‘ಚಹಾ ಮಾರುಕಟ್ಟೆಯೊಳಗಿನ ಗಮತ್ತು’-ಓರೆನೋಟದ ಲೇಖನ..ರಮೇಶ ಸಿ ಬನ್ನಿಕೊಪ್ಪ ಹಲಗೇರಿ

“ಲೇ ಯಂಕ್ಯಾ… ಚೆನ್ನಾಗಿ ಓದು ಇಲ್ಲಂದ್ರ ಮುಂದ ನೀನು  ಚಾದಗಂಡ್ಯಾಗ ಕಪ್ಪು ಬಸಿ ತೊಳೆಯಬೇಕಾಗುತ್ತ ಮತ್ತ…”

” ನೀ ಹಿಂಗ ಓದದ ಬಿಟ್ಟು ಅಡ್ಡಾದಿಡ್ಡಿ ಅಡ್ಡಾಡಿದರ ಚಹಾ ಮಾರಾಕ ಹೋಗಬೇಕಾಗತ್ತ ಮತ್ತ  ತಿಳಕಾ…”  

ಹೀಗೆ ಅಂದು
ನಮ್ಮ ಬಾಲ್ಯದಲ್ಲಿ ಶಿಕ್ಷಕರು ವಿದ್ಯಾರ್ಥಿಗಳನ್ನು ಕುರಿತು ಬುದ್ದಿ ಹೇಳುವಾಗ ‘ಚಹಾ ಮಾರುವುದು..’  ಎಂದರೆ ಅದೊಂದು ಸಾಮಾನ್ಯ ವೃತ್ತಿ, ಕೂಲಿಯಾಗಿತ್ತು. ಅದನ್ನು ಮಾರುವುದು ಕೀಳಾಗಿ ಕಾಣುತ್ತಿದ್ದರು. ಚಹಾದಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗರನ್ನು ಒಂದು ರೀತಿಯಲ್ಲಿ ಅವಮಾನದ ದೃಷ್ಟಿಯಿಂದ ನೋಡುತ್ತಿದ್ದರು. “ಹೆಚ್ಚೆಚ್ಚು ಓದಿ ದೊಡ್ಡ ದೊಡ್ಡ ಹುದ್ದೆಯನ್ನು ಪಡೆದುಕೋ ಇಲ್ಲ ಅಂತಂದ್ರ ಚಹಾ ಕಪ್ಪು  ತೊಳಿಬೇಕಾಗುತ್ತದ” ಎಂದು ಮೂದಲಿಸುತ್ತಿದ್ದ ಶಿಕ್ಷಕರು, ನಮ್ಮನ್ನು ಎಚ್ಚರಗೊಳಿಸುತ್ತಿದ್ದರು.

 ಅವತ್ತು, ಚಹಾದಂಗಡಿಯಲ್ಲಿ ಚಹಾ ಮಾರುವ ಕೆಲಸ ಅಷ್ಟೊಂದು ಲಾಭದಾಯಕ ವ್ಯಾಪಾರವು ಆಗಿರಲಿಲ್ಲ. ಅವತ್ತಿನ ಶಿಕ್ಷಕರ ಮಾತು ಇಂದು ಸುಳ್ಳಾಗುವಂತೆ ಹೊಸ ಹೊಸ ಶೈಕ್ಷಣಿಕ ಕ್ರಮಗಳು, ಯೋಜನೆಗಳು, ಶೈಕ್ಷಣಿಕ ಪಠ್ಯಕ್ರಮಗಳು ಜಾರಿಗೆ ಬಂದು ಪ್ರತಿಯೊಂದರಲ್ಲಿಯೂ ಕೂಡ ವ್ಯವಹಾರಿಕ ದೃಷ್ಟಿಕೋನದಿಂದ ಬದಲಾಗಿರುವುದು ಸತ್ಯ.
ಇಂದು  ಯಾವ ವ್ಯಾಪಾರವು ಕಡಿಮೆಯಿಲ್ಲ ಎನ್ನುವುದು ಸಾಬೀತಾಗಿದೆ. ಇಂದು ಹೋಟೆಲ್ ನಡೆಸುವುದು ಉದ್ಯಮವಾಗಿ ಮಾರ್ಪಾಡಾಗಿದೆ. ಹೋಟೆಲ್ ನಲ್ಲಿ ಕೆಲಸ ಮಾಡುವ ಅನೇಕ ಸ್ತರದ ಹುದ್ದೆಗಳಿಗೆ ಶೈಕ್ಷಣಿಕ ಕೋರ್ಸ್ ಗಳು ಕೂಡ ಬಂದಿರುವುದು ವಾಸ್ತವಿಕ ಸತ್ಯ.

 ಅಂದು ಹಳ್ಳಿಗಳ ಗೂಡಂಗಡಿಗಳಲ್ಲಿ, ಚಪ್ಪರದ ಅಂಗಡಿಗಳಲ್ಲಿ ಚಹಾ ಸೋಸುತ್ತಾ,  ಸ್ಥಳೀಯ ತಿನುಸುಗಳನ್ನು ಮಾಡುತ್ತಾ, ಗಿರಾಕಿಗಳನ್ನು ತಮ್ಮ ಕಡೆ ಸೆಳೆದು ಬದುಕನ್ನು ಕಟ್ಟಿಕೊಳ್ಳುತ್ತಿದ್ದರು.  ದುಡ್ಡು ಅಷ್ಟೊಂದು ಪ್ರಧಾನವಾಗಿಲ್ಲದ ಕಾಲದಲ್ಲಿ ಬಂದ ಗಿರಾಕಿಗಳ ಸೇವೆಯನ್ನು ಪ್ರೀತಿಯಿಂದ ಮಾಡುತ್ತಿದ್ದರು.  ಇವತ್ತು ಚಹಾ ಮಾಡೋದು ; ಮಾರುವುದು ಒಂದು ಉದ್ಯಮವಾಗಿ ಮಾರ್ಪಟ್ಟಿದೆ.  ಚಹಾ ಮಾರುತ್ತಾ.. ಮಾರುತ್ತಾ..  ದೇಶದ ದೊಡ್ಡ ಹುದ್ದೆಯನ್ನೇ ಅಲಂಕರಿಸಿದವರನ್ನು ನಾವು ನೋಡುತ್ತೇವೆ..!!  ಚಹಾ ಮಾರುವವನು ಕೂಡ ಯಾವುದಕ್ಕೂ ಕಡಿಮೆಯಿಲ್ಲ ಎನ್ನುವುದನ್ನು ಸಾಬೀತುಪಡಿಸಲಾಗಿದೆ.

ಚಹಾ ಎಂದರೆ… ಭಾರತೀಯರಿಗೆ ಅನುಭೂತಿಯಾದ ಪೇಯ. ದಣಿದ ದೇಹಕ್ಕೆ ವಿಶ್ರಾಂತಿಯನ್ನು ನೀಡಲು ಚಹಾ ಬೇಕೇ ಬೇಕು. ದೂರದ ಊರಿನಿಂದ ಬಂದ ಬಂಧುಗಳಿಗಾಗಿ, ಬಹುದಿನಗಳ ನಂತರ ಭೇಟಿಯಾದ ಸ್ನೇಹಿತರಿಗಾಗಲಿ ಚಹಾ ಕುಡಿಸಲೇಬೇಕು…!!  ನಾವು ಹೀರುವ ಸಿಪ್ ಬೈ ಸಿಪ್ಪಿಗೆ   ಚಹಾ…ವ್ಹಾ…!!  ಪ್ರೀತಿಯಿಂದ ಆಪ್ತತೆಯಿಂದ ಮಾತನಾಡುತ್ತಾ,  ಮಾತನಾಡುತ್ತಾ ಹೃದಯ ಹಗುರವಾಗುವ ಅನುಭೂತಿಯನ್ನು ಕೊಡುತ್ತದೆ ಚಹಾ..!!

 ಚಹಾ ಒಂದು ಆಪ್ತ ಪೇಯ… ಅದನ್ನು ಇವತ್ತು ವ್ಯವಹಾರಿಕವಾಗಿ, ಉದ್ಯಮವಾಗಿ ಹಲವು ಹೆಸರುಗಳೊಂದಿಗೆ ಮಾರುಕಟ್ಟೆಗೆ ಬಂದಿದೆ. ಸಹ್ಯಾದ್ರಿ ಬೆಟ್ಟದ ತಪ್ಪಲಿನಲ್ಲಿ,  ತಂಪು ನೆಲದ ಮಡಿಲಿನಲ್ಲಿ..ನಮ್ಮ ರಾಜ್ಯದ ಮಾತೃಭೂಮಿಯೊಳಗೆ ಬೆಳೆದ ಚಹಾದ ಎಲೆಗಳು, ಕಾಫಿಯ ಬೀಜಗಳು.. ಘಮ ಘಮ ಪರಿಮಳದೊಂದಿಗೆ ಎಲ್ಲರ ಮನಸ್ಸನ್ನು ಸೆಳೆಯುತ್ತವೆ. ಇಂತಹ ಸೆಳೆಯುವ ಚಹಾಕ್ಕೆ ಹಲವು ಮಸಾಲೆ ಪದಾರ್ಥಗಳನ್ನು ಬೆರಸಿ, ಹೊಸ ಹೊಸ ಹೆಸರುಗಳಿಂದ ಕರೆದು, ಟೀ ಸ್ಟಾಲ್ ಗಳನ್ನು ಇಟ್ಟಿರುವುದನ್ನು ನಾವು ಕಾಣುತ್ತೇವೆ.  ಕುಡಿಯುವ ಚಹಾ ಮಾತ್ರ ಒಂದೇ..! ಆದರೆ ಕೊಡುವ ರುಚಿ ಬೇರೆ ಬೇರೆಯಾಗಿರುತ್ತದೆ…!!  

ಪ್ರಸ್ತುತ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಬಂದಿರುವ ಸಾಹುಕಾರ ಚಹಾ, ಪುನೇರಿ ಚಹಾ, ಪಾಟೀಲ್ ಖಡಕ್  ಚಹಾ, ಇರಾನಿ ಕಡಕ್ ಟೀ, ಬಾಸುಂದಿ ಟೀ, ಜಾಗ್ರಿ ಅಡ್ಡ ಟೀ ಸ್ಟಾಲ್,  ಸಲ್ಗರ್ ಅಮೃತ್ ಚಹಾ,  ತಲಾಬ್ ಚಹಾ…… ಹೀಗೆ ವಿವಿಧ ಹೆಸರುಗಳು ಹೊಂದಿ ಟೀ ಕುಡಿಯುವವನ ಮನಸ್ಸನ್ನು ಅಹ್ಲಾದಗೊಳಿಸುತ್ತವೆ.  

ಚಹಾ ಮಾಡುವ ವ್ಯಕ್ತಿಗಳನ್ನು ಹಾಗೆ ಸುಮ್ಮನೆ ವಿಚಾರಿಸಿದಾಗ,  “ಅದೇನಿಲ್ಲ ಸರ್.. ಚಹಾಪುಡಿ ಒಂದೇ  ಇರುತ್ತದೆ. ನಾವು ಹಾಕುವ ಹಾಲು, ಚಹಾ ಪುಡಿ, ಸಕ್ಕರೆ, ಬೆಲ್ಲ, ಶುಂಠಿ… ಇವುಗಳನ್ನು ಅಳತೆಗೆ ಅನುಗುಣವಾಗಿ ಹಾಕಬೇಕು ಮತ್ತು ಇಂತಿಷ್ಟೇ ಸಮಯದ ಮಿತಿಯೊಳಗೆ ಚೆನ್ನಾಗಿ ಕುದಿಸಬೇಕು.  ಕುದಿಯುತ್ತಾ… ಕುದಿಯುತ್ತಾ ಚಹಾ ತನ್ನ ಪರಿಮಳವನ್ನು ಬೀರಿದಾಗ ಅದನ್ನು ಸೋಸಬೇಕು.  ಆಗ ಚಹಾ ತನ್ನ ಪರಿಮಳವನ್ನು ಸೂಸುತ್ತದೆ. ಕುಡಿಯುವ ವ್ಯಕ್ತಿಗಳಿಗೆ  ಚಹಾ ರುಚಿಯನ್ನು ಒದಗಿಸುತ್ತದೆ. ಇಲ್ಲವಾದರೆ ಹ್ಯಾಗಬೇಕೋ ಹಾಗೆ ಬೇಕಾಬಿಟ್ಟಿಯಾಗಿ  ಕುದಿಸಿದರೆ,  ಹೆಚ್ಚು ಕಡಿಮೆ ಪ್ರಮಾಣದ ವಸ್ತುಗಳನ್ನು ಬೆರೆಸಿ ಚಹಾ ಮಾಡಿದರೆ, ಚಹಾ ರುಚಿ ಕೊಡುವುದಿಲ್ಲ…!  ಬದುಕು ಹಾಗೆ ಅಲ್ವೇ ಸಾರ್ …?”  ಎಂದು ಮುಗುಳ್ನಗುತ್ತಾರೆ.

ಗೂಡಂಗಡಿಯಲ್ಲಿ ಪ್ರಾರಂಭವಾದ ಚಹಾ, ದೊಡ್ಡ ದೊಡ್ಡ ಮಹಲ್ಲಿನ ಹೋಟೆಲ್ಗಳಲ್ಲಿ ತನ್ನ ಇರುವಿಕೆಯನ್ನು ಸಾಬೀತುಪಡಿಸಿ ಮತ್ತೆ ಈಗ ಮಾರುಕಟ್ಟೆಯ ರಸ್ತೆಯ ಆಜುಬಾಜು ಹೊಸ ವಿನ್ಯಾಸದೊಂದಿಗೆ ‘ಟೀ ಸ್ಟಾಲ್ ‘ ಎಂಬ ಹೆಸರಿನೊಂದಿಗೆ ಪ್ರಸಿದ್ಧಿಯನ್ನು ಹೊಂದುತ್ತಿದೆ.  ನಮ್ಮ ಸ್ಥಳೀಯ  ಭಾಗದಲ್ಲಿ ಹಲವು ವ್ಯಕ್ತಿಗಳು ಚಹಾ ಹೋಟೆಲ್ ಗಳಿಂದಾಗಿಯೇ ಪ್ರಸಿದ್ದಿಯಾಗಿದ್ದಾರೆ. ಕಾಸಿಮ್ ಚಹಾ ಅಂಗಡಿ, ಗಿರಿಯಪ್ಪನ ಅಂಗಡಿ, ಪಂಪಣ್ಣನ ಚಪ್ಪರದ ಚಹಾ ಹೋಟೆಲ್, ಸಕ್ಕರಪ್ಪನ ಚಹಾದ ಅಂಗಡಿ,  ಸುರೇಶ್  ಚಹಾ  ಅಂಗಡಿ,  ಶೆಟ್ಟರ ಚಹಾ ಅಂಗಡಿ, ಮೋಹಿದ್ದಿನ್ ಟೀ ಸ್ಟಾಲ್… ಹೀಗೆ ಹಲವು ಹೆಸರುಗಳೊಂದಿಗೆ ಸ್ಥಳೀಯ ಅಸ್ತಿತ್ವವನ್ನು ಉಳಿಸಲು ಕೈಚಾಚಿ ಕರೆಯುತ್ತಿವೆ.

 ಇವತ್ತಿನ ಪ್ರ್ಯಾಂಚಿಸಿಯ ಚಹಾ ಅಂಗಡಿಗಳ ಪೈಪೋಟಿಯಲ್ಲಿ ಸ್ಥಳೀಯ ಅಂಗಡಿಗಳು ನಲುಗುತ್ತಿವೆ. ಯಾವುದೋ ರಾಜ್ಯದಲ್ಲಿದ್ದ ಚಹಾದಂಗಡಿಯ ಪ್ರ್ಯಾಂಚಿಸಿಗಳು ನಮ್ಮಲ್ಲಿ ಬಂದು  ವ್ಯಾಪಾರವನ್ನು ವಿಸ್ತರಿಸಿಕೊಂಡು,  ಅವರು ಕೊಡುವ ಚಹಾ ಪುಡಿ, ಟಿಪ್ಸ್ ಗಳನ್ನು ಬಳಸಿಕೊಂಡು ಎಲ್ಲರ ಮನಸ್ಸನ್ನು ಗೆಲ್ಲುತ್ತ ಗೆಲ್ಲುತ್ತಾ ಬದುಕನ್ನು ಕಟ್ಟಿಕೊಳ್ಳುವವರು ಹಲವರಿದ್ದಾರೆ.  ಒಂದು ಕಾಲದಲ್ಲಿ  ಚಹಾ ಮಾರುವವರೆಂದರೇ ಮೂಗು ಮುರಿಯುತ್ತಿದ್ದ ನಾವುಗಳು, ಇವತ್ತು ಮೂಗಿನ ಮೇಲೆ ಬೆರಳಿಡುವಂತೆ ವ್ಯಾಪಾರದ ಗಮತ್ತು  ಮಾಡುತ್ತಿರುವುದನ್ನು ಕಂಡರೆ ಯಾವುದನ್ನು ನಾವು ಅಷ್ಟು ಕೀಳಾಗಿ ಕಾಣಬಾರದೆನ್ನುವ ಮಾತುಗಳು ನೆನಪಾಗುತ್ತದೆ.

ಚಹಾ….ಕುಡಿಯೋಣ ಬನ್ನಿ… ಹ್ಹ ಹ್ಹಾ…!! ಅದರ ಪರಿಮಳದ ಗಮತ್ತು ಸವಿಸೋಣ.

One thought on “‘ಚಹಾ ಮಾರುಕಟ್ಟೆಯೊಳಗಿನ ಗಮತ್ತು’-ಓರೆನೋಟದ ಲೇಖನ..ರಮೇಶ ಸಿ ಬನ್ನಿಕೊಪ್ಪ ಹಲಗೇರಿ

  1. ಚಹದ ಮಹಿಮೆಯ ಬಗ್ಗೆ ಸೊಗಸಾಗಿ ಬರೆದಿರುವಿರಿ. ಈಗ Tea Stall ಗಳು ಹಲವಾರು ಆಕರ್ಷಕ ಹೆಸರುಗಳೊಂದಿಗೆ ಮಿಂಚುತ್ತಿವೆ. Tea Point ಅಂತಾರೆ, Tea Talab ಅಂತಾರೆ, ಇನ್ನೂ ಏನೇನೋ…? ಹೋದ ತಿಂಗಳಲ್ಲಿ ನಾವು ನೇಪಾಳ, ಅಯೋಧ್ಯಾ ಮತ್ತು ಕಾಶಿ ಪ್ರವಾಸಕ್ಕೆ ಹೋದಾಗ ಬೆಂಗಳೂರು-ಗೋರಕಪುರ ರೈಲಿನಲ್ಲಿ ಕುಡಿದ ಮಸಾಲೆ ಚಹ ಇನ್ನೂ ನನ್ನ ಮನದಂಗಳದಲ್ಲಿ ಸುಳಿದಾಡುತ್ತಿದೆ. ನಿಜವಾಗಿಯೂ ಅತ್ಯದ್ಭುತ.
    ಅಭಿನಂದನೆಗಳು.

Leave a Reply

Back To Top