ಕುವೆಂಪುರವರ “ಹಸಿರು” ಪದ್ಯದ ರೂಪಾಂತರ ಕವಿತೆ “ಬಿಸಿಲು”ಶ್ರೀದೇವಿ ಕರ್ಜಗಿ ಅವರ ಕವಿತೆ

ಶಿವರಾತ್ರಿಯ ಸೆಕೆ ಧಾತ್ರಿಯ
ಈ ಬಿಸಿಲ ಬಯಲ್ ನಾಡಲ್ಲಿ
ಬಿಸಿ ಉಸಿರಾದುದೊ ಕವಿಯಾತ್ಮಂ
ಬೆವರ್ ಹನಿ ಸ್ನಾನದಲ್ಲಿ!

ಬಿಸಿಲಾಗಸ ಬಿಸಿಲ್ ಮುಗಿಲು
ಬಿರು ಬಿಸಿಲು ಗದ್ದೆಯಾ ಬಯಲು;
ಬಿಸಿಲಿನ ಮಲೆ; ಬಿಸಿಲು ಕಣಿವೆ;
ಬಿಸಿಲು ಸಂಜೆಯೀ ಬಿರು ಬಿಸಿಲು

ಚೈತ್ರದ ಶಾಲಿವನದ
ಗಿಜುಗನೆದೆ ಬಣ್ಣದ ನೋಟ
ಅದರೆಡೆಯಲಿ ಬನದಂಚಲಿ
ಸುಕ್ಕುಗಟ್ಟಿದ ತೊಗರಿಯ ತೋಟ!

ಅದೋ ಒಣ ಹುಲ್ಲಿನ ನೆಲಗುಳ್ಳದ
ಪೊಸ ಬೆಚ್ಚನೆ ಜಮಖಾನೆ
ಪಸರಿಸಿ ತಿರೆ ಮೈ ಚುಚ್ಚಿರೆ
ಬೇರೆ ಬಣ್ಣವನೆ ಕಾಣೆ!

ಹೊಸ ಹೂವಿನ ಕಂಪೂ ಬಿಸಿ
ಎಲರಿನ ತಂಪೂ ಬಿಸಿ
ಹಕ್ಕಿಯ ಕೊರಲಿಂಪಿಗೂ ಬಿಸಿ
ಬಿಸಿಲು ಬಿಸಿ ಇಳೆಯುಸಿರೂ!

ಬಿಸಿಲತ್ತಲ್! ಬಿಸಿಲಿತ್ತಲ್!
ಬಿಸಿಲೆತ್ತಲ್ ಬಯಲ್ ನಾಡಿನಲಿ
ಬಿಸಿಯುಸಿರ್ಗಟ್ಟಿತೋ ಕವಿಯಾತ್ಮಂ
ಬಿಸಿ ನೆತ್ತರ್ ಒಡಲಿನಲಿ!

ಹಸುರತ್ತಲ್ ಹಸುರಿತ್ತಲ್ ಹಸುರೆತ್ತಲ್
ಕಂಡು ಕವಿ ರಸ ಋಷಿಯಾದರು
ಬಿಸಿಲತ್ತಲ್ ಬಿಸಿಲಿತ್ತಲ್ ಬಿಸಿಲೆತ್ತಲ್
ಕಂಡು ನಾವು ಕರ್ರನೆ ಕಂದಿ ಕೃಷವಾದೆವು!


8 thoughts on “ಕುವೆಂಪುರವರ “ಹಸಿರು” ಪದ್ಯದ ರೂಪಾಂತರ ಕವಿತೆ “ಬಿಸಿಲು”ಶ್ರೀದೇವಿ ಕರ್ಜಗಿ ಅವರ ಕವಿತೆ

  1. ವಾವ್, ಮೇಡಂ ,ನಾವು ಬಿಸಿಲ್ನಾಡಿನವರು, ಬಿಸಿಲನ್ನೇ ಕಂಡು, ಬಿಸಿಲನ್ನೇ ಉಂಡು, ಬಿಸಿಲಲ್ಲಿ ಬದುಕು ಕಟ್ಟಿಕೊಂಡವರು, ನಾವು ಬಿಸಿಲೂರಿನವರು ಬಿಸಿಲೂರಿನವರು

  2. ರೂಪಾಂತರ ಕವಿತೆ ಅತ್ಯುತ್ತಮವಾಗಿ ಮೂಡಿ ಬಂದಿದೆ

  3. ಪ್ರಸ್ತುತ… ಅದ್ಭುತ.. ಬಿಸಿ ಬಿಸಿ ಕವಿತೆಯನು ಓದಿ ತಂಪಾಗಿದೆ ಮನ..

  4. ತುಂಬಾ ಚೆನ್ನಾದ ಕವಿತೆ ಮೇಡಂ ಅಭಿನಂದನೆಗಳು.

Leave a Reply

Back To Top