ಲೇಖನ ಸಂಗಾತಿ
ವೀಣಾ ಹೇಮಂತ್ ಗೌಡ
“ಒಂದೇ ಸೃಷ್ಟಿ ಹಲವು ದೃಷ್ಟಿ”
ಅದೊಂದು ಅ೦ಧ ಮಕ್ಕಳ ಗುಂಪನ್ನು ಆನೆಯ ಮುಂದೆ ತಂದು ನಿಲ್ಲಿಸಿ ಆನೆಯ ಕುರಿತು ತಮಗೆ ತಿಳಿದಂತೆ ವಿವರಿಸಲು ಕೋರಿದರು.ಆನೆಯ ಮುಂದೆ ನಿಂತ ಮಗು ಆನೆಯ ಸೊಂಡಿಲನ್ನು ಮುಟ್ಟಿ ಬಲಿಷ್ಠವಾದ ಅತಿ ಉದ್ದದ ಮೂಗು ಇದೆ ಆನೆಗೆ ಎಂದು ಹೇಳಿದ.ಕಿವಿಗಳನ್ನು ಮುಟ್ಟಿದವ ಮೊರದಂಥ ಕಿವಿಗಳಿವೆ ಎಂದು ಹೇಳಿದ ಹೊಟ್ಟೆಯ ಭಾಗವನ್ನು ಮುಟ್ಟಿದವ ಬೆಟ್ಟದಂಥ ಆನೆ ಇದೆ ಎಂದು ಹೇಳಿದ ಬಾಲದ ಬಳಿ ಮುಟ್ಟಿದವ ಪುಟ್ಟ ಬಾಲ ಇಷ್ಟು ದೊಡ್ಡ ಆನೆಗೆ ಇರುತ್ತದೆಯೇ? ಎಂದು ಕೇಳಿದ.ಒಟ್ಟಿನಲ್ಲಿ ಎಲ್ಲ ಮಕ್ಕಳು ಅವರವರಿಗೆ ತೋಚಿದಂತೆ ಆನೆಯನ್ನು ವರ್ಣಿಸಿದರು.ಯಾರದ್ದೂ ತಪ್ಪಿಲ್ಲ. ಇಲ್ಲಿ ಆನೆ ಎಂಬ ಸೃಷ್ಟಿ ಒಂದೇ ಆದರೆ ನೋಡುತ್ತಿರುವ ಅಥವಾ ಅನುಭವ ಪಡೆದವರ ದೃಷ್ಟಿ ಬೇರೆ ಬೇರೆ.
ಪ್ರಸ್ತುತ ರಾಜಕೀಯ ಪರಿಸ್ಥಿತಿಯೂ ಹೀಗೆಯೇ ಇದೆ.ಇತಿಹಾಸ…… ‘ಇತಿ’ ಎಂದರೆ ಹೀಗೆ. ಹಾಸ’ ಎಂದರೆ ಆಗಿರುವುದು.ಇತಿಹಾಸ ಎಂದರೆ ಈಗಾಗಲೇ ನಡೆದು ಹೋಗಿರುವುದು. ಯಾವುದು ನಡೆದುಹೋಗಿದೆಯೋ, ಯಾವುದನ್ನು ನಾವು ಬದಲಾಯಿಸಲು ಸಾಧ್ಯವಿಲ್ಲವೋ ಅದನ್ನು ಹಿಡಿದುಕೊಂಡು ಬಡಿದಾಡುವುದು ಯಾವ ಜಾಣತನದ ಲೆಕ್ಕ?? ತಮ್ಮ ತಮ್ಮ ರಾಜಕೀಯ ಲಾಭಕ್ಕಾಗಿ ಇತಿಹಾಸ ಸೇರಿದ ಹಲವಾರು ಐತಿಹಾಸಿಕ ವ್ಯಕ್ತಿಗಳನ್ನು ಹಿಡಿದು ಬಡಿದಾಡುತ್ತಿರುವುದು ಸರಿಯೇ ??ತಿಳಿ ನೀರಿನ ಕೊಳದಲ್ಲಿ ಕಲ್ಲೆಸದು ತರಂಗಗಳನ್ನು ಎಬ್ಬಿಸುವ ಕಿಡಿಗೇಡಿ ಮಕ್ಕಳಂತೆ ಆಗಿದೆ ಇವರ ಪರಿಸ್ಥಿತಿ.
ಹಾಗಾದರೆ ಇತಿಹಾಸವನ್ನು ಕೆದಕುವುದು ತಪ್ಪೇ ?ಖಂಡಿತ ತಪ್ಪಲ್ಲ.ಇತಿಹಾಸವನ್ನು ಕೆದಕಬೇಕು ಆದರೆ ಅದು ಸಮಾಜದ ಅಭಿವೃದ್ಧಿಗೆ ಪೂರಕವಾಗಿರಬೇಕೇ ಹೊರತು ಮಾರಕವಾಗಬಾರದು. ಅವು ಹಿಂದಿನ ಹಿರಿಯರು ಮಾಡಿಟ್ಟುಹೋದ ಒಳ್ಳೆಯ ಕೆಲಸಗಳನ್ನು ಮಾತ್ರ ಪರಿಗಣಿಸಿ ಕೆಟ್ಟದ್ದನ್ನು ಬಿಟ್ಟು ಬಿಡುವುದು ಒಳ್ಳೆಯದು.ಒಳ್ಳೆಯದು ನಮಗೆ ಯಾವ ರೀತಿ ನಡೆದುಕೊಳ್ಳಬೇಕು ಎಂಬುದಕ್ಕೆ ಪಾಠವಾದರೆ, ಕೆಟ್ಟದ್ದು ಯಾವುದನ್ನು ಮಾಡಬಾರದು ಎಂಬುದಕ್ಕೆ ಸಾಕ್ಷಿಯಾಗಿ ನಮ್ಮ ಅರಿವಿನಲ್ಲಿ ಉಳಿದು ಹೋಗಬೇಕು.
“ಉಳಿವಿಗಾಗಿ ಹೋರಾಟ” ಎಂಬ ಡಾರ್ವಿನ್ ವಾದದ ಪ್ರಕಾರ ಎಲ್ಲರೂ ತಮ್ಮ ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯದ ಉಳಿವಿಗಾಗಿ,ತಮ್ಮದೇ ದೃಷ್ಟಿಕೋನಗಳಿಂದಾಗಿ ಹಲವು ಬಾರಿ ನಿರ್ಧಾರಗಳನ್ನು ತೆಗೆದುಕೊಂಡಿರಬಹುದು. ಒಂದಿಡೀ ಸಮಷ್ಟಿಗೆ ಒಳ್ಳೆಯದಾಗುವುದಾದರೆ ಒಬ್ಬಿಬ್ಬರಿಗೆ ತೊಂದರೆಯಾದರೂ ಪರವಾಗಿಲ್ಲ ಎಂಬ ದೂರದೃಷ್ಟಿಯೂ ಈ ನಿರ್ಧಾರಗಳ ಹಿಂದಿನ ಕಾರಣವಾಗಿರಬಹುದು. ಕೆಲವೊಮ್ಮೆ ಆ ನಿರ್ಧಾರಗಳಿಂದ ತಪ್ಪು ಕಲ್ಪನೆಗಳು,ಅನಿರೀಕ್ಷಿತ ತಿರುವುಗಳು ಆಕಸ್ಮಿಕ ಘಟನೆಗಳು ಕೂಡ ನಡೆದಿರಬಹುದು.ಎಲ್ಲವೂ ಕಾಲಾಯತಸ್ಮೈನ್ನಮಃ. ಅಕಸ್ಮಾತ್ ಆ ಜಾಗದಲ್ಲಿ ನಾವೇ ಇದ್ದು ನಾವೇನು ಮಾಡಲು ಸಾಧ್ಯ ಎಂದರೆ ಬಹುಶಃ ನಾವು ಕೂಡ ಅವರ ನಿರ್ಧಾರಗಳನ್ನೇ ಅನುಮೋದಿಸಬೇಕಾದಂತಹ ಪರಿಸ್ಥಿತಿ ಇರುತ್ತಿತ್ತೇನೋ!!.
ಇಂತಹ ಸಮಯದಲ್ಲಿ ಈ ರೀತಿಯ ವಾದ ವಿವಾದಗಳು, ಸಾಧಕ ಬಾಧಕಗಳು, ಪೂರಕ ಚರ್ಚೆಗಳು ಜನರ ವೈಚಾರಿಕ ಪ್ರಜ್ಞೆಯನ್ನು ಜಾಗೃತಗೊಳಿಸುವಂತೆ ಇರಬೇಕೇ ಹೊರತು ಯಾವುದೇ ರೀತಿಯ ಆತುರದ , ಅತಾರ್ಕಿಕ ,ಸಾಮಾಜಿಕ ವಿಷಮತೆಯನ್ನು ಹರಡುವ, ಗಲಭೆ ದೊಂಬಿಗಳಿಗೆ ಕಾರಣವಾಗುವ ದೋಷಪೂರಿತ ಕ್ರಿಯೆಗಳಾಗಬಾರದು.
ಯಾವುದು ಆಗಬಾರದು ಎಂದುಕೊಂಡಿರುತ್ತೇವೆಯೋ ಅದು ಆಗಿಯೇ ಹೋಗಿದೆ, ಅದನ್ನು ಸರಿಪಡಿಸುವುದು ಅಸಾಧ್ಯ. ಆದರೆ ತಿಂಗಳುಗಳ, ವರ್ಷಗಳ, ದಶಕಗಳ ನಂತರ ಅದನ್ನೇ ಮತ್ತೆ ಮತ್ತೆ ಕೆದಕಿದರೆ ಎಲ್ಲರ ಕೈಗೆ ಸಿಗುವುದು ಕೇವಲ ಮಣ್ಣು ಮಾತ್ರ .ನಮ್ಮ ಹಿರಿಯರು ಹೇಳುತ್ತಾರಲ್ಲ ಗಂಧದೊಡನೆ ಗುದ್ದಾಡಿದರೆ ಗಂಧ ಸಿಗುವುದು ಸಗಣಿಯೊಂದಿಗೆ ಗುದ್ದಾಡಿದರೆ……. ದುರ್ಗಂಧ ಸಿಗುವುದು.ಆಯ್ಕೆ ನಮ್ಮದು .
ಸತ್ಯವೇ ನಮ್ಮ ತಾಯಿ ತಂದೆ ಸತ್ಯವೇ ನಮ್ಮ ಬಂಧು ಬಳಗ ಎಂದು ಹಾಡಿದ ಪುಣ್ಯಕೋಟಿಯ ನಾಡು ನಮ್ಮದು. ನ್ಯಾಯ, ನಿಷ್ಠುರತೆ, ಸತ್ಯ ಅಹಿಂಸೆಯ ಬೀಡು ನಮ್ಮದು.ಆದರೆ ಇದೆಲ್ಲವನ್ನು ಮರೆತು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದರೆ ಪ್ರಯೋಜನವೇನೂ ಇಲ್ಲ.
ಅತಿದೊಡ್ಡ ಲಂಚಗುಳಿ, ಭ್ರಷ್ಟ , ನೀತಿ ನಿಯಮಗಳನ್ನು ಗಾಳಿಗೆ ತೂರುವ ,ಸುಳ್ಳಿನ ಸರದಾರನಾದ ವ್ಯಕ್ತಿ ಕೂಡ ತನ್ನ ಮನೆಯಲ್ಲಿ ತನ್ನ ಮಕ್ಕಳಿಗೆ ಆದರ್ಶಗಳನ್ನು ಹೇಳಿಕೊಡುತ್ತಾನೆ.ಕಾರಣವಿಷ್ಟೆ ಸಾಮಾಜಿಕವಾಗಿ ಆತನೆಷ್ಟೇ ಸಭ್ಯತೆಯ ಮುಖವಾಡ ಹೊಂದಿದ್ದರೂ ಆತನ ಅಂತರಾಳದಲ್ಲಿ ತಪ್ಪಿತಸ್ಥ ಭಾವನೆ ಜಾಗೃತವಾಗಿರುತ್ತದೆ.ಯಾಕೆಂದರೆ ಸತ್ಯ ಧರ್ಮ,ದಯೆ, ಕರುಣೆ, ಭಕ್ತಿಯ ಶಕ್ತಿ ನ್ಯಾಯ,ನಿಷ್ಠೆ ಅಹಿಂಸೆ ಹೋರಾಟ ಇವೆಲ್ಲವೂ ವ್ಯಕ್ತಿಗೆ ಜನ್ಮಗತವಾಗಿ ದೊರೆತ ಸಂಸ್ಕಾರದ ಫಲ.ನಮ್ಮೆಲ್ಲರ ಶಾಲಾ ಕಾಲೇಜುಗಳಲ್ಲಿನ ಇವುಗಳನ್ನು ಸತತವಾಗಿ ಕೇಳಿ, ಹಾಡಿ , ಮಾಡಿ ಅನುಭವಿಸಿ ಪಡೆದಿರುವ ವಿದ್ಯೆಯಲ್ಲಿ ಅಂತರ್ಗತವಾಗಿರುವ ಶಕ್ತಿಗಳು ಇವುಗಳೇ!!
ಜನರಿಗಾಗಿ, ಜನಾಭಿವೃದ್ಧಿಗಾಗಿ ರಾಜಕೀಯವೇ ಹೊರತು, ರಾಜಕೀಯಕ್ಕಾಗಿ ಜನರಲ್ಲ.ಪ್ರಜ್ಞಾವಂತಿಕೆಯ ಕೊರತೆಯು ನಮ್ಮನ್ನು ಅಧೋಗತಿಗೆ ಎಳಸುತ್ತದೆ. ಒಬ್ಬರ ಕ್ಷುಲ್ಲಕ ಅಭಿಪ್ರಾಯ ಒಂದಿಡೀ ಸಮಷ್ಟಿಯ ಗುಂಪಿನ ಅಭಿಪ್ರಾಯವಲ್ಲ.ಹಾಗೆಯೇ ಸಾರ್ವತ್ರಿಕವಾಗಿ ಮಾತನಾಡುವಾಗ ಮನುಷ್ಯ ಹೆಚ್ಚು ಜಾಗರೂಕನಾಗಿರಬೇಕಾಗಿರುವುದು ಅಷ್ಟೇ ಅವಶ್ಯ.
ಪ್ರಸ್ತುತ ಸಮಾಜಕ್ಕೆ ಸುಸ್ಥಿರ ,ಆರೋಗ್ಯಕರ ,ಮೌಲ್ಯಯುತ ಮತ್ತು ಸ್ವಸ್ಥ ಜನಾಂಗದ ಅವಶ್ಯಕತೆ ಇದೆ.ನಮ್ಮ ಗುರಿ ಅಭಿವೃದ್ಧಿಯತ್ತ ಆದರೆ ಅದರ ಬೇರು ಆರೋಗ್ಯಯುತ ಸಮಾಜ.
ಮಹತ್ವದ ಅಧ್ಯಯನದ ಪ್ರಕಾರ ಅತಿ ಹೆಚ್ಚು ಸಂತಸದ ಪ್ರಮಾಣ ವನ್ನು(ಹ್ಯಾಪಿನೆಸ್ ಕೋಶಂಟ್ ) ಹೊಂದಿರುವ ಭೂತಾನ್ ರಾಜ್ಯದಲ್ಲಿ ಮೂಲಭೂತ ಸೌಕರ್ಯಗಳಿಗೆ(ನಾವು ಬಯಸುವ ) ಕೊರತೆಯಿದ್ದರೂ, ಭೌತಿಕ ಅವಶ್ಯಕತೆಗಳನ್ನು ಉಪೇಕ್ಷಿಸಿ ಉನ್ನತ ಪಾರಮಾರ್ಥಿಕ ಗುಣಾವಗುಣಗಳ ಜೊತೆ ಅವರು ಹೊಂದಾಣಿಕೆ ಮಾಡಿಕೊಂಡಿದ್ದಾರೆ.ಇರುವುದರಲ್ಲೇ ಸಂತಸವನ್ನು ಕಂಡುಕೊಂಡಿದ್ದಾರೆ .ಅತ್ಯಂತ ಕಡಿಮೆ ಅವಶ್ಯಕತೆಯಲ್ಲಿಯೇ ಅತಿ ಹೆಚ್ಚಿನ ನೆಮ್ಮದಿಯನ್ನು ಹುಡುಕಿಕೊಂಡಿದ್ದಾರೆ. ಎಲ್ಲ ವಿಷಯಗಳಲ್ಲಿಯೂ ಧನಾತ್ಮಕವಾದುದನ್ನು ಮಾತ್ರ ಅವರು ಆಯ್ಕೆ ಮಾಡಿಕೊಂಡಿದ್ದಾರೆ.ಆ ದೇಶ ಅಭಿವೃದ್ಧಿಯ ದೃಷ್ಟಿಯಲ್ಲಿ ನಮಗಿಂತ ಮಂಚೂಣಿಯಲ್ಲಿದೆ ಯಾಕೆಂದರೆ ಅತ್ಯಂತಹೆಚ್ಚಿನ ಸಂತಸ ಪ್ರಮಾಣ ಹೊಂದಿರುವ ದೇಶ ಆರೋಗ್ಯಕರ ಸಮಾಜವನ್ನು ಹೊಂದಿದೆ.
ನಮ್ಮ ಮನೆಯ ಮಗು ತನ್ನ ಮೈಯೆಲ್ಲಾ ಕೆಸರು ಮಾಡಿಕೊಂಡು ಬಂದರೆ ಪ್ರಾರಂಭದಲ್ಲಿ ಕೊಂಚ ಕಸಿವಿಸಿಯಿ೦ದ ಕೂಗಾಡಿದರೂ ಅನಿವಾರ್ಯವಾಗಿ ಆ ಮಗುವನ್ನು ಶುಚಿಗೊಳಿಸಿ ಅದರ ಮೈ ಒರೆಸಿ ಪೌಡರ್ ಹಾಕಿ ಮುದ್ದಾಡುವುದಿಲ್ಲವೇ?? ನಮ್ಮ ಅನಿಸಿಕೆಗಳು ಅಭಿಪ್ರಾಯಗಳು ನಮಗಿರುವ ಅನುಭವದ ಹಿನ್ನೆಲೆಯ ಮೇಲೆ ಬರುವಂಥವು ನಮ್ಮೆಲ್ಲರಿಗೂ ಬೇರೆಬೇರೆ ಅನುಭವಗಳು ಹಿನ್ನೆಲೆಗಳು ಇರುವುದರಿಂದ ದೃಷ್ಟಿಭೇದ ಸಾಮಾನ್ಯ. ಹಾಗೆಯೇ ನಮ್ಮ ಸುತ್ತಲಿನ ಸಮಾಜದ ಜನರ ಅಭಿಪ್ರಾಯಗಳು ಭೇದಗಳು ಏನೇ ಇರಲಿ, ಪರ ವಿರೋಧಗಳು ಹೇಗೇ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಅವುಗಳಲ್ಲಿನ ಧನಾತ್ಮಕವಾದುದನ್ನು ಮಾತ್ರ ಆಯ್ದುಕೊಳ್ಳುತ್ತಾ ಅದನ್ನೇ ಹಂಚುತ್ತಾ ದೃಷ್ಟಿ ಹಲವಾದರೂ ನೋಟ ಒಂದೇ ಎಂಬಂತೆ ಇರುವ ಸಮಾಜದ ಪರಿಕಲ್ಪನೆಯಲ್ಲಿ …….
——————-
ವೀಣಾ ಹೇಮಂತ್ ಗೌಡ ಪಾಟೀಲ್,
Good massage