ಕಾವ್ಯ ಸಂಗಾತಿ
ಹನಮಂತ ಸೋಮನಕಟ್ಟಿ
ಇದು ಬಾಲ್ಯದ ಆಟ
ನಟ್ಟ ನಡುವೆ
ಬಂದ ಕೆಟ್ಟ ಬ್ಯಾಸಿಗೆಯ
ಬಿಸಿಲು ಹೊಸಲಿ ದಾಟದ ಮುನ್ನ
ಕೊಟ್ಟ ದಿರಿಸು
ಕೆಟ್ಟಿತೆನ್ನದೆ ತೊಟ್ಟು
ಮನೆ ಬಿಟ್ಟು ಬಂದು ಕುಂಟುವ ಆಟ ಆಡಿದ್ದು
ಆರೋಗ್ಯಕ್ಕೂ ಆಗಿನ ಕಾಲಕ್ಕೂ ಒಳ್ಳೆಯದೇ ಇತ್ತು
ಗಲ್ಲಿ ಗಲ್ಲಿಗಳಲ್ಲಿ
ಗಿಜಿಗುಡುವ ರಸ್ತೆಗಳಲ್ಲಿ
ಬೋಕ ತೋಡಿ
ಗೋಲಿ ಆಡುವಾಗ
ಗುರಿ ಇಟ್ಟು ಹೊಡೆಯುವ
ಕೈಗೆ ಸಿಗುವ ದೊಡ್ಡ ಗೋಲಿ ಯಾರು ಗೇಲಿ ಮಾಡಿ ನಕ್ಕರು
ಗುರಿ ತಪ್ಪುತ್ತಿರಲಿಲ್ಲ
ಕಣ್ಣ ನೋಟ ತಿಳಿಯಲು ಇದೊಂದೇ ಸಾಕಿತ್ತು
ಸೆರೆಬಡಿಗೆ ಆಡುವಾಗ
ಓಣಿಯ ವಾರಿಗೆಯ ವೀರರೆಲ್ಲ
ಒಟ್ಟುಗೂಡಿ
ಕಟ್ಟಿಗೆ ಹಿಡಿದು ಚಿಮ್ಮಿ ಚಿಮ್ಮಿ
ಚಂಗನೆ ಜಿಗಿದು ಹಿಡಿಯುವಾಗ
ಕೊಸರುವ ಜಾಣ್ಮೆ ಮೆಚ್ಛಲು ಕ್ಷಣವೇ ಸಾಕಿತ್ತು
ಚಿನ್ನಿ ದಾಂಡಿಗೆ
ದಾಂಡಿಗನು ಇರಬೇಕೆಂದಿಲ್ಲ
ಬೆಂಡು ಎತ್ತುವ ಶೂರನು
ಸಾಕಿತ್ತು ಸೋಲಿಸಲು
ಮೈ ಕೈ ಗಟ್ಟಾಗಿ
ಒಟ್ಟಿಗೆ ಭುಜ ಬಲಿಷ್ಠ ಆಗಲು
ಎಲ್ಲರೂ ಕೂಡಿ ನಗಲು
ಚೆಸ್ ಚಾಂಪಿಯನ್ ಪಟ್ಟ
ಪಡೆಯಲು ಹುಲಿಮನಿ ಚಕ್ಕ
ಹಾವು ಏಣಿ
ಆಟವೇ ಆದಿನಕ್ಕೆ ಅಧ್ಬುತ
ನಾವು ಗೆದ್ದು ಕುಣಿದದ್ದು
ಮನಿಸಿದವರು ಮನಿ ಎನಿಸಿ ಕಾಯಿ ಬಿಡುವಾಗ
ಅಣಕಿಸಿ ನಗಾಡಿದ್ದು ಬೆಲೆ ಕಟ್ಟಲೆ ಇಲ್ಲ
ಉದ್ದಿದ್ದೆವ್ವ ಆಡುವಾಗ
ಉದ್ದುದ್ದ ಕೈ ಚಾಚಿ
ಬಾರ ಇರದೆ ಬಾಗಿ
ಒಬ್ಬರಿಗೊಬ್ಬರು ಗಟ್ಟಿಯಾಗಿ ಕೈ ಹಿಡಿದು
ಸುತ್ತುವಾಗ ಭೂಮಿಗಿಂತಲೂ ಸುತ್ತಿ
ಬಿದ್ದದ್ದು ನೋವಿಲ್ಲ ನಗುವೇ ಎಲ್ಲ
ಕಣ್ಣಿಗೆ ಬಟ್ಟೆ ಕಟ್ಟಿ
ಸುತ್ತು ತಿರುಗಿಸಿ
ಬಿಟ್ಟು ಮುಟ್ಟಲು ಹೇಳಿ
ಅತ್ತಿತ್ತ ಮರೆಗೆ ಸರಿದು
ಓಡಿ ಹೋಗಿ ಗೋಡೆಗೆ ಕೈ ಒರಗಿಸಿ
ಬೆರಗು ಮೂಡಿಸಿದ್ದು
ಈಗಲೂ ಬೆಲೆ ಕಟ್ಟಲು ಸಾಧ್ಯವಿಲ್ಲ
ಬಿಟ್ಟ ಸೈಕಲ್ ಟೈರ್
ತರಾತುರಿ ತೆಗೆದು
ಟಾರ್ ರೋಡ್ ಗೆ ಬಿಟ್ಟು
ಬಡಿಗೆ ಹಿಡಿದು
ಬೆನ್ನಿಗೆ ಬಾರಿಸುತ್ತಾ ಊರು ಸುತ್ತುವಾಗ
ಸುಸ್ತು ಲೆಕ್ಕಿಸದ ಸ್ನೇಹಿತರ ಗುಂಪು
ಇನ್ನೂ ಹಚ್ಚ ಹಸಿರು ನೆನಪು
ಮರಕೋತಿ ಆಡುವಾಗ
ಟೊಂಗೆಯಿಂದ ಟೊಂಗೆಗೆ
ಜಿಗಿದು ಮರದ ಚುಂಗಿಗೆ
ಜಾರಿ, ಬಿದ್ದ ಕಟ್ಟಿಗೆ ಮುಟ್ಟುವಾಗ
ಮರವೇರಿ ಮತ್ತೆ ತಪ್ಪಿಸಿಕೊಂಡು
ಕೈ ಜಾರಿ ಕೆಳಗೆ ಬಿದ್ದು
ಕೊಕ್ಕಾಡಿಸಿ ನಕ್ಕು
ದಿಕ್ಕೆಟ್ಟು ಓಡಿದ ನೆನಪು ಇನ್ನು ಮುಂದೆಯೇ ಇದೆ
ಹನಮಂತ ಸೋಮನಕಟ್ಟಿ