ಕಾವ್ಯ ಸಂಗಾತಿ
ನಾಗರಾಜ ಜಿ. ಎನ್. ಬಾಡ
ಸಿಕ್ಕುಗಳು..
ಆಸೆಗಳ ಮೂಟೆ ಕಟ್ಟಿ
ಕನಸುಗಳ ರಾಶಿ ಸುಟ್ಟಿ
ಮನದ ಭಾವನೆಗಳಿಗೆ ಚಟ್ಟ ಕಟ್ಟಿ
ಬದುಕುವ ಈ ಬದುಕಲಿ
ಏನು ಹಿತವಿರಬಹುದು
ಕಹಿಯನ್ನು ಮನದಿ ಅಡಗಿಸುತ್ತ
ನೋವನ್ನೆಲ್ಲ ಒಳಗೊಳಗೆ ನುಂಗುತ್ತಾ ಕಷ್ಟಗಳನ್ನು ಸಹಿಸುತ್ತ
ಜೀವ ಕಳೆ ಇಲ್ಲದೆ ಮುಂದೆ
ಸಾಗುವುದರಲ್ಲಿ ಏನು ಹಿತವಿದೆ
ನಡೆವ ದಾರಿಯ ತುಂಬ
ಮುಳ್ಳುಗಳು ತುಂಬಿರೆ
ಸುಡುವ ಬಿಸಿಲು ಮೈಯ ಸುಡುತಿರೆ
ಹಿಡಿದ ಹೂವು ಮುಳ್ಳಾಗಿ ಚುಚ್ಚುತ್ತಿರೆ ಬದುಕಿಗೆ ಏನು ಅರ್ಥವಿದೆ
ಬದುಕಿನಲ್ಲೇನು ಹಿತವಿದೆ
ವ್ಯಾಕುಲತೆಯು ಮನವ ತುಂಬಿರೆ
ಹೂವಾಗಿ ಅರಳುವ ಮೊದಲೇ
ಮೊಗ್ಗು ಉರುಳಿ ಹೋದರೆ
ಸಾಗರದ ಕಡಲ ಅಲೆಯ ಸೀಳಿ
ಮುಂದೆ ಹೋಗುವ ಮೊದಲೇ
ದೋಣಿ ಅಲೆಗೆ ಸಿಲುಕಿದರೆ
ಗರಿ ಬಿಚ್ಚಿ ಹಾರಬೇಕಾದ ಹಕ್ಕಿ
ಗೂಡೊಳಗೆ ಸಿಲುಕಿ ಬಂದಿಯಾದರೆ
ಈ ಬದುಕಲಿ ಏನು ಹಿತವಿದೆ
ಬದುಕಿನ ಸಿಕ್ಕುಗಳನ್ನು ಬಿಡಿಸಿ
ಕಷ್ಟ ನಷ್ಟಗಳ ನಡುವೆಯೂ
ನೋವು ನಲಿವುಗಳ ಗೊಡವೆ ಸರಿಸಿ
ಜೀವನವನ್ನು ಸಲೀಸಾಗಿಸು
ಈ ಬದುಕನ್ನು ಹಿತವಾಗಿಸು
ಈ ಬದುಕನ್ನು ಚಂದವಾಗಿಸು
ನಾಗರಾಜ ಜಿ. ಎನ್. ಬಾಡ
ನೋಡಲು ಸಾಮಾನ್ಯರ ಸಾಮಾನ್ಯ ಅಡಗಿಹುದು ಕವಿತ್ವದ ಪ್ರತಿಬೆ. ನಾ ಬಲ್ಲೆ ನಿನ್ನ ನೀ ಅಂದು ನನಗೆ ನುಡಿದ ಆ ಮಾತು ನನ್ನ ಬದುಕಿನ ದಿಖ್ಖನ್ನು ಬದಲಿಸಿ ಇಂದು ನಾ ನೆನೆಯುತ ಹಾರೈಸುವ ನಿನ್ನಂತಹ ಸಹೋದರ ನನಗಿರಲೆಂದು.
ಒಂದು ಚೆಂದ ಬದುಕಿನ ಕವಿತೆ. ಒಳನೋಟವನ್ನು ಪ್ರೀತಿಸುವ ಅಂತರಂಗಕ್ಕೆ ಆಪ್ತವಾಗಿ ಮುನ್ನುಡಿಯ ಬರೆಯುವ ಸಾಲುಗಳು. ಜೀವನ ಕಷ್ಟ ,ನೋವು, ನಲಿವುಗಳ ಪ್ರತಿಬಿಂಬ. ಎಂತಿದ್ದರೂ ಬದುಕು ಭಾವಗಳಿಗೆ ಆರಾಧನೆಯಾಗುತ್ತದೆ. ಬದುಕುವುದರೊಟ್ಟಿಗೆ ಭರವಸೆ ಉಳಿಯಬೇಕು ಎನ್ನುವ ಕವಿತೆ ಆಶಯ ಚೆನ್ನಾಗಿದೆ……..
ನಾಗರಾಜ ಬಿ.ನಾಯ್ಕ
ಹುಬ್ಬಣಗೇರಿ
ಕುಮಟಾ