ಕಾವ್ಯ ಸಂಗಾತಿ
ಶೋಭಾ ನಾಗಭೂಷಣ
ಸೋಲಿನ ಭಯ
ಸೋಲುಂಡು ಗೆಲುವು ಪಡೆದಾಗ
ಸಿಗಬಹುದು ತೃಪ್ತಿ ಹೆರಿಗೆಯ ನೋವುಂಡು
ತಾಯಿ ತನ್ನ ಕುಡಿಯ ಮೊಗದ ಸಿರಿಯ
ಕಂಡಾಗ ಮೂಡುವ ಭಾವದಂತೆ
ಗೆಲುವಿನ ಹಾದಿಯಲಿ ಹೆಜ್ಜೆ ಹೆಜ್ಜೆಗೂ
ಮುಳ್ಳು ತುಳಿದ ಅನುಭವ ಮತ್ತೆ ಮತ್ತೆ
ಕಾಡುವುದು ಅಂಗಾಲ ಊರಿದಾಗ
ಬುವಿಯ ಎದೆಮೇಲಿನ ತೆಳು ನೋವಿನಂತೆ
ಸೋಲು ಗೆಲುವಿನ ಸೋಪಾನ ವಿರಬಹುದು
ಸೋಲಿನ ಸರಣಿ ತಿವಿವ ನೋವು ಇರಿವುದು
ಜೀವನವ ಇಂಚಿಂಚು ಬಿಡದಹಾಗೆ
ಕತ್ತಿ ಈಟಿ ಭರ್ಜಿಗಳ ಪ್ರಹಾರ ಒಮ್ಮೆಲೇ ಆದಂತೆ
ಗೆಲುವನುಂಡ ಜೀವಕೆ ಸೋಲಿನ ಭಯ
ಬೆನ್ನ ಹಿಂದೆಯೇ ಕುಳಿತಿಹುದು ಬೇತಾಳನಂತೆ
ಕುತ್ತಿಗೆಯ ಬಿಗಿದು ಉಸಿರುಗಟ್ಟಿಸಿ
ಕೊಲ್ಲುವ ಕಗ್ಗತ್ತಲ ರಕ್ಕಸನಂತೆ
ಶೋಭಾ ನಾಗಭೂಷಣ