಗಳ ಕಿತ್ತೆಸೆ ಎಂದರೆ ಹೇಗಾದೀತು?
ಇಲ್ಲ ಇಲ್ಲವೆಂದರೂ ಗಲ್ಲ ಸವರುತ ಬಳಿ ಬಂದು ಸಲುಗೆ ಬಯಸಿದೆ
ಭಾವದೊಂದಿಗೆ ಬೆಸೆದಿಹ ಸಂಬಂಧಗಳ ಕಿತ್ತೆಸೆ ಎಂದರೆ ಹೇಗಾದೀತು?
ಸಾಕು ಸಾಕೆಂದರೂ ಸರಸದಿಂದ ಸಲ್ಲಾಪಕ್ಕೆ ಸೆಳೆದು ಮರುಳಾಗಿಸಿದೆ
ನೋಟದೊಂದಿಗೆ ಕಲೆತಿಹ ಆಲಾಪಗಳ ಕಿತ್ತೆಸೆ ಎಂದರೆ ಹೇಗಾದೀತು?
ಸ್ಪರ್ಶಸುಖದಿ ಹರ್ಷಗೊಳಿಸಿ ಸ್ವರ್ಗ ತೋರಿಸಿ ಬರಸೆಳೆದು ಮುದ್ದಾಡಿದೆ
ಎದೆ ಬನದಲ್ಲಿ ಹಸಿರಾದ ಪರಿಣಯಗಳ ಕಿತ್ತೆಸೆ ಎಂದರೆ ಹೇಗಾದೀತು?
ಅನುಳ ಅಂತರಾಳದ ತವಕಗಳ ತುಡಿಸಿ ಗುಲ್ಲೆಬ್ಬಿಸಿ ತಬ್ಬಿ ಮೈಮರೆಸಿದೆ
ಹೃದಯದೊಂದಿಗೆ ಕರಗಿದ ಮಿಡಿತಗಳ ಕಿತ್ತೆಸೆ ಎಂದರೆ ಹೇಗಾದೀತು?
ಡಾ ಅನ್ನಪೂರ್ಣ ಹಿರೇಮಠ