ಮಂಜುಳಾ ಪ್ರಸಾದ್ ಕವಿತೆ-ಬೇಸಿಗೆ ಕಾಲ

ಕವಿಗೂ ಬೇಕು ಬೇಸಿಗೆಕಾಲ,
ಜ್ಞಾನದ ಬೆಳಕಲಿ ಜಗವ ತಾ ಬೆಳಗಲು!
ಲೋಕದ ಹುಳುಕ ಹುಡುಕಿ ಹೊರಹಾಕಲು,
ರವಿ ಕಾಣದ್ದನ್ನು ಕವಿ ಕಂಡನೆಂದು ಸಾಬೀತಾಗಿಸಲು!

ಕವಿಗೂ ಬೇಕು ಬೇಸಿಗೆಕಾಲ,
ಅನುಭವಗಳ ಒಣಗಿಸಿ ಗಟ್ಟಿಗೊಳಿಸಲು!
ಇಂಗಿಸಿ ನೋವು ನಲಿವುಗಳ ಮಡುಗಟ್ಟಿಸಲು,
ಮೋಡಗಳ ಕಟ್ಟಿಸಿ ಕಲ್ಪನೆಗಳಲಿ ನಿತ್ಯ ತಾ ತೇಲಿಸಲು!

ಕವಿಗೂ ಬೇಕು ಬೇಸಿಗೆಕಾಲ,
ಕವಿ ಸಮಯದಿ ಸ್ಪೋಟಿಸಿ ಅಬ್ಬರಿಸಲು!
ಪರಿಸರಣ ಮಳೆಯ ಮಿಂಚಂತೆ ಹೊಳೆಯಲು,
ಹನಿಗವನಗಳ ಒಗ್ಗೂಡಿಸಿ ಪುಸ್ತಕದೆದೆಯ ತಾಕಲು!

ಕವಿಗೂ ಬೇಕು ಬೇಸಿಗೆಕಾಲ,
ರಣಬಿಸಿಲಿನ ಮಣಭಾರವ ಪಸರಿಸಲು!
ಬರಹಗಳ ಪ್ರವಾಹದಿ ಓದುಗರ ತಲುಪಲು,
ಕಾದ ಸಹೃದಯನ ಅಂತರಾಳದ ಬೇಗೆ ಸಂತೈಸಿ ಬೀಗಲು!

ಕವಿಗೂ ಬೇಕು ಬೇಸಿಗೆ ಕಾಲ!


One thought on “ಮಂಜುಳಾ ಪ್ರಸಾದ್ ಕವಿತೆ-ಬೇಸಿಗೆ ಕಾಲ

Leave a Reply

Back To Top