ವಚನ ಸಂಗಾತಿ
ನಂರುಶಿ ಕಡೂರು
‘ಕೇತಲದೇವಿ – ೧’ ಲೇಖನ
ಹದ ಮಣ್ಣಲ್ಲದೆ ಮಡಕೆಯಾಗಲಾರದು
ವ್ರತಹೀನನ ಬೆರೆಯಲಾಗದು
ಬೆರೆದಡೆ ನರಕ ತಪ್ಪದು ನಾನೊಲ್ಲೆ ಬಲ್ಲೆನಾಗಿ ಕುಂಭೇಶ್ವರಾ
ವಚನವೆಂದರೆ ನಡೆ ನುಡಿಯ ಒಟ್ಟಾರೆ ಸಾರವೆಂದರ್ಥ. ಅದಕ್ಕಾಗಿ ನುಡಿದಂತೆ ನಡೆ ಇದೇ ಜನ್ಮ ಕಡೆ ಯೆಂದದ್ದು. ಶರಣರು ತಮ್ಮ ಕಾಯಕದಲ್ಲೇ ದೇವನ ಕಾಣುವಂತೆ ತಮ್ಮ ಲಂಬನೆಯ ಬದುಕಿನಲ್ಲಿ ದಕ್ಕಿದ ಅನುಭವಗಳ ಸತ್ಯ ದರ್ಶನವನು ಬಿಟ್ಟು ಹುಸಿಯನ್ನೆಂದೂ ದಾಖಲಿಸಲಿಲ್ಲ. ಈ ವಚನಗಳು ತಾವು ಕಂಡುಂಡˌ ತಮಗೆ ದಕ್ಕಿದ ವಸ್ತುನಿಷ್ಠ ಭಾವಗಳ ಸೃಷ್ಟಿಯೆಂದರೆ ಸುಳ್ಳಲ್ಲ. ತಮ್ಮ ಕಾಯಕದಿಂದಲೇ ಜಗವ ನೋಡಿ, ಲೋಕದ ಡೊಂಕ ತಿದ್ದುವಲ್ಲಿ ಸಫಲರಾದ ಶರಣರುˌ ಈ ಕಾರಣಕ್ಕೆ ಕಾಯಕವೇ ಕೈಲಾಸವೆಂದರು. ಭಕ್ತಿಯಲ್ಲಿ ಸರ್ವೋತ್ತಮನಾಗಿ ಬಿಂಬಿಸಲ್ಪಟ್ಟಿರುವ ಕುಂಬಾರ ಗುಂಡಯ್ಯನ ಪತ್ನಿ ಕೇತಲದೇವಿ ಈ ವಚನದ ಮೂಲಕ ತನ್ನ ಕಾಯಕದ ಮಹತ್ವವನ್ನು ಸಾರುತ್ತಾ… ಗಂಡಿನ ಆಲಸ್ಯ ಮತ್ತು ಬೇಜವಬ್ದಾರಿತನ ಇವೆರಡಕ್ಕೂ ಹರಿತ ಚಾಟಿ ಬೀಸಿದ್ದಾರೆ.
ಕುಂಬಾರಿಕೆಗೆ ಬಳಸುವ ಮಣ್ಣು ಇಂತಿಷ್ಟೇ ಪ್ರಮಾಣದಲ್ಲಿ ತೇವಗೊಂಡಿರಬೇಕು. ಯಾವುದೇ ರೀತಿಯ ಆಕಾರಕ್ಕೆ ಎಳೆದು ತರುವಷ್ಟು ಹದವಾಗಿರಬೇಕು. ಮೃದುತ್ವ ಮೈದಾಳಿ ಸ್ಪರ್ಷಿಸಿದ ಕೈಗೆ ಆಕಾರಕ್ಕೆ ಸಿದ್ದವೆಂಬ ಸೂಚನೆ ನೀಡುವಂತಿರಬೇಕು. ಈ ಎಲ್ಲಾ ಗುಣವಿಶೇಷಗಳು ಕುಂಬಾರಿಕೆ ಮಾಡುವ ನುರಿತ ಕಾಯಕಯೋಗಿಗೆ ಆ ಕ್ಷಣಕ್ಕೆ ತಿಳಿದುಬಿಡುತ್ತದೆ. ಇದು ಅನುಭವದಿಂದ ಸಾಧಿಸುವ ಕಾಯಕ. ಈಯೆಲ್ಲಾ ಅಂಶಗಳ ಕೊರೆತೆ ಇದ್ದರೆ ಅಂಥಹ ಮಣ್ಣು ಗಟ್ಟಿಯಾಗಿ ಸುಂದರ ಆಕಾರ ಪಡೆಯದೇ ಬಿರುಕು ಬಿಡುವುದು, ಇದ್ದಕ್ಕಿದಂತೆ ಸಿಡಿಯುವುದು, ಒಂದೊಮ್ಮೆ ತಿಳಿಯಾದರೆ ತಿಗರಿಯ ಮೇಲಿಂದ ತೆಗೆದ ತಕ್ಷಣ ಅಲ್ಲಿಯೇ ಕುಸಿದು ಆಕಾರ ಕಳೆದುಕೊಳ್ಳುತ್ತದೆ. ಶುದ್ಧ ಆಕಾರ ಹೊಂದದ್ದನ್ನ ಆವಿಗೆಗೆ ಅಣಿಗೊಳಿಸಿ ಬೇಯಿಸುವಾಗ ಬೆಂಕಿ ಮತ್ತು ತಾಪದ ಪ್ರಮಾಣ ಏರುಪೇರಾಗಿ ಮಡಕೆಗಳು ಖಂಡಿತವಾಗಿ ಒಡೆಯುತ್ತವೆ. ಅಂತೆಯೇ ಬದುಕು ಕೂಡ.
ಅದೇ ರೀತಿ ನಮ್ಮಲ್ಲಿ ಪರಿಪಕ್ವವಾದ ಭಕ್ತಿ ಇಲ್ಲವಾದರೆ ನಂಬಿದ ದೈವನಲ್ಲಿ ಲೀನವಾಗುವುದಾದರೂ ಹೇಗೆ? ನಮ್ಮೊಳಗಿನ ಅರಿಷಡ್ವರ್ಗಗಳನ್ನು ಬಿಟ್ಟು, ಪಂಚಚಾರಗಳನ್ನು ತುಂಬಿಕೊಂಡು, ಷಟ್ಸ್ತಲಗಳನ್ನು ಹಂತ ಹಂತವಾಗಿ ಮುಟ್ಟಿದಾಗ ಮಾತ್ರ ಮುಕ್ತಿ ದೊರೆಯುತ್ತದೆ. ಇವುಗಳನ್ನು ಪಡೆಯಲು ಮಡಕೆ ಮಾಡುವ ಮಣ್ಣು ಹದಮಾಡಲು ನಡೆಯುವ ಪ್ರಕ್ರಿಯೇಗಳು ನಮ್ಮೊಳಗೆ ನಡೆದಾಗ ಮಾತ್ರ ಮಡಕೆಯಂತೆ ಜೀವನ ರೂಪುಗೊಳ್ಳುತ್ತದೆ. “ಕುಂಭದಲ್ಲಿ ಅಮೃತವನ್ನು ಇರಿಸಿದಂತೆ ವಿಧ್ವತ್ತ್ ಮತ್ತು ಭಕ್ತಿ ಮನುಷ್ಯನೆಂಬ ಘಟದಲ್ಲಿ ತುಂಬಿಕೊಳ್ಳುತ್ತದೆ”.
ಈ ಕಾರಣಕ್ಕಾಗಿ ಅನುಭಾವಿಗಳು ಮಡಿಕೆಯನ್ನ ಮಾನವನ ಶರೀರಕ್ಕೆ ಹೋಲಿಸಿ ಅನೇಕ ತತ್ವಪದಗಳನ್ನು ಹೆಣೆದಿದ್ದಾರೆ. ಈ ಸಾಲಿನಲ್ಲಿ
ಶಿಶುನಾಳ ಶರೀಫರು ವಿಶಿಷ್ಟವಾಗಿ ನಿಲ್ಲುತ್ತಾರೆ. ಮನುಷ್ಯನ ದೇಹ ಒಂಬತ್ತು ತೂತಿನ ಕೊಡವೆಂದು ಮಣ್ಣಿನ ಮಡಿಕೆಗೆ ಹೋಲಿಸಿದ್ದಾರೆ ಮಣ್ಣಮಡಿಕೆ ಮತ್ತು ಮನುಜ ಬದುಕು ಭಿನ್ನವಲ್ಲವೆಂಬುದು ಈ ತತ್ವದ ತಾತ್ವಿಕ ತಿರುಳು.
ಉದ್ಯೋಗಂ ಪುರುಷ ಲಕ್ಷಣಂ ಎಂಬ ನುಡಿಯಂತೆˌ ಮನುಷ್ಯನಾದವನು ಯಾವುದಾದರೂ ಒಂದು ಕೆಲಸವನ್ನು ಮಾಡಿ, ಸ್ವಾವಲಂಬಿಯಾಗಿ ಬದುಕುತ್ತಾ ತನ್ನ ಜವಬ್ದಾರಿಗಳನ್ನು ನಿಭಾಯಿಸುತ್ತಾ ಜೀವನ ನಡೆಸದೇ, ಉಂಡಾಡಿ ಗುಂಡನಂತೆ ಅಲೆದು ಹೆತ್ತವರಿಗೆ ಮತ್ತು ಸಮಾಜಕ್ಕೆ ಹೊರೆಯಾದರೆ ಆ ಬದುಕಿಗೆ ಅರ್ಥವಿದೆಯೇ ಎಂದು ಹೇಳುವ ವಚನಕಾರರು ಕಾಯಕದಲ್ಲಿ ದೇವರನ್ನು ಕಾಣುವ ಸಂತರಾಗಿದ್ದರು. ಹೀಗಾಗಿ ಜಾತಿ ಮತಧರ್ಮದ ಹಂಗಿಲ್ಲದ ಕಾಯಕ ಸಮಾಜದ ನಿರ್ಮಾಣದ ಕನಸುಕಂಡ ವಚನಗಾರ್ತಿ ಅದಕ್ಕಾಗಿಯೇ ಹದವಲ್ಲದ ಮಣ್ಣು ಆಕಾರಕ್ಕೆ ಸಿದ್ಧವಾಗದು, ಕೆಲಸಮಾಡದ ಮನುಜ ಬದುಕು ಮತ್ತು ನಾವು ನಂಬಿದ ದೈವದಲ್ಲಿ ಐಕ್ಯವಾಗುವುದು ಮಾನವನ ಜೀವನಕ್ಕಷ್ಟೇ ಹೊಂದುವುದಿಲ್ಲ, ಆಧ್ಯಾತ್ಮದ ದೃಷ್ಟಿಯಲ್ಲಿ ನೋಡುವುದಾದರೆ, ಮಾನವರು ಶರಣರಂತೆ ಒಂದು ವ್ರತವನ್ನು ಅನುಸರಿಸಲು ಸಾಧ್ಯವಾಗದವರನ್ನು ಆ ದೇವರು ಹೇಗೆ ತಾನೇ ಅಪ್ಪಿಕೊಳ್ಳುವನು? ತನ್ನದೇ ನೀತಿ ನಿಯಮಗಳನ್ನು ಅನುಸರಿಸಿ, ಬೇರೆಯವರಿಗೆ ತೊಂದರೆಯಾಗದಂತೆ ನಮ್ಮ ವ್ರತವನ್ನು ಪ್ರತಿದಿನ ನಡೆಸಿಕೊಂಡು ಬಂದಾಗ ಮಾತ್ರ ನಾವು ನಂಬಿದ ಲಿಂಗಗಳಲ್ಲಿ ಐಕ್ಯವಾಗಬಹುದು ಎಂದು ಹೇಳುತ್ತಾ ಕಾಯಕ ಶ್ರೇಷ್ಠ ಬದುಕಿಗಾಗಿ ತನ್ನ ಅಂಕಿತ ದೇವ ಕುಂಭೇಶ್ವರನಲ್ಲಿ ಮೊರೆಯಿಟ್ಟಿದ್ದನ್ನ ಮೇಲಿನ ವಚನ ದೃಢೀಕರಿಸುತ್ತದೆ.
ನಂರುಶಿ ಕಡೂರು