ಉರ್ದು ಕವಿತೆಯ ಭಾವಾನುವಾದ-ನರಸಿಂಗರಾವ ಹೇಮನೂರ

ಹಗಲು ಹೇಗೋ ಕಳೆದು ಹೋಗುತ್ತದೆ
ರಾತ್ರಿ ಕಳೆಯುವದೆ ಕಠಿಣವಾಗಿಹುದು ಗೆಳೆಯ

ಸಂಬಂಧಗಳು ಹೇಗೋ ಸಂಭವಿಸುತ್ತವೆ
ಅವುಗಳನ್ನು ನಿಭಾಯಿಸುವುದೇ ಕಷ್ಟಕರ ಗೆಳೆಯ

ಸರೋವರದಲ್ಲಿ ಅಲೆಗಳು ಬರುತ್ತಲೇ ಇರುತ್ತವೆ
ಅವುಗಳನ್ನು ಎಣಿಸುವುದು ಅಸಾಧ್ಯವಿದೆ ಗೆಳೆಯ



ಸಂಕಷ್ಟಗಳ ಸರಣಿ ಅತಿ ದೀರ್ಘವಾಗಿಹುವು
ಸoಭಾಳಿಸುವುದವುಗಳನು ಬಹು ಕಷ್ಟ ಗೆಳೆಯ

ನಗುವಾಗ ಸಿಗುವರು ಸಾವಿರಾರು ಜನರು
ಒಬ್ಬರಾದರೂ ಸಿಗರು ಅಳುವಾಗ ಗೆಳೆಯ

ಜಗತ್ತು ನನ್ನನ್ನು ಬಹಳ ಸತಾಯಿಸಿತು,
ತುಂಬಾ ದುಃಖಕ್ಕೀಡು ಮಾಡಿತು
ನಾನು ತಡೆಯದಾದೆ, ತುಂಬಾ ಅತ್ತು ಬಿಟ್ಟೆ
ಬಹಳಷ್ಟು ಕಳೆದು ಕೊಂಡೆನಾದರೂ
ಏನನ್ನೂ ಹೇಳದಾದೆ
ಕಣ್ಣಂಚಿನಲ್ಲಿ ಎರಡು ಹನಿ ಕಣ್ಣೀರು ತುಂಬಿ ನಿಂತಿದ್ದವು
ಅವುಗಳನು ಹೊರ ಹಾಕಲಾಗಲೇ ಇಲ್ಲ!
ಕೆಟ್ಟವುಗಳನ್ನೆಲ್ಲ ಮರೆತು, ಮರೆಯುತ್ತಾ
ಜೀವಿಸಲಾಗಲೇ ಇಲ್ಲ !

ಆದರೂ ಭಗವಂತ ನನ್ನನ್ನುಳಿಸಿ
ಇಲ್ಲಿಯವರೆಗೆ ಕರೆ ತಂದ
ಅವನ ಉಪಕಾರವನ್ನು  ತೂಗುವುದೆನಗೆ
ಬಹು ಕಷ್ಟ ಗೆಳೆಯ.

Leave a Reply

Back To Top