ಲೇಖನ ಸಂಗಾತಿ
ವೀಣಾ ಹೇಮಂತ್ ಗೌಡ ಪಾಟೀಲ್
ಅವರ ವಿಶೇಷ ಬರಹ
‘ಶ್!!…..ಯಾರಿಗೂ ಹೇಳಬೇಡ!!’
ಘಟನೆ ಒಂದು….. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಚಾಕ್ಲೇಟ್ ಕೊಡುತ್ತೇನೆ ಎಂದು ಪಕ್ಕದ ಮನೆಯ ಪುಟ್ಟ ಹುಡುಗಿಗೆ ಆಸೆ ತೋರಿಸಿ ಪೈಶಾಚಿಕ ಕೃತ್ಯ ಎಸಗಿದ ಯುವಕ.
ಘಟನೆ ಎರಡು…. ಹೊರಗೆ ಸುತ್ತಾಡಿಸಿಕೊಂಡು ಬರುತ್ತೇನೆ ಎಂದು ಸಂಬಂಧಿಕರ ಅಬೋಧ ಮಕ್ಕಳ ಮೇಲೆ ಅಮಾನುಷ ಅತ್ಯಾಚಾರ.
ಘಟನೆ ಮೂರು…. ಪಾಠ ಹೇಳುವ ನೆಪದಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ
ಘಟನೆ ನಾಲ್ಕು…. ಗಂಡು ಹುಡುಗ ಎಂದು ಗೊತ್ತಿದ್ದು ಕೂಡ ಆತನನ್ನು ತಮ್ಮ ಕಾಮಪಿಪಾಸೆಗೆ ಬಳಸಿಕೊಂಡ ವಯಸ್ಕ.
ಹೀಗೆ ಹತ್ತು ಹಲವು ದುರ್ಘಟನೆಗಳನ್ನು ಪ್ರಪಂಚದ ಒಂದಲ್ಲ ಒಂದು ಭಾಗದಲ್ಲಿ ನಡೆಯುವುದನ್ನು ಕಾಣುತ್ತೇವೆ.
ನಮ್ಮ ಮಕ್ಕಳನ್ನು ಅವರು ತುಂಬಾ ಪ್ರೀತಿಸ್ತಾರೆ ಎಂಬ ಭಾವದಿಂದ ಪರರನ್ನು ಸಂಪೂರ್ಣವಾಗಿ ನಂಬುವ ಎಷ್ಟೋ ಜನ ಪಾಲಕರು ಏನಾದರೂ ತಪ್ಪು ನಡೆದಾಗ ಅದನ್ನು ಹೇಳಲಾಗದೆ ತಮ್ಮ ಮಕ್ಕಳು ಒದ್ದಾಡಿ ಪದಗಳಿಗಾಗಿ ತಡಕಾಡಿ ಕೊನೆಗೆ ಹೇಳಿದಾಗ ತಮ್ಮ ಮಕ್ಕಳಿಗೆ ಹೇಳುವುದು ಶ್…! ಯಾರಿಗೂ ಹೇಳಬೇಡ!! ಎಂದು.
ಅದೆಷ್ಟು ಬಾರಿ ತಾಯಂದಿರು ತಮ್ಮ ಮಕ್ಕಳಿಗೆ ಈ ರೀತಿ ಹೇಳುವುದಿಲ್ಲ. ನಮ್ಮ ಸಮಾಜದಲ್ಲಿ ಆಳದಲ್ಲಿ ಗಮನಿಸಿದಾಗ ಕೆಲ ವಿಷಯಗಳು ಸರಿಯಾಗಿರದಿದ್ದರೂ ಕೂಡ ಮೇಲ್ನೋಟಕ್ಕೆ ಎಲ್ಲವೂ ಸರಿಯಾಗಿದೆ ಎಂಬಂತೆ ತೋರಿಸಿಕೊಳ್ಳುತ್ತೇವೆ. ಇದರ ಅವಶ್ಯಕತೆ ಇದೆಯೇ? ಎಂಬುದನ್ನು ಯೋಚಿಸಬೇಕು.
ಕೆಲ ವರ್ಷಗಳ ಹಿಂದೆ ಬೆಂಗಳೂರಿನ ಪ್ರತಿಷ್ಠಿತ ಶಾಲೆಯೊಂದರಲ್ಲಿ ಪುಟ್ಟ ಮಗುವಿಗೆ ಹೀಗಾದಾಗ ಎಚ್ಚೆತ್ತ ಪಾಲಕರು ಶಾಲೆಯ ಆಡಳಿತ ಮಂಡಳಿಯ ವಿರುದ್ಧ ದೂರು ನೀಡಿದರು.ಅದೇ ಸಮಯದಲ್ಲಿಯೇ ದೇಶಾದ್ಯಂತ ಅಲ್ಲಲ್ಲಿ ನಡೆದ ಪ್ರಕರಣಗಳು ಬಯಲಿಗೆ ಬಂದು ಪುಟ್ಟ ಮಕ್ಕಳಿಗೆ ಸುರಕ್ಷತೆಯ ಪಾಠವನ್ನು ಹೇಳಿಕೊಡುವ ಕುರಿತ ಚರ್ಚೆ ಎಲ್ಲೆಡೆ ನಡೆಯಿತು.
ಆದರೂ ಕೂಡ ಅಲ್ಲೊಂದು ಇಲ್ಲೊಂದು ಇಂತಹ ಪ್ರಕರಣಗಳು ಕೇಳಿ ಬರುತ್ತಲೇ ಇವೆ.
ಇದಕ್ಕೆ ಕಾರಣ ಪಾಲಕರ ಸಂಕೋಚದ ಮನಸ್ಥಿತಿ. ಅಯ್ಯೋ ಇಂತಹದನ್ನೆಲ್ಲ ಮಕ್ಕಳಿಗೆ ಹೇಗೆ ಹೇಳಬೇಕು ಎಂದು ಕೆಲವರು ಹೇಳಿದರೆ,ಮತ್ತೆ ಕೆಲವರು ಅವರ ಶಾಲೆಗಳಲ್ಲಿ ಹೇಳಿಕೊಡುತ್ತಾರೆ ಬಿಡಿ ಎಂಬ ಉದಾಸೀನ ಪ್ರವೃತ್ತಿ.
ಮಕ್ಕಳಿಗೆ ನೀವು ಹೇಗೆ ಹೇಳಿಕೊಡಬೇಕು ಎಂದು ಪಾಲಕರು ಸಂಕೋಚ ಪಡುವುದಾದರೆ ನೀವಲ್ಲದೆ ಮತ್ತಾರು ಹೇಳಿಕೊಡಬೇಕು ಎಂಬುದು ನನ್ನ ಪ್ರಶ್ನೆ? ಮಕ್ಕಳಿಗೆ ಅರ್ಥವಾಗುವ ಸಹ್ಯ ಭಾಷೆಯಲ್ಲಿ ಹೇಳಿಕೊಡುವುದರ ಮೂಲಕ ಅವರ ಮೇಲಾಗುವ ದೌರ್ಜನ್ಯಗಳ ಕುರಿತು ಅವರು ಮುಕ್ತವಾಗಿ ಮಾತನಾಡುವಂತೆ, ಎಚ್ಚರಿಕೆ ವಹಿಸುವಂತೆ ಮಾಡುವ ಮೂಲಕ ಅವರ ಬಾಲ್ಯಜೀವನವನ್ನು ಸುರಕ್ಷಿತಗೊಳಿಸಬೇಕು.
ಖ್ಯಾತ ಹಿಂದಿ ಚಲನಚಿತ್ರ ನಟ ಅಮೀರ್ ಖಾನ್ ನಡೆಸಿಕೊಡುತ್ತಿದ್ದ ಸತ್ಯಮೇವ ಜಯತೆ ಕಾರ್ಯಕ್ರಮದಲ್ಲಿ ಮಕ್ಕಳ ಮೇಲಾಗುತ್ತಿರುವ ಲೈಂಗಿಕ ಕಿರುಕುಳಗಳ ವಿರುದ್ಧ ಮಕ್ಕಳು ಹೇಗೆ ಪ್ರತಿಕ್ರಿಯಿಸಬೇಕು ಎಂಬುದನ್ನು ವಿವರಿಸಿದ್ದರು
ಅತ್ಯಂತ ಸರಳವಾಗಿ ತಂದೆ ತಾಯಿಯನ್ನು ಹೊರತುಪಡಿಸಿ ಮಕ್ಕಳ ಎದೆಯ ಭಾಗ, ಪೃಷ್ಟದ ಭಾಗ ಮತ್ತು ಎರಡು ಕಾಲುಗಳ ನಡುವಿನ ಭಾಗಗಳನ್ನು ವೈಯುಕ್ತಿಕ ಅಂಗಗಳು (ಪ್ರೈವೇಟ್ ಪಾರ್ಟ್ಸ್) ಎಂದು ತಿಳಿ ಹೇಳಿ, ಸ್ನಾನ ಮಾಡಿಸುವ ಸಮಯದಲ್ಲಿ ತಂದೆ ತಾಯಿಯ ಹೊರತಾಗಿ ಬೇರೆಯವರು ಆ ಭಾಗವನ್ನು ಮುಟ್ಟುವ ಇಲ್ಲವೇ ಸವರುವ ಪ್ರಸಂಗದಲ್ಲಿ ಕೂಡಲೇ ಆ ಜಾಗದಿಂದ ಬಹಳಷ್ಟು ಜನರಿರುವ ಕಡೆ ಓಡಿ ಹೋಗಲು ಹೇಳಿ ಕೊಟ್ಟರು. ಜನ ಇಲ್ಲದೆ ಹೋದಾಗ ಜೋರಾಗಿ ಚೀರಿ ಬೇರೆಯವರ ಗಮನ ಸೆಳೆಯಲು ಹೇಳಿದರು. ಎಷ್ಟು ಸರಳ ಅಲ್ಲವೇ.
ಇನ್ನು ಪಾಲಕರ ಜವಾಬ್ದಾರಿ ಮಕ್ಕಳಿಗಿಂತಲೂ ದೊಡ್ಡದು. ಮಗುವಿನ್ನೂ ಚಿಕ್ಕದು ಅದಕ್ಕೆ ಈ ಎಲ್ಲಾ ವಿಷಯಗಳು ಅರಿವಿಗೆ ಬರುವುದಿಲ್ಲ, ನಿಜ.
*ನಿಮ್ಮ ಮಗು ಆ ರೀತಿ ವರ್ತಿಸುವವರ ಉಪಸ್ಥಿತಿಯಲ್ಲಿ ಒಂದು ರೀತಿಯ ಅಸಹನೆಯನ್ನು ಪ್ರಕಟಿಸುತ್ತದೆ. ಅದನ್ನು ಗಮನಿಸಿ. ಏನೋ ತೊಂದರೆ ಆಗುತ್ತಿದೆ ಎಂಬುದನ್ನು ಸ್ಪಷ್ಟವಾಗಿ ಹೇಳಲು ಆಗದೆ ಇರುವ ಮಕ್ಕಳ ಮನಸ್ಸಿಗೆ ಇಂತಹ ಘಟನೆಗಳು
ಸವಾಲೊಡ್ಡಿ ಆತ್ಮವಿಶ್ವಾಸವನ್ನು ಕದಡುತ್ತವೆ. *ಘಟನೆಯ ಪುನರಾವರ್ತಿತ ನೆನಪು ಅವರ ಮನಃಶಾಂತಿಯನ್ನು ಹಾಳುಮಾಡುತ್ತದೆ. *ಒಂದು ರೀತಿಯ ಅಸುರಕ್ಷಿತಾ ಭಾವ ಅವರನ್ನು ಕಾಡುತ್ತದೆ.
* ಮಗು ಹೆಚ್ಚು ಅಂತರ್ಮುಖಿಯಾಗುತ್ತಾ ಹೋಗುತ್ತದೆ.
* ದೈಹಿಕ ತೊಂದರೆಗಳು ಹೆಚ್ಚಾಗಿ ಮಗು ಶಾಲೆಗೆ ಹೋಗಲು ಮನಸ್ಸು ಮಾಡುವುದಿಲ್ಲ. ದೈಹಿಕ ತೊಂದರೆಗಿಂತ ಮಾನಸಿಕವಾಗಿ ಮಗು ಇನ್ನಷ್ಟು ಕುಗ್ಗುತ್ತಾ ಹೋಗುತ್ತದೆ.
*ಕೊಂಚ ದೊಡ್ಡ ವಯಸ್ಸಿನ ಮಕ್ಕಳಾದರೆ ಪಾಲಕರ ಮುಂದೆ ಹೇಳಲಾರದೇ, ಮುಚ್ಚಿಡಲಾರದೆ ಮತ್ತಷ್ಟು ಒದ್ದಾಡುತ್ತಾರೆ.
ಕೆಲವೊಮ್ಮೆ ಸಂಬಂಧಗಳನ್ನು ಉಳಿಸಿಕೊಳ್ಳುವ ಸಲುವಾಗಿ ಪಾಲಕರು ತಮ್ಮ ಮಕ್ಕಳು ತಮ್ಮ ಮುಂದೆ ಬೇರೆಯವರ ಬಗ್ಗೆ ದೂರು ಹೇಳಲು ಬಂದಾಗ ಮಕ್ಕಳನ್ನು ಗದರಿಸಿಕೊಳ್ಳುತ್ತಾರೆ…. ಜೊತೆಗೆ ಯಾರಿಗೂ ಹೇಳಬೇಡ ಎಂದು ತಾಕೀತು ಮಾಡುತ್ತಾರೆ.
ಇದು ಖಂಡಿತಾ ಸಲ್ಲದು.
ನಿಮ್ಮ ಮಕ್ಕಳ ಮಾನಸಿಕ ಸ್ಥಿತಿ ನಿಮ್ಮ ಸಂಬಂಧಕ್ಕಿಂತ ಹೆಚ್ಚಿನದು. ಮಕ್ಕಳ ಅಂತರ್ಮುಖತೆ ಹೆಚ್ಚಾಗಿ ಅವರ ಮಾನಸಿಕ ಸ್ಥಿತಿ ಹದಗೆಡಬಹುದು, ಖಿನ್ನತೆ ಹೆಚ್ಚಾಗಬಹುದು. ಮುಂದೆ ಅದೇ ಮನೋ ದೈಹಿಕ ಕಾಯಿಲೆಯಾಗಿ ಪರಿಣಮಿಸಬಹುದು.
ಆದ್ದರಿಂದ ಪಾಲಕರು
-ಮಕ್ಕಳು ತಮ್ಮ ಆತ್ಮ ಸಂರಕ್ಷಣೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಪಾಠ ಕಲಿಸಬೇಕು.
-ಮಕ್ಕಳು ಸದಾ ಪ್ರಫುಲ್ಲಿತವಾಗಿರುವಂತಹ ವಾತಾವರಣವನ್ನು ಸೃಷ್ಟಿಸಬೇಕು.
– ತಮಗಾಗುವ ತೊಂದರೆಗಳನ್ನು ಯಾವುದೇ ಮುಜುಗರವಿಲ್ಲದೆ ನಿರಾತಂಕವಾಗಿ ಹೇಳಿಕೊಳ್ಳಬೇಕು. ಮತ್ತು ಮುಖ್ಯವಾಗಿ -ಪಾಲಕರು ಅವರನ್ನು ಯಾವುದೇ ರೀತಿ
ಜಡ್ಜಮೆಂಟಲ್ ಆಗಿ ಪ್ರತಿಕ್ರಿಯಿಸಬಾರದು. ಕೆಲ ಸೂಕ್ಷ್ಮ ಸಂಗತಿಗಳನ್ನು ನಿಭಾಯಿಸಲು ನಾವು ಕೂಡ ಅಷ್ಟೇ ಸೂಕ್ಷ್ಮರಾಗಬೇಕು….
ಮಕ್ಕಳಿಗೆ ಸರಿಯಾದ ಸಮಯಕ್ಕೆ ಅವಶ್ಯಕ ವಿಷಯಗಳ ತಿಳುವಳಿಕೆ ನೀಡದೇ ಹೋದರೆ ಆಸಕ್ತಿ ಕೆಟ್ಟ ಕುತೂಹಲವಾಗಿ, ಆ ಕುತೂಹಲ ಇನ್ನಿಲ್ಲದ ತಪ್ಪಿಗೆ ಅಣಿ ಮಾಡಿಕೊಡುತ್ತದೆ.
ಮನೆಯೇ ಮೊದಲ ಪಾಠಶಾಲೆ ತಾಯಿ ತಾನೇ ಮೊದಲ ಗುರು…. ಬಹಳಷ್ಟು ಹೆಣ್ಣು ಮಕ್ಕಳಿಗೆ ತಾಯಿಯೇ ಋತ್ತುಸ್ರಾವ, ಋತುಚಕ್ರ, ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರದ ಗಂಡು ಹೆಣ್ಣಿನ ನಡುವಿನ ಸಂಬಂಧಗಳ ಕುರಿತಾಗಿ ತಿಳಿ ಹೇಳುತ್ತಾಳೆ. ಆದರೆ ಈಗ ಕಾಲ ಬದಲಾಗಿದ್ದು ಹಾಲು ಹಲ್ಲು ಇರುವ ಮುನ್ನವೇ ಪ್ಯೂಬರ್ಟಿ ಹಂತಕ್ಕೆ ಬರುವ ಮಕ್ಕಳಿಗೆ ಎಲ್ಲ ವಿಷಯಗಳನ್ನು ಸೂಕ್ಷ್ಮವಾಗಿ ತಿಳಿಸಿ ಹೇಳುವ ಕೆಲಸ ತಾಯಂದಿರು ಇನ್ನು ಕೆಲ ವರ್ಷ ಮೊದಲೇ ಮಾಡಬೇಕು. ಹೆಣ್ಣು ಮಕ್ಕಳಿಗಾದರೂ ಕೊಂಚ ವಿಷಯಗಳು ಗೊತ್ತಿರುತ್ತವೆ…. ಆದರೆ ಗಂಡು ಹುಡುಗರಿಗೆ ಹೇಳಿಕೊಡಲು ಅಪ್ಪನಿಗೆ ಮುಜುಗರ. ತನ್ನಲ್ಲಾಗುವ ದೈಹಿಕ ಬದಲಾವಣೆಗಳ ಕುರಿತು ಯಾರಿಗೂ ಹೇಳಿಕೊಳ್ಳಲಾಗದ ಸಂಕೋಚ ಗಂಡು ಮಕ್ಕಳಿಗೆ. ತಮ್ಮ ಕುತೂಹಲವನ್ನು ತಣಿಸಿಕೊಳ್ಳಲು ಮಕ್ಕಳು ತಮ್ಮ ಅಂಗೈಯಲ್ಲಿರುವ ಮೊಬೈಲ್ ಮೂಲಕ ವಿವಿಧ ಸಾಮಾಜಿಕ ಜಾಲತಾಣಗಳ ಮೊರೆ ಹೋಗುತ್ತಾರೆ ಇಲ್ಲವೇ ಸ್ನೇಹಿತರೊಂದಿಗೆ ಗುಟ್ಟಾಗಿ ಚರ್ಚೆ ನಡೆಸುತ್ತಾರೆ.
ಸಾಮಾಜಿಕ ಜಾಲತಾಣಗಳು ಒಂದು ಕೇಳಿದರೆ ನೂರೊಂದು ಮಾಹಿತಿ ಕೊಡುವ, ಆರೋಗ್ಯಕರ ಮಾಹಿತಿಯ ಬದಲು ಅನಾರೋಗ್ಯಕರ ಚಟುವಟಿಕೆಗಳ ಕುರಿತ ಚಿತ್ರಣಗಳ ಮೂಲಕ ಮಕ್ಕಳ ಮನಸ್ಸನ್ನು ಮತ್ತಷ್ಟು ಕೆಡಿಸುತ್ತವೆ. ಸ್ವಸ್ಥ ಸಮಾಜದ ಆರೋಗ್ಯಕ್ಕೆ ಧಕ್ಕೆ ತರುವಂತಹ ಕೃತ್ಯಗಳಲ್ಲಿ ಮಕ್ಕಳು ತೊಡಗಿಕೊಳ್ಳುವಂತಹ ಮಾಹಿತಿಗಳುಜಾಲತಾಣಗಳಲ್ಲಿ ಹೇರಳವಾಗಿ ಲಭ್ಯವಾಗುತ್ತಿವೆ.
ಇನ್ನು ಸಮಯ ಮೀರಿಲ್ಲ ಎಂದುಕೊಳ್ಳುವುದಾದರೆ ಮಕ್ಕಳ ಶಾಲೆಯ ಪಠ್ಯದಲ್ಲಿ ಬರುವ ಸಂತಾನೋತ್ಪತ್ತಿ ಕ್ರಿಯೆಯ ಸೂಕ್ಷ್ಮ ಸಂಗತಿಗಳನ್ನು ತಿಳಿಸಬೇಕು.
ಯಾವುದೇ ಮುಜುಗರ ಸಂಕೋಚಗಳಿಗೆ ಎಡೆ ಮಾಡಿಕೊಡದೆ ವೈಜ್ಞಾನಿಕವಾದ ಮಾಹಿತಿಯನ್ನು ನೀಡುವ ಮೂಲಕ ಮಕ್ಕಳಿಗೆ ಸರಿಯಾದ ದಾರಿ ತೋರಿಸಬೇಕು. ಆರೋಗ್ಯಕರ ವಿಷಯವನ್ನು ಅನಾರೋಗ್ಯಕರ ದಾರಿಯಲ್ಲಿ ಕಲಿಯುವುದನ್ನು ತಪ್ಪಿಸಬೇಕು.
———————————————–
ವೀಣಾ ಹೇಮಂತ್ ಗೌಡ ಪಾಟೀಲ್