ಬೆಲ್ಸ್ ಪಾಲ್ಸಿ (Bell’s palsy)ವೈದ್ಯಕೀಯ ಲೇಖನ-ಡಾ. ಅರಕಲಗೂಡು ನೀಲಕಂಠ ಮೂರ್ತಿ

ನಾನು ಆಗ ತಾನೆ ಬೆಳಗಿನ ಕ್ಲಿನಿಕ್ ಕೆಲಸ ಮುಗಿಸಿ ಮನೆಗೆ ಹಿಂತಿರುಗಿದ್ದೆ. ಪತ್ನಿ ಕೊಟ್ಟ ನಿಂಬೆ ರಸ ಕುಡಿದು, ಎಂದಿನಂತೆ ಒಂದು ಪುಸ್ತಕ ಹಿಡಿದು ಐದು ನಿಮಿಷ ಸಹ ಸಂದಿರಲಿಲ್ಲ, ಮಡದಿ ರೂಮಿಗೆ ಬಂದು, “ರೀ, ಪಕ್ಕದ ಮನೇಗೆ ಒಂದ್ ನಿಮಿಷ ಹೋಗಿಬರೋಣ ಬನ್ನಿ, ಪಾರ್ವತಮ್ಮ ಬಂದಿದಾರೆ; ಗಂಡನಿಗೆ ಹುಷಾರಿಲ್ಲ ಅಂತ” ಅಂದಾಗ, ಸೀದಾ ಹಾಗೆ ಎದ್ದು ನನ್ನ ಮಡದಿಯ ಸಂಗಡ ಹೊರಟೆ. ಸೀನಪ್ಪ ಒಂದು ಕುರ್ಚಿ ಮೇಲೆ ಕೂತಿದ್ದರು. ನಾನು ಹತ್ತಿರ ಹೋದಾಗಲೆ ಅವರ ಮುಖ ಗಮನಿಸಿದೆ; ಆದರೂ ಏನಾಗಿದೆ ಎಂದು ಕೇಳಿದೆ. ಆಗ ಸೀನಪ್ಪ ಮಾತಾಡಲು ಪ್ರಯತ್ನಿಸಿ ತೊದಲಿದಾಗ, ಪಾರ್ವತಮ್ಮನವರೆ, ‘ಒಂದರ್ಧ ಗಂಟೆಯಿಂದ  ಮಾತು ತೊದಲುತ್ತಿದೆ ಮತ್ತು ಒಂದು ಕಡೆಯ ಮುಖ ಜೋಲು ಬಿದ್ದು, ರೆಪ್ಪೆ ಸಹ ಸರಿಯಾಗಿ ಮುಚ್ಚುತ್ತಿಲ್ಲ’ ಎಂದು ವಿವರಿಸಿದರು. ಅನತಿ ಕಾಲದ ಹಿಂದೆ ಸೀನಪ್ಪ ಅವರಿಗೆ ಜ್ವರ ಬಂದು, ನಾನೆ ವೈರಸ್ ಜ್ವರ ಎಂದು ಹೇಳಿ ಔಷಧ ಕೊಟ್ಟಿದ್ದೆ. ಈಗ ನನಗೆ ಪೂರ್ಣ ಚಿತ್ರ ದೊರಕಿತು. ನಾನು ಪರೀಕ್ಷೆ ಮಾಡಿ, ಔಷಧ ಬರೆದುಕೊಟ್ಟು, ಫಿಸಿಯೋಥೆರಪಿ ಮಾಡಿಸಲೂ ಸಹ ಹೇಳಿ ಬಂದೆ. ವಾಸ್ತವ ಏನೆಂದರೆ, ಸೀನಣ್ಣ ಸದ್ಯ “ಬೆಲ್ಸ್ ಪಾಲ್ಸಿ” ಎಂಬ ಮುಖದ ಅರ್ಧ ಪಾರ್ಶ್ವವಾಯು ರೋಗದಿಂದ ಬಳಲುತ್ತಿದ್ದರು. ವೈರಸ್ ಜ್ವರದಿಂದ ಗುಣವಾದ ನಂತರ ಕೆಲವರಿಗೆ ಈ ರೀತಿಯ ಸಂಕೀರ್ಣ ಪರಿಣಾಮ ಉಂಟಾಗುವ ಸಂಭವ ಇರುತ್ತದೆ.

ಬೆಲ್ಸ್ ಪಾಲ್ಸಿ ಅಥವ ಬೆಲ್ಸ್ ಪಾರ್ಶ್ವವಾಯು ಎಂಬ ಕಾಯಿಲೆಯಿಂದ ಮುಖದ ಸ್ನಾಯುಗಳ ಅಲ್ಪಕಾಲಿಕ ದೌರ್ಬಲ್ಯ ಅಥವ ಪಾರ್ಶ್ವವಾಯು ಉಂಟಾಗುತ್ತದೆ. ಈ ರೋಗಕ್ಕೆ ತುತ್ತಾದವರ ಮುಖದ ಅರ್ಧ ಭಾಗ  (ಕೆಲವೊಮ್ಮೆ ಎರಡೂ ಬದಿಗಳು) ಜೋಲು ಬಿದ್ದಂತೆ ಕಾಣುವುದು. ಆದರೆ, ಈ ಪರಿಸ್ಥಿತಿ ಗಂಭೀರವೂ ಅಲ್ಲ ಮತ್ತು ಕೆಲವೇ ತಿಂಗಳುಗಳಲ್ಲಿ ಯಾವ ಥರದ ಔಷಧೋಪಚಾರ ಕೂಡ ಇಲ್ಲದೆ ಗುಣವಾಗುವುದು.

ಬೆಲ್ಸ್ ಪಾಲ್ಸಿಯಲ್ಲಿ, ಮುಖದ ಸ್ನಾಯುಗಳ ತಾತ್ಕಾಲಿಕ ಪಾರ್ಶ್ವವಾಯುವಿನ ಕಾರಣ, ನೋಡಲು ಸಮತೋಲನ ಕಳೆದುಕೊಂಡ ಹಾಗೆ ಮುಖದ ಒಂದು ಪಾರ್ಶ್ವದಲ್ಲಿ ಏರುಪೇರಾದಂತೆ ತೋರುತ್ತದೆ. ಹಾಗಾಗಿ ಮುಗುಳು ನಗೆ ಸಹ ಒಂದು ಭಾಗದಲ್ಲಿ ಇಳಿದ ಹಾಗೆ ಕಾಣುವುದಲ್ಲದೆ, ಆ ಭಾಗದ ಕಣ್ಣಿನ ರೆಪ್ಪೆಯೂ ಸಹ ಪೂರ್ತಿ ಮುಚ್ಚುವುದಿಲ್ಲ. ಅತ್ಯಂತ ಅಪರೂಪಕ್ಕೆ ಇದು ಮುಖದ ಎರಡು ಕಡೆ ಕೂಡ ಉಂಟಾಗಬಹುದು.

ನಮ್ಮ ಮುಖದ ಸ್ನಾಯುಗಳನ್ನು ನಿಯಂತ್ರಣದಲ್ಲಿಡುವ ಫೇಸಿಯಲ್ ಎಂಬ ಕಪಾಲ ನರವು (facial nerve/ ಅಥವ ಏಳನೆ ಕಪಾಲ ನರ/7th cranial nerve) ಉರಿಯೂತದಿಂದ ಉಬ್ಬಿಕೊಂಡಾಗ ಆ ಭಾಗದ ಮುಖವು ಪಾರ್ಶ್ವವಾಯುವಿಗೆ ತುತ್ತಾಗುತ್ತದೆ; ಅದು ಬೆಲ್ಸ್ ಪಾಲ್ಸಿ. ಆ ಥರದ ಉರಿಯೂತಕ್ಕೆ ಸಾಮಾನ್ಯವಾಗಿ ವೈರಲ್ ಸೋಂಕು ಕಾರಣವಾದರೂ, ಕೆಲವೊಮ್ಮೆ ಸರಿಯಾದ ಕಾರಣವಿಲ್ಲದೆ ಕೂಡ ಬೆಲ್ಸ್ ಪಾಲ್ಸಿ ಉಂಟಾಗುವ ಸಂಭವವಿರುತ್ತದೆ. ಈ ರೋಗ ಯಾವ ವಯಸ್ಸಿನವರಲ್ಲೂ ಕಾಣಿಸಬಹುದಾದರು, ಹದಿನೈದರಿಂದ ಅರವತ್ತು ವಯಸ್ಸಿನವರಲ್ಲಿ ಸಾಮಾನ್ಯ ಕಂಡುಬರುತ್ತದೆ. ಸರಾಸರಿ ವಯಸ್ಸು ನಲವತ್ತು.

ಸರ್ ಚಾರ್ಲ್ಸ್ ಬೆಲ್ (Sir Charles Bell) ಎಂಬ ಸ್ಕಾಟ್ಲೆಂಡ್ ಶಸ್ತ್ರಚಿಕಿತ್ಸಾತಜ್ಞ 19ನೆ ಶತಮಾನದಲ್ಲಿ ಈ ರೋಗವನ್ನು ವರ್ಣನೆ ಮಾಡಿದ್ದರಿಂದ ಆತನದ್ದೆ ಹೆಸರು ಈ ರೋಗಕ್ಕೆ ಶಾಶ್ವತವಾಗಿ ಉಳಿದಿದೆ.

ಬೆಲ್ಸ್ ಪಾಲ್ಸಿ ಖಂಡಿತ ಒಂದು ಗಂಭೀರ ರೋಗವಲ್ಲ. ಸಮಯ ಕಳೆದಂತೆ ಸಾಮಾನ್ಯವಾಗಿ ಎಲ್ಲ ರೋಗಿಗಳು ತಾವೆ ಗುಣಮುಖವಾಗುತ್ತಾರೆ. ಆದರೆ ಗಂಭೀರವಾದ ಪಾರ್ಶ್ವವಾಯು ರೋಗದ ಲಕ್ಷಣಗಳು ಬೆಲ್ಸ್ ಪಾಲ್ಸಿಯಲ್ಲಿ ಸಹ ಕಂಡುಬರುವುದರಿಂದ, ಮುಖದ ಸ್ನಾಯುಗಳ ಬಲಹೀನತೆ ಕಂಡುಬಂದ ಕೂಡಲೆ ವೈದ್ಯರನ್ನು ಕಾಣುವುದು ಉತ್ತಮ.

ರೋಗ ಲಕ್ಷಣಗಳು:
… ಮುಖದ ಒಂದು ಪಾರ್ಶ್ವದ ದೌರ್ಬಲ್ಯ ಅಥವ ಸಂಪೂರ್ಣ ಪಾರ್ಶ್ವವಾಯು — ಕೇವಲ ಘಂಟೆಗಳಲ್ಲಿ ಅಥವ ಕೆಲವು ದಿನಗಳಲ್ಲಿ ಬಾಧಿಸಬಹುದು.
… ಮುಖದ ಜೋಲುವಿಕೆ ಮತ್ತು ಮುಗುಳುನಗೆ ಅಥವ ಕಣ್ಣು ಮುಚ್ಚುವಿಕೆ ಮುಂತಾದ ಮಖದ ಅಭಿವ್ಯಕ್ತಿ ಕಷ್ಟಕರ.
… ಜೊಲ್ಲು ಸುರಿಯುವುದು.
… ದವಡೆಯ ಸುತ್ತ ಮತ್ತು ಪೀಡಿತ ಭಾಗದ ಕಿವಿಯಲ್ಲಿ ಅಥವ ಕಿವಿಯ ಹಿಂದೆ ನೋವು.
… ಪೀಡಿತ ಭಾಗದಲ್ಲಿ ಶಬ್ದಕ್ಕೆ ಅತಿಯಾದ ಸೂಕ್ಷ್ಮ ಸಂವೇದನೆ.
… ತಲೆನೋವು
… ರುಚಿಯ ನಷ್ಟ
… ಲಾಲಾರಸ ಹಾಗು ಕಣ್ಣೀರಿನ ಉತ್ಪತ್ತಿಯಲ್ಲಿ ಬದಲಾವಣೆಗಳು.

ಬೆಲ್ಸ್ ಪಾಲ್ಸಿ ಎಷ್ಟು ಸಾಮಾನ್ಯ:
ಹೆಚ್ಚೂಕಡಿಮೆ ಈ ರೋಗ ಅತಿ ಸಾಮಾನ್ಯ ಎನ್ನಬಹುದು. ಒಂದು ಲಕ್ಷ ಜನರಲ್ಲಿ ಹದಿನೈದರಿಂದ ಮೂವತ್ತು ಮಂದಿ ಈ ರೋಗದಿಂದ ಬಳಲುವರು.  ಅರವತ್ತರಲ್ಲಿ ಒಬ್ಬ ವ್ಯಕ್ತಿಗೆ ಅವರ ಜೀವಮಾನದಲ್ಲಿ ಯಾವಾಗಲಾದರು ಒಮ್ಮೆ ಈ ರೋಗ ಬರಬಹುದು. ಮುಖದ ಒಂದು ಭಾಗದ ಪಾರ್ಶ್ವವಾಯುವಿನ ಅತಿ ಪ್ರಮುಖ ಕಾರಣವೆ ಬೆಲ್ಸ್ ಪಾಲ್ಸಿ.

ರೋಗಲಕ್ಷಣಗಳು:
ಬೆಲ್ಸ್ ಪಾಲ್ಸಿಯ ಪ್ರಮುಖ ಲಕ್ಷಣವೆ ಮುಖದ ಒಂದು ಭಾಗದ ಸ್ನಾಯುಗಳ ಪಾರ್ಶ್ವವಾಯು. ಮುಖದ ಅರ್ಧ ಪಾರ್ಶ್ವ ಕೆಳಕ್ಕೆ ಕುಸಿದ ಹಾಗೆ ತೋರುತ್ತದೆ. ಹಾಗೆ ಜೋಲು ಬಿದ್ದಂತೆ ಕಾಣುವ ಮುಖದ ಅಂಗಗಳು —
… ಹಣೆ
… ಕಣ್ಣಿನ ಹುಬ್ಬು
… ಕಣ್ಣು ಮತ್ತು ರೆಪ್ಪೆ
… ಬಾಯಿಯ ಮೂಲೆ

ಬೆಲ್ಸ್ ಪಾಲ್ಸಿಯ ರೋಗಲಕ್ಷಣಗಳು ದಿಢೀರನೆ ಬರುವುದು ಸಾಮಾನ್ಯವಲ್ಲದೆ, 48 ರಿಂದ 72 ಘಂಟೆಗಳಲ್ಲಿ ತೀವ್ರವಾಗುತ್ತವೆ. ಕೆಲವರು ತೀಕ್ಷ್ಣವಲ್ಲದ ಮಾಂಸಖಂಡದ ದೌರ್ಬಲ್ಯ ಮಾತ್ರ ಅನುಭವಿಸಿದರೆ, ಉಳಿದವರು ಸಂಪೂರ್ಣ ಸ್ನಾಯುಗಳ ಪಾರ್ಶ್ವವಾಯುವಿನಿಂದಲೆ ಬಳಲುವರು. ರೋಗಿಗೆ ಕಣ್ಣು ಮಿಟುಕಿಸುವುದು, ಹಣೆಯ ಮೇಲಿನ ಗೆರೆಗಳ ಸುಕ್ಕುಗಟ್ಟುವುದು, ಸೊಟ್ಟ ಮೊರೆ ಮಾಡುವುದು ಮುಂತಾದ ಮುಖದ ಅಭಿವ್ಯಕ್ತಿಗಳು, ಪೀಡಿತ ಭಾಗದಲ್ಲಿ ಕಷ್ಟಕರವಾಗುತ್ತದೆ. ಅಲ್ಲದೆ ಮುಖದಲ್ಲಿ ಜೋಮು ಹಿಡಿದ ಅಥವ ಭಾರವಾದ ಅನುಭವ ಕೂಡ ಸಾಧ್ಯ. ಆದರೆ, ಸ್ಪರ್ಶ ಸಂವೇದನೆ ಇದ್ದು, ಬಿಸಿ ಮತ್ತು ಥಣ್ಣನೆ ಉಷ್ಣಾಂಶಗಳ ಅರಿವಾಗುತ್ತದೆ.
ಇನ್ನುಳಿದಂತಹ ರೋಗಲಕ್ಷಣಗಳೆಂದರೆ:


… ಜೊಲ್ಲು ಸುರಿಸುವುದು
… ಶುಷ್ಕ ಕಣ್ಣು (dry eyes)
… ಮಾತನಾಡಲು, ಊಟಮಾಡಲು ಮತ್ತು ಕುಡಿಯಲು ಕಷ್ಟ
… ಮುಖದ ಅಥವ ಕಿವಿಯ ನೋವು
… ತಲೆನೋವು
… ರುಚಿ ಸಂವೇದನೆಯ ಕೊರತೆ
… ಕಿವಿಯಲ್ಲಿ ರಿಂಗಣಿಸುವುದು (tinnitus)
… ಶಬ್ದ ಸೂಕ್ಷ್ಮತೆ (hyperacusis)
… ಲಾಲಾರಸ ಮತ್ತು ಕಣ್ಣೀರಿನ ಉತ್ಪತ್ತಿಯಲ್ಲಿ ಬದಲಾವಣೆ

ಬೆಲ್ಸ್ ಪಾಲ್ಸಿಯ ಮುನ್ಸೂಚನೆಗಳು:
ಬೆಲ್ಸ್ ಪಾಲ್ಸಿಯ ಎಚ್ಚರಿಕೆಯ ಸೂಚನೆಗಳಲ್ಲಿ ಜ್ವರ ಮತ್ತು ಕಿವಿಯ ಹಿಂದೆ ಸ್ವಲ್ಪ ನೋವು ಸಹ ಸೇರಿರುತ್ತವೆ. ಆದರೆ ಈ ರೋಗ ಆರಂಭ ಆದ ನಂತರ ಅದನ್ನು ತಡೆಗಟ್ಟುವುದು ಅಸಾಧ್ಯ. ಮೇಲಾಗಿ ಅಂಥವೇ ಲಕ್ಷಣಗಳು ಬೇರೆ ಕಾರಣದಿಂದ ಸಹ ಸಾಧ್ಯತೆ ಇದ್ದು, ಬೆಲ್ಸ್ ಪಾಲ್ಸಿಯೆ ಆಗಬೇಕೆಂದೇನು ಇಲ್ಲ.

ಬೆಲ್ಸ್ ಪಾಲ್ಸಿಯ ಕಾರಣಗಳು:
ಮುಖದ ಸ್ನಾಯುಗಳ ನಿಯಂತ್ರಣ ಮಾಡುವ ಫೇಸಿಯಲ್ ನರ ಅಥವ ಏಳನೆ ಕಪಾಲ ನರದ ಉರಿಯೂತ ಹಾಗು ಅದರ ಮೇಲಿನ ಒತ್ತುವಿಕೆಯೆ ಪ್ರಮುಖ ಕಾರಣ. ನಮ್ಮ ಮುಖದ ಹಾವಭಾವ ಹಾಗು ಚಲನವಲನಗಳು ಫೇಸಿಯಲ್ ನರದ ಸಂಕೇತಗಳ ಮೂಲಕ ನಿಯಂತ್ರಣಗೊಳ್ಳುತ್ತವೆ. ಅದೇ ನರದ ಮೂಲಕ ರುಚಿ ಹಾಗು ಕಣ್ಣೀರಿನ ಸಂಕೇತಗಳೂ ಹರಡುತ್ತವೆ. ಮುಖದ ಪ್ರತಿ ಭಾಗವನ್ನು ನಿಯಂತ್ರಿಸುವ ಇಂಥ ಎರಡು ನರಗಳಿರುತ್ತವೆ – ಪ್ರತಿಯೊಂದು ಆಯಾ ಭಾಗದ ನಿಯಂತ್ರಣಕ್ಕಾಗಿ. ಆದ್ದರಿಂದ ಒಂದು ನರದ ಉರಿಯೂತ ಆ ಭಾಗದ ಸ್ನಾಯುಗಳ ಚಲನೆಗಳ ಮೇಲೆ ಮಾತ್ರ ಪರಿಣಾಮ ಮಾಡುತ್ತದೆ. ವಿಜ್ಞಾನಿಗಳ ಪ್ರಕಾರ ಕೆಲವು ವೈರಲ್ ಸೋಂಕುಗಳಿಂದ ಫೇಸಿಯಲ್ ನರದ ಉರಿಯೂತವಾಗಿ ಬೆಲ್ಸ್ ಪಾಲ್ಸಿ ಉಂಟಾಗುತ್ತದಂತೆ. ಆ ವೈರಲ್ ಕಾಯಿಲೆಗಳೆಂದರೆ —


… ಹರ್ಪಿಸ್ ಸಿಂಪ್ಲೆಕ್ಸ್
… ಚಿಕನ್ ಪಾಕ್ಸ್ (ಸೀತಾಳೆ ಸಿಡುಬು)
… ಎಪ್ಸ್ಟೈನ್ ಬಾರ್ ವೈರಸ್ (ಈ ವೈರಸ್ ಶರೀರದ ದ್ರವಗಳ ಮೂಲಕ, ಪ್ರಮುಖವಾಗಿ ಉಗುಳಿನಿಂದ ಅತ್ಯಂತ ವೇಗವಾಗಿ ಹರಡುವುದು)
… ಕೋವಿಡ್ – 19
… ಅಡಿನೊ ವೈರಸ್ಸಿಂದ ಬರುವ ಶ್ವಾಸದ ಕಾಯಿಲೆ
… ರುಬೆಲ್ಲ ಅಥವ ಜರ್ಮನ್ ಮೀಸಲ್ಸ್
… ಮಂಪ್ಸ್ (ಗದಕಟ್ಟು)
… ಇನ್ಫ್ಲೂಯನ್ಸಾ ಬಿ ಅಥವ ಫ್ಲೂ ವೈರಸ್ ಮುಂತಾದುವು.

ಅಷ್ಟಲ್ಲದೆ ಇನ್ನಿತರೆ ಕಾರಣಗಳೆಂದರೆ, ರೋಗನಿರೋಧಕ ವ್ಯವಸ್ಥೆಯನ್ನು ಕುಗ್ಗಿಸುವಂತಹ  —
… ಒತ್ತಡಗಳು
… ಇನ್ನಿತರೆ ರೋಗಗಳು
… ನಿದ್ರಾಹೀನತೆ
… ದೈಹಿಕ ಪೆಟ್ಟು
… ಆಟೋ ಇಮ್ಯೂನ್ ತೊಂದರೆಗಳು

ಅಪಾಯಕಾರಿ ಅಂಶಗಳು;
ಕೆಳಗೆ ಪಟ್ಟಿಮಾಡಿರುವ ಅಂಶಗಳು ಬೆಲ್ಸ್ ಪಾಲ್ಸಿ ಕಾಯಿಲೆ ಉಂಟುಮಾಡುವ ಸಾಧ್ಯತೆ ಹೆಚ್ಚು —
… ಮಧುಮೇಹ
… ಗರ್ಭಾವಸ್ಥೆ
… ಪ್ರಿ ಎಕ್ಲ್ಯಾಂಪ್ಸಿಯ
… ಬೊಜ್ಜು
… ಅಧಿಕ ರಕ್ತದೊತ್ತಡ
…  ಬೆಲ್ಸ್ ಪಾಲ್ಸಿ ಕಾಯಿಲೆ ಆಗಿದ್ದ ಇತಿಹಾಸ.

ರೋಗನಿರ್ಣಯ:
ಸಾಮಾನ್ಯವಾಗಿ ವೈದ್ಯರು ರೋಗಲಕ್ಷಣಗಳಿಂದಲೆ ರೋಗವನ್ನು ನಿರ್ಣಯಿಸುತ್ತಾರೆ. ದೈಹಿಕ ಪರೀಕ್ಷೆಯ ಸಮಯದಲ್ಲಿ ರೋಗಿಗೆ ತನ್ನ ಮುಖದ ಸ್ನಾಯುಗಳನ್ನು ಚಲನಗೊಳಿಸಲು ಸೂಚಿಸುತ್ತಾರೆ.  ಹಣೆಯ ಭಾಗಶಃ ಅಥವ ಸಂಪೂರ್ಣ ದುರ್ಬಲತೆ ಅತಿ ಮುಖ್ಯ ಅಂಶ.

ಇನ್ನು ಕೆಲವು ರಕ್ತ ಪರೀಕ್ಷೆಗಳಲ್ಲದೆ, ಇ.ಎಂ.ಜಿ (ಎಲೆಕ್ಟ್ರೊಮೈಯೊಗ್ರಫಿ) ಸಹಾಯದಿಂದ ನರದ ಹಾನಿ ಮತ್ತು ಕಾರ್ಯಕ್ಷಮತೆಯನ್ನು ಪರೀಕ್ಷಿಸುತ್ತಾರೆ. ಈ ಪರೀಕ್ಷೆಯಿಂದ ರೋಗಿಯು ಎಷ್ಟು ಬೇಗ ಗುಣಮುಖವಾಗುವ ಸಾಧ್ಯತೆ ಕೂಡ ತಿಳಿಯಬಹುದು. ಸಿ.ಟಿ. ಸ್ಕ್ಯಾನ್ ಮತ್ತು ಎಂ.ಆರ್.ಐ ಪರೀಕ್ಷೆಯಿಂದ ಇತರೆ ಕಾರಣಗಳಿಂದ ನರದ ಹಾನಿಯ ಬಗೆಗೆ ಹಾಗು ಗೆಡ್ಡೆ ಅಥವ ಪಾರ್ಶ್ವವಾಯು ಮುಂತಾಗಿ ತಿಳಿಯಬಹುದು.

ಚಿಕಿತ್ಸೆ:
ಚಿಕಿತ್ಸೆಯ ಅವಶ್ಯ ಇಲ್ಲದೆ ಅನೇಕ ರೋಗಿಗಳು ಗುಣಮುಖವಾಗುವರು. ಹಾಗಿದ್ದೂ ಸಹ ವೈದ್ಯರು ಕೆಲವು ನಿವಾರಣಾ ವಿಧಾನಗಳನ್ನು ಸೂಚಿಸಬಹುದು.
… ಕಣ್ಣಿನ ರಕ್ಷಣೆ – ಒಣಗಿದ ಮತ್ತು ಕೆರಳಿದ ಕಣ್ಣನ್ನು ಶಮನಗೊಳಿಸಲು ಕೃತಕ ಕಣ್ಣೀರಿನ ಹನಿಗಳ ಮತ್ತು ಇತರೆ ಔಷಧ ಹನಿಗಳ ಉಪಯೋಗ ತಿಳಿಸುವರು. ಕಣ್ಣು ಮುಚ್ಚಲಾರದ ಸ್ಥಿತಿಗೆ ಕಣ್ಣಿನ ಪ್ಯಾಚ್ ಹಾಕಿದರೆ (ಮುಖ್ಯವಾಗಿ ಮಲಗುವಾಗ), ಕಾರ್ನಿಯಾ ಭಾಗವನ್ನು ಹಾನಿಯಿಂದ ರಕ್ಷಿಸಬಹುದು.
ಇಷ್ಟಲ್ಲದೆ ಸ್ಟೀರಾಯ್ಡ್ ಮಾತ್ರೆಗಳನ್ನು ಮತ್ತು ಆಂಟೈವೈರಲ್ ಔಷಧಗಳ ಉಪಯೋಗಕ್ಕೆ ತಿಳಿಸಬಹುದು.
ಅಪರೂಪವಾಗಿ ಬೆಲ್ಸ್ ಪಾಲ್ಸ್ ಗುಣವಾಗದಿದ್ದಾಗ, ಮುಖದ ಕ್ರಿಯಾತ್ಮಕ ಪ್ಲಾಸ್ಟಿಕ್ ಶಸ್ತ್ರಚಿಕಿತ್ಸೆಯು ಮುಖದ ಅಸಮತೆಯನ್ನು ಸರಿಪಡಿಸಿ, ಕಣ್ಣು ಮುಚ್ಚುವ ಹಾಗೆ ಕೂಡ ಮಾಡಲು ಸಾಧ್ಯ.

ತೊಡಕುಗಳು (Complications):
ತೀವ್ರವಲ್ಲದ ಬೆಲ್ಸ್ ಪಾಲ್ಸಿ ರೋಗವು ಸಾಮಾನ್ಯವಾಗಿ ಒಂದು ತಿಂಗಳಷ್ಟರಲ್ಲಿ ಸಂಪೂರ್ಣ ಗುಣವಾಗುತ್ತದೆ. ಆದರೆ ಪೂರ್ಣಪ್ರಮಾಣದ ಪಾರ್ಶ್ವವಾಯುವಿನ ಚೇತರಿಕೆಯಲ್ಲಿ ವಿವಿಧ ತೊಡಕುಗಳಿರಬಹುದು —
… ಫೇಸಿಯಲ್ ನರದ ಸರಿಪಡಿಸಲಾಗದಂತಹ ಹಾನಿ
… ಹಾನಿಯಾದ ನರದ ಎಳೆಗಳ ಅನಿಯಮಿತ ಬೆಳವಣಿಗೆ. ಇದರಿಂದಾಗಿ ರೋಗಿಯು ತನ್ನ ಮುಖದ ಯಾವುದೋ ಸ್ನಾಯುಗಳನ್ನು ಚಲಿಸಿದಾಗ. ಬೇರೆ ಗುಂಪಿನ ಸ್ನಾಯುಗಳ ಚಲನವಾಗುವಿಕೆ. ಉದಾಹರಣೆಗೆ, ರೋಗಿಯು ಮುಗುಳುನಕ್ಕಾಗ, ಪೀಡಿತ ಭಾಗದ ಕಣ್ಣಿನ ರೆಪ್ಪೆ ಮುಚ್ಚಿಕೊಳ್ಳುವುದು.

ಮುಚ್ಚದಿರುವ ಕಣ್ಣಿನ ಭಾಗಶಃ ಅಥವ ಸಂಪೂರ್ಣ ಕುರುಡಾಗುವಿಕೆ. ಇದಕ್ಕೆ ಕಾರಣ, ಅತಿಯಾದ ಕಣ್ಣಿನ ಒಣಗುವಿಕೆ ಮತ್ತು ಕಣ್ಣಿನ ಕಾರ್ನಿಯಾ ಭಾಗದ ಮೇಲಿನ ಪರಚುವಿಕೆಯಿಂದ – ಕಣ್ಣಿನ ರಕ್ಷಣೆಗಾಗಿ ಹಾಕಿದ ರಕ್ಷಾಕವಚದಿಂದ ಆಗುವ ಸಾಧ್ಯತೆ ಇದೆ.

3 thoughts on “ಬೆಲ್ಸ್ ಪಾಲ್ಸಿ (Bell’s palsy)ವೈದ್ಯಕೀಯ ಲೇಖನ-ಡಾ. ಅರಕಲಗೂಡು ನೀಲಕಂಠ ಮೂರ್ತಿ

  1. ತುಂಬಾ ಚೆನ್ನಾಗಿದೆ ಸರ್, ನನಗೆ ತಿಂಗಳಲ್ಲಿ ೧-೨ ಬೆಲ್ ಪಾಲ್ಸಿ ರೋಗಗಳನ್ನು ನೋಡುತ್ತೇನೆ, ಇದರಿಂದ ಕಣ್ಣಿಗೆ ತೋಂದರೇಯಾಗುವುದನ್ನು(,Lagophthalmos ) ಲ್ಯಾಗ್ ಆಪ್ತಲಮಸ್ ಅಂತ ಕರಿತೇವೆ, ಇದರಿಂದ ಕಣ್ಣಿಗೆ Dry Ness ತೊಂದರೇ ಆಗುತ್ತದೆ.

  2. ದಿನನಿತ್ಯ ನಾವು ರೋಗ ಸೂಚನೆ ಗಳಿಂದಾಗಿ ನಿರ್ಣಯ ಮಾಡುತ್ತಿದ್ದ ಕಾಯಿಲೆ- ಈ bell’s palsy. ಈಗೆಲ್ಲ ಆಧುನಿಕ scan ಗಳಿಂದ ರೋಗದ ತೀವ್ರತೆ, ಅಡ್ಡ ಪರಿಣಾಮಗಳ ಅಳೆಯಲಾಗುತ್ತದೆ. ಅನಗತ್ಯ/ಅಗತ್ಯ ಗಾಬರಿ ಪಡುವ ರೋಗಿಗೆ, ಆತನ ಹಿತ ಚಿಂತಕರಿಗೆ ತುಂಬಾ ಉಪಯುಕ್ತ ಲೇಖನ.
    Congrats Muthy!

Leave a Reply

Back To Top