‘ಗಮನಿಸಿ…..ನಾವು ಕಾರ್ಮಿಕರು’ಲೇಖನ-ವೀಣಾ ಹೇಮಂತ್ ಗೌಡ ಪಾಟೀಲ್

ಕಾರ್ಮಿಕರು ಎಂದರೆ ಯಾರು?…. ತಮ್ಮ ದೈನಂದಿನ ಹೊಟ್ಟೆಪಾಡಿನ ಜೀವನಕ್ಕಾಗಿ ದುಡಿಯುವ ಸರ್ಕಾರಿ, ಅರೆಸರಕಾರಿ, ಸಂಘ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಜನಸಮೂಹ.
ಅಸಂಘಟಿತವಾಗಿ ಈ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾಗ ಇವರಿಗೆ ಯಾವುದೇ ಕೆಲಸದ ಭದ್ರತೆ ಇರುತ್ತಿರಲಿಲ್ಲ. ದಿನಕ್ಕೆ 16 ಗಂಟೆಗಳ ಕಾಲ ಕಾರ್ಯನಿರ್ವಹಿಸಬೇಕಾದ ಅನಿವಾರ್ಯತೆ ಇತ್ತು. ರಜಾ ಸೌಲಭ್ಯ, ನಿಯಮಿತ ಸಂಬಳ, ಆರೋಗ್ಯ ವಿಮೆ, ಹೆಣ್ಣು ಮಕ್ಕಳಿಗೆ ಹೆರಿಗೆ ರಜೆ ಹೀಗೆ ಯಾವುದೇ ಸೌಲಭ್ಯಗಳು ಇರುತ್ತಿರಲಿಲ್ಲ. ದುಡಿಯುವ ವರ್ಗಕ್ಕೆ ಮೂಲಭೂತ ಅವಶ್ಯಕತೆಗಳನ್ನು ಕೂಡ ಪೂರೈಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ. ಬಂಡವಾಳ ಶಾಹಿಗಳ ಹಿಡಿತದಲ್ಲಿ ಕೂಲಿ ಕಾರ್ಮಿಕರು, ದಿನಗೂಲಿಗಳು ಕಾರ್ಯನಿರ್ವಹಿಸುವಂತಹ ಪರಿಸ್ಥಿತಿಯಲ್ಲಿ ಶ್ರೀಮಂತ ಉದ್ಯಮಿಗಳು ಅವರನ್ನು ಹಿಂಡಿ ಹಿಪ್ಪೆ ಮಾಡುತ್ತಿದ್ದರು. ಅತ್ಯಂತ ಕಡಿಮೆ ಸಂಬಳ ನೀಡಿ  ದಿನದ ಮೂರನೇ ಎರಡು ಭಾಗ ಸಮಯ ಅಂದರೆ ಸುಮಾರು 16 ಗಂಟೆಗಳ ಕಾಲ ಕೆಲಸ ನಿರ್ವಹಿಸಬೇಕಾದಂತಹ ಪರಿಸ್ಥಿತಿ ಕಾರ್ಮಿಕರದು. ಆರೋಗ್ಯ ದೃಷ್ಟಿಯಿಂದ ಇದು ಹಾನಿಕಾರಕವಾಗಿದ್ದು ಕಾರ್ಮಿಕರು ದೈಹಿಕ, ಮಾನಸಿಕ ಮತ್ತು ಆರ್ಥಿಕ ಅನಾನುಕೂಲಕ್ಕೆ ಒಳಗಾದರು.

17 ,18ನೇ ಶತಮಾನದ ಹೊತ್ತಿಗೆ ಫ್ರಾನ್ಸ್ ನ ಬಹುದೊಡ್ಡ ಸಮಾಜವಾದಿಗಳಾದ ಕಾರ್ಲ್ ಮಾರ್ಕ್ಸ್ ಮತ್ತು ಮಾರ್ಟಿನ್ ಲೂಥರ್ ಕಿಂಗ್ ರವರು ಅಭಿವೃದ್ಧಿಪರ ಸಮಾಜದ ಕಲ್ಪನೆ ಹುಟ್ಟು ಹಾಕಿದರು. ದುಡಿಮೆಗೆ ತಕ್ಕ ಸಂಬಳ, ಆರೋಗ್ಯ, ಶಿಕ್ಷಣ, ವಸತಿ ವ್ಯವಸ್ಥೆಗಳು ಮತ್ತು ಭವಿಷ್ಯನಿಧಿ ಸ್ಥಾಪನೆಗಳ ಕುರಿತು ಯೋಜನೆಗಳನ್ನು ರೂಪಿಸಿದರು. ಸಮುದಾಯದ ಒಟ್ಟು ಅಭಿವೃದ್ಧಿಯ ಕುರಿತ ಚಿಂತನೆಯನ್ನು ‘ಕಮ್ಯುನಿಸಂ’ ಎಂದು ಹೆಸರಿಸಿ, ಆಡಳಿತದ ಆರ್ಥಿಕ ಮತ್ತು ರಾಜಕೀಯ ಹಿತಾಸಕ್ತಿಯು ಸಮುದಾಯದ ಕೈಯಲ್ಲಿ ಇರಬೇಕು ಎಂದು ಪ್ರತಿಪಾದಿಸಿದರು.
ಕಾರ್ಮಿಕರ ಕಲ್ಯಾಣಕ್ಕಾಗಿ ಅನೇಕ ರೀತಿಯ ಹೋರಾಟಗಳ ಮೂಲಕ ಧ್ವನಿ ಎತ್ತಿದ ಪರಿಣಾಮವಾಗಿ ಕಾರ್ಮಿಕರಿಗೂ ಒಂದು ದಿನ ಬೇಕೆಂದು ಈ ವಿಶೇಷ ದಿನ ಹುಟ್ಟಿಕೊಂಡಿತು.

1921ರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದ ಕಾರ್ಮಿಕ ಸಂಘಟನೆಯ ಅಧ್ಯಕ್ಷರಾಗಿದ್ದ ಪೀಟರ್. ಜೆ.ಜ್ಯೂರಿಯವರು ಬಡಗಿತನದ ಸಹೋದರತ್ವ ದಿನವನ್ನು ಸಂಭ್ರಮದಿಂದ ಆಚರಿಸಿದ್ದರು. ಮೊದಲು ಪ್ಯಾರಿಸ್ ದೇಶದಲ್ಲಿ  ಮೇ 1ರಂದು ಕಾರ್ಮಿಕ ದಿನಾಚರಣೆ ಎಂದು 1927ರಲ್ಲಿ ಆಚರಿಸಲಾಯಿತು
ಸಮಾಜವಾದಿ ಸಂಘಟನೆಗಳು,ಕಾರ್ಮಿಕ ಸಂಘಗಳು,ಬುದ್ಧಿಜೀವಿಗಳು ಸೇರಿ ಇದನ್ನು ಸ್ಥಾಪಿಸಿದರು.
2ನೇ ಮಹಾಯುದ್ಧದ ನಂತರ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಹಲವಾರು ತೀರ್ಮಾನಗಳನ್ನು ಕೈಗೊಳ್ಳಲಾಯಿತು.
ಕಾರ್ಮಿಕರ ಕಲ್ಯಾಣ, ಕೆಲಸಕ್ಕೆ ತಕ್ಕ ಕೂಲಿ,ಸಂಭಾವನೆ, ರೋಗರುಜಿನಗಳ ಸಮಯದಲ್ಲಿ ಧನಸಹಾಯ, ಕೆಲಸ ಮಾಡುವಲ್ಲಿ ಉತ್ತಮ ಪರಿಸರ ನಿರ್ಮಾಣ, ಆರೋಗ್ಯ, ಶಿಕ್ಷಣ,ಮಕ್ಕಳಿಗೆ ವಿದ್ಯಾರ್ಥಿ ವೇತನಗಳು,ಮಹಿಳಾಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ಗಳು,ವಿಮಾ ಯೋಜನೆ,ಕಾನೂನು ಸಲಹೆ ಮತ್ತು ಹೋರಾಟ, ಕೈಗಾರಿಕೆ,ಕನಿಷ್ಠ ಕೂಲಿ ನಿಗದಿ,ಈ ಮುಂತಾದ ವಿಷಯಗಳನ್ನು ಚರ್ಚೆ ಮಾಡಿ ಎಲ್ಲರಿಗೂ ಅನ್ವಯವಾಗುವಂತೆ ಜಾರಿಗೊಳಿಸುವ ಮಹಾ ಹೊಣೆಗಾರಿಕೆ ಈ ಕಾರ್ಮಿಕ ಸಂಘಟನೆಗಳ ಹೆಗಲೇರಿತು.

ಪ್ರತಿ ಗ್ರಾಮ ಪಟ್ಟಣ ನಗರ ಜಿಲ್ಲೆ ಮತ್ತು ರಾಜ್ಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟಗಳಲ್ಲಿ ಕಾರ್ಮಿಕ ಸಂಘಟನೆಗಳು ಕಾರ್ಯನಿರ್ವಹಿಸುತ್ತಿದ್ದು ಇವುಗಳ ಮುಖ್ಯ ಕೆಲಸ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವುದು.ಮೇ 1ರಂದು ಸಭೆ,ಚರ್ಚೆ, ನಿರ್ಣಯ, ಮೆರವಣಿಗೆ, ಪ್ರದರ್ಶನ, ಉತ್ತಮ ಕಾರ್ಯ ನಿರ್ವಹಣೆಗೆ ಪ್ರೋತ್ಸಾಹ,ಪರಿಹಾರ ವಿತರಣೆ ಮುಂತಾದ ಕಾರ್ಯಕ್ರಮ ಇಟ್ಟುಕೊಳ್ಳುತ್ತಾರೆ.

ಇದರಲ್ಲಿ ಆಲೋಚನೆ ಮಾಡುವ ಅಂಶವೆಂದರೆ ಸಂಘಟಿತ,ಅಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕರೂ ಇದ್ದಾರೆ.ಫ್ಯಾಕ್ಟರಿ, ಬೀಡಿ,ಸಾಬೂನು,ಎಣ್ಣೆ, ಬಟ್ಟೆ ಗಿರಣಿಗಳು ಊದುಬತ್ತಿ ತಯಾರಿಕೆ, ಹತ್ತಿ ಗಿರಣಿಗಳು ಮತ್ತು ಅಕ್ಕಿ ಮಿಲ್ಲುಗಳು ಗೃಹನಿರ್ಮಾಣ, ತೋಟಗಾರಿಕೆ,ಹತ್ತು ಹಲವು ಸೇರುತ್ತದೆ.ಆಯಾಯ ವಿಭಾಗದಲ್ಲಿ ಸಂಬಂಧ ಪಟ್ಟವರು ಅವರ ಸದಸ್ಯತ್ವ ಮಾಡಿ,ಅವರಿಗಿರುವ ಸೌಲಭ್ಯಗಳನ್ನು ಹೇಳಿ ಕೊಡಿಸುತ್ತಾರೆ.

ಲಕ್ಷಾಂತರ ಮಹಿಳಾ ಶ್ರಮಿಕವರ್ಗ ಶಾಲಾ ಬಿಸಿಯೂಟದ ಕೆಲಸದಲ್ಲಿ ಇರುವುದನ್ನು ಕಾಣಬಹುದು. ದಾದಿಯರು, ಅಂಗನವಾಡಿ ಕಾರ್ಯಕರ್ತರು, ಖಾಸಗಿ ಶಾಲೆಯ ಶಿಕ್ಷಕರು ಗಾರ್ಮೆಂಟ್ ಗಳಲ್ಲಿ ಕೆಲಸ ಮಾಡುವ ಮಹಿಳಾ ಕೆಲಸಗಾರ್ತಿಯರು, ಸಾಫ್ಟ್ ವೇರ್ ಮತ್ತು ಹಾರ್ಡ್ವೇರ್ ಉದ್ಯಮಗಳಲ್ಲಿ ಕಾರ್ಯನಿರ್ವಹಿಸುವ ಹೆಣ್ಣು ಮಕ್ಕಳು ಹೀಗೆ ಮಹಿಳಾ ಕಾರ್ಮಿಕರಾಗಿ ಕೋಟ್ಯಾಂತರ ಜನರು ದೇಶದ ಪ್ರಗತಿಗೆ ಅಹರ್ನಿಶಿ ಸೇವೆ ಸಲ್ಲಿಸುತ್ತಿದ್ದಾರೆ. ಮುಖ್ಯವಾಗಿ ಮಹಿಳೆಯರಿಗೆ  ಶೌಚಾಲಯ ವ್ಯವಸ್ಥೆ, ಅನಾರೋಗ್ಯದ ಸಂದರ್ಭದಲ್ಲಿ ವಿಶ್ರಾಂತಿ ಕೊಠಡಿಗಳ ವ್ಯವಸ್ಥೆ  ಮಹಿಳಾ ಸಿಬ್ಬಂದಿಗಳು ಕಾರ್ಯನಿರ್ವಹಿಸುವ ಸ್ಥಳದಲ್ಲಿ ಅವಶ್ಯಕತೆವಾಗಿದೆ…. ಈ ನಿಟ್ಟಿನಲ್ಲಿ ಇನ್ನೂ ಕಾರ್ಯಗಳು ನಡೆಯಬೇಕು.

ಪ್ರತಿಯೊಬ್ಬರ ಜೀವವೂ ಅಮೂಲ್ಯವಾದುದು.ಕೆಲಸ ಮಾಡುವ ಸ್ಥಳ, ಮೂಲಭೂತ ಅನುಕೂಲಗಳು,ಜೀವನ ಭದ್ರತೆ ಎಲ್ಲವೂ ಇಂದಿನ ದಿನಗಳಲ್ಲಿದೆ,ವ್ಯಾಪಕ ಪ್ರಚಾರ ಮಾಡಿ,ಮಾಹಿತಿ ನೀಡಿ ಅವರಿಗೆ ಅದನ್ನು ಒದಗಿಸಿಕೊಡುವ ಕಾರ್ಯದಲ್ಲಿ ಬಹಳಷ್ಟು ಕಾರ್ಮಿಕ ಪರ ಸಂಘಟನೆಗಳು ತೊಡಗಿಸಿಕೊಂಡಿವೆ.
12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಕಾಯಕವೇ ಕೈಲಾಸ ಎಂದು ಶ್ರಮದ ಜೀವನಕ್ಕೆ ಭಕ್ತಿಯ ಮಾರ್ಗವನ್ನು ತೋರಿಸಿಕೊಟ್ಟರು. ಕಾರ್ಮಿಕರು ದೇಶವನ್ನು ಕಟ್ಟುವ ನಿಜವಾದ ಕಟ್ಟಾಳುಗಳು. ಅವರ ಬೆಂಬಲಕ್ಕೆ ಸಮಾಜದ ಸರ್ವ ಜನರು ಕೈಗೂಡಿಸಲಿ ಎಂದು ಹಾರೈಸುವ.


Leave a Reply

Back To Top