ಕರೆಯದೆ ಬರುವ ಅತಿಥಿ
ಚೇತನಾ ಕುಂಬ್ಳೆ
ಕರೆಯದೆ ಬರುವ ಅತಿಥಿ ನೀನು
ಕರೆದರೂ ಕಿವಿ ಕೇಳಿಸದವನು
ಯಾರೂ ಇಷ್ಟ ಪಡದ ಅತಿಥಿ ನೀನು
ಎಲ್ಲಿ ಯಾವಾಗ ಹೇಗೆ ಯಾಕೆ
ಯಾವ ನಿಮಿಷದಲ್ಲಿ ಯಾವ ರೂಪದಲ್ಲಿ
ನೀನು ಬರುವೆಯೆಂದು ಗೊತ್ತಿಲ್ಲ ನನಗೆ
ಮುನ್ಸೂಚನೆ ನೀಡದೆ ಬರುವೆ ನೀನು
ಎಲ್ಲಿಂದ ಬರುವೆಯೋ ಎಲ್ಲಿಗೆ ಕರೆದೊಯ್ಯುವೆಯೋ ತಿಳಿದಿಲ್ಲ ನನಗೆ
ಒಡೆದು ನುಚ್ಚುನೂರು ಮಾಡುವೆ
ಸಣ್ಣಪುಟ್ಟ ಸಂತೋಷಗಳನ್ನು
ಹೋಗುವೆ ನೀನು ಒಮ್ಮೆಯೂ ತಿರುಗಿ ನೋಡದೆ
ಮನದ ತುಂಬ ವೇದನೆ ನೀಡಿ
ಹಿರಿಯರೆಂದೋ ಕಿರಿಯರೆಂದೋ
ಶ್ರೀಮಂತರೆಂದೋ ಬಡವರೆಂದೋ
ನೋಡದೆ ಓಡಿ ಬರುವೆ
ಎಲ್ಲರ ಬಳಿಗೆ ಕಾಲಕಾಲಕೆ
ಕಾರಣ,
ಸಮಾನರಲ್ಲವೆ ಎಲ್ಲರೂ ನಿನ್ನ ಕಣ್ಣಿಗೆ
ಕಣ್ಣೀರು ಕಂಡರೂ
ಕರಗದ ಹೃದಯ ನಿನ್ನದು
ನೋವನ್ನರಿತರೂ
ಮಿಡಿಯದ ಮನಸ್ಸು ನಿನ್ನದು
ಓ ಅತಿಥಿಯೇ… ಯಾಕಿಷ್ಟು ಕ್ರೂರಿಯಾದೆ ನೀನು
********
ಸಾವಿನ ಕುರಿತು ….
ನಿಗೂಢ ಅತಿಥಿಯನ್ನು ನಿಗೂಢವಾಗಿ ಬಿಚ್ಚಿಡುವ ಕವಿತೆ..