ಬಿಸಿಲೆಂದರೇ ನಮ್ಮ ಬದುಕಿಗೆ ಬೆವರ ಪರಿಮಳ…ಕಾರ್ಮಿಕ ದಿನದ ವಿಶೇಷ ಬರಹ-ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ವಯಸ್ಸು 60 ರಿಂದ 65 ರ ಗಡಿ.  ಹಣೆಯ ತುಂಬಾ ಬೆವರಿನ ಹನಿಗಳು ಸಾಲು ಸಾಲಾಗಿ ಮೆತ್ತಿಕೊಂಡಿವೆ. ಒಂದೊಂದಾಗಿ ತಟ್ ತಟ್ ಎಂದು ಭೂಮಿಗೆ ಬೀಳುತ್ತವೆ.

 ಆಕೆ ಹಣ್ಣು ಹಣ್ಣಾದ ಮುದುಕಿ ಹಣ್ಣುಗಳನ್ನು ಮಾರುಕಟ್ಟೆಯ ಮಧ್ಯದಲ್ಲಿ ಇಟ್ಟುಕೊಂಡು ಮಾರುತ್ತಿದಾಳೆ. ಉರಿಯುವ ಬಿಸಿಲಿಗೆ ಹಣೆಯ ಬೆವರ ಹನಿಗಳು ಒಂದೊಂದಾಗಿ ಉದುರುತ್ತಾ… ಬದುಕಿನ ತುತ್ತು ಅನ್ನಕ್ಕಾಗಿ ಭೂಮಿಗೆ ಬೀಳುತ್ತವೆ.

 ಮೇಲಿನ ಎರಡು ಸನ್ನಿವೇಶಗಳು ಬದುಕಿನ ಅನಿವಾರ್ಯತೆಗಳ ದುಡಿಮೆಯಲ್ಲಿ ದುಡಿಯುವ ಜೀವಿಗಳ ಬದುಕಿನ ಆಯಾಮಗಳನ್ನು ನಮ್ಮ ಕಣ್ಣೆದುರು ತೆರೆದಿಡುತ್ತವೆ.

 ಬೇಸಿಗೆ ಬಂದಿತಂದರೆ… ಕೆಲವರಿಗೆ ವಿರಾಮದ ಕಾಲ..!  ಪ್ರವಾಸದ ಕಾಲ…! ವಿಶ್ರಾಂತಿಯ ಕಾಲ…!!  ಇನ್ನು ಕೆಲವರಿಗೆ ವಿದೇಶಕ್ಕೆ ಹಾರಿಕೊಂಡು ಹೋಗಿ ಮೋಜು ಮಸ್ತಿ ಮಜಾ ಮಾಡುವ ಕಾಲಘಟ್ಟದಲ್ಲಿ ಇರುತ್ತಾರೆ. ಬೇಸಿಗೆ ಕೆಲವರಿಗೆ ಸಂಭ್ರಮದ ಕ್ಷಣಗಳನ್ನು ಕಳೆಯುವ ಕಾಲವಾದರೆ, ಇನ್ನೂ ಕೆಲವರಿಗೆ ಬೇಸಿಗೆಯ ಬಿಸಿಲಿನ ಬೆವರಿನ ಹನಿಗಳನ್ನು ಹರಿಸುತ್ತಾ ಬದುಕನ್ನು ಕಟ್ಟಿಕೊಳ್ಳಲೇಬೇಕು. ತುತ್ತನ್ನಕ್ಕಾಗಿ, ತುಂಡು ವಸತಿಗಾಗಿ ಬದುಕನ್ನು ಕಟ್ಟಿಕೊಳ್ಳುವಾಗ ಬೇಸಿಗೆಕಾಲ, ಚಳಿಗಾಲ, ಮಳೆಗಾಲ ಯಾವುದು ಇವರಿಗೆ ಲೆಕ್ಕಕ್ಕೆ ಬರುವುದಿಲ್ಲ.

 ಬೇಸಿಗೆ ಬಿಸಿಲೆಂದರೆ ಸುಡುವ ಕೆಂಡದ ಉಂಡೆ..!! ಪ್ರಸ್ತುತ ದಿನಗಳಲ್ಲಿ ಎರಡು ವರ್ಷಗಳಿಂದ ಮಳೆಬಾರದೆ ಹೋಗಿರುವುದರಿಂದ ಬಿಸಿಲಿನ ಪ್ರಖರತೆ ಹೇಳತೀರದು.  40 ರಿಂದ 45 ಡಿಗ್ರಿವರೆಗೆ ಬಿಸಿಲಿನ ತೀವ್ರತೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ದುಡಿಯದೆ ಹೋದರೆ ಹೊಟ್ಟೆಗೆ ಅನ್ನ ಸಿಗದ ಜನರು ಹಲವರು.

 ಕಾಲಡಿಯ ಬಿಸಿಲು ಕಾಲಿನ ಪಾದದ ಚರ್ಮವನ್ನು ಸುಟ್ಟು ಹಾಕುತ್ತದೆ. ಚರ್ಮ ಸುಲಿದುಬಿಡುವಷ್ಟು ಬಿಸಿಲು…!!  ತಲೆಯ ಮೇಲಿನ ಬಿಸಿಲು ನೆತ್ತಿಯನ್ನು ಸುಡುತ್ತಾ, ನಮ್ಮ ದೇಹವನ್ನು ತಿಂದು ಹಾಕುತ್ತದೆ.  ಆದರೆ ಬದುಕನ್ನು ಕಟ್ಟಿಕೊಳ್ಳಲೇಬೇಕಲ್ಲವೇ…?  ದಿನಗೂಲಿ, ಕೃಷಿಕಾರ್ಮಿಕ, ರೈತ, ವ್ಯಾಪಾರಿ… ಎಲ್ಲರೂ ತಮ್ಮ ತಮ್ಮ ಬದುಕನ್ನು ಕಟ್ಟಿಕೊಳ್ಳುವಾಗ,  ಬಿಸಿಲಿನ ಬೇಗೆಯನ್ನು ಎಣಿಸುತ್ತ ಕುಳಿತರೆ, ಹೊಟ್ಟೆ ತುಂಬುವದಾದರೂ ಹೇಗೆ…?

ಮನೆಯನ್ನು ಕಟ್ಟುವ ಕೂಲಿ ಕಾರ್ಮಿಕರು ಸುಡುವ ಕಲ್ಲನ್ನು ಎತ್ತಲೇಬೇಕು, ಸಿಮೆಂಟನ್ನು ಹೊತ್ತು ಹಾಕಲೇಬೇಕು, ಮನೆಯನ್ನು ಕಟ್ಟಲೇಬೇಕು, ಹೊಲಗದ್ದೆಯಲ್ಲಿ ಉಳಿಮೆ ಮಾಡಿ, ಹೊಲವನ್ನು ಹದಗೊಳಿಸಲೇಬೇಕು,  ರೈತನ ಬೆವರಿನ ಸಾಲುಗಳು ಭೂಮಿಗೆ ತಾಗಿ ಫಲವತ್ತತೆಯನ್ನು ಪಡೆದುಕೊಳ್ಳುವಾಗ ಆತನ ಬಿಸಿ ಉಸಿರಿನ ತಾಪ ಹೇಳತೀರದು.  ಕಾರ್ಖಾನೆಯೊಳಗೆ ಉತ್ಪಾದನೆಯಾಗುವ ಕಬ್ಬಿಣದ ಸಾಮಾಗ್ರಿಗಳು ಕೆಂಡದ ಉಂಡೆಗಳನ್ನು ಹೊತ್ತುಕೊಂಡು ತೀವ್ರವಾದ ಉಷ್ಣಾಂಶವನ್ನು ಬೀರುತ್ತಾ, ದುಡಿಯುವ ಕಾರ್ಮಿಕನ ಬೆವರಿನ ಹನಿಗಳು ತಟತಟನೆ ಭೂಮಿಗೆ ಬೀಳುತ್ತವೆ.  ಒಳಗಿನ ನೋವುಗಳು ಹಲವಿದ್ದರೂ ಕಾರ್ಖಾನೆಯೊಳಗಿನ ತೀವ್ರವಾದ ಉಷ್ಣಾಂಶ ಒಂದಡೆಯಾದರೇ ಕಾರ್ಖಾನೆಯ ಹೊರಗಡೆ ಸೂಸುವ ಅತ್ಯಂತ ತೀವ್ರವಾದ ಬಿಸಿಲಿನ ಝಳ…! ಎರಡನ್ನು ತಡೆದುಕೊಳ್ಳಲೇಬೇಕು.

 ಬದುಕಿನ ತಾಪಮಾನ ತಂಪಾಗಲು ಇಂತಹ ಉಷ್ಣಾಂಶವನ್ನು ತಡೆದುಕೊಂಡು ಬದುಕನ್ನು ಕಟ್ಟಿಕೊಳ್ಳಲೇಬೇಕು ಇಲ್ಲವಾದರೆ ಬದುಕು ಎಲ್ಲರೆದರು ಬೀಕರಿಯಾಗುತ್ತದೆ. ವಯಸ್ಸು ಎಷ್ಟಾದರೇನು? ದುಡಿಯದಿದ್ದರೆ ಹೊಟ್ಟೆಗೆ ಅನ್ನವಿಲ್ಲ. ರಟ್ಟೆ ಬಲಿತ ಮಕ್ಕಳು ಅನ್ನ ಹಾಕುವುದಿಲ್ಲ, ನಾನು ದುಡಿಯಲೇಬೇಕು ಅನ್ನುವ ಹಣ್ಣು ಹಣ್ಣಾದ ಜೀವ ಬಿಸಿಲಿಗೆ ಮೈಯೊಡ್ಡಲೇಬೇಕು..!!  ಆಗ ಮಾತ್ರ ಅನ್ನ ಸಿಗುತ್ತದೆ. ಅವರ ಹಣೆಯ ಒಂದೊಂದು ಬೆವರಿನ ಹನಿಗಳು ಬದುಕಿಗೆ ಪರಿಮಳದ ಘಮವನ್ನು ಸೂಸುತ್ತವೆ.

ಬೇಸಿಗೆ ಬಂದಿತೆಂದರೆ… ಶಾಲೆ ರಜೆ ಕೊಟ್ಟ ಕ್ಷಣವೇ ಮಕ್ಕಳಿಗೆ ಖುಷಿಯನ್ನು ಕೊಡುತ್ತದೆ. ಇಂತಹ ಬಿರುಬೇಸಿಗೆಯಲ್ಲಿಯೂ ಮಕ್ಕಳು ತಮ್ಮ ಪಾಲಕರಿಗೆ ಸಹಾಯ ಮಾಡುತ್ತಾ, ದುಡಿಯುವ ಅನೇಕ ಸನ್ನಿವೇಶಗಳನ್ನು ನಾವು ನೋಡುತ್ತೇವೆ. ಬೇಸಿಗೆಯ ಬಿಸಿಲು ಕೆಲವರಿಗೆ ಬದುಕು ಕಟ್ಟಿಕೊಳ್ಳುವ ಕಾಲವೂ ಹೌದು…!!

ಸ್ಥಿತಿವಂತರ ಶಾಲಾ ಮಕ್ಕಳು ಬೇಸಿಗೆಯನ್ನು ಕಳೆಯಲು ತಂಪಾದ ಸ್ಥಳಗಳಿಗೆ ಪ್ರವಾಸಕ್ಕೆ ಹೋಗುತ್ತಾರೆ. ಅತ್ಯಂತ ಖುಷಿ ಖುಷಿಯಾಗಿ ನೀರಿನಲ್ಲಿ ಆಡುತ್ತಾ, ವಾಟರ್ ಪಾಕ್೯ ನಂತಹ ಅಡ್ಡಾಗಳಲ್ಲಿ ಇವರ ಹಾಜರಿ ಕಡ್ಡಾಯವಾಗಿರುತ್ತದೆ. ಇದು ಅವರ  ಸಡಗರ ಸಂಭ್ರಮವನ್ನು ಇಮ್ಮಡಿಗೊಳಿಸುತ್ತದೆ. ಮತ್ತೆ ಮುಂದಿನ ಶೈಕ್ಷಣಿಕ ವರ್ಷಕ್ಕೆ ಅವರು ಹೀಗೆ ಸಿದ್ಧಗೊಳ್ಳುತ್ತಾರೆ.

 ಬೇಸಿಗೆ ಬೆವರಿನ ಪರಿಮಳವನ್ನು ಮತ್ತೆ ಮತ್ತೆ ಹೆಚ್ಚು ಮಾಡುತ್ತಾ, ಬದುಕಿಗೆ ಆಧಾರವಾಗುತ್ತದೆಯೆಂದರೆ ತಪ್ಪಾಗಲಾರದು.   ಚೈತ್ರಮಾಸ ಪ್ರವೇಶಿಸುವ ಈ ಕಾಲಘಟ್ಟದಲ್ಲಿ ಗಿಡಮರಗಳೆಲ್ಲಾ ತನ್ನ ಹಳೆಯ ಎಲೆಗಳನ್ನು ಕಳೆದು ;  ಹೊಸ ಚಿಗುರಿನ ಕಡೆಗೆ ಹೆಜ್ಜೆ ಹಾಕುತ್ತಾ, ಹೊಸ ಬದುಕನ್ನು ಕಟ್ಟಿಕೊಳ್ಳುವ ಕಾಲವಿದು. ಇಂತಹ ಬೇಸಿಗೆಯ ಕಾಲ ಹೊಸ ಬದುಕಿಗೆ ಹೆಜ್ಜೆ ಹಾಕುವವರಿಗೆ ಮತ್ತೆ ಮತ್ತೆ ಹೊಸತನಕ್ಕೆ ಹಾತೊರೆಯುವ ಸಂಭ್ರಮವನ್ನು ಬೇಸಿಗೆಕಾಲ ತಂದುಕೊಡುತ್ತದೆ.

 ಬೇಸಿಗೆಕಾಲ ಅತಿಯಾದರೂ ಬದುಕನ್ನು ಮುಗಿಸಿ ಬಿಡುತ್ತದೆ.  ಬೇಸಿಗೆ ಮುಗಿದು, ಮಳೆಗಾಲ ಬರಲೇಬೇಕು..!  ಬಿಸಿಲಿನಿಂದ ನಲುಗಿಹೋದ ಭೂಮಿ ತಾಯಿ ತಂಪಾಗಲೇಬೇಕೆಂದರೇ ಕಪ್ಪಾದ ಮೋಡಗಳೇ ನಾಲ್ಕು ಹನಿಗಳ ಚೆಲ್ಲಿಬಿಡಿ. ಆಗ ಎಲ್ಲರ ಮುಖದಲ್ಲಿ ನಗು ಮೂಡುವುದು. ಬೇಸಿಗೆ ಎಂದರೆ ಬೆವರ ಹನಿಗಳ ಪರಿಮಳವನ್ನು ಎಲ್ಲಡೆ ಹರಡುತ್ತಲೇ ಏನೇಯಾಗಲಿ, ಬೇಸಿಗೆ ಸಂಭ್ರಮದೊಳಗೆ ನಮಗಿರುವ ನೋವುಗಳನ್ನು ಮರೆತು ತಂಪೇರೆಯುವಂತಾಗಲಿ.


Leave a Reply

Back To Top