ಮಾನವತೆಯಿಂದ ದೇವತ್ವದೆಡೆಗೆ…. ಬುದ್ಧನ ಮಹಾಯಾನ(ಬುದ್ಧ ಪೂರ್ಣಿಮೆಯ ನಿಮಿತ್ತ)ವೀಣಾ ಹೇಮಂತ್ ಗೌಡ ಪಾಟೀಲ್

Activity Log

ಆತ ಹುಟ್ಟಿದ್ದು ರಾಜವಂಶದಲ್ಲಿ. ಕೋಸಲ ರಾಜ್ಯವನ್ನು ಆಳುತ್ತಿದ್ದ ಶಾಖ್ಯ ವಂಶದ ಮಹಾರಾಜ ಶುದ್ಧೋದನ ಆತನ ತಂದೆ, ತಾಯಿ ಮಾಯಾದೇವಿ. ಈತನ ಮೂಲ ಹೆಸರು ಸಿದ್ದಾರ್ಥ ಗೌತಮ. ರಾಜ ಮನೆತನದಲ್ಲಿ ಹುಟ್ಟಿದ ಸಿದ್ದಾರ್ಥನ ಜಾತಕವನ್ನು ಪರಿಶೀಲಿಸಿದ ರಾಜ ಪುರೋಹಿತರು ಈತ ಮುಂದೆ ಸರ್ವ ಸಂಗ ಪರಿತ್ಯಾಗಿಯಾಗಿ ಜಗದೋದ್ಧಾರಕನಾಗುವ ಎಲ್ಲಾ ಲಕ್ಷಣಗಳನ್ನು ಹೊಂದಿರುವನು ಎಂದು ಹೇಳಿದರು. ಇದರಿಂದ ಚಿಂತಿತನಾದ ರಾಜನು ತನ್ನ ಮಗನಿಗೆ ಯಾವುದೇ ರೀತಿಯ ನೋವು ಸಂಕಟಗಳ ದೃಶ್ಯಾವಳಿಗಳು ಕಣ್ಣಿಗೆ ಬೀಳದಂತೆ ಅರಮನೆಯ ಚಿನ್ನದ ಪಂಜರದಲ್ಲಿ ಸುಖದ ಸುಪ್ಪತ್ತಿಗೆಯ ಮೇಲೆ ಬೆಳೆಸಿದನು. ಒಳ್ಳೆಯ ವಿದ್ಯಾಭ್ಯಾಸವನ್ನು ಕೊಡಿಸಿದನು. ಪ್ರಾಪ್ತ ವಯಸ್ಕನಾದಾಗ ಯಶೋಧರೆ ಎಂಬ ಕನ್ಯಾಮಣಿಯೊಂದಿಗೆ ವಿವಾಹವನ್ನು ಮಾಡಿದನು. ಆತನ ದಾಂಪತ್ಯದ ಫಲವಾಗಿ ಓರ್ವ ಪುತ್ರ ರಾಹುಲನನ್ನು ಪಡೆದನು. ಇಷ್ಟಕ್ಕೆ ಮುಗಿಯಲಿಲ್ಲ ಆತನ ಜೀವನ ಯಾನ…. ಇಲ್ಲಿಂದ ಆರಂಭವಾಯಿತು ಬುದ್ಧನ ಮಹಾ…ಗಮನ.

ಎಷ್ಟೇ ಅರಮನೆಯ ಕಣ್ಕಾವಲಿನಲ್ಲಿ ಮಗನನ್ನು ಮಹಾರಾಜನು ಬೆಳೆಸಿದರೂ ಒಂದು ದಿನ ರಥದಲ್ಲಿ ಕುಳಿತು ಪ್ರಯಾಣಿಸುವಾಗ ರಾಜಕುಮಾರ ಸಿದ್ದಾರ್ಥನು ಓರ್ವ ಅತ್ಯಂತ ಕ್ಷೀಣಿಸಿದ ವೃದ್ಧನನ್ನು, ಓರ್ವ ರೋಗಿಯನ್ನು ಮತ್ತು ಒಂದು ಶವಯಾತ್ರೆಯನ್ನು ಕಂಡು ಅವರ್ಯಾರೆಂದು ತನ್ನ ಸಾರಥಿ ಚೆನ್ನನನ್ನು ಕೇಳಿದನು. ಅವರ ಕುರಿತು ಸಾರಥಿ ಚೆನ್ನ ನೀಡಿದ ವಿವರಣೆಯಿಂದ ವಿಚಲಿತನಾದ ಜನನ ಮರಣಗಳ ಚಕ್ರದ ಕುರಿತು ತನಗಿದ್ದ ಸಂದೇಹಗಳನ್ನು ಓರ್ವ ಸನ್ಯಾಸಿಯೊಂದಿಗೆ ಮಾತನಾಡಿ ಬಗೆಹರಿಸಿಕೊಂಡನು.

ಯಾನದ ಪ್ರಥಮ ಪಾದ….ಜರಾ ಮರಣ ಮತ್ತು ದುಃಖಗಳ ಕಾರಣವನ್ನು ಹುಡುಕಲು ನಟ್ಟಿರುಳಿನಲಿ ಅರಮನೆಯನ್ನು ತೊರೆದ ಗೌತಮನು ತಪೋವನಕ್ಕೆ ಬಂದು ಅಲ್ಲಿನ ಸಾಧಕರ ಬಳಿ ತಪೋವನದ ನಿಯಮಗಳನ್ನು ಅರಿತು ಮಗಧ ದೇಶದೆಡೆಗೆ ಪಯಣ ಬೆಳೆಸಿದ.

ಯಾನದ ದ್ವಿತೀಯ ಪಾದ… ಕಾಡು ಮೇಡನ್ನದೆ ಬರಿಗಾಲಿನಲ್ಲಿ ನಡೆದ ಗೌತಮ, ಹಸಿವಾದಾಗ ಭಿಕ್ಷಾನ್ನಗಳಿಗೆ ಕೈಯೊಡ್ಡಿದ. ರಾಜಗೃಹವನ್ನು ತೊರೆದಾಗ 29ರ ಹರೆಯದವನಾದ ಗೌತಮನು ಸತತವಾಗಿ ಸಾಧನೆಯ ಹಾದಿಯಲ್ಲಿ ಸಾಗಿ ಅಷ್ಟಕ್ಕೂ ತೃಪ್ತನಾಗದೆ ನಿರಾಹಾರ, ಕಾಯಕ್ಲೇಶಗಳಲ್ಲಿ ತೊಡಗಿ ತನು ಮನವನ್ನು ದಂಡಿಸಿ ಇದಾವುದೂ ಸಾಧನೆಗೆ ಸಹಾಯಕವಲ್ಲ ಎಂಬುದನ್ನು ಅರಿತನು.

ಯಾನದ ಮೂರನೆಯ ಪಾದ… ಬೋಧಿವೃಕ್ಷದ ಕೆಳಗೆ ಪದ್ಮಾಸನ ಹಾಕಿ ಕುಳಿತ ಗೌತಮನಿಗೆ ವೈಶಾಖ ಹುಣ್ಣಿಮೆಯ ದಿನ  ಸಂಕಲ್ಪ ಸಿದ್ಧಿಯಾಯಿತು. ಸೂರ್ಯೋದಯವಾಗುವುದರೊಳಗೆ ಸಿದ್ಧಾರ್ಥ ನಾಲ್ಕುಜಾವದ ಅನುಭವ ಪಡೆದು ಜ್ಞಾನಯೋಗಿಯಾದನು. ಬುದ್ಧನಾದನು. ಬುದ್ಧ ಎಂದರೆ ‘ಜ್ಞಾನದ ಬೆಳಕು’ ಎಂದರ್ಥ ಆ ನಾಲ್ಕು ಜಾವದಲ್ಲಿನ ಅನುಭವಗಳೆಂದರೆ-

ಜನ್ಮಾಂತರಗಳ ಅರಿಯುವಿಕೆ,

ನಿತ್ಯಾನಿತ್ಯ ವಸ್ತುಗಳ ವಿವೇಕೋದಯ,

ಜರಾಮರಣಗಳ ದುಃಖಕ್ಕೆ ಕ್ಷಣಿಕ ವಸ್ತುಗಳ ತೃಷೆಯೇ ಕಾರಣ,

ಆಧ್ಯಾತ್ಮ ತತ್ತ್ವದ ಸಾಕ್ಷಾತ್ಕಾರ.
ಇದುವೇ ಆತನ ಜೀವನದ …..ಮಹಾ ಗಮನ.

ಸಾಧನೆಯ ನಾಲ್ಕನೇ ಮಹಾಪಾದ…ಬುದ್ಧನ
ಸಹನೆ,ಕರುಣೆ ಮತ್ತು ಪ್ರೀತಿಯುತ ಮಾತುಗಳು ಜನರನ್ನು ಬದಲಾಯಿಸಿದವು. ಬುದ್ಧ ಸ್ವತಃ ತನ್ನ ಜೀವನದಲ್ಲಿ ತಾನು ಹೇಳುತ್ತಿದ್ದ ಎಲ್ಲವನ್ನೂ ಅಳವಡಿಸಿಕೊಂಡನು. ಹಸಿದು ಬಂದ ಮಕ್ಕಳಿಗೆ ಊಟ ಕೊಡದೆ ಮಕ್ಕಳಿಗಾಗಿ ಹಂಬಲಿಸಿದ ಮಹಿಳೆಗೆ ತಿಳಿಸಿ ಬುದ್ಧಿ ಹೇಳಿದ ಬುದ್ಧ, ತನ್ನ ಪುಟ್ಟ ಕಂದನನ್ನು ಕಳೆದುಕೊಂಡ ತಾಯಿಗೆ ಸಾವಿಲ್ಲದ ಮನೆಯ ಸಾಸಿವೆ ತರಲು ಹೇಳಿದ ಬುದ್ಧ, ಬೇಟೆಗಾರನಿಂದ ಗಾಯಗೊಂಡ ಹಂಸವನ್ನು ಸಂರಕ್ಷಿಸಿದ ಬುದ್ಧ, ಕಡು ಕ್ರೂರಿ ಅಂಗುಲಿಮಾಲನ ಪರಿವರ್ತಿಸಿದ ಮಹಾ ಜ್ಞಾನಿ ಬುದ್ಧ, ತನ್ನ ಮೇಲೆ ಅತ್ಯಾಚಾರ ಆರೋಪ ಹೊರಿಸಿದ ಮಹಿಳೆಗೆ ಜ್ಞಾನೋದಯವನ್ನುಂಟು ಮಾಡಿದ ಬುದ್ಧ, ಪ್ರಾಣಿ ಹಿಂಸೆ, ನರಬಲಿ, ಸಾಮ್ರಾಜ್ಯ ವಿಸ್ತರಣೆಯ ದಾಹಗಳನ್ನು ನಿವಾರಿಸಿದ ಬುದ್ದ…..ಹೀಗೆ ಪಾರಸ ಮಣಿ ಸೋಕಿದ ಎಲ್ಲವೂ ಚಿನ್ನವಾಗುವಂತೆ ಬುದ್ಧನ ಪ್ರವಚನಗಳನ್ನು ಆಲಿಸಿದ ಜನರು ತಮ್ಮ ಅಜ್ಞಾನ, ವಿಸ್ಮೃತಿ, ಮೌಡ್ಯಗಳನ್ನು ಕಳೆದುಕೊಂಡು ಶಾಂತಿ, ಸಹನೆ, ಸಹಬಾಳ್ವೆ, ಸಹೋದರತ್ವ ಭಾವಗಳನ್ನು ತಮ್ಮದಾಗಿಸಿಕೊಂಡರು.
ಜೀವನ ಯಶಸ್ವಿಯಾಗಿ ಸಾಕಾರಗೊಳ್ಳಬೇಕಾದರೆ ಎಂಟು ಸನ್ಮಾರ್ಗಗಳಾದ ಸದ್ಭಾವನೆ, ಸತ್ಸಂಕಲ್ಪ, ಸದ್ವಚನ, ಸದ್ವರ್ತನೆ, ಸತ್‌ಶುದ್ಧಿ, ಸದಾಲೋಚನೆ, ಸದಾಂತರ್ಯ ಮತ್ತು ಸದಾಮೋದ ಎಂಬ ಎಂಟು ಸನ್ಮಾರ್ಗಗಳ ಪಾಲಿಸುವಂತೆ ಹೇಳಿರುವ ಬುದ್ಧ ಈ ಮೂಲಕ ಜೀವನದ ಯಶಸ್ಸಿನ ಮೆಟ್ಟಿಲುಗಳನ್ನು ಸುಲಭವಾಗಿ ಹತ್ತಬಹುದು ಎನ್ನುತ್ತಾನೆ.

ನಾವು ನಡೆಯುವ ದಾರಿ ಸರಿಯಾಗಿದ್ದರೆ, ನಾವು ಮಾಡುವ ಕಾರ್ಯ ಸತ್ಯ ಶುದ್ಧವಾಗಿದ್ದರೆ ಸಾಧನೆಯ ಶಿಖರವೇರಲು ನಮಗೆ ಯಾವುದೇ ಅಡೆತಡೆಗಳು ಉಂಟಾಗಲಾರದು ಎಂಬುದು ಬುದ್ಧನ ಬೋಧನೆಯ ಸಾರ. ಅಹಿಂಸೆಯನ್ನು ಪ್ರತಿಪಾದಿಸಿದ ಬುದ್ಧ ದಾನ ಮಾಡುವುದು, ಸತ್ಯ ಬೋಧನೆ, ಮದ್ಯಪಾನ ಮಾಡದಿರುವುದು ಹಾಗೂ ಶೀಲವಂತರಾಗಿ ಬದುಕುವಂತೆ ಕರೆ ನೀಡಿದನು. ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಈ ಪಂಚಶೀಲಗಳನ್ನು ಅಳವಡಿಸಿಕೊಂಡರೆ ಈ ಸಮಾಜ ಸುಖ, ಶಾಂತಿ, ನೆಮ್ಮದಿಯಿಂದ ಇರಲು ಸಾಧ್ಯವಿದೆ ಎನ್ನುತ್ತಾನೆ.

ಬುದ್ಧ ಓರ್ವ ಐತಿಹಾಸಿಕ ಪುರುಷ. ಇಂದಿನ ನೇಪಾಳ ದೇಶದಲ್ಲಿರುವ ಲುಂಬಿನಿವನದಲ್ಲಿ ಜನಿಸಿ, ಬುದ್ಧ ಗಯಾ ಎಂದು ಹೆಸರಾದ ಗಯಾದಲ್ಲಿ ಜ್ಞಾನೋದಯ ಪಡೆದು ಸಾರಾನಾಥದಲ್ಲಿ ಮೊದಲ ಪ್ರವಚನ ನೀಡಿದನು.
ಬುದ್ಧನಿಗೆ ಜ್ಞಾನೋದಯವಾದ ದಿನ, ಹುಟ್ಟಿದ ದಿನ ಹಾಗೂ ನಿರ್ವಾಣ ಹೊಂದಿದ ದಿನವನ್ನು ಭಾರತಾದ್ಯಂತ ‘ಬುದ್ಧ ಪೂರ್ಣಿಮಾ’ ಎಂದು ಆಚರಿಸಲಾಗುತ್ತದೆ. ಇದನ್ನು ಕೆಲವು ದೇಶಗಳ ಬುದ್ಧನ ಅನುಯಾಯಿಗಳು ಈ ದಿನವನ್ನು ವೆಸಕ ಎಂದು ಕರೆಯುತ್ತಾರೆ. ವೆಸೆಕ ಎಂದರೆ ಎಪ್ರಿಲ್‌- ಮೇ ತಿಂಗಳ ಪವಿತ್ರ ದಿನ ಎಂದರ್ಥ.
ಹೀಗೆ ಬುದ್ದ ಮನುಷ್ಯನಾಗಿ ಹುಟ್ಟಿ ತನ್ನ ಆಂತರಿಕ ಯೋಚನೆಗಳಿಂದ ಜೀವನದ ಒಂದೊಂದೇ ಮೆಟ್ಟಿಲುಗಳನ್ನು ಅತ್ಯಂತ ಧ್ಯಾನಪೂರ್ವಕವಾಗಿ ಕೆತ್ತಿ… ಮಾನವತೆಯಿಂದ ದೈವತ್ವದೆಡೆಗೆ ಸಾಗಿದ್ದಾನೆ ಇಂದು ಜಗತ್ತಿನಲ್ಲಿ ಸಹಸ್ರಾರು ವರ್ಷಗಳ ಹಿಂದೆ ಬುದ್ಧನು ನೀಡಿದ ಸಂದೇಶಗಳೇ ಇಂದಿಗೂ ಪಸರಿಸಿವೆ. ಬುದ್ಧನ ಜೀವನವೇ ಸಂದೇಶವಾಗಿ ಪರಿಣಮಿಸಿದೆ…. ಬುದ್ಧನು ಸಾರಿದ ಸಂದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ವಿಶ್ವ ಬಂಧುತ್ವದ ನೆಲೆಯಲ್ಲಿ ಬಾಳಿ ಬದುಕೋಣ … ಓಂ ನಮೋ ಬುದ್ಧಾಯ.


One thought on “ಮಾನವತೆಯಿಂದ ದೇವತ್ವದೆಡೆಗೆ…. ಬುದ್ಧನ ಮಹಾಯಾನ(ಬುದ್ಧ ಪೂರ್ಣಿಮೆಯ ನಿಮಿತ್ತ)ವೀಣಾ ಹೇಮಂತ್ ಗೌಡ ಪಾಟೀಲ್

Leave a Reply

Back To Top