ವೀಣಾ ಹೇಮಂತ್ ಗೌಡ ಪಾಟೀಲ್ ಅವರ ಕವಿತೆ-ಊರ್ಮಿಳೆಯ ಅಳಲು

ನೀನು ಬರುತ್ತಿರುವೆ ಎಂಬ ಸುದ್ದಿ ಕೇಳಿಯೂ
ಮನ ಗರಿಗೆದರುತ್ತಿಲ್ಲ, ಹಾರಾಡುತ್ತಿಲ್ಲ
ಹೃದಯದ ಕೋಗಿಲೆ ಕೂಗುತ್ತಿಲ್ಲ

ಎಲ್ಲೆಡೆ ಸಂಭ್ರಮ ನೋಡಿಯೂ
ನಿಟ್ಟುಸಿರು ನನಗೆ, ತಲ್ಲಣಿಸುತ್ತಿದೆ ಮನ
ಇನ್ನಾದರೂ ಶಾಪ ಮುಕ್ತಳಾಗುವನೇ
ಎಂದ ತವಕಿಸುತ್ತಿದೆ ಮನ

ಹೇಗೆ ಕಳೆದೆ ನಾ ಹದಿನಾಲ್ಕು ವರ್ಷಗಳ
ಉಣಲಾರೆ… ಉಣ್ಣದೆಯೂ ಇರಲಾರೆ
ಉಡಲಾರೆ…. ಉಡದೆಯೂ ಇರಲಾರೆ
ಸಿಂಗರಿಸಿಕೊಳ್ಳಲಾರೆ… ಸಿಂಗರಿಸಿಕೊಳ್ಳದೆಯೂ ಇರಲಾರೆ
ಅನುರಕ್ತೆಯಾದರೂ ..ವಿರಕ್ತೆಯ ಬಾಳು
ಮುತ್ತೈದೆಯಾದರೂ .. ವಿಧವೆಯ ಬಾಳು
ಸಂಭ್ರಮಿಸುವ ಮನಕ್ಕೆ.. ಸಂಯಮದ ಕೋಳ
ಏಕೆ ನೀ ಅರಿಯದೆ ಹೋದೆ ಲಕ್ಷ್ಮಣ…

ಇರಬಹುದು ನೀ ಜಗಕ್ಕೆ ಪ್ರಭು ಶ್ರೀ ರಾಮನ ಸೋದರ
ಆದರೆ ಸ್ವಂತ ಪತ್ನಿಗೆ??
ಖಂಡಿತ ಅಡ್ಡವಾಗುತ್ತಿರಲಿಲ್ಲ
ಹೊರಟು ನಿಂತಾಗ ನಿನ್ನಣ್ಣನೊಂದಿಗೆ ನೀ,
ಏಕೆ ನೀ ಅರಿಯದೆ ಹೋದೆ ಓ ಲಕ್ಷ್ಮಣ..

ಮುಖದಿ ಮೃದು ಹಾಸ,ಭರವಸೆಯ ಕರ ಸ್ಪರ್ಶ
ನೂರು ಭಾವಗಳ ಸೂಸುವ ಕಣ್ಣೋಟ
ಸಾಕಿತ್ತು ನನಗೆ ಕಳೆಯಲೀ ವರ್ಷಗಳ
ನಿನ್ನ ಬರವಿಗಾಗಿ ನಿನ್ನ ಬರವಿಗಾಗಿ
ಏಕೆ ನೀ ಅರಿಯಲಿಲ್ಲ ಓ ಲಕ್ಷ್ಮಣ..

ಹಿಂತಿರುಗಿ ನೋಡದೆ ಒಂದು ಮಾತೂ ಹೇಳದೆ
ನನ್ನನಿನಿತೂ ಕೇಳದೆ ಹೊರಟೆ ಹೋದೆಯಲ್ಲ
ಇದು ತರವೇ ನಿನಗೆ?
ಏಕೆ ನೀ ಅರಿಯಲಿಲ್ಲ ಲಕ್ಷ್ಮಣ..

ಇಂದು ದೀಪಾವಳಿ
ಸಜ್ಜಾಗಿದೆ ಅಯೋಧ್ಯೆ ನಿಮ್ಮ ಬರುವಿಕೆಗೆ
ನನ್ನಲ್ಲಿನ್ನೂ ಇದೆ ಅಳುಕು ಆತಂಕ
ಮತ್ತೆ ಮತ್ತೆ ನೆನಪಾಗುತ್ತಿದೆ
ಕಳೆದ ಆ ದಿನಗಳ ಮರೆಯಬಲ್ಲೆನೇ
ಮರೆತು ಬಾಳ ಬಲ್ಲೆನೇ
ಮುಂದಿರುವ ದಿನಗಳ ಮುಂದಿರುವ ದಿನಗಳ


Leave a Reply

Back To Top