ಕಾವ್ಯ ಸಂಗಾತಿ
ಎಂ.ಆರ್.ಅನಸೂಯ
ಮನೋಭಾವ.
ದುಮ್ಮಾನದೆ ಬಿಕ್ಕಳಿಸಲು ಕಣ್ಣೀರು
ಆನಂದ ತುಂಬಿ ತುಳುಕಲು ಆನಂದ ಬಾಷ್ವ
ಜಂಗಮ ಭಾವಗಳು ಸ್ಥಾವರ ಮನದಲ್ಲಿ
ಕೊಟ್ಟರೆ ತನಗೆ ಬೇಕಿದ್ದನ್ನೇ ತ್ಯಾಗ
ಕೊಟ್ಟರೆ ತನಗೆ ಹೆಚ್ಚಾದನ್ನೇ ದಾನ
ಸಂಚಾರಿ ಭಾವಗಳು ಸ್ಥಾಯಿ ಮನದಲ್ಲಿ
ಇತಿ ಮಿತಿಯಲ್ಲಿದ್ದರೆ ಆಸೆ
ಮಿತಿ ಮೀರಿದರೆ ದುರಾಸೆ
ಚರ ಭಾವಗಳು ಸ್ಥಿರ ಮನದಲ್ಲಿ
ಇದ್ದರೆ ನಾನು ಅಹಂಭಾವ
ಹೋದರೆ ನಾನು ಅನುಭಾವ
ರೂಪಾಂತರಿ ಭಾವಗಳು ನಿರಾಕಾರ ಮನದಲ್ಲಿ
ಹಿತವಾದರೆ ಅಭಿಮಾನ ಸ್ವಾಭಿಮಾನ
ಅಹಿತವಾದರೆ ಅಭಿಮಾನ ದುರಭಿಮಾನ
ಅಮೂರ್ತಭಾವಗಳು ಸೀಮಾತೀತ ಮನದಲ್ಲಿ
ನೆನೆದರೆ ಉಪಕಾರ ಕೃತಜ್ಞತೆ
ಮರೆತರೆ ಉಪಕಾರ ಕೃತಘ್ನತೆ
ನಾನಾ ಭಾವಗಳು ಏಕೈಕ ಮನದಲ್ಲಿ
——————————————-
ಎಂ.ಆರ್.ಅನಸೂಯ