ಸುಮತಿಯು ಪತ್ರವನ್ನು ತನ್ನ ಕೈಗೆ ಕೊಡುವುದಿಲ್ಲ ಎಂಬುದು

ನಾರಾಯಣನ್ ರವರಿಗೆ ಖಾತ್ರಿಯಾಯಿತು. ಅಳಿಯ ಏನು ತೀರ್ಮಾನಿಸುವನೋ ಹಾಗೆಯೇ ಆಗಲಿ. ಎಂದು ಯೋಚಿಸುತ್ತಾ ಸುಮ್ಮನಾದರು. ಸಂಜೆಯಾಯಿತು ವೇಲಾಯುಧನ್ ಅಂದಿನ ಕೆಲಸ ಮುಗಿಸಿ ಮನೆಗೆ ಹಿಂದಿರುಗಿದರು. ಮಾವ ಹಾಗು ಸುಮತಿಯ ತಮ್ಮಂದಿರು ಬಂದಿರುವುದು ತಿಳಿದು ಅವರಿಗೆ ಖುಷಿಯಾಯಿತು.

ಅವರ ಯೋಗಕ್ಷೇಮವನ್ನು ವಿಚಾರಿಸಿ ಒಳಗೆ ಹೋಗಿ ಬಟ್ಟೆ ಬದಲಿಸಿ ಕೈ ಕಾಲು ಮುಖ ತೊಳೆದು ಬಂದು ಮತ್ತೆ ಅವರೊಂದಿಗೆ ಮಾತಿಗೆ ಕುಳಿತರು. ಸುಮತಿ ಹಬೆಯಾಡುವ ಕಾಫಿಯೊಂದಿಗೆ ನೇಂದ್ರ ಬಾಳೆ ಹಣ್ಣಿನಿಂದ ಮಾಡಿದ ಬಿಸಿ ಪಳಂ ಪೊರಿ ಮತ್ತು ಮೆಣಸಿನ ಪುಡಿಯನ್ನು ಬೆರೆಸಿದ ಬಾಳೆಕಾಯಿ ಚಿಪ್ಸ್ ತಂದು ಎಲ್ಲರಿಗೂ ಕೊಟ್ಟಳು. 

ರಾತ್ರಿಯ ಊಟಕ್ಕೆ ತಯಾರಿ ಮಾಡಲೆಂದು ಅಡುಗೆಯ ಮನೆಯ ಕಡೆಗೆ ನಡೆದಳು. ರಾತ್ರಿ ಊಟದ ನಂತರ ನಾರಾಯಣನ್ ಹಾಗು ಸುಮತಿಯ ತಮ್ಮಂದಿರು ಹೊರಟರು. ಒಲ್ಲದ ಮನಸ್ಸಿನಿಂದ ಅಪ್ಪ ಹಾಗೂ ತಮ್ಮಂದಿರನ್ನು ಬೀಳ್ಕೊಟ್ಟು ಸುಮತಿ ಒಳನಡೆದಳು.

ಅಡುಗೆ ಮನೆಯ ಕೆಲಸಗಳನ್ನು ಮುಗಿಸಿ ಮಲಗುವ ಕೋಣೆಗೆ ಬಂದಳು. ಪತಿಯು ಹಾಗೇ ಸುಮ್ಮನೆ ಮಲಗಿರುವುದನ್ನು ಕಂಡಳು. ಬೆಳಗ್ಗೆ ಅಪ್ಪ ತಂದಿದ್ದ ಪತ್ರದ ಲಕೋಟೆಯನ್ನು ಹಿಡಿದು ಹೇಗೆ ಹೇಳುವುದು ಎಂದು ಯೋಚಿಸುತ್ತಾ ಪತಿಯನ್ನು ನೋಡಿದಳು. ಸುಮತಿಯು ತನ್ನನ್ನು ನೋಡುತ್ತಾ ಏನೋ ಹೇಳಲು ಪ್ರಯತ್ನ ಮಾಡುತ್ತಿರುವುದು ವೇಲಾಯುಧನ್ ರವರಿಗೆ ತಿಳಿಯಿತು.

” ಏನು ಸುಮತಿ ಏನಾಯ್ತು…. ಏನೋ ಹೇಳಬೇಕೆಂದಿರುವೆ ಆದರೆ ಹೇಳದೇ ನನ್ನನ್ನೇ ನೋಡುತ್ತಿರುವೆ…ಏನಾದರೂ ಮುಖ್ಯ ವಿಷಯವೇ? ಎಂದು ಕೇಳಿದರು. ಅವರು ಹಾಗೆ ಕೇಳಿದಾಗ ಸುಮತಿಗೆ ಸ್ವಲ್ಪ ಧೈರ್ಯ ಬಂದಿತು. ಗಂಟಲು ಸರಿ ಮಾಡಿಕೊಂಡು ಕೈಯಲ್ಲಿ ಹಿಂದೆ ಮರೆಮಾಚಿ ಹಿಡಿದಿದ್ದ

ಲಕೋಟೆಯನ್ನು ಮೆಲ್ಲನೆ ಪತಿಯೆಡೆಗೆ ಚಾಚಿದಳು.

ಆ ಉದ್ದದ ಲಕೋಟೆಯನ್ನು ತೆಗೆದುಕೊಂಡು ತಿರುಗಿಸಿ ನೋಡಿದರು. ಕರ್ನಾಟಕ ಸರಕಾರದ ಮುದ್ರೆಯನ್ನು ಕಂಡರು. ಆದರೂ ತೆರೆದು ನೋಡದೇ…” ಇದರಲ್ಲಿ ಇರುವ ವಿಷಯ ಏನೆಂದು ನೀನೇ ಹೇಳು…ಈಗ ಓದುವ ತಾಳ್ಮೆ ನನಗಿಲ್ಲ…ಎಂದಾಗ ಸುಮತಿಗೆ ಒಳಗೊಳಗೇ ಅಳುಕು ಹೇಗೆ ಆರಂಭಿಸಲಿ? ವಿಷಯ ತಿಳಿದ ನಂತರ ಏನು ಹೇಳುವರೋ…ಪತಿಯು ಬಹಳ ಕೋಪಿಷ್ಠ ಎಂದು ಸುಮತಿಗೆ ತಿಳಿದಿದೆ. ಅಪ್ಪ ತಾನು ಕೆಲಸಕ್ಕೆ ಹೋಗುವ ಬಗ್ಗೆ ನಕಾರ ಸೂಚಿಸಿದ್ದರು. ಈಗ ಪತಿ ಏನು ಹೇಳುವರೊ ಏನೋ…ಎಂದು ಮತ್ತೊಮ್ಮೆ ಗಂಟಲು ಸರಿ ಮಾಡಿಕೊಂಡು….”ಇದು ಕರ್ನಾಟಕ ಸರ್ಕಾರದಿಂದ ನನಗೆ ಬಂದ ಪತ್ರ “….ಎಂದು ಹೇಳುತ್ತಾ ಪತಿಯ ಮುಖ ನೋಡಿದಳು. ವೇಲಾಯುಧನ್ ಸುಮತಿಯ ಮಾತಿಗೆ…ಹೂಂ ಅದು ನನಗೆ ತಿಳಿಯಿತು….ಲಕೋಟೆಯ ಮೇಲೆ ನೋಡಿದೆ….ಒಳಗೆ ಇರುವ ಪತ್ರದಲ್ಲಿ ಏನು ಬರೆದಿರುವರು ಅದನ್ನು ಹೇಳು….ನನಗೆ ಆಯಾಸವಾಗಿದೆ…ನಿದ್ರೆ ಬರುತ್ತಿದೆ ಬೇಗ ಹೇಳಿ ಮುಗಿಸು…ಎಂದಾಗ ಸ್ವಲ್ಪ ಅಳುಕಿನಿಂದಲೇ…  ಆ ಪತ್ರದಲ್ಲಿ ನನ್ನನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಮುಖ್ಯ ದಾದಿಯಾಗಿ ನೇಮಕಾತಿ ಮಾಡಿರುವ ಬಗ್ಗೆ ತಿಳಿಸಲಾಗಿದೆ…ನಾನು ಕೇರಳದಿಂದ ಇಲ್ಲಿಗೆ ಬಂದ ನಂತರ ಹತ್ತನೇ ತರಗತಿಯ ಪರೀಕ್ಷೆ ಬರೆದು ಪ್ರಥಮ ದರ್ಜೆಯಲ್ಲಿ ಉತ್ತೀರ್ಣಳಾದೆ….

ಕೂಡಲೇ ನನ್ನ ಗೆಳತಿ ಈ ಕೆಲಸಕ್ಕೆ ಅರ್ಜಿ ಸಲ್ಲಿಸುವಂತೆ ಹೇಳಿ ಸಹಾಯ ಮಾಡಿದ್ದಳು”….ಎಂದು ಮಾತು ನಿಲ್ಲಿಸಿ ಪತಿ ಏನು ಹೇಳುವರೋ ಎಂದು ಅವರೆಡೆಗೆ ನೋಡಿದಳು….” ಹೂಂ ಮುಂದುವರೆಸು”….ಎಂದು ಪತಿ ಹೇಳಲು….”ಆದಷ್ಟು ಬೇಗ ಮುಖ್ಯವಾದ ಕಾಗದ ಪತ್ರಗಳೊಂದಿಗೆ ಹೋಗಿ ಮೇಲಾಧಿಕಾರಿಯನ್ನು ಭೇಟಿ ಮಾಡಲು ಸೂಚಿಸಿದ್ದಾರೆ ಎಂದಳು”….

“ಹೂಂ ಅದು ಸರಿ ಇದಕ್ಕೆ ನಾನೇನು ಮಾಡಬೇಕು?”… ಎಂದು ವೇಲಾಯುಧನ್ ಕೇಳಿದಾಗ ಇದ್ದ ಎಲ್ಲಾ ಧೈರ್ಯವನ್ನು ತಂದುಕೊಂಡು ಮನದಲ್ಲಿ ಶ್ರೀ ಕೃಷನನ್ನು ನೆನೆಯುತ್ತಾ…. ಪತಿಯ ನೋಟ ಎದುರಿಸುವ ಧೈರ್ಯವಿಲ್ಲದೇ ಕುತ್ತಿಗೆ ಬಾಗಿಸಿ ನೆಲವನ್ನು ನೋಡುತ್ತಾ…”ಈ ಕೆಲಸಕ್ಕೆ ಸೇರಲು ನೀವು ಅನುಮತಿಸಿದರೆ ನಾನು ಈ ಕೆಲಸಕ್ಕೆ ಆದಷ್ಟು ಬೇಗ ಸೇರಿಕೊಳ್ಳುವೆ…. ದಾರಿಯಾಗಿ ಸೇವೆ ಸಲ್ಲಿಸುವುದು ನನ್ನ ಬಹುದಿನದ ಕನಸು”…. ಎಂದಳು. ಅನಿರೀಕ್ಷಿತವಾಗಿ ಅವಳ ಕೆನ್ನೆಯ ಮೇಲೆ ಛಟೀರ್ ಎಂದು ಬಲವಾದ ಏಟೊಂದು ಬಿತ್ತು. ಸುಮತಿ ಇದನ್ನು ನಿರೀಕ್ಷಿಸಿರಲಿಲ್ಲ. ಕಣ್ಣು ಕತ್ತಲೆ ಇಟ್ಟಿತು. ತಲೆ ಗಿರ್ ಎಂದು ತಿರುಗಿದ ಹಾಗೆ ಅನಿಸಿತು. ಏಟು ಬಿದ್ದ ಕೆನ್ನೆಯನ್ನು ಬಲವಾಗಿ ಒತ್ತಿಕೊಂಡು ನೋವಿನಿಂದ ಅಳುತ್ತಾ …. “ಈ ಕೆಲಸಕ್ಕೆ ಒಳ್ಳೆಯ ಸಂಬಳವೂ ಇದೆ…ಆರು ತಿಂಗಳ ತರಬೇತಿಯ ನಂತರ ನೇರವಾಗಿ ನನ್ನನ್ನು ಕೆಲಸಕ್ಕೆ ನೇಮಕ ಮಾಡುತ್ತಾರೆ…. ಸರ್ಕಾರಿ ನೌಕರಿ ಆದ್ದರಿಂದ ರಜೆಯೂ ಇರುತ್ತದೆ…. ನಾನೂ ಕೆಲಸಕ್ಕೆ ಹೋಗುವುದಾದರೆ ಮುಂದೆ ನಮಗೆ ಹುಟ್ಟುವ ಮಕ್ಕಳನ್ನು ಸಾಕಲು ಕಷ್ಟವಾಗುವುದಿಲ್ಲ….ಎಂದಳು. ಈ ಮಾತುಗಳನ್ನು ಕೇಳಿದ್ದೇ ವೇಲಾಯುಧನ್ ಕೋಪದಿಂದ ಹೆಂಡತಿಯನ್ನು ಹಿಗ್ಗಾ ಮುಗ್ಗಾ ಥಳಿಸಿದರು….”ಏನು ನೀನು ತರುವ ಸಂಬಳದಿಂದ ನಮ್ಮ ಮನೆ ಸಂಸಾರ ನಡೆಯಬೇಕೆ?… ನಿನಗೆ ಅನ್ನ ಹಾಕುವ ಶಕ್ತಿ ನನಗೆ ಇಲ್ಲವೇ?… ಮುಂದೆ ಹುಟ್ಟುವ ಮಕ್ಕಳನ್ನು ಸಾಕಲು ನಾನು ಅಶಕ್ತನೇ?…. ನೀನು ತರುವ ಸಂಬಳದಿಂದ ನಾನು ಬದುಕು ಸಾಗಿಸಬೇಕೆ?…. ನನಗೆ ಈಗ ಸರ್ಕಾರಿ ಕೆಲಸ ಇಲ್ಲವೆಂದು ನೇರವಾಗಿ ಹೇಳದೇ ಹೀಗೆ ನನ್ನನ್ನು ಮೂದಲಿಸುತ್ತಾ ಇರುವೆಯಾ?… ನನ್ನನ್ನು ಏನೆಂದು ತಿಳಿದುಕೊಂಡಿರುವೆ?…. ಸುಮ್ಮನೇ ನಾನೆಷ್ಟು ಸಂಪಾದಿಸಿ ತರುವೇನೋ ಅದರಲ್ಲಿ ಸಂಸಾರ ಮಾಡುವುದನ್ನು ರೂಢಿಸಿಕೋ ….ಮನೆಯ ಕೆಲಸಗಳನ್ನು ಮಾಡಿಕೊಂಡು ಸಂಸಾರ ಸಾಗಿಸಿಕೊಂಡು ಹೋಗು”…ಎಂದು ಕೋಪದಿಂದ ಹೇಳುತ್ತಾ ಕೋಣೆಯಿಂದ ಆಚೆ ಹೋದರು.

ಸುಮತಿಗೆ ಇದೊಂದು ದೊಡ್ಡ ಆಘಾತವೇ ಆಗಿತ್ತು. ಸಾವರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮೈ ಮೇಲೆ ಬಿದ್ದ ಏಟುಗಳಿಂದ ಬಾಸುಂಡೆ ಬಂದಿತ್ತು. ಅಪ್ಪ ಕೋಪಿಷ್ಠರಾದರೂ ಹೀಗೆ ತನ್ನನ್ನು ಎಂದೂ ಹೊಡೆದಿರಲಿಲ್ಲ.

ಬೈದರೂ ಕೂಡಾ ನಾನು ಬಹಳ ಹೆದರುತ್ತಾ ಇದ್ದೆ. ಅಮ್ಮ ಕೂಡಾ ಹೊಡೆದವರಲ್ಲ.  ಶ್ರೀ ಕೃಷ್ಣಾ ಇದರಲ್ಲಿ ನನ್ನದೇನು ತಪ್ಪಿದೆ ಹೇಳು ಎಂದು ಕೃಷ್ಣನ ಪುಟ್ಟ ವಿಗ್ರಹವನ್ನು ಅಪ್ಪಿ ಹಿಡಿದು ಮನಸೋ ಇಚ್ಛೆ ಅತ್ತಳು. ಎಂದೂ ಹೀಗೆಲ್ಲಾ ನೋವು ಅನುಭವಿಸಿರದ ಸುಮತಿ ಮಾನಸಿಕವಾಗಿ ತತ್ತರಿಸಿಹೋದಳು. ಅತ್ತು ಅತ್ತು ಸುಸ್ತಾದಳು. ಶ್ರೀ ಕೃಷ್ಣನ ವಿಗ್ರಹವನ್ನು ಭದ್ರವಾಗಿ ಹಿಡಿದುಕೊಂಡು ಮೂಲೆಯಲ್ಲಿ ಕುಳಿತಳು. ಹಾಗೇ ಸುಸ್ತಾಗಿ ನಿದ್ರೆಯ ಮಂಪರು ಅವಳನ್ನು ಆವರಿಸಿತು. ಯಾರೋ ತನ್ನನ್ನು ಮುಟ್ಟಿದ ಅನುಭವವಾಗಿ ಎಚ್ಚರವಾಯಿತು. ನೋಡಿದರೆ ಪತಿ ತನ್ನನ್ನು ಎಬ್ಬಿಸುತ್ತಿದ್ದರು. ಪತಿಯ ಸ್ಪರ್ಶಕ್ಕೆ ಮತ್ತೂ ಹೆದರಿ ಮುದುರಿಕೊಂಡು ಕುಳಿತಳು. ಅವಳಿನ್ನೂ ಹದಿನಾರರ ಬಾಲೆ. ಹೆದರಿದ ಹುಲ್ಲೆಮರಿಯಂತೆ ಕಣ್ಣುಗಳನ್ನು ಬಿಗಿಯಾಗಿ ಮುಚ್ಚಿ ಕುಳಿತಳು. ಎಲ್ಲಿ ಇನ್ನೂ ಪತಿ ಕೋಪಗೊಂಡು ತನ್ನನ್ನು ಮತ್ತೆ ಹೊಡೆದರೆ ಎಂಬ ಭಯ ಅವಳನ್ನು ಕಾಡಿತು. ವೇಲಾಯುಧನ್ ರವರಿಗೆ ಎಂದಿನಂತೆ ಪತ್ನಿಯ ಸಾಮೀಪ್ಯ ಬೇಕಿತ್ತು. ಹಾಗಾಗಿ ಪತ್ನಿಯ ಬಳಿ ಬಂದಿದ್ದರು. ಅವಳು ತನ್ನ ಹೊಡೆತದಿಂದ ಎಷ್ಟು ನೊಂದು ಹೆದರಿರುವಳು ಎನ್ನುವ ಚಿಂತೆಯೂ ಇಲ್ಲದೇ. ಅವಳಿನ್ನೂ ಪುಟ್ಟ ಹುಡುಗಿ ಎನ್ನುವ ಪರಿಜ್ಞಾನವೂ ಇಲ್ಲದೇ.  ಪತಿಯ ಇಂಗಿತವನ್ನು ಅರಿತ ಸುಮತಿ ಮನದಲ್ಲಿ ಬಹಳವಾಗಿ ನೊಂದುಕೊಂಡಳು. ಕೋಪದಿಂದ ಹೊಡೆದಿದ್ದಕ್ಕಾಗಿ ತನ್ನನ್ನು ಸಮಾಧಾನ ಪಡಿಸಿ ರಮಿಸಲು ಬಂದಿರುವರು ಎಂದು ತಿಳಿದಿದ್ದಳು. ಆದರೆ ಅವಳ ನಿರೀಕ್ಷೆ ಸುಳ್ಳಾಯಿತು.


Leave a Reply

Back To Top