ಕಾವ್ಯ ಸಂಗಾತಿ
ಡಾ. ಮೀನಾಕ್ಷಿ ಪಾಟೀಲ
ಕಾವಲು
ಹೌದು ಕಾಯಬೇಕು
ಬೇಲಿ ಚೌಕಟ್ಟುಗಳ
ನಡುವೆ ನೆಟ್ಟ
ಮಾವಿನ ಮರವ
ಕಾಯಿ ಹಣ್ಣಾಗುವ ಹೊತ್ತಿಗೆ
ದಾರಿಹೋಕರ ಪಾಲಾಗದಂತೆ
ಕಾಯಬೇಕು ಪೈರು
ಕಳ್ಳ ಬೇಲಿ ನಡುವೆ
ನಸುಳಿ ಬರದಂತೆ
ಬಿಡಾಡಿ ದನಗಳ
ದನ ಕಾಯುವ ಹುಡುಗರ
ತುಡುಗುತನವನ್ನು
ಕಾಯಬೇಕು
ಕಡಲ ತಡಿಯ
ತಡೆಗೋಡೆಯನ್ನು
ತೆರೆ ಅಪ್ಪಳಿಸಿ
ಕೊಚ್ಚಿಕೊಂಡು ಹೋಗದಿರಲಿ
ಇಲ್ಲದವರ ಗುಡಿಸಲುಗಳನ್ನ
ಕಾಯಬೇಕು
ಗಡಿಗಳ
ನುಸುಳದಿರಲಿ
ವೈರಿ ಪಡೆ
ಗಡಿಯಬುಡದ
ಸುರಂಗದಲ್ಲಿ
ಹೌದು ಕಾಯಬೇಕು
ಕಟ್ಟಿಕೊಂಡವನ ನಡತೆಯನ್ನು
ದಾರಿ ತಪ್ಪದಂತೆ
ಹುಟ್ಟಿದ್ದೊಂದು
ಹಾಳಾಗದಂತೆ
ಕುಲಗೆಡಿಸಿ ಹೋಗದಂತೆ
ಹೌದು ಕಾಯಬೇಕು
ಮನೆಯೊಡೆಯನ ತಿಜೋರಿಯನ್ನು
ತಿಜೋರಿಯಲ್ಲಿ ಬಚ್ಚಿಟ್ಟ
ಮುಖವಾಡವನ್ನು
ಮುಖವಾಡದ ಹಿಂದಿರುವ
ಅರ್ಧ ಸತ್ಯವನ್ನು
ಡಾ. ಮೀನಾಕ್ಷಿ ಪಾಟೀಲ