ನಾಗರಾಜ ಜಿ. ಎನ್. ಬಾಡ ಅವರ ಕವಿತೆ ‘ಮಣ್ಣಿನ ಮಕ್ಕಳು’

ಸೋತವರು ನಾವು
ಹಾಗಂತ ಸೋಲಿಗೆ
ಶರಣಾನಾದವರಲ್ಲ ನಾವು
ಸೋಲು ನಮ್ಮನ್ನು
ಸೋಲಿಸಲಾರದು
ಸೋಲನ್ನೇ ಮೆಟ್ಟಿ
ನಿಂತವರು ನಾವು

ಸೋಲಿಗೆ ಕೈಕಟ್ಟಿ
ಕುಳಿತು ಕೊಳ್ಳದೆ
ಮತ್ತೆ ಮತ್ತೆ ಪ್ರಯೋಗಕ್ಕೆ
ಒಡ್ಡಿಕೊಳ್ಳುವವರು ನಾವು

ಬೀಳುತ್ತಾ ಏಳುತ್ತಾ
ಎದ್ದು ಬಿದ್ದವರು ನಾವು
ಬಿದ್ದಲ್ಲಿಂದ ಸಲೀಸಾಗಿ
ಎದ್ದು ಓಡಿದವರು ನಾವು

ಗೆದ್ದವರ ಎದಿರು ಕೈ ಕಟ್ಟಿ
ನಿಲ್ಲದವರು ನಾವು
ನಮ್ಮದೇ ದಾರಿಯನ್ನು
ಕಂಡು ಕೊಂಡವರು ನಾವು

ಕಿತ್ತು ತಿನ್ನುವ ಹಸಿವೆಯಿಂದ
ಚಡ ಪಡಿಸಿದವರು ನಾವು
ಹಸಿವೆ ನೀಗಲು ಕೈಗೆ
ಸಿಕ್ಕಿದ್ದನ್ನು ತಿಂದು
ಜೀರ್ಣಿಸಿ ಕೊಂಡವರು ನಾವು

ರುಚಿಯನ್ನು ಹುಡುಕಿ ಹುಡುಕಿ
ತಿಂದವರಲ್ಲ ನಾವು
ತಿಂದುದರಲ್ಲೇ ರುಚಿಯನ್ನು
ಕಂಡುಕೊಂಡವರು ನಾವು

ಹಸಿದು ಬಂದವರಿಗೆ ಮೊದಲು ಉಣಬಡಿಸುವವರು ನಾವು
ಅವರ ಸಂತೃಪ್ತಿಯಲ್ಲೇ
ಹಸಿವನ್ನು ಮರೆತವರು ನಾವು

ಕೊಟ್ಟು ಖುಷಿಯನ್ನು
ಪಟ್ಟವರು ನಾವು
ಬಚ್ಚಿಟ್ಟುಕೊಳ್ಳಲು
ಉಳಿಸಿಕೊಳ್ಳದವರು ನಾವು

ನಮ್ಮವರ ಖುಷಿಯಲ್ಲಿ
ಖುಷಿಯ ಕಂಡವರು ನಾವು
ನಮ್ಮ ಬಗ್ಗೆ ಯೋಚಿಸದೆ
ಹಾಯಾಗಿ ಇರುವವರು ನಾವು

ಬದುಕು ಬಂದಂತೆ ಮುಂದೆ
ಸಾಗುವವರು ನಾವು
ನಾಳೆಗಳ ಬಗ್ಗೆ ಚಿಂತೆ ಮಾಡಿಕೊಂಡು
ತಲೆ ಕೆಡಿಸಿಕೊಳ್ಳದ
ಈ ಮಣ್ಣಿನ ಮಕ್ಕಳು ನಾವು
ಮಣ್ಣಲ್ಲೇ ಮಣ್ಣಾಗಿ
ಹೋಗುವವರು ನಾವು


One thought on “ನಾಗರಾಜ ಜಿ. ಎನ್. ಬಾಡ ಅವರ ಕವಿತೆ ‘ಮಣ್ಣಿನ ಮಕ್ಕಳು’

  1. ಮಣ್ಣು ಬದುಕಿನ ಜೀವಾಳ. ಅಂತಃಸತ್ವದಿ ಋಣವಾಗುಳಿವ ದೊಡ್ಡ ಉಳಿವು ಅದರದ್ದು. ಜೀವ, ಜೀವಿತ ಎರಡೂ ಅದರ ಧನ್ಯತೆ ಪರಿಣಾಮವೇ ಸರಿ. ಇದ್ದಲ್ಲೇ ಉಳಿದು ಅನ್ನಕೊಡುವುದು ಮಣ್ಣಿನ ಸೂಕ್ಷ್ಮ ಸಂವೇದನೆಯ ಗುಣ. ಬೆವರ ಹನಿಗಳ ಬಿತ್ತಿ ಹಸಿವಿಗೆ ಅನ್ನವನ್ನು ನೀಡುವುದು ಜೀವ ಉಳಿಸಿದಂತೆ. ಬದುಕಿನ ಕಷ್ಟಗಳು ಏನೇ ಇದ್ದರೂ ದುಡಿತವೇ ಹೆಚ್ಚು ಖುಷಿಯನ್ನು ಕೊಡುತ್ತದೆ ಆ ಮನಸ್ಸಿಗೆ. ಹಸಿವೆ ಎಲ್ಲರದ್ದೂ. ಅದು ನಿತ್ಯದ ವಾಸ್ತವ. ಅದರಂತೆ ದುಡಿಯುವ ಕೈಗಳ ಕಾಯಕವೂ ಶ್ರೇಷ್ಠ ಎನ್ನುವ ಕವನದ ಸಾಲುಗಳು ತುಂಬಾ ಇಷ್ಟವಾದವು…….. ಕವಿತೆಯ ಸಾಲುಗಳು ಬದುಕಿನ ಭರವಸೆಯ ಬಗ್ಗೆ ಹೇಳುತ್ತಾ ಬದುಕನ್ನು ಪ್ರೀತಿಸುತ್ತದೆ……….

    ನಾಗರಾಜ ಬಿ.ನಾಯ್ಕ
    ಹುಬ್ಬಣಗೇರಿ
    ಕುಮಟಾ.

Leave a Reply

Back To Top