ಡಾ. ಸುಮಂಗಲಾ ಅತ್ತಿಗೇರಿ ಅವರ ಕವಿತೆಮೀಸಲಾತಿ ಬೇಕಿದೆ!

ಮೀಸಲಾತಿ ಬೇಕಿದೆ ನಮಗೂ
ಜಾತಿಯ ಕಾರಣಕ್ಕಲ್ಲ
ಧರ್ಮದ ಕಾರಣಕ್ಕಲ್ಲ
ಪ್ರಾದೇಶಿಕತೆಯ ಕಾರಣಕ್ಕೂ ಅಲ್ಲ
ಉಹುಂ, ಭಾಷಾ ಮಾಧ್ಯಮದ ಕಾರಣಕ್ಕೂ ಅಲ್ಲ

ಆದರೆ,
ಮೀಸಲಾತಿ ಬೇಕೇ ಬೇಕು
ಜರೂರಾಗಿ
ಬೇಕಿದೆ ನಮಗೆ
ಸಮಯದ ಮೀಸಲಾತಿ!

ಮನೆಯ ನಾಲ್ಕು ಗೋಡೆಗಳೊಳಗೆ
ನಿತ್ಯ ತೆರೆದ ಅಡುಗೆ ಮನೆಯ ಕಾರ್ಖಾನೆಯೊಳಗೆ
ಕಛೇರಿ-ಕಾಲೇಜು-ಪ್ಯಾಕ್ಟರಿಗಳೊಳಗೆ
ಒಂದಿಷ್ಟು ನೆಮ್ಮದಿಯ ಉಸಿರು ಹಾಕಲು
ನಮಗಾಗಿ ನಾವು
ಒಂದಿಷ್ಟು ಯೋಜಿಸಲು
ಬೇಕಿದೆ ನಮಗೆ
ಸಮಯದ ಮೀಸಲು!

ಎದೆಯೊಳಗಿನ ಕವಿತೆಗಳಿಗೆ
ಜನ್ಮ ನೀಡಲು
ಕನಸಿನ ಮೊಟ್ಟೆಗಳಿಗೆ
ಆಗಾಗ ಕಾವು ಕೊಡಲು
ನಮಗೂ ಒಂದಿಷ್ಟು
ಸಮಯದ ಮೀಸಲು ಬೇಕಿದೆ!
.



ಓಡುತ್ತಿರುವ ಗಡಿಯಾರದ ಮುಳ್ಳುಗಳೆ
ತುಸು ನಿಲ್ಲಿ: ನಮಗಾಗಿ
ನಿಮ್ಮೊಂದಿಗೆ ಏನೇನೊ
ಹಂಚಿಕೊಳ್ಳಬೇಕಿದೆ!
ಮನದ ಭಾವಗಳ
ಹೆಣ್ತನದ ಹಂಬಲಗಳ
ಪಿಸು ಮಾತುಗಳಲ್ಲಿ

ಅದಕ್ಕೆ
ನಮಗೂ ಬೇಕಿದೆ
ಸಮಯದ ಮೀಸಲು!

——————————————–

4 thoughts on “ಡಾ. ಸುಮಂಗಲಾ ಅತ್ತಿಗೇರಿ ಅವರ ಕವಿತೆಮೀಸಲಾತಿ ಬೇಕಿದೆ!

  1. ಮನದ ತೊಳಲಾಟಗಳ
    ಕಸಿವಿಸಿ ಮನಸಿನ ತುಡಿತಗಳ
    ದುಃಖ ದುಮ್ಮಾನಗಳ
    ಭಾರ ಕಳೆಯಲು
    ಮನಬಿಚ್ಚಿ ಮಾತನಾಡಲು
    ಸಮಯದ ಮೀಸಲು
    ಬೇಕು.

    ಅದ್ಬುತ ಕವಿತೆ ಅಕ್ಕ

Leave a Reply

Back To Top