ಹನಮಂತ ಸೋಮನಕಟ್ಟಿ ಕವಿತೆ- ಬೇಸಿಗೆ

ಬಿಲದಿಂದ
ಹೊರಬದ ಇಲಿಯೊಂದು
ವಿಲವಿಲನೆ ಒದ್ದಾಡಿ
ಉಸಿರಾಟ ನಿಲ್ಲಿಸಿತು ಕಾರಣ ಇಷ್ಟೆ
ಕಾಣುವಷ್ಟು ದೂರ ಹೋದರು ಕಾಳು ಸಿಕ್ಕಿರಲಿಲ್ಲ
ಕುಡಿಗೂ ತನಗೂ ಹಸಿವ ತೀರಿಸಲು ಸಾಧ್ಯವಾಗಲಿಲ್ಲ

ಹೊಲದಿಂದ
ಹೊರಬಂದ ಮೊಲವೊಂದು
ಪಟಪಟನೆ ಉರುಳಾಡಿ
ಪ್ರಾಣ ಬಿಟ್ಟಿತು ಕಾರಣ ಇಷ್ಟೇ
ಪಡಬಾರದ ಕಷ್ಟ ಪಟ್ಟರೂ ಗರಿಕೆ ಸಿಗಲಿಲ್ಲ
ತನಗೂ ಪರಿವಾರಕ್ಕೂ ಹೊಟ್ಟೆಯ ಸಂಕಟ ತಡೆಯಲಾಗಲಿಲ್ಲ

ನೀರಿನಿಂದ
ಹೊರಬಂದ ಮೀನೊಂದು
ಚಟಪಟನೆ ಹೊರಳಾಡಿ
ಸತ್ತೇ ಹೋಯಿತು ಕಾರಣ ಇಷ್ಟೇ
ಹಳ್ಳ ಕೊಳ್ಳ ನದಿ ಸಾಗರ ಸುತ್ತಿದರು ನೀರಿಲ್ಲ
ಸಕಲ ಜಲಚರಕೂ ಜೀವಿಸಲು ಹನಿ ನೀರಿಲ್ಲದೆ ಬದುಕಲಾಗಲಿಲ್ಲ

ಕಾಡಿನಿಂದ
ಹೊರಬಂದ ಹುಲಿಯೊಂದು
ನಡೆಯದೇ ಅಲುಗಾಡಿ
ಉಸಿರು ಚೆಲ್ಲಿತು ಕಾರಣ ಇಷ್ಟೇ
ಭೂಮಿಯ ಸುತ್ತಿದರೂ ಕಾಡು ಮೇಡಗಳಿಲ್ಲ
ವನ್ಯಜೀವಿಗಳಿಗೆ ಮಾನವನ ಆಕ್ರಮಣ  ತಡೆಯಲಾಗಲಿಲ್ಲ

ಮನೆಯಿಂದ
ಹೊರಬಂದ ಮಾನವನಿಂದು
ಬಿಸಿಲು ತಡೆಯಲಾಗದೆ ನರಳಾಡಿ
ರಸ್ತೆಯಲಿ ಬಿದ್ದು  ಸತ್ತು ಹೋದ ಕಾರಣ ಇಷ್ಟೇ
ಪರಿಸರ ಹಾಳು ಮಾಡಿ ತನ್ನ ಗುಂಡಿ ತೋಡಿಕೊಂಡ
ವಾಯು,ನೀರು,ಭೂಮಿ, ಕಾಡು ಮಾಲಿನ್ಯ ಮಾಡಿ ಬದುಕಿಗೆ
ಸಂಚಕಾರ ತಂದುಕೊಂಡ

————————

2 thoughts on “ಹನಮಂತ ಸೋಮನಕಟ್ಟಿ ಕವಿತೆ- ಬೇಸಿಗೆ

Leave a Reply

Back To Top