‘ಗಜರಾಜನ ಗೋಳು’ ಹಾಸ್ಯ ಲೇಖನಜಯಲಕ್ಷ್ಮಿ ಕೆ.,

” ಅಲ್ಲಾ… ಒಂದಿಷ್ಟು ನೀರು ಕುಡಿಯೋಣ ಅಂತ ಕೆರೆಗೆ ಹೋದ್ರೆ ಆ ಹೂಳಲ್ಲಿ ಕಾಲು ಹೂತೋಗಿ ಮೇಲೆ ಬರಲಾಗದೆ ನಾನು ಒದ್ದಾಡ್ತಾ ಇದ್ರೆ ಈ ಮನುಷ್ಯರು ಗುಂಪು ಗುಂಪಾಗಿ ಬರೋದೇನು… ನನ್ನ ಅಸಹಾಯಕ ಸ್ಥಿತಿನ ವೀಡಿಯೋ ಮಾಡೋದೇನು… ಯಪ್ಪಾ.. ಅಂತೂ ಇಂತೂ ಅಲ್ಲಿಂದ ಮೇಲೆ ಬಂದೆ.. ಇನ್ನು ಇವರ ಸಹವಾಸ ಸಾಕು… ಹೋಗೇ ಬಿಡ್ತೀನಿ… ಆದ್ರೆ… ಎಲ್ಲೋಗ್ಲಿ… ನನ್ನ ಬಳಗದಿಂದ ತಪ್ಪಿಸ್ಕೊಂಡು ಬಂದಾಯ್ತು. ಈಗೇನ್ ಮಾಡೋದು?  ಆತ್ಮಹತ್ಯೆ ಮಾಡಿಕೊಳ್ಳೋಣ ಅಂದ್ರೆ ಕರಿರಾಜನಾಗಿ ಮನುಷ್ಯರ ಮಟ್ಟಕ್ಕೆ ಇಳಿಯಲು ಮನಸ್ಸಿಲ್ಲ. ನನ್ನ ಬಂಧು ಬಾಂಧವರ ಸಂಖ್ಯೆ ಎಷ್ಟು ಇಳಿಮುಖಗೊಂಡಿದೆ!! ನಮಗೆ ಸರಿಯಾಗಿ ನೆಲೆನೇ ಇಲ್ಲ..

ಅವನ್ಯಾವನೋ ದೊಡ್ಡ ಸುದ್ದಿ ಮಾಡ್ತಾ ಇದ್ದಾನೆ.. ಕಾಡಿನಿಂದ ನಾಡಿನತ್ತ ಆನೆಗಳ ಪಯಣ ಅಂತ. ಅಲ್ಲ ಸ್ವಾಮಿ.. ನಮ್ಮ ತಾತ -ಮುತ್ತಾತನ ಕಾಲದಿಂದಲೂ ನಾವು ಓದಾಡುವ ಜಾಗ ನಮ್ಮದೇ… ಇದೇ ನಮ್ಮ ಆವಾಸಸ್ಥಾನ.ನಿಮ್ಮ ಜನಸಂಖ್ಯೆ ಜಾಸ್ತಿ ಆಯ್ತು ಅಂತ ನಮ್ಮ ಏರಿಯಾದಲ್ಲಿ ಮನೆ -ಮಹಲು ಕಟ್ಕೊಂಡು, ತೋಟ ಗೀಟಮಾಡ್ಕೊಂಡು, ಹೋಮ್ ಸ್ಟೇ ವ್ಯವಹಾರ ನಡೆಸ್ಕೊಂಡು ಇದ್ರೆ ನಮ್ಮ ಸಂತತಿ ಎಲ್ಲೋಗಬೇಕು? ಆ ವೀರಪ್ಪನ್ ಕಾಟ ತಪ್ಪಿತು ಅಂದ್ರೆ ಈಗ ಇನ್ನೊಂದು ರೀತಿಯಲ್ಲಿ ಕಾಟ.. ಅಲ್ಲಾ.. ಈ ಮನುಷ್ಯ ಜಾತಿಗೆ ತಿನ್ನೋದಕ್ಕೆ ಅಷ್ಟೊಂದು ಇದ್ರೂ ನಾವು ತಿನ್ನುವ ಬಿದಿರು ಮೆಳೆಗಳ ಮೆಲೆ ಇವರಿಗೆ ಕಣ್ಣು… ಎಳೆ ಬಿದಿರೆಲ್ಲ ಕೊಯ್ದು, ಕಣಿಲೆ ಕಣಿಲೆ ಅಂತ ತಿಂದ್ಕೊತಾವೆ ಹಾಳಾದವು.. ಹವಾಮಾನ ಬೇರೆ ಮುನಿಸ್ಕೊಂಡು ಸೊಪ್ಪು -ಸದೆ ಎಲ್ಲ ಒಣಗೋಗಿವೆ. ಆ ದ್ಯಾವ್ರು ದೊಡ್ಡ ಹೊಟ್ಟೆ ಬೇರೆ ಕೊಟ್ಟವ್ನೆ.. ಅದ ತುಂಬಿಸೋಕೆ ಹಗಲು -ರಾತ್ರಿ ಅಲ್ದಾಡಬೇಕು. ಯಾರಿಗೆ ಹೇಳೋಣ ನಮ್ ಕಷ್ಟ. ಆ ಕಡೆ ಒಂದಷ್ಟು ದೊಡ್ಡ ದೊಡ್ಡ ಮರಗಳು ಮೈ ತುಂಬಾ ಕೊಂಬೆ ರೆಂಬೆ ಚಾಚ್ಕೊಂಡು ಒಂದಷ್ಟು ಆಹಾರ ಕೊಡ್ತಾ ಇದ್ವು. ಡಗ್ ಡಗ್ ಸದ್ದು ಮಾಡುವ, ಹೊಗೆ ಉಗುಳುವ, ಏನೇನೋ ಮೆಷಿನ್ಗಳು ಬಂದು ಮರಗಳ್ನೆಲ್ಲ ಉರುಳಿಸಿ ಟಾರ್ ರಸ್ತೆ ಮಾಡವ್ರೆ. ಅಭಿವೃದ್ಧಿ ಅಂತೆ.. ಅಭಿವೃದ್ಧಿ.. ನಮ್ಮ ಸ್ಥಿತಿ.. ಅದೋಗತಿ.


 ಅನಾದಿ ಕಾಲದಿಂದ ನಾವು ನೀರು ಕುಡಿಯುತ್ತಿದ್ದ ಕೆರೆಗಳಲ್ಲಿ ಕೆಲವನ್ನ ಈ ಮನುಷ್ಯ ಜಾತಿ ಬಟಾ ಬಯಲು ಮಾಡವ್ನೆ.. ಇನ್ನು ಕೆಲವು ನೀರು ಬತ್ತಿ ಕುಂತವೆ.. ನಮ್ಮ ಜಾಗಕ್ಕೇ ಬಂದು ನಮ್ಮ ನೆರಳು ಬಿದ್ದರೆ ಬಾಯಿ ಬಾಯಿ ಬಡ್ಕೋತಾವೆ ಈ ಜನ. ” ಆನೆಗಳ ಹಾವಳಿ : ಮಿಲಿಯಗಟ್ಟಲೆ ಆಸ್ತಿ ನಷ್ಟ ” ಅಂತ ನಮ್ಮೇಲೆನೇ ಎಲ್ಲ ಇತ್ತಾಕ್ತವ್ರೆ.. ನಾವೂ ಹೇಳ್ತೀವಿ, ಈ ಮನುಷ್ಯರಿಂದ ನಮ್ಗೆ ಜೀವ್ನನೇ ಸಾಕಾಗಿ ಹೋಗಿದೆ.. ಇವ್ರಿಂದ ಮುಕ್ತಿ ಬೇಕು, ನಮ್ಗೂ ನ್ಯಾಯ ಬೇಕು. ಅಂತ.

ನಾವು ಓಡಾಡಿಕೊಂಡಿದ್ದ ಜಾಗದಲ್ಲಿ ಈಗ ತೋಟ, ಹೊಲ.. ಥೂ.. ನೂರಾರು ವಿಘ್ನಗಳು. ನಾವು ಎಷ್ಟೇ ದೊಡ್ಡ ದೇಹ ಹೊತ್ಕೊಂಡಿದ್ರು ಒಬ್ಬರಿಗೂ ತೊಂದರೆ ಕೊಡದೆ, ಸದ್ದೇ ಆಗದಂತೆ ನಡೆಯುವ ಕಲೆಗಾರಿಕೆ ನಮಗುಂಟು. ಆದ್ರೆ ಈ ಮನುಷ್ಯ ನಮ್ಮನ್ನ ಕಂಡ್ರೆ ಸಾಕು ಪಟಾಕಿ ಸಿಡ್ಸಿ ನಮ್ಗೆ ಕಿರಿ ಕಿರಿ ಮಾಡ್ತಾನೆ. ಇತರ್ರಿಗೆ ತೊಂದ್ರೆ ಕೊಡೋದೇ ಇವ್ರ ಜಾಯಮಾನ. ಒಂದೊಂದ್ ಸಲ ಇವ್ರನ್ನೆಲ್ಲ ಕೊಂದೆ ಬಿಡ್ಬೇಕು ಅನಿಸ್ಬಿಡುತ್ತೆ ನಮ್ಗೂನು

ಹೊಟ್ಟೆ ಹಸ್ಕೊಂಡು ಒಂದೆರಡು ಬಾಳೆಗಿಡ ಮುರ್ಕೊಂಡು ತಿನ್ನೋಣ ಅಂತ ಹೋದ್ರೆ ಕರೆಂಟ್ ಕೊಟ್ಟು ನಮ್ ಮಕ್ಳನ್ನ ಸಾಯಿಸ್ತಾರೆ. ನಾವೇನಾದ್ರೂ ನಮ್ ದಾರಿಗೆ ಅಡ್ಡ ಬಂದ್ರು ಅಂತ ಒಂದ್ ಕಾಲು ಅವ್ರ ಮೇಲಿಟ್ರೆ ಅಯ್ಯೋ.. ಆನೆ ತುಳಿದು ಸಾಯಿಸ್ತು… ಇಷ್ಟು ಸಾವಾಯಿತು.. ಅಷ್ಟು ಸಾವಾಯಿತು ಅಂತ ನ್ಯೂಸ್ ಬೇರೆ. ನಮ್ಮ ಅಕ್ಕ ಅಣ್ಣ ತಮ್ಮ ತಂಗಿ  ಹೊಟ್ಟೆಗಿಲ್ಲದೆ.. ನೀರಿಲ್ಲದೆ ಸತ್ತ ಲೆಕ್ಕ ಯಾರ್ ಕೊಡ್ತಾರೆ. ಈ ಭೂಮಿ ಮ್ಯಾಲೆ ಎಲ್ಲರ್ಗೂ ಬದುಕೋ ಹಕ್ಕಿದೆ.. ನಾನು ನೇರ ಹೋಗ್ತೀನಿ.. ಗಣಪತಿ ದ್ಯಾವ್ರನ್ನ ಕೇಳ್ತೀನಿ.. ನಮ್ಮ ಹಕ್ಕು ನಮಗೆ ದೊರಕಿಸ್ಕೊಡಿ ಅಂತ, ನೀವೇನಂತೀರಾ?


Leave a Reply

Back To Top