ಕಾವ್ಯ ಸಂಗಾತಿ
ಇಂದಿರಾ ಮೋಟೆಬೆನ್ನೂರ
ಕವಿತೆನೀನಲ್ಲವೇ?
ನಗು ನೀಡುವುದು
ಬಹು ದೂರದ ಮಾತು
ಇದ್ದ ಕಿರು ನಗುವನ್ನೂ
ಅಳಿಸಿ ಹೋದ ಇಂದು ನೀನಲ್ಲವೇ…
ಖುಷಿ ನೀಡುವುದು
ಕನಸಿನ ಮಾತು
ಇದ್ದ ಪುಟ್ಟ ಖುಷಿಯನ್ನೂ
ಸುಟ್ಟ ಸುಧಾಕರ ನೀನಲ್ಲವೇ…
ಕಂಬನಿ ಒರೆಸುವುದು
ಸುಳ್ಳಿನ ಮಾತು…
ಕಣ್ಣೀರ ಕಡಲಲ್ಲೇ
ಮುಳುಗಿಸಿದ ಮೃಗಾಂಕ ನೀನಲ್ಲವೇ..
ಮಲ್ಲಿಗೆಮನಕೆ ಮೃದು ನುಡಿ
ಮೈಲು ದೂರ..ಮಾತು ಮೌನದ
ಬಾಣಗಳ ಉಡುಗೊರೆ
ನೀಡಿದ ಶಶಿ ನೀನಲ್ಲವೇ…
ಹೂವಿನ ಹಂದರ ಹೆಣಿಯುವ
ಅಂಬರದ ಚಂದಿರ…
ನೋವಿನ ಮೂಟೆಯ
ಕಾಣಿಕೆ ನೀಡಿದ ಕಳಾಧರ ನೀನಲ್ಲವೇ…
ಬದುಕ ಬಾಜಾರಿನಲಿ
ಭಾವಗಳ ಬಿಕರಿ ಮಾಡಿದೆ
ಜೀವಗಳ ವ್ಯಾಪಾರ
ವ್ಯವಹಾರವಾಗಿಸಿದ ಬುದ್ಧಿಜೀವಿ ನೀನಲ್ಲವೇ..
ಕಂಗಳಲಿ ಬಿತ್ತಿದ ಕನಸುಗಳ
ಕಸಿದು ಬೇರೆಯವರ
ಕಂಗಳಲಿ ಅರಳಿಸಿ
ನಗುತನಿಂದ ಆತ್ಮೀಯ ನೀನಲ್ಲವೇ…
ಸ್ನೇಹಾಮೃತ ಕಸಿದು
ನಗುತ್ತಲೇ ನಂಜುಣಿಸಿದ…
ಭಾವ ಬಿಕರಿ ಮಾಡಿದ
ಬಾಂದಳದ ದೊರೆ ನೀನಲ್ಲವೇ..
ತಾನಾಗಿಯೇ ಅರಳಿದ
ಸ್ನೇಹ ಪ್ರೀತಿಯ ನರಳಿಸಿ
ಕೊರಳಕೊಯ್ದ ಜೀವಚ್ಛವವಾಗಿಸಿದ
ಕಲ್ಲುಹೃದಯ ನೀನಲ್ಲವೇ…..
ಇಂದಿರಾ ಮೋಟೆಬೆನ್ನೂರ.
ಚನ್ನಾಗಿದೆ ಮೆಡಮ