ಕಾವ್ಯ ಸಂಗಾತಿ
ಡಾ.ಕವಿತಾ
ಕಂದನಲ್ಲಿ ಮೊರೆ
ಸಂಭ್ರಮಿಸುತ್ತಿದ್ದಳು ಇಳೆ ಉಟ್ಟು ಹಸಿರು ಸೀರೆಯನ್ನು,
ಪೋಷಿಸುತ್ತಾ ತಾರತಮ್ಯವಿಲ್ಲದೇ ಒಡಲ ಜೀವಗಳನ್ನು…
ಝರಿ, ನದಿಗಳಾಗಿ ಹರಿದಿತ್ತು ನರನಾಡಿಗಳಲ್ಲಿ ಜೀವ ಜಲ,
ಪ್ರತಿ ಉಸಿರಿನಲ್ಲಿ ಅಶುದ್ದತೆಯ ಛಾಯೆ ಇಲ್ಲದ ಅನಿಲ…
ಸಕಲ ಜೀವರಾಶಿಗಳಲ್ಲಿ ಮನುಷ್ಯನಾದ ಬುದ್ದಿ ಜೀವಿ,
ಅಧಿಪತ್ಯ ಬೆನ್ನಟ್ಟಿ ಹೃದಯವಂತಿಕೆ ಮರೆತ ಸ್ವಾರ್ಥ ಜೀವಿ…
ಜೀವ ಜಲವನ್ನು ಕಲುಷಿತಗೊಳಿಸಿ ಕ್ರಯಗೊಳಿಸುತ್ತಿಹನು
ಪ್ರತಿ ಉಸಿರು ಶುದ್ದ ಜೀವಧಾತುವಿಗಾಗಿ ಪರದಾಡುವಂತೆ ಮಾಡಿಹನು…
ಒಡಲ ಅನ್ಯ ಜೀವಿಗಳನ್ನು ಹೊಸಕಿ ತಾ ಶ್ರೇಷ್ಠವೆಂದು ಬೀಗುತಿಹನು,
ಹಸಿರು ಸೀರೆಯನ್ನು ತುಂಡಾಗಿಸಿ ಸ್ವಚ್ಚಂದವೆಂದು ಸಂಭ್ರಮಿಸುತ್ತಿಹನು…
ನಲುಗಿ ಮೊರೆಯಿಡುತ್ತಿಹಳು ಇಳೆ, ಕೊಳೆಯ ತೊಳೆಯೆಲೆಂದು,
ಮಡಿಲ ಮಕ್ಕಳ ಹುಚ್ಚಾಟ ಕಂಡು ರೋಧಿಸುತ್ತಿಹಳು ಭೂತಾಯಿ ಇಂದು..
—————————–
ಡಾ.ಕವಿತಾ