ಆದಪ್ಪ ಹೆಂಬಾ ಕವಿತೆ-ವಿಪರ್ಯಾಸ

ಅದೊಂದು ರಥ ಬೀದಿ
ಅಲ್ಲಿತ್ತು ಅಕ್ಕಸಾಲಿಗನ
ಅಂಗಡಿ
ಅವ ಹಳೆಯ
ಕಾಲದ ಕಾಳಪ್ಪ ಕಾಕನಂತೆ
ಧೋತಿ ಉಟ್ಟು,
ಗಂಧದ ತಿಲಕವಿಟ್ಟು
ಅಗ್ಗಿಷ್ಟಿಕೆಯ ಮುಂದೆ ಕೂತು
ಬಂಗಾರದ ತಗಡು ಬಡಿದು
ಅರಗು ಸೇರಿಸುವವನಲ್ಲ||

ಮಾಡರ್ನ್ ಹುಡುಗ
ಬರ್ಮುಡಾ ಚಡ್ಡಿ
ಮೇಲೊಂದು ಟಿ ಶರ್ಟು
ಕಿವಿಯೊಳಗೆ ಐಪಾಡ್
ಬೇಕೇ ಬೇಕವನಿಗೆ
ಅಂದೊಂದು ಸಂಜೆ
ಅವನ ಮೊಣಕಾಲ ಮೇಲೆ
ದೊಡ್ಡ ಬೆಳ್ಳಿಯ ಮೂರ್ತಿ
ಮೊಣಕಾಲೆತ್ತರದ
ಮೀಸೆ ಹೊತ್ತ ಮೂರ್ತಿ
ವೀರಭದ್ರನದೇ ಇರಬೇಕು
ಅದಕ್ಕವ ಹೊಳಪು ಕೊಡುತ್ತಿದ್ದ
ಮುಂದೆ ನೀರು ಮತ್ತು ಆ್ಯಸಿಡ್ಡಿರಬಹುದಾದ ಟ್ರೇ
ಅವನ ಮೊಣಕಾಲ ಮೇಲೆ ವೀರಭದ್ರ!
ಅವನ ತಿಕ್ಕಾಟ ಶುರು
ತಿಕ್ಕುವಾಗ ಗ್ರಿಪ್ ಜಾರಿತೋ ಅಡ್ಡ ಕಾಲನ್ನೇ ಇಡುತ್ತಾನೆ.
ದೇವರಲ್ಲವನಪಾಲಿಗದು
ತಾನೇ ಮಾಡಿದ ಬೆಳ್ಳಿಯ
ಮೂರ್ತಿ ಅಷ್ಟೆ
ಹೊಳಪಿಸಬೇಕು, ಫಳಫಳಿಸಬೇಕು
ಎಷ್ಟೆಂದರೆ ನೋಡಿದವರಿಗೆ
ಭಕ್ತಿಗಿಂತ ಭಯ ಹುಟ್ಟಬೇಕು
ವೀರಭದ್ರನಲ್ಲವೇ…..
ತಿಕ್ಕುವಾಗ
ಕಾಲು ತಾಗುತ್ತಿದೆಯೇ ಬಿಡಿ
ಖಳೆ ಬಂತಲ್ಲ ಅದನ್ನೋಡಿ||

ಮರುದಿನ ಅದೇ ವೀರಭದ್ರನ
ಉತ್ಸವ
ಅದೇ ರಥ ಬೀದಿಯಲ್ಲಿ
ಇವ ಕಾಲಲ್ಲಿಟ್ಟು ಕೊಂಡು
ತಿಕ್ಕಿ ತಿದ್ದಿ ತೀಡಿಟ್ಟ ಮೂರ್ತಿಗೆ
ದೈವ ಖಳೆ‌
ಬರೀ ಭದ್ರನ ಮೂರ್ತಿಯಲ್ಲದೀಗ
ಕೇಳಿದ್ದನ್ನು ಕೊಡುವ ಕಾಮಧೇನು
ಸರ್ವ ಶಕ್ತ ದೇವರು
ಅದರದೇ ಮೆರವಣಿಗೆ
ಅವನದೇ ಅಂಗಡಿಯ ಮುಂದೆ||

ಅಸಂಖ್ಯಾತ ಭಕ್ತರ ದಂಡು
ಭಾಜಾ ಭಜಂತ್ರಿ, ಡೊಳ್ಳು ನಂದಿಕೋಲು
ನಿನ್ನೆತಾನೇ ತಾನು ಕಾಲಡಿಇಟ್ಟು
ತಿಕ್ಕಿ ತೀಡಿದ್ದ ಮೂರ್ತಿಯಿಂದು
ದೇವರು! ಬೆಂಕಿಯದು! ವೀರಭದ್ರ
ನೋಡಿ ಅವ ಗಬಕ್ಕನೇ ಎದ್ದು ನಿಂತ
ಯಾರೋ ನೀಡಿದ ಪುಷ್ಪಗಳನ್ನು ಪಲ್ಲಕ್ಕಿಗೆ ವೃಷ್ಟಿಸಿ
ಭಕ್ತಿಯಿಂದ ಕೈಮುಗಿದ
ನನ್ನನು, ನನ್ನವರನು ಸುಖವಾಗಿಡು
ತಂದೆ ಎಂದ||


Leave a Reply

Back To Top