ಮಹಿಳಾ ಸಂಗಾತಿ
ಜಯಲಕ್ಷ್ಮಿ.ಕೆ.
ದುಡಿಯುವ ಸ್ಥಳದಲ್ಲಿ
ಮಹಿಳೆಯರ ಮೇಲಿನ
ಲೈಂಗಿಕ ದೌರ್ಜನ್ಯ-
ಯತ್ರ ನಾರ್ಯಸ್ತು ಪೂಜ್ಯಂತೇ
ರಮಂತೇ ತತ್ರ ದೇವತಾ :
ಎಲ್ಲಿ ನಾರಿಯರು ಗೌರವಾದರಗಳಿಂದ ಕಾಣಲ್ಪಡುತ್ತಾರೋ ಅಲ್ಲಿ ದೇವತೆಗಳು ಸಂತುಷ್ಟರಾಗುತ್ತಾರೆ. ಇದು ಮನುಸ್ಮೃತಿಯಲ್ಲಿ ಬಂದಿರುವ ಮಾತು. ಮಹಿಳೆಯರನ್ನು ಪವಿತ್ರ ಸ್ಥಾನದಲ್ಲಿ ಕಾಣಬೇಕು ಎಂಬುದು ನಮ್ಮ ಸಂಸ್ಕೃತಿ ಕೂಡಾ. ಆದರೆ ಇತ್ತೀಚೆಗೆ ಮಹಿಳೆಯರ ಪಾವಿತ್ಯಕ್ಕೆ ಧಕ್ಕೆ ತರುವಂತಹ, ಅವರ ಬದುಕಿಗೇ ಮಾರಕವಾಗತಕ್ಕಂತಹ ಹೀನ ಕೃತ್ಯಗಳು ಹಿಂದೆಂದಿಗಿಂತಲೂ ಹೆಚ್ಚಾಗಿ, ಯಾವುದೇ ಎಗ್ಗಿಲ್ಲದೆ ನಡೆಯುತ್ತಿವೆ. ಸಾಹಿತ್ಯ, ಶಿಕ್ಷಣ, ವಿಜ್ಞಾನ , ತಂತ್ರಜ್ಞಾನ, ಕ್ರೀಡೆ ಹೀಗೆ ಎಲ್ಲಾ ರಂಗಗಳಲ್ಲೂ ಪುರುಷರಿಗೆ ಸರಿಸಾಟಿಯಾಗಿ ನಿಂತು ಸಾಧನೆಗೈಯುತ್ತಿರುವ ಮಹಿಳೆಯರಿಗೆ ಕೆಲ ಪುರುಷರು ಕೊಡುತ್ತಿರುವ ‘ಲೈಂಗಿಕ ಕಿರುಕುಳ ‘ ಎನ್ನುವ ಚಿತ್ರಹಿಂಸೆಯಿಂದ ಹೊರಬರಲು ಆಗುತ್ತಿಲ್ಲ. ಮಹಿಳೆಯರು ತಾವು ಕೆಲಸ ಮಾಡುವ ಸ್ಥಳಗಳಲ್ಲಿ ಸಾಕಷ್ಟು ಸುರಕ್ಷತೆ ಇಲ್ಲದೆ, ತಮಗಾಗುತ್ತಿರುವ ಅನ್ಯಾಯವನ್ನು ಹೇಳಿಕೊಳ್ಳಲೂ ಆಗದೆ ಮಾನಸಿಕ ಹಿಂಸೆಯನ್ನು ಅನುಭವಿಸುತ್ತಲೇ ದುಡಿಯಬೇಕಾದ ಪರಿಸ್ಥಿತಿ ಇದೆ. ಕೆಲಸ ಮಾಡುವ ಕ್ಷೇತ್ರಗಳಲ್ಲಿ ಅಷ್ಟೇ ಅಲ್ಲ, ಓದುವ ಕಂದಮ್ಮನಾಗಿರಲಿ, ಕಾಲೇಜು ವಿದ್ಯಾರ್ಥಿನಿಯಾಗಿರಲಿ, ಮನೆಯಲ್ಲಿ ಮಲಗಿರುವ ಯುವತಿಯೇ ಆಗಿರಲಿ ‘ ಕಾಮ ಪಿಶಾಚಿ ‘ ಎನಿಸಿದ, ನರ ರೂಪದ ಕೆಲ ರಾಕ್ಷಸರು ತಮ್ಮ ಲೈಂಗಿಕ ಬೇಡಿಕೆಗಳಿಗೆ ಸ್ಪಂದಿಸಲಿಲ್ಲ ಎಂಬ ಕಾರಣಕ್ಕೆ ಹೆಣ್ಣುಮಕ್ಕಳನ್ನು ಕ್ರಿಮಿಗಳನ್ನು ಹೊಸಕಿ ಹಾಕುವಂತೆ ಕಳೆ ಗಿಡಗಳನ್ನು ಕೊಚ್ಚಿ ಎಸೆಯುವ ರೀತಿಯಲ್ಲಿ ಅಮಾನುಷವಾಗಿ ಹತ್ಯೆಗೈಯ್ಯುತ್ತಿದ್ದಾರೆ. ಪ್ರತಿದಿನ ಒಂದಲ್ಲ ಒಂದು ಭೀಕರ ದೌರ್ಜನ್ಯ ಮಹಿಳೆಯರ ಮೇಲೆ ನಡೆಯುತ್ತಲೇ ಇದೆ. ಮಾಧ್ಯಮಗಳಲ್ಲಿ ಒಂದು ವರದಿಯನ್ನು ನೋಡಿ, ಅಯ್ಯೋ! ಎಂದು ನಾವು ಕೊರಗುತ್ತಿರುವಾಗಲೇ ಮತ್ತೊಂದು ಘನಘೋರ ಭಿತ್ತರಗೊಳ್ಳಲಾರಂಭಿಸುತ್ತವೆ. ನಾಗರಿಕ ಸಮಾಜ ತಲೆ ತಗ್ಗಿಸಬೇಕಾದ ಹೇಯ ಕೃತ್ಯಗಳು!
ಏನಿದು ಲೈಂಗಿಕ ಕಿರುಕುಳ?
ಯಾವುದೇ ಮಹಿಳೆ ತಾನು ಕೆಲಸ ಮಾಡುತ್ತಿರುವ ಸ್ಥಳಗಳಲ್ಲಿ ತನ್ನ ಪಾವಿತ್ರ್ಯಕ್ಕೆ ಧಕ್ಕೆ ಬರುವಂತಹ ಲೈಂಗಿಕ ವಿಚಾರಕ್ಕೆ ಸಂಬಂಧ ಪಟ್ಟಂತೆ ಪುರುಷರಿಂದ ಆಗತಕ್ಕಂತಹ ಕಿರುಕುಳವನ್ನು, ಅಸಭ್ಯ ವರ್ತನೆಯನ್ನು ‘ಲೈಂಗಿಕ ಕಿರುಕುಳ ‘ ಎನ್ನಬಹುದು.
ಕೆಲಸ ಮಾಡುತ್ತಿರುವ ಸ್ಥಳಗಳಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಲೈಂಗಿಕ ವಿಚಾರಕ್ಕೆ ಸಂಭಂದಿಸಿದಂತೆ ಪುರುಷರ ಅಸಭ್ಯ ಮಾತು -ವರ್ತನೆಗಳು ಮಹಿಳೆಯರ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತೆ ಇದ್ದರೆ ಅದು ಲೈಂಗಿಕ ಕಿರುಕುಳ.
1. ದೈಹಿಕ ಸ್ಪರ್ಶ ಅಥವಾ ಅದರ ಮುಂದುವರಿಕೆ.
2. ಲೈಂಗಿಕ ಸಹಕಾರಕ್ಕಾಗಿ ಕೋರಿಕೆ
3. ಲೈಂಗಿಕತೆಗೆ ಸಂಬಂಧಿಸಿದಂತೆ ಅಸಹ್ಯ ಮಾತು -ಹೇಳಿಕೆಗಳು
4. ಅಶ್ಲೀಲ ಚಿತ್ರಗಳನ್ನು ತೋರಿಸುವುದು, ವಿನಿಮಯ ಮಾಡಿಕೊಳ್ಳುವುದು…
ಇತ್ಯಾದಿ. ನಾರಿಯರು ಲೈಂಗಿಕ ದೌರ್ಜನ್ಯಗಳಿಗೆ ಒಳಗಾದಾಗ, ಅವರ ಚಾರಿತ್ಯವಧೆಯಾದಾಗ, ಪುರುಷನೊಬ್ಬ ಈ ವಿಚಾರದಲ್ಲಿ ಘನ ಘೋರ ಪೈಶಾಚಿಕ ಕೃತ್ಯ ಎಸಗಿದಾಗ ನಾವೆಲ್ಲಾ ಮನ ಬಂದಂತೆ ಶಾಪ ಹಾಕುತ್ತಾ, ಅಯ್ಯೋ! ಛೇ! ಎಂಥ ಅನ್ಯಾಯ ಆಗಿಹೋಯಿತು ಎನ್ನುತ್ತಾ ನಮ್ಮ ನಮ್ಮ ಹೃದಯದ ವೇದನೆಯನ್ನು ಹೊರಹಾಕುತ್ತೇವೆ. ಸರಿ -ತಪ್ಪುಗಳ ಲೆಕ್ಕಾಚಾರವನ್ನು ನಾವು ಸಾಮಾನ್ಯ ಮನುಷ್ಯರು ಮಾಡುವುದಿಲ್ಲ ಜೊತೆಗೆ ಅಂಥ ಭೀಕರ ಸಂದರ್ಭದಲ್ಲಿ ತಪ್ಪು ಏಕಮುಖವಾಗಿ ಕಾಣಿಸುವುದು ಸಹಜ. ಆದರೆ, ಇಲ್ಲಿ ಮಹಿಳೆಯರು ಪಾತ್ರ ಏನೂ ಇಲ್ಲವೇ? ಈ ಬಗ್ಗೆ ಕೂಡಾ ನಾವು ಚಿಂತನೆ ನಡೆಸಬೇಕಾಗುತ್ತದೆ. ಸಂಘಟಿತ, ಅಸಂಘಟಿತ, ಸರ್ಕಾರಿ, ಖಾಸಗಿ ಯಾವುದೇ ವಲಯಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಮಹಿಳೆಯರು ತಮಗೆ ತಾವೇ ಹಾಕಿಕೊಳ್ಳಬೇಕಾದ ಕೆಲ ಚೌಕಟ್ಟುಗಳಿವೆ.ಮುಖ್ಯವಾಗಿ ಋಣ, ಎಚ್ಚರ, ಹಗುರ ಗಾಂಭೀರ್ಯ ಈ ನಾಲ್ಕು ಅಂಶಗಳಲ್ಲಿ ಮಹಿಳೆಯರು ಜಾಗೃತರಾಗಿರುವುದೇ ಆ ಚೌಕಟ್ಟಿನ ಹೆಜ್ಜೆಗಳ ಜಾಣ್ಮೆ.
ತಮಗೆ ನಿಗದಿಪಡಿಸಿದ ಕೆಲಸದ ಅವಧಿ ಮುಗಿದ ಬಳಿಕ ಕಚೇರಿ -ಕಾರ್ಖಾನೆಗಳಲ್ಲಿ ನಿಲ್ಲಬೇಕಾದ ಸಂದರ್ಭದಲ್ಲಿ ತನ್ನ ಸಹವರ್ತಿ ಒಬ್ಬಳನ್ನು ಜೊತೆಗಿರಿಸಿಕೊಳ್ಳುವುದು ಸೂಕ್ತ. ಎಚ್ಚರ ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ.
ಮಹಿಳೆಯರು ತಮ್ಮ ಪಾವಿತ್ಯಕ್ಕೆ ಧಕ್ಕೆ ತರುವಂತಹ ಪುರುಷರ ಯಾವುದೇ ರೀತಿಯ ಅಸಹಜ ವರ್ತನೆಯನ್ನು ಹಗುರವಾಗಿ ಪರಿಗಣಿಸಬಾರದು. ನಿದರ್ಶನದ ಮೂಲಕ ಇದನ್ನು ಹೇಳುವುದಾದರೆ ಬಾಸ್ ಒಬ್ಬ ಓರ್ವ ಮಹಿಳ ನಿರತ ಮಹಿಳೆಗೆ ಫೈಲ್ ಒಂದನ್ನು ಹಸ್ತಾಂತರಿಸುವ ಸಂದರ್ಭದಲ್ಲಿ ಅಸಹಜ ಎನಿಸುವ ರೀತಿಯಲ್ಲಿ ಆಕೆಯ ಕೈಯನ್ನು ಸ್ಪರ್ಶಿಸುವುದು, ಅಂಗೈ ಅದುಮುವುದು, ಅಥವಾ ಅಸಭ್ಯ ನೋಟ ಬೀರುವುದು ಇತ್ಯಾದಿಗಳನ್ನು ಮಾಡಿದಾಗ ಇಷ್ಟೇ ತಾನೇ ಎಂದು ಎಂದಿಗೂ ಯಾವುದನ್ನೂ ಹಗುರವಾಗಿ ಪರಿಗಣಿಸಬಾರದು. ಲೈಂಗಿಕ ಕಿರುಕುಳ ಆರಂಭ ಆಗುವುದೇ ಹೀಗೆ. ಆರಂಭಿಕ ಹಂತದಲ್ಲಿ ಚಿಕ್ಕ – ಪುಟ್ಟ ಉಪಟಳ ಕೊಡುವ ಮೂಲಕ ಆಕೆಯ ಪ್ರತಿಕ್ರಿಯೆ ಹೇಗಿರುತ್ತೆ ಎನ್ನುವುದನ್ನು ಆತ ಪರೀಕ್ಷಿಸುತ್ತಾ ಇರುತ್ತಾನೆ. ಆಕೆಯ ವರ್ತನೆ, ವರಸೆ, ಸ್ಪಂದನೆ ಹೇಗಿದೆ ಎಂದು ಸೂಕ್ಷ್ಮವಾಗಿ ತಿಳಿದುಕೊಂಡೇ ಆತ ಮುಂದಡಿ ಇಡುವುದು. ಇಂತಹ ಘಟನೆಗಳು ನಡೆದಾಗ ಆದಿಯಲ್ಲಿಯೇ ಅದನ್ನು ಚಿವುಟಿ ಹಾಕದೆ ಹಗುರವಾಗಿ ತೆಗೆದುಕೊಂಡರೆ ಮುಂದೆ ಇದೇ ಆಕೆಗೆ ‘ಭಾರ ‘ ವಾದೀತು. ಈಗ ನಮ್ಮೆಲ್ಲರಲ್ಲಿ ಒಂದು ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಸಂಯಮವನ್ನು ಕಾಯ್ದುಕೊಂಡ, ಘನತೆ -ಗಾಂಭೀರ್ಯವನ್ನು ಮೈಗೂಡಿಸಿಕೊಂಡ ಮಹಿಳೆ ದೌರ್ಜನ್ಯಕ್ಕೆ ಒಳಗಾಗುವುದಿಲ್ಲವೇ…
ಮಹಾಭಾರತದಲ್ಲಿ ದುಷ್ಟ ಚತುಷ್ಠಯರು ಇದ್ದಾರಲ್ಲ, ಹಾಗೆ ನಮ್ಮ ಸಮಾಜದಲ್ಲಿ ಕೂಡಾ ಇಂತಹ ಕೆಲ ಪುರುಷರು ಇರುತ್ತಾರೆ. ಅಂಥವರನ್ನು ಸರಿದಾರಿಗೆ ತರಲು ಕಾನೂನು ಇದೆ.
ಲೈಂಗಿಕ ಕಿರುಕುಳ ಎನ್ನುವ ವಿಚಾರ ಬಂದಾಗ ಇದರಲ್ಲಿ ಪುರುಷನದ್ದೇ ತಪ್ಪು : ಮಹಿಳೆ ಸರಿ ಎಂದೋ ಅಥವಾ ಮಹಿಳೆಯದ್ದೇ ತಪ್ಪು : ಪುರುಷ ಸರಿ ಎಂದೋ ಸಾಮಾಜೀಕರಿಸಿ ( ಜನರಲೈಸ್ )ಮಾಡಿ ಹೇಳುವುದು ಕಷ್ಟ. ಕೆಲವರಲ್ಲಿ ದುಷ್ಟ ಪ್ರವೃತ್ತಿಗಳು ಇರುತ್ತವೆಯಾದರೂ ಸಂಸ್ಕಾರ ಅನ್ನೋದು ಅವರನ್ನು ಆ ದಾರಿಗೆ ಹೋಗದಂತೆ ತಡೆಯುತ್ತದೆ. ಲೈಂಗಿಕ ಆಸಕ್ತಿ ಎನ್ನುವುದು ಪ್ರತಿಯೊಂದು ಪ್ರಾಣಿ – ಪಕ್ಷಿಗಳಲ್ಲಿ ಇರುವಂತಹ ಸಹಜ ಬಯಕೆ. ಆ ಬಯಕೆಯನ್ನು ಮೃಗೀಯ ವರ್ತನೆಗಳ ಮೂಲಕ ಈಡೇರಿಸಿಕೊಳ್ಳಬಾರದು ಎನ್ನುವ ತಿಳುವಳಿಕೆ ಇದೆಯಲ್ಲ, ಅದು ಮನುಷ್ಯತ್ವ. ಶೀಲಂ ಸರ್ವಸ್ಯ ಭೂಷಣಮ್ ಎನ್ನುವ ಮಾತಿಗೆ ಬೆಲೆ ಬರುವಂತೆ ಯಾರು ತನ್ನಲ್ಲಿನ ಅಸಹಜ ಪ್ರವೃತ್ತಿಯನ್ನು ಕಳಚಿಕೊಳ್ಳುತ್ತಾ ಸುಸಂಸ್ಕೃತನಾಗಿ ನಾಗರಿಕನಾಗಿ ವ್ಯವಹರಿಸುತ್ತಾನೋ ಅವನಿಗೆ ಕಾನೂನು ಕಟ್ಟಲೆಗಳ ಬಿಗಿ ವ್ಯವಸ್ಥೆ ಬೇಕಾಗುವುದಿಲ್ಲ. ಕೆಲವರಿಗೆ ತಪ್ಪು ಯಾವುದು ಎನ್ನುವುದು ಗೊತ್ತಿದ್ದರೂ ಅದನ್ನು ಸರಿ ಪಡಿಸಿಕೊಳ್ಳಲು ಮನಸ್ಸಿರುವುದಿಲ್ಲ. ಸರಿಯಾದ ದಾರಿ ತಿಳಿದಿದ್ದರೂ ಆ ದಾರಿಯಲ್ಲಿ ಸಾಗಲಾಗುವುದಿಲ್ಲ. ಇಂತಹ ಮನಸ್ಥಿತಿಯ ಕೆಲ ಪುರುಷರು ಮಹಿಳೆಯರಿಗೆ ಲೈಂಗಿಕ ಕಿರುಕುಳ ಕೊಡುತ್ತಲೇ ಇರುತ್ತಾರೆ. ಅಂಥ ಸಂದರ್ಭದಲ್ಲಿ ಮಹಿಳೆಯರು ಏನು ಮಾಡಬೇಕು? ಮೊದಲನೆಯಯದಾಗಿ ‘ಸಹಿಸಿಕೋ ‘ ಎನ್ನುವ ಇಕ್ಕಟ್ಟಿನ ಮನೋಭಾವನೆಯನ್ನು ಬಿಟ್ಟುಬಿಡಬೇಕು. ಯಾಕೆ ಸಹಿಸಿಕೊಳ್ಳಬೇಕು? 1997 ರಲ್ಲಿಯೇ ನಮ್ಮ ಸುಪ್ರೀಂ ಕೋರ್ಟ್ ಅಸ್ತಿತ್ವಕ್ಕೆ ತಂದಂತಹ ಕಾನೂನು ಇನ್ನಷ್ಟು ಪರಿಷ್ಕೃತಗೊಂಡು “ಲೈಂಗಿಕ ಕಿರುಕುಳದಿಂದ ಮಹಿಳೆಯರನ್ನು ತಡೆಯುವ, ಸಂರಕ್ಷಿಸುವ ಕಾಯಿದೆ ‘ ಜಾರಿಗೆ ಬಂದಿದೆ. ( The law on Sexual Harassment Prevention,Prohibition and Reddressal Act ) 2013 ರಲ್ಲಿ ಜಾರಿಗೊಂಡ ಈ ಕಾನೂನು ಈಗ ಮಹಿಳೆಯರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದೆ.
ಉದ್ಯೋಗದಾತನ ಜವಾಬ್ದಾರಿಗಳು
1 ತನ್ನ ಕಛೇರಿಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ಸುರಕ್ಷಿತ ವಾತಾವರಣವನ್ನು ಕಲ್ಪಿಸಿಕೊಡುವುದು
2 ಲೈಂಗಿಕ ಕಿರುಕುಳದ ಬಗ್ಗೆ, ಅದನ್ನೆಸಗಿದವರು ಎದುರಿಸಬೇಕಾಗುವ ಪರಿಣಾಮಗಳ ಬಗ್ಗೆ ಎಚ್ಚರಿಕೆ ಕೊಡುವ ವಿಚಾರಗಳನ್ನು ಫಲಕದ ಮೂಲಕ ಪ್ರದರ್ಶಿಸುವುದು, ಆ ಬಗ್ಗೆ ತಿಳುವಳಿಕೆ ನೀಡುವುದು.
3.. ಮಹಿಳೆಯರಿಗೆ ಅವರ ರಕ್ಷಣೆಯ ಬಗ್ಗೆ ಕಾನೂನಾತ್ಮಕವಾಗಿ ಇರುವ ಅನುಕೂಲಗಳ ಬಗ್ಗೆ ಜಾಗ್ರತಿ ಮೂಡಿಸುವುದು
4 ಅಧಿಕೃತವಾಗಿ ಜಾರಿಗೊಂಡಿರುವ ಪೋಶ್ (Prevention of Sexual Herasment ) ಕಾಯಿದೆ ಪ್ರಕಾರ ಲೈಂಗಿಕ ಕಿರುಕುಳ ನೀಡುವ ವ್ಯಕ್ತಿಗೆ ಆಗತಕ್ಕಂತಹ ಶಿಕ್ಷೆಗಳ ತೀವ್ರತೆ ಬಗ್ಗೆ ಮನವರಿಕೆ ಮಾಡಿಸುವುದು.
5. ಆಂತರಿಕ ದೂರು ವಿಭಾಗ ( Internal Compliant Committee ) ತೆರೆದು ತಮ್ಮ ಸಂಸ್ಥೆಯ ಅಥವಾ ಕಚೇರಿಯ ಹಿರಿಯ ಮಹಿಳಾ ಉದ್ಯೋಗಿಯನ್ನು ಮುಖ್ಯಸ್ಥೆಯನ್ನಾಗಿಸಿ ಆ ಕಮಿಟಿಯ ಶೇ.50 ರಷ್ಟು ಮಹಿಳಾ ಅಭ್ಯರ್ಥಿಗಳೇ ಇರುವಂತೆಯೂ ಓರ್ವ ಸದಸ್ಯೆ ಮಹಿಳಾ ಸಬಲೀಕರಣ ಏನ್ ಜಿ ಓ ( NGO)ದಿಂದ ಇರುವಂತೆಯೂ ನೋಡಿಕೊಳ್ಳುವುದು.6. ರಚನೆಗೊಂಡ ಆಂತರಿಕ ಕಮಿಟಿ ಸಕ್ರಿಯವಾಗಿದೆಯೇ ಎಂದು ತಿಳಿಯಲು ಆಗಾಗ್ಗೆ ಅವರಿಂದ ವರದಿಯನ್ನು ಪಡೆಯುವುದು
7. ದಾಖಲಿತ ದೂರಿಗೆ ಅವಶ್ಯಕತೆ ಇದ್ದರೆ ಮಧ್ಯಂತರ ಪರಿಹಾರ ನೀಡುವ ಬಗ್ಗೆ ಆಂತರಿಕ ಮತ್ತು ಲೋಕಲ್ ( ಲೋಕಲ್ ಕಂಪ್ಲೇಂಟ್ ಕಮಿಟಿ )ಕಮಿಟಿಯೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದು
8. ದೂರು ದಾಖಲಿಸಿದ ಸಂತ್ರಸ್ತೆಯ ವರ್ಗಾವಣೆ, ಖಾತೆ ಬದಲಾವಣೆ, ಅವಶ್ಯವಿದ್ದಲ್ಲಿ ಮೂರು ತಿಂಗಳ ಕಾಲ ರಜೆ.. ಇತ್ಯಾದಿಗಳ ಬಗ್ಗೆ ಮುತುವರ್ಜಿ ವಹಿಸುವುದು
9. ಪ್ರಕರಣವನ್ನು ದಾಖಲಿಸಿ, ಬೇಧಿಸಿ, ಚರ್ಚಿಸಿ ಶೋಧಿಸುವ ಜಾಣ್ಮೆಯನ್ನು ಆಂತರಿಕ ದೂರು ಕಮಿಟಿಯ ಸದಸ್ಯೆಯರಲ್ಲಿ ಬೆಳೆಸುವುದು.
10. ಚಹಾ ವಿರಾಮದಲ್ಲಿ ಕೂಡಾ ತನ್ನ ಕಚೇರಿಯ ಉದ್ಯೋಗ ನಿರತ ಮಹಿಳೆಯರು ಲೈಂಗಿಕ ಕಿರುಕುಳಕ್ಕೆ ಒಳಗಾಗದಂತೆ ಅವರನ್ನು ಸಂರಕ್ಷಣೆ ಮಾಡುವ ಹೊಣೆಗಾರಿಕೆ ಉದ್ಯೋಗದಾತನದ್ದು.
ದೂರು ದಾಖಲಿಸುವುದು ಹೇಗೆ?
2013 ರ ಪೋಶ್ ಕಾಯಿದೆಯ ಪ್ರಕಾರ ಯಾವುದೇ ಉದ್ಯೋಗ ನಿರತ ಮಹಿಳೆ ತನಗಾದ ಲೈಂಗಿಕ ಕಿರುಕುಳದ ಬಗ್ಗೆ ಘಟನೆ ನಡೆದ ಮೂರು ತಿಂಗಳುಗಳ ಒಳಗಾಗಿ ಬರಹ ರೂಪದ ದೂರನ್ನು ಆಂತರಿಕ ದೂರು ಕಮಿಟಿ ಗೆ ನೀಡಬೇಕು. ಸಂತ್ರಸ್ತೆ ದೂರು ನೀಡುವ ಸ್ಥಿತಿಯಲ್ಲಿ ಇಲ್ಲ ಎಂದಾದರೆ ಆ ಘಟನೆ ಬಗ್ಗೆ ತಿಳಿದಿರುವ ಜವಾಬ್ದಾರಿಯುತ ಸಹೋದ್ಯೋಗಿ ದೂರು ಕೊಡಬಹುದು.
ಆಂತರಿಕ ದೂರು ವಿಭಾಗದ ಜವಾಬ್ದಾರಿ.
ಯಾವುದೇ ಮಹಿಳಾ ಸಿಬ್ಬಂದಿ ತನಗಾದ ಲೈಂಗಿಕ ಕಿರುಕುಳದ ಬಗ್ಗೆ ಆಂತರಿಕ ದೂರು ವಿಭಾಗಕ್ಕೆ ದೂರು ದಾಖಲೆ ಮಾಡಿದ ತಕ್ಷಣ ಆಂತರಿಕ ಕಮಿಟಿ ಆ ಬಗ್ಗೆ ಕೂಲಂಕುಶವಾಗಿ ಚರ್ಚೆ ನಡೆಸಬೇಕು.
ಸಂತ್ರಸ್ತೆಗೆ ಯಾವುದೇ ರೀತಿಯ ತೊಂದರೆ ಆಗದಂತೆ ಎಚ್ಚರ ವಹಿಸಬೇಕು. ತಾವು ನಡೆಸಿದ ತನಿಖೆಯ ಬಗ್ಗೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಬೇಕು.
ಶಿಕ್ಷೆ ಏನು?
ಸುಪ್ರೀಂ ಕೋರ್ಟ್ ಜಾರಿಗೊಳಿಸಿದ ಪೋಶ್ ಕಾಯಿದೆ ಪ್ರಕಾರ ಕೆಲಸ ಮಾಡುವ ಸ್ಥಳಗಳಲ್ಲಿ ಮಹಿಳೆ ಲೈಂಗಿಕ ಕಿರುಕುಳಕ್ಕೆ ಒಳಗಾದ ಬಗ್ಗೆ ಸಾಬೀತಾದಲ್ಲಿ ಕಿರುಕುಳ ನೀಡಿದ ವ್ಯಕ್ತಿ ಅಪರಾಧ ಕಾನೂನು ಕಾಯ್ದೆ ಸೆಕ್ಷನ್ 351 ರ ಪ್ರಕಾರ ಈ ಕೆಳಗಿನ ಕೆಲವು ಶಿಕ್ಷೆಗಳಿಗೆ ಒಳಗಾಗುತ್ತಾರೆ.
1. ಅನುಚಿತವಾಗಿ ಸ್ಪರ್ಶಿಸುವ ಅಪರಾಧ- ಕ್ರಿಮಿನಲ್ ಲಾ ಆಕ್ಟ್ 2013 ರ ಅಡಿಯಲ್ಲಿ 1 ರಿಂದ 5 ವರ್ಷ ಜೈಲು ಶಿಕ್ಷೆ ಹಾಗೂ ದಂಡ.
2. ಮಹಿಳೆಯ ಗಮನಕ್ಕೆ ಬಾರದಂತೆ ಆಕೆಯ ಭಾವಚಿತ್ರ ತೆಗೆಯುವುದು, ನೋಡುವುದು, ಹಂಚುವುದು ಇತ್ಯಾದಿಗಳಿಗೆ ಮಾಹಿತಿ ತಂತ್ರಜ್ಞಾನ ಕಾಯಿದೆ 2000 ದ ಪ್ರಕಾರ 1 ರಿಂದ 7 ವರ್ಷ ಜೈಲು ಮತ್ತು ದಂಡ
3. ಮಹಿಳೆಯರ ಗೌರವಕ್ಕೆ ಧಕ್ಕೆ ತರುವಂತಹ ಪದಗಳ ಬಳಕೆ, ಚಿತ್ರ -ವಿಚಿತ್ರ ಹಾವ ಭಾವ ಪ್ರದರ್ಶನ ಇತ್ಯಾದಿ ಅಸಭ್ಯ ವರ್ತನೆಗೆ 2013 ರ ಕ್ರಿಮಿನಲ್ ಕಾಯಿದೆ ಪ್ರಕಾರ 3 ವರ್ಷ ಜೈಲು ಶಿಕ್ಷೆ.
4. ಅಧೀನ ನೌಕರರ ಜೊತೆ ಸಹಮತ ಲೈಂಗಿಕ ಸಂಬಂಧ ಹೊಂದಿದರೂ ಅಪರಾಧ ಕಾಯಿದೆಯಡಿಯಲ್ಲಿ 5 ರಿಂದ 10 ವರ್ಷ ಜೈಲು ಮತ್ತು ದಂಡ.
ಒಟ್ಟಿನಲ್ಲಿ ಇಂದು ಉದ್ಯೋಗಸ್ತ ಮಹಿಳೆ ತನಗಾಗುತ್ತಿರುವ ಲೈಂಗಿಕ ಕಿರುಕುಳವನ್ನು ಅವಡುಗಚ್ಚಿ ಸಹಿಸಿಕೊಳ್ಳಬೇಕಾದ ಅನಿವಾರ್ಯತೆ ಇಲ್ಲ. ಆಕೆಗೆ ಕಾನೂನಿನ ರಕ್ಷಣೆ ಇದೆ. ಆ ಬಗ್ಗೆ ಅರಿವು ಇರಬೇಕು, ಅಷ್ಟೇ.
ಮಹಾಭಾರತದ ಒಂದು ಪ್ರಸಂಗ. ಶ್ರೀಕೃಷ್ಣ ಕೌರವನಿಗೆ ಹೇಳುತ್ತಾನೆ, ನ್ಯಾಯಯುತವಾಗಿ ಪಾಂಡವರಿಗೆ ಏನು ಸಲ್ಲಬೇಕೋ ಅದನ್ನು ಕೊಟ್ಟು ಬಿಡು. ಅನ್ಯಾಯ ಅಧರ್ಮ ದಿಂದ ಒಳಿತಾಗುವುದಿಲ್ಲ… ಆಗ ಕೌರವ ಹೀಗೆ ಹೇಳುತ್ತಾನೆ..
” ಜಾನಾಮಿ ಧರ್ಮಮ್ ನ
ಚಮೇ ಪ್ರವೃತ್ತಿ:
ಜಾನಾಮ್ಯಧರ್ಮಮ್ ನ ಚಮೇ ನಿವೃತ್ತಿ:
ಧರ್ಮ, ಒಳ್ಳೆಯದು ಯಾವುದು ನನಗೆ ಗೊತ್ತು ಕೃಷ್ಣಾ.. ಆದರೆ ಅದನ್ನು ಆಚರಿಸಲು ಆಗುತ್ತಿಲ್ಲ. ಅಧರ್ಮ, ಅಕ್ರಮ ಯಾವುದು, ಅದೂ ನನಗೆ ಗೊತ್ತು. ಆದರೆ ಅದರಿಂದ ಬಿಡುಗಡೆ ಇಲ್ಲ.
ಈ ಮನಸ್ಥಿತಿ ಕೇವಲ ಕೌರವನೊಬ್ಬನದ್ದೇ ಅಲ್ಲ. ಇಂತಹ ಪರಿಸ್ಥಿತಿ ಕೆಲವರಿಗೆ ಇರಬಹುದು. ಆದರೆ ಇಂಥ ಅಧೋಗತಿಗೆ ಮಾನವರಾರೂ ಇಳಿಯದಿರಲಿ. ನಾರಿಯರು ನಿರ್ಭೀತಿಯಿಂದ ತಮ್ಮ ಕೆಲಸ -ಕಾರ್ಯಗಳಲ್ಲಿ ತೊಡಗುವಂತಹ ವಾತಾವರಣ ದೊರೆಯಲಿ ಎಂದು ಆಶೀಸೋಣ.
ಜಯಲಕ್ಷ್ಮಿ ಕೆ.
ಬಹಳ ಚೆನ್ನಾಗಿ ಈ ವಿಷಯದ ಕುರಿತು ವಿಮರ್ಷಿಸಿದ್ದೀರ, ಯುವ ಪೀಳಿಗೆಗೆ ತಿಳಿಸಬೇಕಾದ ವಿಷಯವೇ ಸರಿ.
ಅತ್ಯಂತ ಸೂಕ್ತ ಹಾಗು ಮಾಹಿತಿಪೂರ್ಣ ಬರಹ. ಕೆಲಸದ ಸ್ಥಳಗಳಲ್ಲಿ ಲೈಂಗಿಕ ದೌರ್ಜನ್ಯ ತಡೆ ಈ ಕಾಯಿದೆಯು, Prevention is better than cure ಎನ್ನುವ ಸಿದ್ಧಾಂತಕ್ಕೆ ಒತ್ತುಕೊಟ್ಟು ಜಾರಿಗೆ ಬಂದ ಕಾನೂನಾಗಿದೆ. ಲೇಖಕಿ ಜಯಲಕ್ಷ್ಮೀಯವರು ಇದರ ಬಗ್ಗೆ ಬಹಳ ಅಚ್ಚುಕಟ್ಟಾಗಿ ಲೇಖನದಲ್ಲಿ ವಿವರಿಸಿದ್ದಾರೆ. ಈ awareness ಇಂದಿನ ಅಗತ್ಯ. ಸರಕಾರಿ ಮತ್ತು ಸರಕಾರದ ಪರೋಕ್ಷ ಯಾ ಅಪರೋಕ್ಷವಾಗಿ ಸಂಬಂಧಪಟ್ಟ ಸಂಸ್ಥೆಗಳೆಲ್ಲವೂ ಕಡ್ಡಾಯವಾಗಿ ಅನುಷ್ಠಾನಕ್ಕೆ ತರಬೇಕಾದ ಕಾನೂನು. ಆದರೆ ಇದನ್ನು ಎಲ್ಲಾ ಕಡೆ ಅಳವಡಿಸಬೇಕಾದುದು ಇಂದಿನ ತುರ್ತು.
ಹೌದು, ಮಹಿಳೆಯರಂತೂ ಅಗತ್ಯವಾಗಿ ಅರಿತಿರಬೇಕಾದುದು. ಲೇಖಕಿ ಹೇಳಿದಂತೆ, ಮಹಿಳೆಯರು ಕೆಲಸದ ಸಂದರ್ಭದಲ್ಲಿ ಲೈಂಗಿಕ ಕಿರುಕುಳವನ್ನು ಸಹಿಸದೆ, ಉದಾಸೀನ ಪಡದೆ, ಭಯ ಪಡದೆ, ಆರಂಭದಲ್ಲೇ ತಡೆಯಬೇಕಾದುದು ಆದ್ಯ ಕರ್ತವ್ಯವಾಗಿದೆ. ಅಭಿನಂದನೆಗಳು ಲೇಖಕಿಗೆ, ಪ್ರಕಟಿಸಿದ ಸಂಗಾತಿ ಪತ್ರಿಕಾ ಸಂಪಾದಕರು ಮತ್ತವರ ತಂಡಕ್ಕೂ ಸಹ.
Very nice
Very niceeee ❤️
Very nice
ಆಳವಾದ ವಾಸ್ತವದ ನಿರೂಪಣೆ